ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (ಐಎಫ್ಪಿಆರ್ಐ) ಇತ್ತೀಚೆಗೆ ಬಿಡುಗಡೆ ಮಾಡಿದ ‘ಜಾಗತಿಕ ಆಹಾರ ನೀತಿ ವರದಿ 2022 – ಹವಾಮಾನ ಬದಲಾವಣೆ ಮತ್ತು ಆಹಾರ ವ್ಯವಸ್ಥೆಗಳು’ ಎಂಬ ಅಧ್ಯಯನ ವರದಿಯು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಆಹಾರದ ಉತ್ಪಾದನೆ, ಬಳಕೆ ಮತ್ತು ಲಭ್ಯತೆಯ ಚಿತ್ರಣವನ್ನು ಒದಗಿಸುತ್ತದೆ. ವರದಿಯು ಮುಖ್ಯವಾಗಿ ಹವಾಮಾನ ಬದಲಾವಣೆಯ ಪ್ರಭಾವದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸರ್ಕಾರ ಮತ್ತು ಇತರ ಹಂತಗಳಲ್ಲಿ ಅಳವಡಿಸಿಕೊಳ್ಳಬೇಕಾದ ಯೋಜನೆಯ ಡಾಟಾವನ್ನು ಸಂಶೋಧನೆಯ ಆಧಾರದ ಮೇಲೆ ಒದಗಿಸುತ್ತದೆ.
ದೇಶದಲ್ಲಿ ಆಹಾರ ಉತ್ಪಾದನೆಯು 2030 ರ ಹೊತ್ತಿಗೆ 16% ರಷ್ಟು ಕಡಿಮೆಯಾಗಬಹುದು ಮತ್ತು ಹಸಿವಿನ ಅಪಾಯದಲ್ಲಿರುವ ಜನರ ಸಂಖ್ಯೆ 23% ರಷ್ಟು ಹೆಚ್ಚಾಗಬಹುದು ಎಂದು ಈ ವರದಿ ಹೇಳುತ್ತದೆ. ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿನ ಇತರ ದೇಶಗಳ ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳು ಹವಾಮಾನ ಬದಲಾವಣೆಯ ಕೆಟ್ಟ ಪ್ರಭಾವಕ್ಕೆ ಒಳಗಾಗಲಿದೆ. ಸಮುದ್ರ ಮಟ್ಟದಲ್ಲಿ ಏರಿಕೆ, ಅಂತರ್ಜಲ ಮಟ್ಟದಲ್ಲಿನ ಇಳಿಕೆ, ಮತ್ತು ತೀವ್ರವಾದ ತಾಪಮಾನ ಏರಿಕೆಯಂತಹ ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಕಂಡುಬರುತ್ತಿದ್ದು ಮುಂಬರುವ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚು ತೀವ್ರತೆಯನ್ನು ಪಡೆಯಲಿದೆ. 2100ರ ಹೊತ್ತಿಗೆ ಭಾರತದಾದ್ಯಂತ ಸರಾಸರಿ ತಾಪಮಾನವು 2.4 ಡಿಗ್ರಿ ಸೆಲ್ಸಿಯಸ್ ಮತ್ತು 4.4 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ ಮತ್ತು ಅದು ಆಹಾರ ವ್ಯವಸ್ಥೆಗಳು ಮತ್ತು ಇತರ ಕ್ಷೇತ್ರಗಳ ಮೇಲೆ ವಿಪರೀತ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಈ ಸವಾಲುಗಳನ್ನು ಎದುರಿಸುವ ಮಾರ್ಗಗಳು ಸಂಕೀರ್ಣವಾಗಿವೆ ಮತ್ತು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟಗಳಲ್ಲಿ ಕ್ರಮಗಳನ್ನು ಒಳಗೊಂಡಿರಬೇಕು ಎಂದು ವರದಿ ಹೇಳುತ್ತದೆ. ದೇಶದಲ್ಲಿ ನೀತಿಗಳನ್ನು ರೂಪಿಸುವ ಅಗತ್ಯವಿರುತ್ತದೆ ಮತ್ತು ಅವುಗಳು ಅಧಿಕಾರದ ಮೇಲ್ಪದರದಿಂದ ಹಿಡಿದು ಸ್ಥಳೀಯ ಮಟ್ಟದ ವರೆಗೆ ಅನುಷ್ಠಾನಗೊಳ್ಳಬೇಕು. ಹೀಗೆ ರೂಪಿಸಿದ ಪರಿಹಾರ ಕಾರ್ಯಕ್ರಮಗಳಲ್ಲಿ “ಹವಾಮಾನ ಸ್ನೇಹಿ ತಂತ್ರಜ್ಞಾನಗಳು, ಬೆಳೆ ವೈವಿಧ್ಯತೆಗಳು, ನೀರಿನ ಬಳಕೆ ಹೆಚ್ಚಾಗಿರುವ ಬೆಳೆ ಬೆಳಯದಿರುವುದು, ಪಳೆಯುಳಿಕೆ ಇಂಧನಗಳು, ರಸಗೊಬ್ಬರಗಳು ಮತ್ತು ಭೂ ಸಂಪನ್ಮೂಲಗಳನ್ನು ಪ್ರೋತ್ಸಾಹಿಸುವ ನೀತಿಯನ್ನು ಒಳಗೊಂಡಿರಬೇಕು ಎಂದು ವರದಿಯು ಹೇಳುತ್ತದೆ.
1967 ರಿಂದ 2016 ರವರೆಗಿನ ಮಾಹಿತಿಯ ಆಧಾರದ ಮೇಲೆ ತಾಪಮಾನದಲ್ಲಿನ ಏರಿಕೆಯು ಭೂ ಉತ್ಪಾದಕತೆಯನ್ನು ಎಷ್ಟು ಕುಗ್ಗಿಸಿದೆ ಎಂಬುವುದನ್ನೂ ವರದಿಯು ಹೇಳುತ್ತದೆ. ಸಾಕಷ್ಟು ಮಳೆ ಬೀಳುವ ಪ್ರದೇಶಗಳು ಇತರ ಪ್ರದೇಶಗಳಿಗಿಂತ ಹೆಚ್ಚು ಇಳುವರಿ ನಷ್ಟವನ್ನು ಅನುಭವಿಸಿದೆ ಎಂದೂ ಅದು ಹೇಳಿದೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ದಕ್ಷಿಣ ಏಷ್ಯಾದ ದೇಶಗಳಿಗೆ ಈಗಿರುವ ಮೂರು ಪಟ್ಟು ಹೆಚ್ಚು ಆಹಾರದ ಅಗತ್ಯತೆ ಇರುತ್ತದೆ ಎಂದು ವರದಿ ಅಂದಾಜಿಸಿದೆ.
2030ಕ್ಕೆ ಇನ್ನುಳಿದಿರುವುದು ಕೇವಲ ಎಂಟು ವರ್ಷಗಳು. ನಾವು ತಾಪಮಾನ ತಗ್ಗಿಸುವ ಯಾವುದೇ ಯೋಜನೆಗಳನ್ನು ಕಾರ್ಯಗತಗೊಳಿಸದಿದ್ದರೆ, ಅದರ ನಂತರ ಪರಿಸ್ಥಿತಿಯು ಕೆಟ್ಟದಾಗಿರುತ್ತದೆ. IFPRI ಪ್ರಸ್ತಾಪಿಸಿದ ನೀತಿಗಳ ಹೊರತಾಗಿಯೂ ಇತರ ಕೆಲ ಸಂಸ್ಥೆಗಳು ಮತ್ತು ತಜ್ಞರು ಕೆಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಭೂ-ಹಿಡುವಳಿ ಮಾದರಿಗಳಲ್ಲಿ ಸುಧಾರಣೆಗಳನ್ನು ಮತ್ತು ಮಾರ್ಕೆಟಿಂಗ್ ನೀತಿಗಳಲ್ಲಿ ಬದಲಾವಣೆಗಳನ್ನು ತರುವುದು ಅವುಗಳಲ್ಲಿ ಪ್ರಮುಖವಾದವುಗಳು. ಬಳಕೆ ಮಾದರಿಗಳು ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನೂ ಹಲವರು ಪ್ರಸ್ತಾಪಿಸಿದ್ದಾರೆ.
ವಿಭಿನ್ನ ಹವಾಮಾನ ಮತ್ತು ಭೌಗೋಳಿಕ ಪ್ರದೇಶಗಳಿಗೆ ಅನ್ವಯವಾಗುವಂತೆ ರೂಪಿಸುವ ಸಮಗ್ರ ಕೃಷಿ ಮತ್ತು ತೋಟಗಾರಿಕಾ ತಂತ್ರಗಳು ಮಾತ್ರ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಬಲ್ಲದು. ಆದರೆ ಅದು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದ ಕಾರ್ಯಸೂಚಿಯಲ್ಲಿ ಕಾಣುತ್ತಿಲ್ಲ. ವಾತಾವರಣ ಬದಲಾವಣೆಯನ್ನು ಎದುರಿಸುವ ಮಾರ್ಗಗಳ ಬಗ್ಗೆ ಮಾತ್ರ ಚರ್ಚಿಸದೆ ಅದರ ಪ್ರಭಾವವನ್ನು ಅತ್ಯುತ್ತಮವಾಗಿ ಹೇಗೆ ಎದುರಿಸಬಹುದು ಎಂಬ ನಿಟ್ಟಿನಲ್ಲಿ ನಮ್ಮ ಅಧ್ಯಯನಗಳು ಮತ್ತು ಚರ್ಚೆಗಳು ಸಾಗಬೇಕು.