ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪದ ಮೇಲೆ ಆಗ್ರಾದಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಂಧಿಸಿರುವ ಕುರಿತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮತ್ತು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವು ಕಾಶ್ಮೀರಿ ಜನರಿಗೆ “ಕೇವಲ ಮನರಂಜನೆಯ ಮೂಲವಾಗಿದೆ” ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
“ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಆಗ್ರಾದಲ್ಲಿ ಬಂಧಿಸಿ ದೇಶದ್ರೋಹದ ಆರೋಪ ಹೊರಿಸಲಾಗಿದೆ. ರಾಷ್ಟ್ರವಿರೋಧಿ ಎಂದು ಅರ್ಥೈಸಬಹುದಾದ ಯಾವುದೇ ಚಟುವಟಿಕೆಯಲ್ಲಿ ಅವರು ತೊಡಗಿಸಿಕೊಂಡಿಲ್ಲ ಎಂದು ಜೆ & ಕೆ ಮಾಜಿ ಮುಖ್ಯಮಂತ್ರಿ ಪತ್ರದಲ್ಲಿ ಬರೆದಿದ್ದಾರೆ.
ಈ ವಾರದ ಆರಂಭದಲ್ಲಿ, ಭಾನುವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನ ನಡುವೇ ವಿಶ್ವ T-20 ಪಂದ್ಯದಲ್ಲಿ ಭಾರತ ಸೋತ ನಂತರ ಪಾಕಿಸ್ತಾನದ ಪರ ಘೋಷಣೆಗಳನ್ನು ಮತ್ತು “ದೇಶ ವಿರೋಧಿ” ಚಾಟ್ಗಳನ್ನು ಹಂಚಿಕೊಂಡ ಆರೋಪದ ಮೇಲೆ ಆಗ್ರಾದ ಇಂಜಿನಿಯರಿಂಗ್ ಕಾಲೇಜೊಂದರ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಕಾಲೇಜು ಅಮಾನತುಗೊಳಿಸಿತು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನವನ್ನು ಹೊಗಳಿ ಭಾರತವನ್ನು ತಮ್ಮ ದೇಶ ಅಲ್ಲ ಎಂದು ತಿರಸ್ಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶಭಕ್ತಿ ಮತ್ತು ನಿಷ್ಠೆಯ ಭಾವವನ್ನು ಸಹಾನುಭೂತಿಯೊಂದಿಗೆ ಬೆಳೆಸಿಕೊಳ್ಳಬೇಕೇ ಹೊರತು “ಲಾಠಿ ಅಥವಾ ಬಂದೂಕಿನ ನಳಿಕೆಯಿಂದ” ಸಾಧ್ಯವಿಲ್ಲ. ಯಾರಿಗೂ ‘ದೇಶಭಕ್ತಿಯನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ’ ಎಂದು ಮುಫ್ತಿ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ತಿರಸ್ಕಾರದಿಂದ ಕೂಡಿದ ಇಂತಹ ದಂಡನಾತ್ಮಕ ಕ್ರಮವು ಯುವ ಪೀಳಿಗೆ ಮತ್ತು ದೇಶದ ಇತರ ಜನರ ನಡುವೆ “ಅವಿಶ್ವಾಸ ಮತ್ತು ಪರಕೀಯತೆಯ ಭಾವನೆಯನ್ನು” ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ವಾದಿಸಿದ್ದಾರೆ.
“ಇತ್ತೀಚೆಗೆ ದೇಶದ್ರೋಹದ ಆರೋಪದ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳನ್ನು ಆಗ್ರಾದಲ್ಲಿ ಬಂಧಿಸಿರುವ ಬಗ್ಗೆ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಅವರು ಮಧ್ಯಪ್ರವೇಶಿಸಿ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಾರೆ ಎಂದು ಭಾವಿಸುತ್ತೇವೆ ” ಎಂದು ಮೆಹಬೂಬಾ ಹೇಳಿದ್ದಾರೆ.
ಅವರು ಬರೆದಿರುವ ಪೂರ್ತಿ ಪತ್ರ ಇಲ್ಲಿದೆ

