ಮೂಲ : ರಿತು ದಿವಾನ್
Patriarchy –Property Rights and Goa ʼs UCC
The Leaf let – june 17th 2023
ತಾತ್ವಿಕವಾಗಿ ಏಕರೂಪದ ನಾಗರಿಕ ಸಂಹಿತೆ (ಏನಾಸಂ) ಎಂದರೆ ಆಸ್ತಿ ಹಕ್ಕುಗಳು ಸೇರಿದಂತೆ ಎಲ್ಲಾ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನತೆಯನ್ನು ಕಲ್ಪಿಸುವ ಒಂದು ಶಾಸನ. ಭಾರತದ ಇತರ ವೈಯಕ್ತಿಕ ಕಾನೂನುಗಳಿಗೆ ಹೋಲಿಸಿದರೆ ಗೋವಾದ ಏಕರೂಪ ನಾಗರಿಕ ಸಂಹಿತೆ ಲಿಂಗತ್ವವನ್ನು ಲೆಕ್ಕಿಸದೆ ಹೆಚ್ಚು ಸಮಾನ ಆಸ್ತಿ ಹಕ್ಕುಗಳನ್ನು ಒದಗಿಸುತ್ತದೆಯಾದರೂ, ಇದು ಸಾಮಾನ್ಯವಾಗಿ ಆಚರಣೆಗಿಂತ ಹೆಚ್ಚಾಗಿ ತಾತ್ವಿಕವಾಗಿ ಮಾತ್ರ ಜಾರಿಯಲ್ಲಿದೆ. ಆದರೆ ಈ ಸೀಮಿತ ಹಕ್ಕುಗಳು ಸಹ ಕಾಲಾನಂತರದಲ್ಲಿ ರಾಜ್ಯದ ಶತಮಾನಗಳಷ್ಟು ಹಳೆಯ ಕಾನೂನು ಸಂಪ್ರದಾಯವನ್ನು ಲೆಕ್ಕಿಸದೆ ಗೋವಾಕ್ಕೆ ಆಮದು ಮಾಡಿಕೊಳ್ಳುವ ಕಾನೂನುಗಳ ನಿರಂತರ ಹರಿವಿನಿಂದ ನಾಶವಾಗಿವೆ.

ಸಂಪನ್ಮೂಲಗಳ ಮೇಲಿನ ನಿಯಂತ್ರಣವು ಲಿಂಗ ಸಮಾನತೆಗಾಗಿ ಜಾಗತಿಕ ಹೋರಾಟದ ಕೇಂದ್ರಬಿಂದುವಾಗಿದೆ. ಉತ್ಪಾದನಾ ಸಾಧನಗಳ ಮೇಲಿನ ಹೋರಾಟವು ಮೂಲಭೂತವಾಗಿ ಜೀವನೋಪಾಯದ ಮುಖ್ಯ ಸಾಧನವಾದ ಭೂಮಿಯ ಲಭ್ಯತೆ, ಒಡೆತನ ಮತ್ತು ಭೂಮಿಯ ಮೇಲಿನ ನಿಯಂತ್ರಣದ ಮೇಲೆ ಕೇಂದ್ರೀಕರಿಸುತ್ತದೆ. ಪರಿಣಾಮವಾಗಿ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮುಖ್ಯವಾಗಿ ಭೂಮಿ ಮತ್ತು ಆಸ್ತಿ ಹಕ್ಕುಗಳ ವಿಷಯಗಳ ಮೇಲೆ ವಿಷಯ ಕೇಂದ್ರೀಕೃತವಾಗಿರುತ್ತದೆ. ಈ ಮೂಲ ಸಮಸ್ಯೆಯನ್ನು ಗುರುತಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1979 ರಲ್ಲಿ ಅಂಗೀಕರಿಸಿದ “ ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯವನ್ನು ನಿರ್ಮೂಲನೆ ಮಾಡುವ ಒಡಂಬಡಿಕೆ ” (ಸಿಇಡಿಎಡಬ್ಲ್ಯೂ), ತಾರತಮ್ಯವಿಲ್ಲದೆ ಆಸ್ತಿಯನ್ನು ಹೊಂದುವ ಮತ್ತು ನಿರ್ವಹಿಸುವ ಹಕ್ಕನ್ನು ಅನುಚ್ಛೇದ 15 ರ ಮೂಲಕ ಮಹಿಳೆಯರಿಗೆ ನೀಡಿದೆ, ಜೊತೆಗೆ ಅನುಚ್ಛೇದ 14 (2) (ಜಿ)ರ ಮೂಲಕ ಭೂಮಿ ಮತ್ತು ಕೃಷಿ ಸುಧಾರಣೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಅನುಚ್ಛೇದ 16 ಇಬ್ಬರೂ ಸಂಗಾತಿಗಳಿಗೆ ಆಸ್ತಿಯ ಮಾಲೀಕತ್ವ, ಸ್ವಾಧೀನ, ನಿರ್ವಹಣೆ, ಆಡಳಿತ, ಬಳಕೆ ಮತ್ತು ವರ್ಗಾವಣೆಯಲ್ಲಿ ಸಮಾನ ಹಕ್ಕುಗಳನ್ನು ನೀಡುತ್ತದೆ. ಭೂ ಹಕ್ಕುಗಳು ಸೇರಿದಂತೆ ಲಿಂಗ ಸಮಾನತೆಗೆ ಬದ್ಧತೆಯನ್ನು ನೀಡುವ ಇದನ್ನೂ ಸೇರಿದಂತೆ ಇತರ ಇತರ ಒಡಂಬಡಿಕೆಗಳಿಗೆ ಭಾರತ ಸಹಿ ಹಾಕಿದೆ.
ಎಂಟನೆಯ ಪಂಚವಾರ್ಷಿಕ ಯೋಜನೆಯು ಲಿಂಗ ಸಮಾನತೆಗಾಗಿ ನೀತಿಯನ್ನು ಪ್ರೋತ್ಸಾಹಿಸಿತ್ತು. ವಿಶೇಷವಾಗಿ ಗಂಡ ಮತ್ತು ಹೆಂಡತಿ ಹಾಗೂ ವಿವಾಹಿತ ಮತ್ತು ಅವಿವಾಹಿತ ಒಂಟಿ ಮಹಿಳೆಯರ ಜಂಟಿ ಹೆಸರುಗಳಲ್ಲಿ ಭೂ ಪಟ್ಟಾಗಳನ್ನು ವಿತರಿಸಲು ರಾಜ್ಯಗಳಿಗೆ ಹೊರಡಿಸಿದ ಮಾರ್ಗಸೂಚಿಯ ರೂಪದಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸಿತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ವೈಯುಕ್ತಿಕ ಮತ್ತು ಸಮೂಹ ಭೂ ಹಕ್ಕುಗಳನ್ನು ವಿತರಿಸುವುದನ್ನು ಪರಿಚಯಿಸಿತು. ಹತ್ತನೇ ಪಂಚವಾರ್ಷಿಕ ಯೋಜನೆಯು ಭೂ ಮಿತಿ ಕಾಯ್ದೆಯಡಿ ಹೆಚ್ಚುವರಿ ಎಂದು ಘೋಷಿಸಲಾದ ಭೂಮಿಯನ್ನು ಮಹಿಳೆಯರಿಗೆ ವಿತರಿಸಲು ಶಿಫಾರಸು ಮಾಡಿತು. ಹನ್ನೆರಡನೇ ಪಂಚವಾರ್ಷಿಕ ಯೋಜನೆಯು ಸರ್ಕಾರದ ನೇರ ವರ್ಗಾವಣೆ, ಮಾರುಕಟ್ಟೆಯಿಂದ ಖರೀದಿ ಅಥವಾ ಗುತ್ತಿಗೆ ಮತ್ತು ಪಿತ್ರಾರ್ಜಿತ ಆಸ್ತಿ ಎಂಬ ಮೂರು ಮೂಲಗಳಿಂದ ಮಹಿಳೆಯರ ಭೂ ಲಭ್ಯತೆಯ ಅವಕಾಶವನ್ನು ಹೆಚ್ಚಿಸಲು ಒತ್ತು ನೀಡಿತು. ಈ ನೀತಿ ಉಪಕ್ರಮಗಳ ಪರಿಣಾಮವಾಗಿ ಮತ್ತು ಬೆಳೆಯುತ್ತಿರುವ ಮಹಿಳಾ ಚಳುವಳಿಗಳ ಪ್ರಭಾವದೊಂದಿಗೆ, ದೇಶದಲ್ಲಿ ಮಹಿಳಾ ಭೂಮಾಲೀಕರ ಪಾಲು 2000-01 ರಲ್ಲಿ ಶೇ 10.9 ಇದ್ದುದು 2005-06 ರಲ್ಲಿ ಶೇ 11.7ಕ್ಕೆ ಮತ್ತು 2015-16 ರ ಕೃಷಿ ಜನಗಣತಿಯ ಪ್ರಕಾರ 2010-11 ರಲ್ಲಿ ಶೇ 12.78ಕ್ಕೆ ಏರಿತು. ಒಂದು ದಶಕದ ಅಲ್ಪಾವಧಿಯಲ್ಲಿ ಸುಮಾರು ಶೇ 2ರಷ್ಟು ಅಂಕಗಳ ಈ ಹೆಚ್ಚಳವು ನಗಣ್ಯ ಎನ್ನಲಾಗುವುದಿಲ್ಲ. ಇದು ಜಾರಿಯಾದ ನೀತಿಗಳು ಮತ್ತು ಹೋರಾಟಗಳ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಭಾರತದಲ್ಲಿ ಭೂ ಮಾಲೀಕತ್ವದ ನವೀಕರಿಸಿದ ಇತ್ತೀಚಿನವರೆಗಿನ ದತ್ತಾಂಶ ಲಭ್ಯವಿಲ್ಲ ಎನ್ನುವುದನ್ನು ಗಮನಿಸಲೇಬೇಕಿದೆ. ದುರದೃಷ್ಟವಶಾತ್ ಯೋಜನಾ ಆಯೋಗವನ್ನು ವಿಸರ್ಜಿಸಿದ ನಂತರ ಭೂಮಿಯ ಹಕ್ಕಿನ ಮೇಲೆ ಲಿಂಗ ಸಮಾನತೆಯ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಯಾವುದೇ ನೀತಿ ಉಪಕ್ರಮಗಳನ್ನು ಕೈಗೊಂಡಿಲ್ಲ.

ಮಹಿಳಾ ಭೂ ಹಕ್ಕುಗಳು ಮತ್ತು ಪೋರ್ಚುಗೀಸ್ ನಾಗರಿಕ ಸಂಹಿತೆ
ಭೂ ಸಂಪನ್ಮೂಲಗಳ ಮೇಲಿನ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿ ವ್ಯಕ್ತವಾದ ಲಿಂಗ ಸಮಾನತೆಯು ಒಂದು ಸಂಕೀರ್ಣ ವಿಷಯವಾಗಿದೆ. ಭಾರತದಲ್ಲಿ ಆರ್ಥಿಕ ಮತ್ತು ಆರ್ಥಿಕೇತರ ಅಂಶಗಳು ಮತ್ತು ಲಿಂಗಾಧಾರಿತ ಸಂಪನ್ಮೂಲ ನಿಯಂತ್ರಣ ಮತ್ತು ಮಾಲೀಕತ್ವದ ಮೇಲಿನ ಶಕ್ತಿಗಳಿಗೆ ಸಂಬಂಧಿಸಿದ ಐತಿಹಾಸಿಕ ಮತ್ತು ಪ್ರಾದೇಶಿಕ ನಿರ್ದಿಷ್ಟತೆಗಳ ಅತ್ಯಂತ ಸಂಕೀರ್ಣ ಅಂಶಗಳನ್ನು ಗೋವಾ ರಾಜ್ಯದ ಸ್ಥಿತಿಗತಿಗಳು ಪ್ರಸ್ತುತಪಡಿಸುತ್ತವೆ. ಭಾರತೀಯ ಸಂವಿಧಾನದ 44 ನೇ ವಿಧಿಯ ಅನುಸಾರ ನಿರ್ದೇಶಕ ತತ್ವದಲ್ಲಿ ಪ್ರತಿಪಾದಿಸಿರುವಂತೆ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ಪ್ರಯತ್ನಿಸಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬಹುದು ಎಂಬ ನಿಯಮವನ್ನು ಅನುಸರಿಸಿರುವ ಎಕೈಕ ರಾಜ್ಯ ಗೋವಾ ಆಗಿದೆ.

ಪೋರ್ಚುಗೀಸ್ ಸಿವಿಲ್ ಕೋಡ್ ಎಂದು ಅಧಿಕೃತವಾಗಿ ಕರೆಯಲ್ಪಡುವ ಒಂದು ಸಾಮಾನ್ಯ ನಾಗರಿಕ ಸಂಹಿತೆಯನ್ನು 1867 ರಲ್ಲಿ ಗೋವಾದಲ್ಲಿ ಸ್ಥಾಪಿಸಲಾಯಿತು ಮತ್ತು ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ಭೂಮಿ ಮತ್ತು ಆಸ್ತಿ ಹಕ್ಕುಗಳಲ್ಲಿ ನ್ಯಾಯಿಕ ಸಮಾನತೆ ಸೇರಿದಂತೆ ರಾಜ್ಯದ ಜೀವನದ ಎಲ್ಲಾ ಅಂಶಗಳಿಗೆ ಅನ್ವಯಿಸುತ್ತದೆ. ಸಂಹಿತೆಯ ಹೊರತಾಗಿ, ಗೋವಾದಲ್ಲಿ ಮಹಿಳೆಯರಿಗೆ ಭೂ ಹಕ್ಕುಗಳನ್ನು ವ್ಯಾಪಕ ಶ್ರೇಣಿಯ ಕಾನೂನುಗಳು ಮತ್ತು ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ. ಈ ಚರ್ಚೆಗೆ ಸಂಬಂಧಿಸಿದವುಗಳೆಂದರೆ:
- ವೈವಾಹಿಕ ಆಸ್ತಿ ಹಕ್ಕುಗಳ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮತ್ತು ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಆಧರಿಸಿದ ಮತ್ತು ನಿರ್ಧರಿಸುವ ಕುಟುಂಬ ಕಾನೂನುಗಳು. ಇದು ಸಾಮಾನ್ಯ ಹಿಂದೂಗಳ ಬಳಕೆಗಳು ಮತ್ತು ಪದ್ಧತಿಗಳ ಸಂಹಿತೆಯನ್ನು ಸಹ ಒಳಗೊಂಡಿದೆ.
- ಕೋಡ್ ಆಫ್ ಕಮ್ಯುನಿಡೇಸ್ ಎಂಬುದು ಗ್ರಾಮ ಸಮುದಾಯ ಕಾನೂನಾಗಿದ್ದು, ಇದು ಭೂಮಿ ಮತ್ತು ಸಂಪನ್ಮೂಲಗಳ ಸಾಮಾನ್ಯ ನಿರ್ವಹಣೆಯನ್ನು ಖಚಿತಪಡಿಸುತ್ತದೆ.
- 1975 ರ ಗೋವಾ ಮುಂಡ್ಕರ್ (ಹೊರಹಾಕುವಿಕೆಯಿಂದ ರಕ್ಷಣೆ) ಕಾಯ್ದೆಯು ಭಟ್ಕರ್ (ಭೂಮಾಲೀಕರ) ಒಪ್ಪಿಗೆಯೊಂದಿಗೆ ಮುಂಡ್ಕರ್‌ರ್ಗಳ (ಕುಟುಂಬಕ್ಕೆ ಯಾವುದೇ ಸೇವೆಗಳನ್ನು ಸಲ್ಲಿಸುವ ಬಾಧ್ಯತೆಯೊಂದಿಗೆ ಅಥವಾ ಇಲ್ಲದೆ ವಾಸಿಸುವ ಮನೆಯಲ್ಲಿ ಕಾನೂನುಬದ್ಧವಾಗಿ ವಾಸಿಸುವವರು) ಹಕ್ಕುಗಳನ್ನು ನಿಯಂತ್ರಿಸುತ್ತದೆ.
ಮುಂದುವರೆಯುತ್ತದೆ,,,,,









