ಲೋಕಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗಲಿದೆ. ಈಗಾಗಲೇ 135 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. ಲೋಕಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ರಾಜ್ಯದ ಜನರ ಮುಂದಿಟ್ಟು ಮತ ಕೇಳ ಬೇಕಿದ್ದ ಭಾರತೀಯ ಜನತಾ ಪಾರ್ಟಿ ಸುಳ್ಳು ವಿಚಾರವನ್ನು ದೊಡ್ಡದು ಮಾಡಿಕೊಂಡು, ತಾವೇನೋ ಸಾಧಿಸಿದ್ದೇವೆ ಎನ್ನುವ ಭ್ರಮಾ ಲೋಕದಲ್ಲಿ ಮುಳುಗಿದೆ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ, ಲವ್ ಜಿಹಾದ್, ಟಿಪ್ಪು ವರ್ಸಸ್ ಸಾವರ್ಕರ್ ಎಂದು ಬೊಬ್ಬೆ ಹೊಡೆದು ಮಕಾಡೆ ಮಲಗಿದರೂ ಭಾರತೀಯ ಜನತಾ ಪಾರ್ಟಿಗೆ ಇನ್ನು ಬುದ್ಧಿ ಬಂದಿಲ್ಲವೇ..? ಎನ್ನುವ ಪ್ರಶ್ನೆ ಕೇಳುವಂತಾಗಿದೆ.

ಉಡುಪಿಯಲ್ಲಿ ಮುಸ್ಲಿಂ ಯುವತಿಯರು ಮಾಡಿದ್ದು ಸರಿಯೇ..?
ಈ ಪ್ರಶ್ನೆಗೆ ಮಾನವೀಯತೆ ಇರುವ ಯಾವುದೇ ಮನುಷ್ಯನನ್ನು ಕೇಳಿದರೂ ಉತ್ತರ ತಪ್ಪು ಎನ್ನುವುದೇ ಆಗಿರುತ್ತದೆ. ಆಗಿದ್ದ ಮೇಲೆ ಬಿಜೆಪಿ ನಾಯಕರು ಮಾಡುತ್ತಿರುವ ಹೋರಾಟ ಸರಿಯಲ್ಲವೇ..? ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಬಹುದು. ಆದರೆ ಉಡುಪಿಯ ನೇತ್ರಾ ಕಾಲೇಜಿನಲ್ಲಿ ಯಾವುದೇ ವಿಡಿಯೋ ರೆಕಾರ್ಡ್ ಆಗಿಲ್ಲ, ಇದನ್ನು ಸ್ವತಃ ಪೊಲೀಸರೇ ಹೇಳಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ಹೋದ ಕೂಡಲೇ ಮೊಬೈಲ್ ಪರಿಶೀಲನೆ ಮಾಡಲಾಗಿದೆ. ಆದರೆ ಮೊಬೈಲ್ನಲ್ಲೂ ಯಾವುದೇ ವಿಡಿಯೋ ಸಿಕ್ಕಿಲ್ಲ. ಆಗ ಹಿಂದೂ ವಿದ್ಯಾರ್ಥಿನಿಯರು, ನಾವು ವಿಡಿಯೋ ಡಿಲೀಟ್ ಮಾಡಿಸಿದ್ದೇವೆ ಎನ್ನುವ ಮಾತನ್ನು ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಗೊತ್ತಾದ ಕೂಡಲೇ ಮೊಬೈಲ್ ರಿಟ್ರೀವ್ ಮಾಡಿದ್ದು, ಯಾವುದೇ ವಿಡಿಯೋ ಸಿಕ್ಕಿಲ್ಲ. ಅಲ್ಲಿಗೆ ವಿಡಿಯೋ ಅನ್ನೋದೇ ಕಟ್ಟು ಕಥೆ.

ಮೊಬೈಲ್ ರಿಟ್ರೀವ್ ಮಾಡಿದರೆ ಏನೆಲ್ಲಾ ಸಿಗುತ್ತೆ ಗೊತ್ತಾ..?
ಒಂದು ವೇಳೆ ವಿಡಿಯೋ ಇದ್ದಿದ್ದರೆ ಪೊಲೀಸರು ಪರಿಶೀಲನೆ ಮಾಡಿದಾಗ ಸಂಪೂರ್ಣ ಮೆಮೋರಿ ಟ್ರ್ಯಾಕ್ ಆಗಬೇಕಿತ್ತು. ಆದರೆ ವಿಡಿಯೋ ಮಾಡಿದ್ದಾರೆ ಅನ್ನೋದೇ ಸುಳ್ಳು ಆಗಿರುವ ಕಾರಣ ಇದೀಗ ಮತ್ತೊಂದು ಕಥೆ ಕಟ್ಟಲಾಗ್ತಿದೆ. ಮೊಬೈಲ್ ಎಕ್ಸ್ಚೇಂಜ್ ಆಗಿರಬಹುದು ಅನ್ನೋದು. ಹಿಂದೂ ಯುವತಿಯರು ಮೊಬೈಲ್ ನೋಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮೊಬೈಲ್ ನೋಡಿದೆ, ಕಾಲೇಜಿನಲ್ಲಿ ಸ್ನೇಹಿತರು ಮೊಬೈಲ್ ನೋಡಿರ್ತಾರೆ. ಇಷ್ಟೆಲ್ಲಾ ಇರುವಾಗ ಮೊಬೈಲ್ ಅದಲು ಬದಲಾಗಿದ್ದರೆ ಸರಳವಾಗಿ ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲವೇ..? ಇನ್ನು ಮೊಬೈಲ್ನ ರಿಟ್ರೀವ್ ಮಾಡಲು ಒಮ್ಮೆ ಹಾಕಿದರೆ ನೀವು ಮೊಬೈಲ್ ಖರೀದಿ ಮಾಡಿದಾಗ ತೆಗೆದುಕೊಳ್ಳುವ ಮೊದಲ ಫೋಟೋ ಕೂಡ ಮತ್ತೆ ಕಂಪ್ಯೂಟರ್ಗೆ ಬಂದು ಬೀಳುತ್ತವೆ. ನೀವು ಡಿಲೀಟ್ ಮಾಡಿದ್ದರೂ ಕೂಡ ಎಲೆಕ್ಟ್ರಾನಿಕ್ ಡಿವೈಸ್ ನಿಮ್ಮ ಟ್ರ್ಯಾಕ್ ರೆಕಾರ್ಡ್ ಅಳಿಸಿರುವುದಿಲ್ಲ.
ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಸರಿ ಇದೆಯಾ..?

ಖಂಡಿತ ರಾಜ್ಯ ಸರ್ಕಾರ ಈ ಪ್ರಕರಣವನ್ನು ನಿಬಾಯಿಸಿದ ರೀತಿ ತಪ್ಪಾಗಿದೆ. ಮೊದಲಿಗೆ ಈ ರೀತಿಯ ವಿಚಾರ ಹರಿದಾಡುವಾಗಲೇ ಕಾಲೇಜು ಆಡಳಿತ ಮಂಡಳಿಯಿಂದ ದೂರನ್ನು ಪಡೆದು FIR ಮಾಡಿ ತನಿಖೆ ಮಾಡಬೇಕಿತ್ತು. ಒಂದು ವೇಳೆ ತಪ್ಪಿದ್ದರೆ ತಪ್ಪಿತಸ್ಥರನ್ನು ಬಂಧಿಸಬೇಕಿತ್ತು. ಒಂದು ವೇಳೆ ಆರೋಪವೇ ಸುಳ್ಳು ಎನ್ನುವುದೇ ಆಗಿದ್ದರೂ ತನಿಖಾ ವರದಿಯಲ್ಲಿ ಹಾಕಿ, ಕೋರ್ಟ್ಗೆ ಕಳುಹಿಸಲು ಯಾವುದೇ ಸಮಸ್ಯೆ ಇರಲಿಲ್ಲ. ಅಲ್ಲಿನ ಪೊಲೀಸರು, ಇದರಲ್ಲಿ ಹುರುಳಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಕ್ರಮ ತೆಗೆದುಕೊಳ್ಳದೆ ಹೋದದ್ದರ ಪರಿಣಾಮ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಬಂದು ಪರಿಶೀಲನೆ ಮಾಡಿ, ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದರೂ ಬಿಜೆಪಿ ಒಪ್ಪುವುದಕ್ಕೆ ಸಿದ್ಧವಿಲ್ಲ ಎಂದರೆ ಅದಕ್ಕೆ ರಾಜಕೀಯ ಕಾರಣ ಮಾತ್ರ.
ವಿಡಿಯೋ ವಿಚಾರವೇ ಸುಳ್ಳು ಎಂದಾದರೆ ಅಮಾನತು ಯಾಕೆ..?

ಹೌದು, ಈ ರೀತಿಯ ಪ್ರಶ್ನೆ ನಿಮ್ಮ ಪ್ರತಿಧ್ವನಿಯನ್ನೂ ಕಾಡಿದ್ದೂ ಸುಳ್ಳಲ್ಲ. ಇದರ ಬಗ್ಗೆ ಕಾಲೇಜು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದಾಗ ಪ್ರತಿಧ್ವನಿಗೆ ಸಿಕ್ಕ ಮಾಹಿತಿ ಏನಂದ್ರೆ, ಕಾಲೇಜಿನಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಹಾಗಿದ್ದರೂ ಮೊಬೈಲ್ ಬಳಕೆ ಮಾಡಿದ ಕಾರಣಕ್ಕೆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡುವ ತೀರ್ಮಾನಕ್ಕೆ ಬಂದಿತ್ತು ಎನ್ನುವ ಮಾಹಿತಿ ನೀಡಿದ್ದಾರೆ. ಇದೀಗ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಬಳಿಕ FIR ಹಾಕಿ ತನಿಖೆ ಮಾಡುವ ಬದಲು ಮೊದಲೇ ಪೊಲೀಸರು FIR ಹಾಕಿದ್ದರೆ ಸರಿಯಾಗುತ್ತಿತ್ತು. ಇನ್ನು ಕಾಂಗ್ರೆಸ್ ಮಕ್ಕಳಾಟವನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದೂ ಕೂಡ ಸರಿಯಲ್ಲ ಅಲ್ಲವೇ..?
ಕೃಷ್ಣಮಣಿ