ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಹಿಂದುತ್ವ ಪ್ರಚಾರದ ಪತ್ರಿಕೆಯನ್ನು ಅನಧಿಕೃತವಾಗಿ ವಿತರಿಸಿರುವುದು ಬೆಳಕಿಗೆ ಬಂದ ನಂತರ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಶುಕ್ರವಾರ ವಿಚಾರಣೆ ಆರಂಭಿಸಿದೆ.
ಪ್ರತಿ ಇನ್ನೊಂದು ಸೀಟಿನಲ್ಲಿ ʼದಿ ಆರ್ಯವರ್ತ ಎಕ್ಸ್‌ಪ್ರೆಸ್ʼ ಪತ್ರಿಕೆಯನ್ನು ಇಡಲಾಗಿತ್ತು ಎಂದು ರೈಲು ಯಾತ್ರಿಕರೊಬ್ಬರು ಟ್ವಿಟರಿನಲ್ಲಿ ಮಾಹಿತಿ ಹಂಚಿಕೊಂಡ ಮೇಲೆ ಈ ವಿಷಯ ಗಮನಕ್ಕೆ ಬಂದಿದೆ.
ಪತ್ರಿಕೆಯಲ್ಲಿ “ಇಸ್ಲಾಮಿಕ್ ಆಳ್ವಿಕೆಯಡಿಯಲ್ಲಿ ಹಿಂದೂಗಳು, ಸಿಖ್ ಮತ್ತು ಬೌದ್ಧರ ನರಮೇಧವನ್ನು ಗುರುತಿಸಬೇಕಾಗಿದೆ”, “ಸಿಐಎ ಏಜೆಂಟ್, ಕಾಂಗ್ರೆಸ್ ಮಹಿಳೆ ಇಲ್ಹಾನ್ [ಒಮರ್] POK [ಪಾಕಿಸ್ತಾನ-ಆಕ್ರಮಿತ ಕಾಶ್ಮೀರ] ಗೆ ಭೇಟಿ ನೀಡಿದ್ದಾರೆ” ಮತ್ತು “ಔರಂಗಜೇಬ್ ಅವರನ್ನು ಹಿಟ್ಲರ್ ನಂತಹ ಹತ್ಯಾಕಾಂಡದ ರುವಾರಿ ಎಂದು ಶಾಶ್ವತವಾಗಿ ಮುದ್ರೆಯೊತ್ತಬೇಕು” ಎಂಬಂತಹ ವಿವಾದಾತ್ಮಕ ಲೇಖನಗಳು ಲೇಖಕರ ಹೆಸರುಗಳನ್ನು ಹೊಂದಿಲ್ಲದೆ ಪ್ರಕಟಿಸಲಾಗಿದೆ.
“ಇಂದು ಬೆಳಿಗ್ಗೆ ನಾನು ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಹತ್ತಿದೆ, ಉಳಿದೆಲ್ಲ ಆಸನಗಳಲ್ಲಿ ಪ್ರೊಪಗಾಂಡ ಪತ್ರಿಕೆ ಆರ್ಯವರ್ತ್ ಎಕ್ಸ್‌ಪ್ರೆಸ್ ಅನ್ನು ಇತಿಸಲಾಗಿತ್ತು” ಎಂದು ಪ್ರಯಾಣಿಕರಾದ ಗೋಪಿಕಾ ಬಾಶಿ ಟ್ವೀಟ್ ಮಾಡಿದ್ದಾರೆ. “ಅದರ ಬಗ್ಗೆ ಎಂದೂ ಕೇಳಿರಲಿಲ್ಲ. ರೈಲ್ವೇ ಇಲಾಖೆ ಇದನ್ನು ಹೇಗೆ ಅನುಮತಿಸುತ್ತಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದರು.
ಪತ್ರಿಕೆಯ ವೆಬ್‌ಸೈಟ್‌ನಲ್ಲಿ “ಕೋವಿಡ್ ಬಗ್ಗೆ ಅಪಾಯಕಾರಿಯಾದ ತಪ್ಪು ಮಾಹಿತಿ” ಇದೆ ಎಂದು ಪತ್ರಕರ್ತೆ ರೋಹಿಣಿ ಮೋಹನ್ ಗಮನ ಸೆಳೆದಿದ್ದಾರೆ. ಈ ಪತ್ರಿಕೆಯನ್ನು ಬೆಂಗಳೂರಿನಿಂದ ಪ್ರಕಟನೆ ಮಾಡಲಾಗುತ್ತಿದೆ ಎಂದು scroll.in ವರದಿ ಮಾಡಿದೆ.
IRCTC ಭಾರತೀಯ ರೈಲ್ವೆಗಾಗಿ ಆಹಾರ, ಆನ್‌ಲೈನ್ ಟಿಕೆಟಿಂಗ್ ಮತ್ತು ಅಡುಗೆ ಸೇವೆಗಳನ್ನು ನಿರ್ವಹಿಸಲು ಅಧಿಕಾರ ಹೊಂದಿರುವ ಏಕೈಕ ಕಂಪನಿಯಾಗಿದೆ.ರೈಲುಗಳಲ್ಲಿ ವಿತರಿಸಲು ಅನುಮೋದಿಸಲಾದ ಪ್ರಕಟಣೆಗಳಲ್ಲಿ ಪತ್ರಿಕೆ ಇಲ್ಲ ಎಂದು ಕಂಪನಿಯ ವಕ್ತಾರ ಆನಂದ್ ಝಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.”ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಮತ್ತು ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಝಾ ತಿಳಿಸಿದ್ದಾರೆ. ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಚೆನ್ನೈನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.
ರೈಲು ಬೆಂಗಳೂರು ವಿಭಾಗಕ್ಕೆ ಸೇರಿದ್ದು ಮತ್ತು ಅಲ್ಲಿ ಘಟನೆ ಸಂಭವಿಸಿದೆ ಎಂದು ನಾವು ಎಲ್ಲರಿಗೂ ತಿಳಿಸಲು ಬಯಸುತ್ತೇವೆ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಭರವಸೆ ಇದೆ ಎಂದು ಚೆನ್ನೈ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಹೀಗೊಂದು ಪತ್ರಿಕೆ ರೈಲಿನಲ್ಲಿ ಸಿಕ್ಕಿದ್ದು ಹೇಗೆ ಎಂದು ಕಾಂಗ್ರೆಸ್ ಸಂಸದ ಬಿ.ಮಾಣಿಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಐಆರ್‌ಸಿಟಿಸಿ ಚಂದಾದಾರರಾಗಿರುವ ಪತ್ರಿಕೆಗಳ ಪಟ್ಟಿಗೆ ಆರ್ಯವರ್ತ್ ಎಕ್ಸ್‌ಪ್ರೆಸ್ ಹೇಗೆ ಸೇರಿದೆ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಕೂಡಾ ಪ್ರಶ್ನಿಸಿದ್ದಾರೆ.