
ಬೆಂಗಳೂರಲ್ಲಿ ಇದೆಂಥಾ ತಾರತಮ್ಯ ?!

ನಮ್ಮ ನೆಲದಲ್ಲೇ ನಮ್ಮ ಸಂಸ್ಕೃತಿಯನ್ನೇ ಅವಮಾನಿಸಲಾಗ್ತಿದ್ಯಾ ?! ಹೀಗೊಂದು ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ಬೆಂಗಳೂರಿನ (Bangalore) ಮಾಲ್ ಒಂದರಲ್ಲಿ ನಡೆದ ಘಟನೆ . ಪಂಚೆ (dhoti) ಧರಿಸೋದು ಬಡತನದ ಸಂಕೇತನಾ ? ಪಂಚೆ ಧರಿಸಿದ್ರೆ ಜನ ನಮ್ಮನ್ನು ಕೀಳಾಗಿ ನೋಡ್ತಾರಾ ? ಪಂಚೆ ಧರಿಸೋದ್ರಿಂದ ನಮ್ಮ ಯೋಗ್ಯತೆ ಕಡಿಮೆಯಾಗುತ್ತಾ ? ಹೌದು ಅಂತಾದ್ರೆ ಇದು ನಿಜವಾಗಿಯೂ ಖಂಡನೀಯ. ಇತ್ತೀಚೆಗೆ ಬೆಂಗಳೂರಿನ ಜಿ ಟಿ ಮಾಲ್ನಲ್ಲಿ (G T mall) ನಡೆದ ಘಟನೆ ಈ ಪ್ರಶ್ನೆಗಳಿಗೆ ಕಾರಣವಾಗಿದೆ.
ಪಂಚೆ (Dhoti) ಧರಿಸಿ ಮಾಲ್ಗೆ ಬಂದಿದ್ದ ವ್ಯಕ್ತಿಯೊಬ್ಬರನ್ನ ಸಿಬ್ಬಂದಿ ಒಳ ಹೋಗದಂತೆ ಮಾಲ್ನ ಪ್ರವೇಶ ದ್ವಾರದಲ್ಲೇ ತಡೆದ ಘಟನೆ ನಡೆದಿದೆ. ಇದನ್ನ ಪ್ರಶ್ನೆ ಮಾಡಿದ್ರೆ ಮಾಲ್ ಸಿಬ್ಬಂದಿಯಿಂದ ದರ್ಪದ ಉತ್ತರ ಕೇಳಿ ಬಂದಿದೆ. ಹೀಗೆ ವ್ಯಕ್ತಿಯೊಬ್ಬರು ಊರಿನಿಂದ ಬಂದಿದ್ದ ತಮ್ಮ ತಂದೆಯನ್ನ ಮಾಲ್ಗೆ ಕರೆದುಕೊಂಡು ಬಂದಿದ್ರು. ಈ ವೃದ್ಧ ಸಹಜವಾಗಿಯೇ ಅವರ ಧಿರಿಸು ಪಂಚೆ ಶರ್ಟ್ ತೊಟ್ಟು ಮಾಲ್ಗೆ ಬಂದಿದ್ರು. ಆದ್ರೆ ಹುಂಬತನ ಮೆರೆದಿರುವ ಮಾಲ್ ಸಿಬ್ಬಂದಿ ಇವರನ್ನ ಪ್ರವೇಶದಲ್ಲೇ ತಡೆದಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಮಾಲ್ನ ಆಡಳಿತ ಮಂಡಿಳಿಯವರು ನಮಗೆ ನೀಡಿರುವ ಸೂಚನೆ ಪ್ರಕಾರ ನಾವು ನಡೆದುಕೊಳ್ತೇವೆ, ನೀವು ಏನೇ ಪ್ರಶ್ನೆ ಮಾಡೋದಿದ್ರೂ, ಆಡಳಿತ ಮಂಡಳಿಯವರನ್ನೇ ಪ್ರಶ್ನೆ ಮಾಡಿ ಎಂದು ಸಬೂಬು ನೀಡಿದ್ದಾರೆ. ಹಾಗಿದ್ರೆ ಬೆಂಗಳೂರಲ್ಲಿ ನಿಜಕ್ಕೂ ಏನಾಗ್ತಿದೆ. ನಮ್ಮ ನೆಲದಲ್ಲೇ ನಮ್ಮ ಸಂಸ್ಕೃತಿಯನ್ನ ಅವಮಾನಿಸಲಾಗ್ತಿದ್ಯಾ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗ್ತಿದೆ.

ಈ ಹಿಂದೆ ಹೀಗೆ ಪಂಚೆ ಶರ್ಟ್ ಧರಿಸಿ ಬಂದ ರೈತನನ್ನ ಮೆಟ್ರೋ ರೈಲು (Namma metro) ಹತ್ತಲು ಬಿಡದೆ ತಡೆಯಲಾಗಿತ್ತು. ಈ ಘಟನೆ ಕೂಡ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಬೆಂಗಳೂರಿನ ಜಿ.ಟಿ ಮಾಲ್ನಲ್ಲಿ ಅಂಥದ್ದೇ ಮತ್ತೊಂದು ಘಟನೆಯಾಗಿದೆ.
ಪ್ಯಾಂಟು-ಶರ್ಟು (Pant-shirt) ಹಾಕಿಕೊಂಡು ಬಂದವರು ಮಾತ್ರ ಟಿಪ್-ಟಾಪ್, ಪಂಚೆ ಶಲ್ಯ ಧರಿಸಿ ಬಂದ್ರೆ ಬಡವರು, ಅನಾಗರೀಕರು ಎಂದು ಭಾವಿಸುವವರು, ಪಂಚೆಗಿರುವ ಹಿರಿಮೆಯನ್ನ ಅರಿತುಕೊಳ್ಳಬೇಕಿದೆ. ನಮ್ಮಲ್ಲಿ ಎಷ್ಟೋ ಜನ ಮಹನೀಯರು,ಗಣ್ಯರು,ಧೀಮಂತರು, ರಾಜಕಾರಣಿಗಳು ಇಂದಿಗೂ ಪಂಚೆಯನ್ನೇ ಧರಿಸುತ್ತಾರೆ. ಹಾಗದ್ರೆ ಅವರನ್ನೂ ಇದೇ ರೀತಿ ತಡೆಯುತ್ತಾರಾ ? ಖಂಡಿತಾ ಇಲ್ಲ. ಏಕೆಂದರೆ ಅಲ್ಲಿ ಹಣ, ಅಧಿಕಾರ, ಬಲವಿದೆ. ಆದ್ರೆ ರೈತರೋ ಅಥವಾ ಗ್ರಾಮೀಣ ಭಾಗದ ಜನರೋ ಇದೇ ಪಂಚೆ ಧರಿಸಿ ಬಂದ್ರೆ ಆಗ ಮಾತ್ರ ಈ ಮಾಲ್ ನವರಿಗೆ, ಮೆಟ್ರೋದವರಿಗೆ ಸಮಸ್ಯೆ ಶುರುವಾಗುತ್ತೆ. ಈ ಬಗೆಯ ತಾರತಮ್ಯವನ್ನು ಇಡೀ ಸಮಾಜ ಒಟ್ಟಾಗಿ ಖಂಡಿಸಬೆಕಿದೆ.
ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿ ವರನಟ ಡಾ. ರಾಜ್ಕುಮಾರ್ (Dr Rajkumar) ರವರಿಂದ ಹಿಡಿದು ಇಂದಿನ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ (Cm siddaramaiah) ವರೆಗೂ ಈ ನೆಲದ ಅನೇಕ ಗಣ್ಯರು ಧರಿಸಿದ್ದು, ಧರಿಸೋದು ಇದೇ ಪಂಚೆಯನ್ನ. ಆದ್ರೆ ಇವರಿಗೆ ಸಿಗುವ ಗೌರವ, ಸಾಮನ್ಯ ಪ್ರಜೆ ಪಂಚೆ ಧರಿಸಿದಾಗ ಸಿಗುವುದಿಲ್ಲವೆಂದರೆ ಅರ್ಥವೇನು ? ಇದು ತಾರತಮ್ಯವಲ್ಲದೇ ಮತ್ತೇನು ?!

ಈ ಹಿಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಜೆ ಹೆಚ್ ಪಟೇಲ್ (J H Patel) ಧರಿಸಿದ್ದು ಇದೇ ಪಂಚೆಯನ್ನೇ, ಕರ್ನಾಟಕದ ನೆಲದಿಂದ ಪುಟಿದು ದೇಶದ ಪ್ರಧಾನಿಯಾಗಿದ್ದ ದೇವೇಗೌಡರು (Devegoda) ಇಂದಿಗೂ ಧರಿಸೋದು ಇದೇ ಪಂಚೆಯನ್ನೇ. ಕರುಣಾನಿಧಿ (Karunanidhi), ಕುಮಾರಸ್ವಾಮಿ(Kumaraswamy),ಸ್ಟಾಲಿನ್ (Stalin).ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಹಾಗಿದ್ರೆ ಇವರಿಗೆಲ್ಲಾ ವಿಧಾನ ಸೌದಕ್ಕೆ ಪ್ರವೇಶ ಮಾಡಬೇಡಿ, ಸಂಸತ್ತಿಗೆ ಪ್ರವೇಶ ಮಾಡಬೇಡಿ ಎಂದು ಯಾರಾದ್ರೂ ತಡೆದಿದ್ರಾ ?! ಇಲ್ವಲ್ಲಾ,ಇವರಿಗಿಲ್ಲದ ನಿರ್ಬಂಧ ಸಾಮಾನ್ಯ ಜನರಿಗೇಕೆ ?

ಮೆಟ್ರೋಪಾಲಿಟನ್ ಸಿಟಿಯಾಗಿ (Metropolitan city) ಬೆಳೆದ ಮಾತ್ರಕ್ಕೆ, ಪಾಶ್ಚಾತ್ಯ ಸಂಸ್ಕೃತಿಯನ್ನ (Western culture) ಅಪ್ಪಿಕೊಂಡು, ನಮ್ಮವರನ್ನು ಹೊರತಳ್ಳಬೇಕೆ ? ಇಂಥ ಕೀಳು ಮಟ್ಟದ ಮನಸ್ಥಿತಿಗಳನ್ನ, ಆಲೋಚನೆಗಳನ್ನ ಆರಂಭದಲ್ಲೇ ಚಿವುಟಿಹಾಕಬೇಕಿದೆ. ಇಲ್ಲದಿದ್ರೆ ಈಗಾಗಲೇ ತಾತ್ಸಾರಕ್ಕೊಳಗಾಗಿ ಅಳಿದುಳಿದಿರುವ ನಮ್ಮ ಸಂಸ್ಕೃತಿಯೂ ನಶಿಸಿಹೋಗಲಿದೆ. ಇಂಥ ಘಟನೆಗಳು ನಡೆದಾಗ ಮುಲಾಜಿಲ್ಲದೆ ಸಮಾಜ ಒಗ್ಗಟ್ಟಾಗಿ ಇದನ್ನು ಖಂಡಿಸಬೇಕು. ಇಲ್ಲವಾದ್ರೆ ನಮ್ಮ ಸಂಸ್ಕೃತಿ-ಪರಂಪರೆಯ ಅವನತಿಗೆ ನಾವೇ ಕಾರಣಕರ್ತರು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.







