ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ತಂಡವನ್ನು ರಕ್ಷಿಸಿದ್ದು ಮಾತ್ರವಲ್ಲ, ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಶುಕ್ರವಾರ ಆರಂಭಗೊಂಡ ೫ನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ 4 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಸಿಕ್ಸರ್ ಗಳನ್ನು ಬಾರಿಸಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಪಂತ್ 111 ಎಸೆತಗಳಲ್ಲಿ 19 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ 146 ರನ್ ಬಾರಿಸಿ ಔಟಾದರು. ಈ ಮೂಲಕ ತಂಡ 98 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು.
ಪಂತ್ 24ನೇ ವಯಸ್ಸಿನಲ್ಲಿ 100 ಸಿಕ್ಸರ್ ಗಳನ್ನು ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 25ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ರಿಷಭ್ ಪಂತ್ ಟೆಸ್ಟ್ ನಲ್ಲಿ 48, ಏಕದಿನದಲ್ಲಿ 24 ಮತ್ತು ಟಿ-20ಯಲ್ಲಿ 31 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪಂತ್ 99 ಸಿಕ್ಸರ್ ಸಿಡಿಸಿದ್ದರು. ಜಾಕ್ ಲೀಚ್ ಅವರ 37ನೇ ಓವರ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಪಂತ್ ಪಂದ್ಯದ ಮೊದಲ ಸಿಕ್ಸರ್ ದಾಖಲಿಸಿದರು.