ರಾಜಸ್ಥಾನದ ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಶಕುನ ಮತ್ತು ಜೇಬುಗಳ್ಳ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಹುಡುಗರು ವಿಶ್ವ ಕಪ್ ಗೆಲ್ಲುತ್ತಿದ್ದರು ಆದರೆ ಪನೌತಿ (ಅಪಶಕುನ) ನಮಗೆ ಪಂದ್ಯ ಸೋಲುವಂತೆ ಮಾಡಿದೆ, ಪಿಎಂ ಎಂದರೆ ಪನೌತಿ ಮೋದಿ ಎಂದು ಹೇಳಿದ್ದರು.
ಇದಲ್ಲದೇ, ಜೇಬುಗಳ್ಳ ಒಬ್ಬಂಟಿಯಾಗಿ ಬರುವುದಿಲ್ಲ, ಮೂರು ಜನರಿದ್ದಾರೆ. ಅವರು ಎದುರಿನಿಂದ ಟಿವಿಯಲ್ಲಿ ಬಂದು ಹಿಂದೂ-ಮುಸ್ಲಿಂ, ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ವಿಷಯಗಳ ಮೂಲಕ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವುದೇ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ಎಂದು ಹೇಳಿದ್ದರು.
ಈಗ ಪನೌತಿ ಹಾಗೂ ಜೇಬುಗಳ್ಳ ಎಂಬ ಆರೋಪಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಅತ್ಯಂತ ಹಿರಿಯ ನಾಯಕನಿಗೆ ಈ ತರದ ಹೇಳಿಕೆ ತಕ್ಕುದಲ್ಲ ಎಂದು ಹೇಳಿದೆ. ನವೆಂಬರ್ 25ರ ಮುನ್ನ ಚುನಾವಣಾ ಆಯೋಗದ ಮುಂದೆ ಹಾಜರಾಗುವಂತೆ ರಾಹುಲ್ ಗೆ ಹೇಳಲಾಗಿದೆ.

ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿಯು ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನಲೆ ಇದನ್ನು ಆಯೋಗ ಪರಿಗಣಿಸಿದೆ.






