ನವೆಂಬರ್‌ನಲ್ಲಿ ಪೂಂಚ್ ಬಳಿಯ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ಆಕಸ್ಮಿಕವಾಗಿ ದಾಟಿದ ಕಾರಣಕ್ಕಾಗಿ ಬಂಧಿಸಲ್ಪಟ್ಟ ಪಾಕಿಸ್ತಾನಿ ಬಾಲಕನನ್ನು ಬಿಡುಗಡೆ ಮಾಡುವಂತೆ ದಿ ಪ್ರಿಂಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆತನ ಕುಟುಂಬವು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ.
ಹದಿನಾಲ್ಕು ವರ್ಷದ ಅಸ್ಮದ್ ಅಲಿ ಪಾರಿವಾಳವನ್ನು ಹಿಂಬಾಲಿಸಿ ಆಕಸ್ಮಿಕವಾಗಿ ಭಾರತದ ಗಡಿ ದಾಟಿದ್ದಾನೆ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ. ಅಸ್ಮದ್ ಅಲಿಗೆ ಪಾರಿವಾಳಗಳನ್ನು ಸಾಕುವ ಹವ್ಯಾಸ ಇದ್ದು, ಆತ ಪಾರಿವಾಳಗಳನ್ನು ತುಂಬಾ ಇಷ್ಟ ಪಡುತ್ತಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ
“ಅಸ್ಮದ್ ತನ್ನ ಮುದ್ದಿನ ಪಾರಿವಾಳಗಳನ್ನು ತುಂಬಾ ಇಷ್ಟಪಡುತ್ತಿದ್ದನು. ಆತ ಆ ದಿನ ಅವುಗಳನ್ನು ಹಾರಲು ಬಿಟ್ಟಾಗ ಅವುಗಳು ಭಾರತದ ಕಡೆಗೆ ಹಾರಿದೆ. ಅಸ್ಮದ್ ಅದರ ಹಿಂದೆ ಓಡಿಹೋಗಿದ್ದಾರೆ. ಅವನು ಕೇವಲ ಚಿಕ್ಕ ಮಗು, ಅವನು ನಿಯಂತ್ರಣ ರೇಖೆಯನ್ನು ದಾಟುತ್ತಿದ್ದೇನೆ ತಿಳಿದಿರಲಿಲ್ಲ.” ಎಂದು ಅವನ ತಾಯಿಯ ಚಿಕ್ಕಪ್ಪ ಅರ್ಬಾಬ್ ಅಲಿ ಹೇಳಿದ್ದಾರೆ.
ಟಟ್ರಿನೋಟ್ ಗ್ರಾಮದಲ್ಲಿರುವ ಕುಟುಂಬದ ಮನೆಯಯು ಗಡಿ ಗೋಡೆಯ ಎಲ್‌ಒಸಿಯಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ, ಇದು ಪ್ರಸಿದ್ಧ ಚಕನ್-ದಾ-ಬಾಗ್ ಕ್ರಾಸಿಂಗ್ ಪಾಯಿಂಟ್‌ಗೆ ಹತ್ತಿರದಲ್ಲಿದೆ.
“ಇಡೀ ಕುಟುಂಬವು ತುಂಬಾ ಆತಂಕದಲ್ಲಿದೆ. ಅಸ್ಮದ್ ಅವರನ್ನು ಬೆಳೆಸಿದ ಅಜ್ಜಿ, ಇಡೀ ದಿನ ಕಣ್ಣೀರು ಹಾಕುತ್ತಾರೆ. ಅವರ ಅಜ್ಜ ಕೂಡ ಯಾವಾಗಲೂ ಅಳುತ್ತಾರೆ. ನಮಗೆ ಯಾವುದೇ ರಾಜಕೀಯ ಗುಂಪು ಅಥವಾ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಸಂದೇಶದ ಮೂಲಕ, ಮಗುವನ್ನು ನಮಗೆ ಮರಳಿ ಕಳುಹಿಸುವಂತೆ ಮಾನವೀಯತೆಯ ಉತ್ಸಾಹದಲ್ಲಿ ನಾನು ಭಾರತದ ಪ್ರಧಾನಿಗೆ ಮನವಿ ಮಾಡುತ್ತೇನೆ.” ಎಂದು ಅರ್ಬಾಬ್ ಅಲಿ ಹೇಳಿದ್ದಾರೆ
ಅದಾಗ್ಯೂ, ಎಫ್‌ಐಆರ್‌ನಲ್ಲಿ ಯಾವುದೇ ಭದ್ರತಾ ಸಂಬಂಧಿತ ಅಪರಾಧವನ್ನು ಉಲ್ಲೇಖಿಸಲಾಗಿಲ್ಲ.
ಕಳೆದ ವರ್ಷ ನವೆಂಬರ್ 28 ರಂದು 3 ನೇ ಗೂರ್ಖಾ ರೆಜಿಮೆಂಟ್‌ನ ಗಸ್ತು ತಿರುಗುವಿಕೆಯ ವೇಳೆ ಅಸ್ಮದ್‌ನನ್ನು ಬಂಧಿಸಿದೆ ಎಂದು ಪೊಲೀಸ್ ದಾಖಲೆಗಳನ್ನು ಆಧರಿಸಿ ThePrint ವರದಿ ಮಾಡಿದೆ.
ಅಸ್ಮದ್ ಗಡಿ ನಿಯಂತ್ರಣ ರೇಖೆಯ ಭಾರತದ ಭಾಗದಲ್ಲಿ ನುಸುಳಿದ್ದು, ಭಯೋತ್ಪಾದಕರ ವಿರುದ್ಧ ರಕ್ಷಿಸಲು ವಿನ್ಯಾಸಗೊಳಿಸಲಾದ ಮುಳ್ಳುತಂತಿಯ ಬೇಲಿಗಿಂತ ಮುಂದೆ ಕಂಡುಬಂದಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಆತನ ಬಂಧನದ ನಂತರ, ಸೇನೆಯು ಅಸ್ಮದ್‌ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದೆ, ಗಡಿ ಹೊರಹೋಗುವಿಕೆ ಮತ್ತು ಆಂತರಿಕ ಚಲನವಲನ ನಿಯಂತ್ರಣ ಸುಗ್ರೀವಾಜ್ಞೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕಾನೂನಿನಡಿ ಗರಿಷ್ಠ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದು.
ಬಳಿಕ ಅಸ್ಮದ್‌ನನ್ನು ಪೂಂಚ್‌ನಲ್ಲಿರುವ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಆತ ರಣಬೀರ್ ಸಿಂಗ್ ಪೋರಾದಲ್ಲಿನ ಬಾಲಾಪರಾಧಿಗಳ ಕೇಂದ್ರದಲ್ಲಿದ್ದಾನೆ.

ಎಫ್‌ಐಆರ್‌ನಲ್ಲಿ ಯಾವುದೇ ಭದ್ರತಾ ಸಂಬಂಧಿತ ಅಪರಾಧವನ್ನು ಉಲ್ಲೇಖಿಸದಿರುವುದು, ಆತ ಎಲ್‌ಒಸಿ ದಾಟಿರುವುದು ಭಯೋತ್ಪಾದನೆಗೆ ಸಂಬಂಧಿಸಿದೆ ಎಂದು ಸೇನೆ ಅಥವಾ ಪೊಲೀಸರು ಶಂಕಿಸುವುದಿಲ್ಲ ಎಂದು ಸೂಚಿಸುತ್ತದೆ. ಅದಾಗ್ಯೂ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಕುರಿತ ಪ್ರತಿಕ್ರಿಯೆಗಾಗಿ ನಡೆಸಿದ ವಿನಂತಿಗೆ ಪ್ರತಿಕ್ರಿಯಿಸಲಿಲ್ಲ ಎಂದು ದಿ ಪ್ರಿಂಟ್ ವರದಿ ಹೇಳಿದೆ.
ಪ್ರಕರಣದ ಪರಿಚಯವಿರುವ ಪೊಲೀಸ್ ಅಧಿಕಾರಿಯೊಬ್ಬರು “ಸಾಮಾನ್ಯ ಸಂದರ್ಭಗಳಲ್ಲಿ, ನಾವು ಸಾಮಾನ್ಯವಾಗಿ ಮಕ್ಕಳೊಂದಿಗೆ ಮಾಡುವಂತೆ ನಾವು ಅವನನ್ನು ಹೋಗಲು ಬಿಡುತ್ತಿದ್ದೆವು” ಎಂದು ಹೇಳಿದ್ದಾರೆ. ಆದಾಗ್ಯೂ, ಈ ಪ್ರಕರಣದಲ್ಲಿ ಈತ ಈ ಹಿಂದೆಯೇ ಗಡಿ ನಿಯಂತ್ರಣ ರೇಖೆಯನ್ನು ದಾಟಿರಬಹುದು ಎಂಬ ಕೆಲವು ಪ್ರಾಥಮಿಕ ಅನುಮಾನವಿತ್ತು, ಅದನ್ನು ಬಗೆಹರಿಸಬೇಕಿದೆ” ಎಂದು ಅವರು ಹೇಳಿದ್ದಾರೆ.
ಟ್ಯಾಟ್ರಿನೋಟ್‌ನ ಸ್ಟಾರ್ಸ್ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ ಅಸ್ಮದ್ ತನ್ನ ತಾಯಿಯ ಮರಣದ ನಂತರ ಅವನ ತಾಯಿಯ ಹೆತ್ತವರಾದ ಅಜ್ಜ ಮುಹಮ್ಮದ್ ಅಸ್ಲಾಮ್ ಮತ್ತು ಅಜ್ಜಿ ಖದೀಜಾರ ಜೊತೆ ಬೆಳೆದರು. ಅವರ ತಂದೆ, ಬನಾರಸ್ ಅಲಿ, ಲಾಹೋರ್‌ನಲ್ಲಿ ಮರು ಮದುವೆಯಾಗಿದ್ದಾರೆ. ಅಜ್ಜನ ಅನಾರೋಗ್ಯದ ಕಾರಣ ಕೆಲಸ ಮಾಡುವುದನ್ನು ನಿಲ್ಲಿಸಿದ ಬಳಿಕ ಕುಟುಂಬದ ಪರಿಸ್ಥಿತಿಗಳು ಹೆಚ್ಚು ಬಿಗಡಾಯಿಸಿದವು. ಲಾಹೋರ್‌ನಲ್ಲಿ ಬಾಡಿಗೆ ಟ್ಯಾಕ್ಸಿ ಓಡಿಸುವ ಆತನ ಚಿಕ್ಕಪ್ಪನ ಮೇಲೆ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಬಿದ್ದಿತ್ತು.
ಅದಾಗ್ಯೂ, ಭಾರತೀಯ ಸೇನೆಯು ಅಮಾಯಕ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಪ್ರಕರಣಗಳಲ್ಲಿ ವಿಶಾಲ ಹೃದಯದಿಂದ ಇತ್ಯರ್ಥಗೊಳಿಸುತ್ತದೆ ಎಂದು ಈ ಹಿಂದೆ ಭಾರತದ ಉತ್ತರ ಸೇನಾ ಕಮಾಂಡ್‌ನ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಹೇಳಿದ್ದಾರೆ.
“ಯಾವುದೇ ಭದ್ರತಾ ಪರಿಣಾಮಗಳಿಲ್ಲದ ಎಲ್ಲಾ ಸಂದರ್ಭಗಳಲ್ಲಿ ಔದಾರ್ಯವನ್ನು ತೋರಿಸುವುದು ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದ್ದಾರೆ.
ಆಕಸ್ಮಿಕವಾಗಿ ನಿಯಂತ್ರಣ ರೇಖೆಯನ್ನು ದಾಟಿದ ಮಕ್ಕಳನ್ನು ಒಳಗೊಂಡ ಪ್ರಕರಣಗಳಲ್ಲಿ ಭಾರತ ಸರ್ಕಾರವು ಆಗಾಗ್ಗೆ ಆರೋಪಗಳನ್ನು ಕೈಬಿಟ್ಟಿದೆ ಮತ್ತು ಅವರನ್ನು ಅವರ ಕುಟುಂಬಗಳಿಗೆ ಹಿಂದಿರುಗಿಸಿದೆ. ಉದಾಹರಣೆಗೆ, ಡಿಸೆಂಬರ್, 2020 ರಲ್ಲಿ, ಸರ್ಕಾರವು 17 ವರ್ಷದ ಲೈಬಾ ಜುಬೈರ್ ಮತ್ತು ಆಕೆಯ 13 ವರ್ಷದ ಸಹೋದರಿ ಸನಾ ಜುಬೈರ್ ಅವರನ್ನು ಪೂಂಚ್‌ನ ತಟ್ಟಪಾನಿ ಬಳಿಯ ರಂಗರ್ ನುಲ್ಲಾ (ಸ್ಟ್ರೀಮ್) ಉದ್ದಕ್ಕೂ ಎಲ್ಒಸಿ ದಾಟಿದಾಗ್ಯೂ ಅವರನ್ನು ಭಾರತೀಯ ಸೇನೆ ಮನೆಗೆ ಕಳುಹಿಸಿತ್ತು.
1990 ರ ದಶಕದ ಆರಂಭದಲ್ಲಿ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರಕ್ಕೆ ಪಲಾಯನ ಮಾಡಿದ ಒಂದು ಕಾಲದ ಜಿಹಾದಿಯ ಪುತ್ರಿಯರಾದ ಇಬ್ಬರು ಹುಡುಗಿಯರು ತಮ್ಮ ಪೂರ್ವಜರ ಕುಟುಂಬದೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಆಶಿಸುತ್ತಿದ್ದರು ಎಂದು ಆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಾಗ್ಯೂ, ಅವರನ್ನು ಮನ್ನಿಸಿ ಅವರ ಕುಟುಂಬಸ್ಥರಿಗೆ ಮರಳಿಸಲಾಗಿತ್ತು.












