ಬೆಂಗಳೂರು : ಬಾಂಗ್ಲಾದೇಶದ ಬಳಿಕ ಇದೀಗ ಪಾಕಿಸ್ತಾನದತ್ತ ಟಿ20 ವಿಶ್ವಕಪ್(T 20 World Cup) ಅನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದೆ. ಆದರೆ ಈ ಕುರಿತು ಅಂತಿಮ ನಿರ್ಧಾರವು ಪಾಕಿಸ್ತಾನ(Pakistan) ಸರ್ಕಾರದ ಮೇಲಿದೆ. ಐಸಿಸಿಯೊಂದಿಗಿನ ಬಾಂಗ್ಲಾದೇಶದ ಬಿಕ್ಕಟ್ಟಿನಲ್ಲಿ ಪಾಕಿಸ್ತಾನ ಬಾಂಗ್ಲಾ ಬೆಂಬಲಿಸಿತ್ತು. ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಸುರಕ್ಷತಾ ದೃಷ್ಟಿಯನ್ನು ಉಲ್ಲೇಖಿಸಿ ತಮ್ಮ ವಿಶ್ವಕಪ್ ಗುಂಪು ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂದು ಮೊಂಡುತನ ಪ್ರದರ್ಶನ ಮಾಡಿತ್ತು.

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಕೈ ಬಿಡಬೇಕೆಂದು ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸೂಚಿಸಿದ ನಂತರ ಈ ಬೆಳವಣಿಗೆಗಳು ಪ್ರಾರಂಭವಾದವು. ಐಸಿಸಿಯು, ಬಿಸಿಬಿ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತು, ಆದರೆ ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ ತರುವುದು ಒಂದು ಆಯ್ಕೆಯಲ್ಲ ಎಂದು ಸಮರ್ಥಿಸಿಕೊಂಡಿತು.

ಮುಖ್ಯವಾಗಿ ಬಿಸಿಬಿ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗೆ ಮುಂದಾಗಿಲ್ಲ, ಐಸಿಸಿಗೆ ಸ್ಕಾಟ್ಲೆಂಡ್ ತಂಡವನ್ನು ಬಾಂಗ್ಲಾದ ಬದಲಿ ತಂಡವಾಗಿ ಹೆಸರಿಸದೆ ಬೇರೆ ದಾರಿಯಿರಲಿಲ್ಲವಾಗಿದೆ, ಇದರಿಂದಾಗಿ ಬಾಂಗ್ಲಾದೇಶಕ್ಕೆ ವಿಶ್ವಕಪ್ ಬಾಗಿಲು ಮುಚ್ಚುವ ಸಾಧ್ಯತೆ ದಟ್ಟವಾಗಿದೆ. ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಲಾಹೋರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಐಸಿಸಿ ಬಾಂಗ್ಲಾದೇಶದ ವಿರುದ್ಧ “ಅನ್ಯಾಯ”ವೆಸಗಿದೆ ಎಂದು ಟೀಕಿಸಿದ್ದರು. ಅಲ್ಲದೆ ಪಾಕಿಸ್ತಾನ ತಂಡ ಕೂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ಯೋಚಿಸಲಿದೆ ಎಂದು ಹೇಳುವ ಮೂಲಕ ಐಸಿಸಿಯನ್ನು ಕೆಣಕಿದ್ದಾರೆ.







