ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ಮತ್ತು 3ರಂದು ಮೃತಪಟ್ಟಿರುವ 24 ಮಂದಿಯ ಕುಟುಂಬಗಳಿಗೆ ತಲಾ 2 ಲಕ್ಷ ರೂ ನಂತೆ ಒಟ್ಟು 48 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಶುಕ್ರವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಹಿಂದೆ ಸರ್ಕಾರ ಹೈಕೋರ್ಟ್ಗೆ ನೀಡಿದ್ದ ಭರವಸೆಯಂತೆ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆಯು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. 24 ಮಂದಿ ಮೃತರ ಸಂಪೂರ್ಣ ವಿವರಗಳನ್ನು ಚಾಮರಾಜನಗರ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದು, ಕಾನೂನುಬದ್ಧ ವಾರಸುದಾರರನ್ನು ಖಚಿತಪಡಿಸಿಕೊಂಡು ಪರಿಹಾರ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೃತಪಟ್ಟ ಎಲ್ಲಾ ವ್ಯಕ್ತಿಗಳ ಅಧಿಕೃತ ವಾರಸುದಾರರಿಗೆ ಪರಿಹಾರ ಪಾವತಿಸಿರುವ ಕುರಿತು ಹೈಕೋರ್ಟ್ಗೆ ಅನುಸರಣಾ ವರದಿ ಸಲ್ಲಿಸಲು ಪೂರಕವಾಗಿ ವಿವರವಾದ ಮಾಹಿತಿಯುಳ್ಳ ವರದಿಯನ್ನು ಅಡ್ವೊಕೇಟ್ ಜನರಲ್ ಕಚೇರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ಮೇ 2 ಮತ್ತು 3ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದರು. ಆಮ್ಲಜನಕದ ಕೊರತೆ ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೇ ಖಚಿತವಾಗಿತ್ತು. ಆದರೆ ಈ ಆರೋಪವನ್ನು ಅಲ್ಲಗೆಳೆದಿದ್ದ ರಾಜ್ಯ ಆರೋಗ್ಯ ಸಚಿವ ಡಾ ಸುಧಾಕರ್ ಅವರು ಅಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ಹೈ ಕೋರ್ಟ್ ನೇಮಿಸಿದ್ದ ಮೂವರ ಸದಸ್ಯರ ಸಮಿತಿಯು ಆಕ್ಸಿಜನ್ ದುರಂತದಲ್ಲಿ 24 ರೋಗಿಗಳು ಮೃತಪಟ್ಟಿರುವುದನ್ನು ಧೃಢಿಕರಿಸಿತ್ತಲ್ಲದೆ ದಾಖಲಾತಿ ತಿದ್ದಿರುವ ಸಂಶಯವನ್ನೂ ವ್ಯಕ್ತಪಡಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇರೆಗೆ ಈ ಕುರಿತು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ತುರ್ತು ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಮೇ 20ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿದ ಮೇರೆಗೆ ಹಣ ಬಿಡುಗಡೆ ಮಾಡಿದೆ. .
ಆದರೆ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಮುಗಿದು ರೋಗಿಗಳು ಮೃತಪಟ್ಟ ದುರಂತ ಸಂಭವಿಸಿ 20 ದಿನಗಳು ಕಳೆದರೂ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ವರದಿ ನೀಡಿ ತಪ್ಪಿತಸ್ಥರ ವಿವರ ನೀಡಿದ್ದರೂ, ರಾಜ್ಯ ಸರ್ಕಾರ ಯಾರ ವಿರುದ್ಧವೂ ಕ್ರಮ ಕೈಗೊಳ್ಳದೇ ಮೌನ ತಾಳಿರುವುದಕ್ಕೆ ಜಿಲ್ಲಾದ್ಯಂತ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.ಮೇ 2ರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತದ ತಕ್ಷಣದ ಪರಿಣಾಮ ಮತ್ತು ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಪೂರೈಕೆಯೇ ಸ್ಥಗಿತವಾದ ಸಂದರ್ಭದಲ್ಲಿ ಉಂಟಾದ ದುಷ್ಪರಿಣಾಮದಿಂದ ಮಾರನೆಯ ದಿನವೂ ರೋಗಿಗಳು ಸತ್ತಿದ್ದಾರೆಂದು ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೈಕೋರ್ಟ್ಗೆ ಮೇ 13ರಂದೇ ವರದಿ ಸಲ್ಲಿಸಿತ್ತು. ಒಟ್ಟಾರೆ ಇದರಿಂದ 36 ಮಂದಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿತ್ತು. ಅಲ್ಲದೇ ಆಮ್ಲಜನಕ ಕೊರತೆಯಂತಹ ದೊಡ್ಡ ಪ್ರಮಾದ ನಡೆಯುವ ಮೊದಲೇ ಈ ಬಗ್ಗೆ ಮುಂಜಾಗ್ರತೆ ವಹಿಸದೇ ಜಿಲ್ಲಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗೂ ಸಿಮ್ಸ್ ಡೀನ್, ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್ ಅವರ ಕರ್ತವ್ಯ ಲೋಪವೂ ಇದೆಯೆಂದು ವರದಿಯಲ್ಲಿ ಬೊಟ್ಟು ಮಾಡಲಾಗಿತ್ತು. ಈ ವರದಿಯನ್ನಾಧರಿಸಿ ರಾಜ್ಯ ಸರ್ಕಾರ ತಪ್ಪಿತಸ್ಥರ ಕ್ರಮ ಕೈಗೊಳ್ಳುತ್ತದೆಂದೇ ಜಿಲ್ಲೆಯ ಜನರು ಭಾವಿಸಿದ್ದರು.ಆದರೆ,ಘಟನೆ ನಡೆದು ದಿನಗಳಾದರೂ, ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ರಾಜ್ಯ ಸರ್ಕಾರದ ಈ ನಡೆಗೆ ಜಿಲ್ಲಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಳ ಹಂತದ ನೌಕರ ಸಣ್ಣ ಕರ್ತವ್ಯ ಲೋಪ ಎಸಗಿದರೂ ಸಸ್ಪೆಂಡ್ ಮಾಡುವ ಸರ್ಕಾರ, ಇಂಥ ದೊಡ್ಡದೊಂದು ದುರಂತ ನಡೆದರೂ, ಇದಕ್ಕೆ ಯಾರನ್ನೂ ಹೊಣೆ ಮಾಡದೇ, ಶಿಸ್ತು ಕ್ರಮ ಜರುಗಿಸದೇ ಮೌನವಾಗಿರುವುದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆಮ್ಲಜನಕ ಕೊರತೆಯಂಥ ಗಂಭೀರ ಪರಿಸ್ಥಿತಿಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ತನ್ನ ಕ್ರಿಯಾಶೀಲತೆ ಮತ್ತು ನಾಯಕತ್ವ ಗುಣವನ್ನು ತೋರಿಲ್ಲ. ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು, ಆಮ್ಲಜನಕ ಸರಬರಾಜು ಕೊರತೆಯಂಥ ಗಂಭೀರ ಸನ್ನಿವೇಶವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾನೂನು ಪ್ರಾಧಿಕಾರಗಳ ಸಮಿತಿ ತಿಳಿಸಿದೆ. ಸಿಮ್ಸ್ ಡೀನ್ ಮತ್ತು ಪ್ರಭಾರ ಜಿಲ್ಲಾ ಸರ್ಜನ್ ಅವರು ತಮ್ಮ ಸಾಮರ್ಥ್ಯ ತೋರಿಲ್ಲ. ರೋಗಿಗಳ ಜೀವ ಕಾಪಾಡಲು ವಿಫಲರಾಗಿದ್ದಾರೆ ಎಂದು ಸಮಿತಿ ವರದಿ ನೀಡಿತ್ತು.

ಇದೆಲ್ಲದರ ನಡುವೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ವರ್ಗಾವಣೆಯಾಗಿ ಆ ಜಾಗಕ್ಕೆ ಡಾ. ಸತೀಶ್ ಬರುತ್ತಿದ್ದಾರೆ ಎಂದು ಹೇಳಲಾಗಿತ್ತು. ಗುರುವಾರ ತಾವು ಚಾ.ನಗರಕ್ಕೆ ವರದಿ ಮಾಡಿಕೊಳ್ಳಲು ತೆರಳುತ್ತಿದ್ದೆ. ಆದರೆ ವರ್ಗಾವಣೆ ರದ್ದಾಗಿದೆ ಎಂದು ಆದೇಶ ಬಂತು ಎಂದು ಡಾ. ಸತೀಶ್ ಮಾಧ್ಯಮಗಳಿಗೆ ತಿಳಿಸಿದ್ದರು.ಕೆಲ ತಿಂಗಳ ಹಿಂದೆಯೂ ಸತೀಶ್ ಅವರನ್ನು ಚಾ.ನಗರಕ್ಕೆ ವರ್ಗಾವಣೆ ಮಾಡಿ ತಕ್ಷಣ ರದ್ದು ಮಾಡಲಾಗಿತ್ತು. ಈಗ ಎರಡನೇ ಬಾರಿಯೂ ಅವರ ವರ್ಗಾವಣೆ ರದ್ದಾಗಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಹಾಗೂ ಪ್ರಭಾವಿ ರಾಜಕೀಯ ವ್ಯಕ್ತಿ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಏ ಎಂ ಮಹೇಶ್ ಪ್ರಭು ಅವರು ಈ ಘಟನೆಯ ಬಗ್ಗೆ ಇನ್ನೂ ಸಮಗ್ರ ತನಿಖೆ ನಡೆಯಬೇಕು. ಸರ್ಕಾರವೇ ಈ ಘಟನೆಯನ್ನು ಮುಚ್ಚಿ ಹಾಕುತ್ತಿದೆ. . ಮುಖ್ಯಮಂತ್ರಿಯವರು ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಜಿಲ್ಲಾಧಿಕಾರಿ, ಸಿಮ್ಸ್ ಡೀನ್, ಜಿಲ್ಲಾ ಸರ್ಜನ್ರ ವೈಫಲ್ಯವನ್ನು ವರದಿ ತಿಳಿಸಿದೆ. ಈ ಘಟನೆಗೆ ಯಾರೇ ಕಾರಣರಾಗಲಿ, ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಿದರು.
ಅನೇಕ ಪ್ರಗತಿಪರ ಸಂಘಟನೆಗಳೂ ಸೂಕ್ತ ಶಿಸ್ತು ಕ್ರಮಕ್ಕೆ ಒತ್ತಾಯಿಸುತ್ತಿವೆ. ಆದರೆ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿ ಪ್ರಕರಣವನ್ನು ಮುಗಿಸಲು ನೋಡುತ್ತಿದೆ ಎಂದು ಕಂಡು ಬರುತ್ತಿದೆ. ಏಕೆಂದರೆ ಜಿಲ್ಲಾಧಿಕಾರಿಗಳೇ ತಪ್ಪಿತಸ್ಥರು ಎಂದು ಸಮಿತು ಬೊಟ್ಟು ಮಾಡಿ ತೋರಿಸಿದ್ದರೂ ಕ್ರಮ ಕೈಗೊಳ್ಳುವುದು ಹೋಗಿ ಕನಿಷ್ಟ ಪಕ್ಷ ವರ್ಗಾವಣೆ ಮಾಡಲೂ ಸರ್ಕಾರ ಹಿಂಜರಿಯುತ್ತಿದೆ ಎಂದರೆ ಈ ಸರ್ಕಾರದಿಂದ ಯಾವ ರೀತಿಯ ಆಡಳಿತವನ್ನು ನಿರೀಕ್ಷಿಸಬಹುದು ಎಂಬುದು ಜನರ ಪ್ರಶ್ನೆ.