ಗುಡ್ಡಗಾಡು ಜಿಲ್ಲೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯ ಸ್ಥಾಪನೆಗಾಗಿ ಹಲವು ವರ್ಷಗಳಿಂದಲೇ ಒತ್ತಾಯ ಇದೆಯಾದರೂ ರಾಜ್ಯ ಸರ್ಕಾರ ಮಾತ್ರ ಇತ್ತ ಗಮನ ಹರಿಸಿಲ್ಲ. ಈ ಜಿಲ್ಲೆಯಲ್ಲಿ ಏನಾದರೂ ತುರ್ತು ವೈದ್ಯಕೀಯ ಅವಶ್ಯಕತೆಗೆ ಮೈಸೂರು ಅಥವಾ ಮಂಗಳೂರಿಗೇ ತೆರಳಬೇಕಿದೆ. ಕಳೆದ 5 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಮಡಿಕೇರಿಗೆ ವೈದ್ಯಕೀಯ ಕಾಲೇಜನ್ನೂ ಮಂಜೂರು ಮಾಡಿದ್ದು ಅದು ಸಿಬ್ಬಂದಿಗಳ ಕೊರತೆಯಿಂದಲೇ ಈಗಲೂ ನಡೆಯುತ್ತಿದೆ. ಇಡೀ ಕೊಡಗು ಜಿಲ್ಲೆಗೆ ಇರುವ ಏಕೈಕ ಉನ್ನತ ಆಸ್ಪತ್ರೆ ಎಂದರೆ ಮಡಿಕೇರಿಯ ಜಿಲ್ಲಾಸ್ಪತ್ರೆ ಮಾತ್ರ. ಇದೀಗ ಮಹಾಮಾರಿ ಕೋವಿಡ್ ನಿಂದ ಜನರು ರಕ್ಷಿಸಿಕೊಳ್ಳಲೂ ಇದೇ ಆಸ್ಪತ್ರೆಗೆ ತೆರಳಬೇಕಾಗಿದೆ. ಸರ್ಕಾರ ಈ ಆಸ್ಪತ್ರೆಗೆ ಅನೇಕ ಸೌಲಭ್ಯಗಳನ್ನೂ ಕಲ್ಪಿಸಿಕೊಟ್ಟಿದೆ. ಆದರೆ ಸಿಬ್ಬಂದಿಗಳೇ ಭ್ರಷ್ಟರಾಗಿದ್ದರೆ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ.
ಕಳೆದ ವಾರ ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯ ಡಾ ಏ ಸಿ ಶಿವಕುಮಾರ್ ರೋಗಿಗಳ ಸಂಬಂಧಿಕರಿಂದ ಒತ್ತಾಯ ಹಾಕಿಯೇ ಲಂಚ ಪಡೆಯುತಿದ್ದ ವಿಷಯ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಕೂಡಲೇ ಆತನ್ನು ಅಮಾನತು ಪಡಿಸಿದೆ. ಆದರೆ ಇಲ್ಲಿ ಮೊದಲಿನಿಂದಲೂ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಅವರ ಮೊಬೈಲ್ ಮತ್ತಿತರ ವಸ್ತುಗಳು ಕಳುವಾಗುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಅದರೆ ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ರೋಗಿಗಳ ಸಾವು ಪ್ರಕರಣವು ಹೆಚ್ಚಾಗಿತ್ತು 10 ದಿನಗಳ ಹಿಂದೆ ಈ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಹೆಚ್ಚಿನ ರೋಗಿಗಳ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು. ಇದಾದ ಬಳಿಕವೇ ಭ್ರಷ್ಟ ವೈದ್ಯ ಡಾ ಶಿವಕುಮಾರ್ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕು ಬಿದ್ದಿದ್ದು ಎಂದರೆ ಇವರು ಎಷ್ಟರ ಮಟ್ಟಿಗೆ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಾರೆ ಎಂಬುದು ಅರಿವಾಗುತ್ತದೆ.
ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಮೊಬೈಲ್ ಕಳವು ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಇದೀಗ ಕರೋನಾ ಸೋಂಕಿಗೆ ಬಲಿಯಾದ ಮಾತೆಯೊಬ್ಬರ ಮೊಬೈಲನ್ನು ಮರಳಿಸುವಂತೆ ಭಾನುವಾರ ಆಕೆಯ ಪುತ್ರಿ ಮನವಿ ಮಾಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಶಾಲನಗರದ ಹಾರಂಗಿ ರಸ್ತೆಯ ಕುಟುಂಬವೊಂದರ ಮೂರು ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ತಾಯಿ 15 ದಿನಗಳ ಹಿಂದೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರೆ, ತಂದೆ ಮತ್ತು ಮಗಳು ಹೋಂ ಕ್ವಾರಂಟೈನ್ ನಲ್ಲಿದ್ದರು. ದುರಾದೃಷ್ಟವಶಾತ್ ಮೇ 16ರಂದು ತಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಂದೆ ಮತ್ತು ಮಗಳು ಮನೆಯಿಂದ ಹೊರಬರಲಾಗದೆ ನೆರೆಹೊರೆಯವರ ಸಹಾಯದಿಂದ ದಿನ ಕಳೆದಿದ್ದಾರೆ.
ಆದರೆ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಾಯಿಯ ಮೊಬೈಲ್ ಕಾಣೆಯಾಗಿದ್ದು,ಇದುವರೆಗೂ ಅದು ಪತ್ತೆಯಾಗಿಲ್ಲ. ತಾಯಿಯನ್ನು ಕಳೆದುಕೊಂಡಿರುವ ಮಗಳಿಗೆ ಅಮ್ಮನ ನೆನಪುಗಳಿಗೆ ಇದ್ದ ಆಸ್ತಿಯೆಂದರೆ ಆ ಮೊಬೈಲ್ ಮಾತ್ರವಾಗಿದ್ದು, ಇದೀಗ ತಾಯಿಯನ್ನು ಕಳೆದುಕೊಂಡಿರುವ ಆ ಕಂದಮ್ಮ ಅಮ್ಮನ ಮೊಬೈಲ್ ನ್ನು ಯಾರಾದರೂ ತೆಗೆದುಕೊಂಡಿದ್ದರೆ ಅದನ್ನು ಮರಳಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಗಳು, ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳಲ್ಲೂ ಮನವಿ ಮಾಡಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾದವರ ಮೊಬೈಲ್ ಕಳವಾಗಿರುವ ಹಲವು ಪ್ರಕರಣಗಳು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿದ್ದು, ಆದರೆ ಯಾರೊಬ್ಬರೂ ದೂರು ನೀಡಿಲ್ಲ ಎಂದು ಮಡಿಕೇರಿ ನಗರ ವೃತ್ತದ ಪೊಲೀಸ್ ನಿರೀಕ್ಷಕ ಅನೂಪ್ ಮಾದಪ್ಪ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕರೋನಾ ಮಹಾಮಾರಿಗೆ ಇಡೀ ವಿಶ್ವವೇ ತಲ್ಲಣಗೊಂಡಿರುವ ಈ ಸಂದರ್ಭದಲ್ಲಿ, ಸೋಂಕಿತರ ಸಾವಿನಲ್ಲೂ ಹಣವನ್ನೇ ಎದುರು ನೋಡುತ್ತಿರುವ ಮೊಬೈಲ್ ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗುವುದರೊಂದಿಗೆ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಾಗಿದೆ.

ಇಂದು ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಅವರ ತಾಯಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಕಳೆದಿರುವ ಮೊಬೈಲ್ ನಲ್ಲಿ ತನ್ನ ತಾಯಿಯ ನೆನಪು ಇದ್ದು, ಅದನ್ನು ಹುಡುಕಿಕೊಡುವಂತೆ ಮಾಡಿರುವ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದೆ. ಇದೀಗ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮೊಬೈಲ್ ಹುಡುಕಲು ಪ್ರಯತ್ನಿಸುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಸ್ಪತ್ರೆಯ ವೈದ್ಯ ಡಾ ಕುಶ್ವಂತ್ ಕೋಳಿ ಬೈಲು ಅವರು ಆಸ್ಪತ್ರೆಯಲ್ಲಿ ಮೃತರಾಗುವವರ ವಸ್ತುಗಳನ್ನುಪ್ಯಾಕ್ ಮಾಡಿ ಸಂಬಂಧಿಕರಿಗೆ ನೀಡಲಾಗುತ್ತದೆ. ಬಹಳಷ್ಟು ಮಂದಿ ಇನ್ನು ತಮ್ಮ ಸಂಬಂಧಿಕರ ಮೊಬೈಲ್ ಪಡೆದುಕೊಂಡಿಲ್ಲ. ಆಸ್ಪತ್ರೆಯಲ್ಲಿ ಇನ್ನೂ ಸುಮಾರು 10 ಮೊಬೈಲ್ ಗಳಿವೆ.ಈ ಮೊಬೈಲ್ ಗಳಲ್ಲಿ ಬಾಲಕಿಯ ತಾಯಿಯ ಮೊಬೈಲ್ ಇರಬಹುದು. ಒಂದು ವೇಳೆ ಅವರ ಮೊಬೈಲ್ ಇದ್ದರೆ ಅದನ್ನ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಾಮಾಜಿಕ ತಾಣದಲ್ಲಿ ಬಾಲಕಿಯ ವಿಡಿಯೋವನ್ನು ಗಮನಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮೂಲಕ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಹನೀಫ್ ಎಸ್ ಪಿ ಸಂಪರ್ಕದಿಂದ ಹೃತಿಕ್ಷ ಗೆ ನೂತನ ಮೊಬೈಲ್ ನೀಡಿದ್ದಾರೆ. ಆದರೆ ಬಾಲಕಿಯ ತಾಯಿಯ ಮೊಬೈಲ್ ಬೆಲೆ ಕಟ್ಟಲು ಸಾಧ್ಯವಿಲ್ಲ ಏಕೆಂದರೆ ಬಾಲಕಿಯು ಆ ಮೊಬೈಲ್ ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ಅಮೂಲ್ಯ ಫೋಟೋಗಳಿವೆ. ಜಿಲ್ಲಾಡಳಿತ ಬಾಲಕಿಯ ಮೊಬೈಲ್ ಹುಡುಕಿಸಿ ಕೊಡಲಿ ಇನ್ನು ಮುಂದಾದರೂ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಿ ಎಂಬುದೇ ಜನರ ಒತ್ತಾಯ.