ಚಿಕ್ಕಮಗಳೂರು : ಸಂತಾನ ಶಕ್ತಿ ಹರಣ ಕ್ಯಾಂಪ್ಗೆ ನಿಯೋಜನೆಗೊಂಡಿದ್ದ ಕರ್ತವ್ಯ ನಿರತ ವೈದ್ಯ ಆಪರೇಷನ್ ಥಿಯೇಟರ್ನಲ್ಲಿ ಪಾನಮತ್ತನಾಗಿ ಕುಸಿದು ಬಿದ್ದ ಪ್ರಕರಣದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ವೈದ್ಯ ಬಾಲಕೃಷ್ಣನನ್ನು ಅಮಾನತುಗೊಳಿಸುವಂತೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿತ್ತು. 9 ಮಂದಿ ಮಹಿಳೆಯರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಆಗಮಿಸಿದ್ದರು. ಮಹಿಳೆಯರಿಗೆ ಅನಸ್ತೇಷಿಯಾ ನೀಡಿ ಬಹಳ ಹೊತ್ತಾದರೂ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯ ಆಗಮಿಸಿರಲಿಲ್ಲ. ಬಹಳ ಹೊತ್ತಿನ ಬಳಿಕ ಬಂದ ವೈದ್ಯ ಪಾನಮತ್ತನಾಗಿ ಆಪರೇಷನ್ ಥಿಯೇಟರ್ನಲ್ಲಿಯೇ ಕುಸಿದು ಬಿದ್ದಿದ್ದರು ಎನ್ನಲಾಗಿದೆ.
ಬಳಿಕ ಆಸ್ಪತ್ರೆ ಸಿಬ್ಬಂದಿಯೇ ವೈದ್ಯ ಬಾಲಕೃಷ್ಣನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಸಂಬಂಧ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತ ಆರೋಗ್ಯ ಇಲಾಖೆ ಪಾನಮತ್ತ ವೈದ್ಯನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸುವಂತೆ ಚಿಕ್ಕಮಗಳೂರು ಡಿಹೆಚ್ಓಗೆ ಸೂಚನೆ ನೀಡಿದೆ.