ಬೆಂಗಳೂರು: ಜೂ.1: ಮೇಕೆದಾಟು ಯೋಜನೆ ವಿಚಾರದಲ್ಲಿ ನೂತನ ಕರ್ನಾಟಕ ಸರ್ಕಾರ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ತಮಿಳುನಾಡು ಸಚಿವ ಹೇಳಿದ್ದಾರೆ. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಆಕ್ರಮಣಕಾರಿಯಾಗಿ ವರ್ತಿಸಬೇಡಿ ಎಂದು ತಮಿಳುನಾಡು ಸರ್ಕಾರದ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಸೂಚಿಸಿದ್ದಾರೆ.


ಪ್ರತಿಕ್ರಿಯಿಸಿರುವ ಸಚಿವ ದೊರೈ ಮುರುಗನ್, ಮೇಕೆದಾಟು ಯೋಜನೆಯನ್ನು ತಮಿಳುನಾಡು ಜನತೆ ಹಾಗೂ ಸರ್ಕಾರ ವಿರೋಧಿಸುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧೀಕಾರಕ್ಕೆ ಬಂದು ಕೆಲವೇ ದಿನಗಳು ಕಳೆದಿವೆ. ಅಷ್ಟರಲ್ಲೇ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ. ಮೇಕೆದಾಟು ಯೋಜನೆ ಕುರಿತು ಅಧಿಕಾರಿಗಳು ಅವರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಕಾಣುತ್ತದೆ ಎಂದು ಹೇಳಿದ್ದಾರೆ. ನಾನು ಈ ವಿಚಾರದ ಕುರಿತು ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿವರಿಸುತ್ತೇನೆ ಅಲ್ಲಿಯವರೆಗೂ ಅವರು ತಾಳ್ಮೆಯಿಂದ ಇರುತ್ತಾರೆ ಎಂದು ಭಾವಿಸುತ್ತೇನೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಏರಿದ ವಿಚಾರವಾಗಿ ಡಿಕೆಶಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಯೋಜಿಸಿದ್ದೆ. ಆದ್ರೆ ಅವರ ಆಕ್ರಮಣಕಾರಿ ನಡವಳಿಕೆಯಿಂದ ಪ್ರಕಟಣೆ ಮೂಲಕ ಶುಭಾಶಯವನ್ನು ಕೋರುತ್ತಿದ್ದೇನೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಉದ್ದಟತನದ ಹೇಳಿಕೆ ನೀಡಿದ್ದಾರೆ.