ವರ್ಷಗಳ ಬಳಿಕ ಇತ್ತೀಚೆಗೆ ದಾವಣಗೆರೆಯಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಬಾರಿ ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಯದ್ದೇ ಸದ್ದು. ಈ ಸಭೆಯಲ್ಲಿ ಇತ್ತೀಚೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ನೀಡಿದ ಒಂದು ಹೇಳಿಕೆ ಮಾತ್ರ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಪತಾಕೆ ಹಾರಿಸಲೇಬೇಕೆಂಬ ಪಣ ತೊಟ್ಟಿರುವ ಕಮಲ ಕಲಿಗಳು ಭಾರೀ ಕಸರತ್ತು ನಡೆಸಿದ್ದಾರೆ. ಇದರ ಭಾಗವಾಗಿಯೇ ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿಯ ಎಲ್ಲಾ ನಾಯಕರು ಭಾಗಿಯಾಗಿದ್ದು, ದೇಗುಲ ದಂಗಲ್ನಿಂದ ಹಿಡಿದು ಮುಂದಿನ ವಿಧಾನಸಭಾ ಚುನಾವಣೆ ವಿಚಾರವೂ ಚರ್ಚೆ ನಡೆಸಿದರು. ಆದರೆ, ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಿಡಿಸಿದ ಬಾಂಬ್ವೊಂದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ಬಿಎಸ್ವೈ ಈ ಒಂದು ಮಾತು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ವಿರೋಧ ಪಕ್ಷವನ್ನ ಹಗುವಾರವಾಗಿ ತೆಗೆದುಕೊಳ್ಳಬೇಡಿ. ಈಗಾಗಲೇ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರನ್ನ ಸಂಪರ್ಕಿಸುತ್ತಿದ್ದಾರೆ. ಆದರೆ ಯಾರೂ ಬಿಜೆಪಿ ತೊರೆಯಲ್ಲ. ಬದಲಾಗಿ ಅನೇಕ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ. ಈ ಬಾರಿ ಬಿಜೆಪಿ 140 ಸೀಟುಗಳನ್ನು ಗೆಲ್ಲಲೇಬೇಕು ಅಂತ ಸಂಕಲ್ಪ ಮಾಡಿದರು.
ಇದೇ ವೇಳೆ ದೇಗುಲ ದಂಗಲ್ ಬಗ್ಗೆ ಮಾತನಾಡಿದ ಬಿಎಸ್ವೈ, ರಾಜ್ಯದಲ್ಲಿ ದೇಗುಲ ತೆರವು ಮಾಡದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ರೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ. ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ದೇವಸ್ಥಾನ ತೆರವಿನಿಂದ ಹಲವರ ಭಾವನೆಗೆ ಧಕ್ಕೆ ಆಗಿದೆ. ಮುಂದೆ ಇಂತ ಘಟನೆಗಳಾಗದಂತೆ ಗಮನಹರಿಸಬೇಕಿದೆ ಅಂತ ಖಾರವಾಗಿ ಹೇಳಿದ್ದಾರೆ.
ಇನ್ನು ಕಾರ್ಯಕಾರಣಿ ಸಭೆ ಮಹತ್ವದ ಪ್ರಸಂಗಕ್ಕೆ ಸಾಕ್ಷಿಯಾಯ್ತು. ಬೊಮ್ಮಾಯಿ ಸಿಎಂ ಗದ್ದುಗೆ ಹಿಡಿದ ನಂತರ ಮುನಿಸಿಕೊಂಡಿದ್ದ ಮಾಜಿ ಸಚಿವ ಜಗದೀಶ್ ಶೆಟ್ಟರ್ ಸಿಎಂ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮಾಡಬೇಕಾದ ಕಾರ್ಯತಂತ್ರಗಳು ಹಾಗೂ ಬೂತ್ ಮಟ್ಟದಲ್ಲಿ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಜತೆಗೆ ಮೂರನೇ ಅಲೆಯ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಆರೋಗ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಬೇಕು ಎಂಬ ಕುರಿತಾಗಿಯೂ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಮುಂದಿನ ವರ್ಷ ಆರಂಭಕ್ಕೆ ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮೊದಲು ನಾಲ್ಕು ತಂಡಗಳಾಗಿ ರಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು. ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ವಿಶೇಷ ಒತ್ತು ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್..ಸಂತೋಷ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ಅರುಣ್ ಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಪಕ್ಷದ ಎಲ್ಲ ಘಟಕದ ಪದಾಧಿಕಾರಿಗಳು, ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರು ಮತ್ತು ಶಾಸಕರು ಸೇರಿ ಒಟ್ಟು 574 ಮಂದಿ ಭಾಗವಹಿಸಿದ್ದರು.
ಒಟ್ಟಿನಲ್ಲಿ ವರ್ಷಗಳ ಬಳಿಕ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ, ದೇಗುಲ ದಂಗಲ್ ಚರ್ಚೆಗಳು ನಡೆದವು. ಆದ್ರೆ ಎಲ್ಲದಕ್ಕಿಂತ ಬಿಎಸ್ವೈ ಸಿಡಿಸಿದ ಕಾಂಗ್ರೆಸ್ನ ರೀವರ್ಸ್ ಆಪರೇಷನ್ ಸದ್ಯ ಭಾರೀ ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಹೇಗೆ ಪ್ರತಿಕ್ರಿಯಿಸ್ತಾರೋ ಕಾದು ನೋಡ್ಬೇಕು.




