
ಚಿಕ್ಕಮಗಳೂರು : ರಾಜ್ಯ ಸರ್ಕಾರದ ಆಡಳಿತ ಹೇಗಿದೆ ಎಂದು ರಾಜ್ಯದ ರಸ್ತೆಗಳಲ್ಲಿನ ಗುಂಡಿಗಳೇ ಮಾತನಾಡುತ್ತಿವೆ. ಸಿಎಂ ಸಿದ್ದರಾಮಯ್ಯನವರಿಗೆ ಜನಗಳ ಮೇಲೆ ಕಾಳಜಿ ಇದ್ದರೆ ರಾಜ್ಯದ ಗುಂಡಿ ಮುಚ್ಚಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಗಮ ಮಂಡಳಿಯಷ್ಟೆ ಅಲ್ಲ, ಗ್ಯಾರಂಟಿಗೆ ಸಂಬಳ ಕೊಟ್ಟು ಸಮಿತಿ ಮಾಡಿಕೊಂಡಿದ್ದಾರೆ, ಹಾಗಿದ್ದರೆ ಸರ್ಕಾರ ಏಕಿರಬೇಕು.? ರಾಜ್ಯದ ಜನ ಈ ದರಿದ್ರ ಸರ್ಕಾರ ತೊಲಗಲಿ ಎಂದು ಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬಂದ ಮೇಲೆ ಎರಡೂವರೆ ವರ್ಷದಲ್ಲಿ ಹೊಸ ತೆರಿಗೆಯಲ್ಲಿ ಲಕ್ಷ ಕೋಟಿ ಸಂಗ್ರಹಿಸಿದ್ದಾರೆ. 1 ಲಕ್ಷದ 5 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಆದರೂ ನಿರ್ವಹಣೆ ಮಾಡಲಾಗುತ್ತಿಲ್ಲ. ಎರಡೂವರೆ ವರ್ಷದಲ್ಲಿ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಹೊಸ ರಸ್ತೆ ದೂರದ ಮಾತು, ಹಳೇ ಗುಂಡಿ ಮುಚ್ಚಲು ಆಗುತ್ತಿಲ್ಲ. ಸಿದ್ದರಾಮಯ್ಯ ಭಂಡತನದಿಂದ ಈ ಸರ್ಕಾರ ನಡೆಸುತ್ತಿದ್ದಾರೆ. ಸುಳ್ಳಿನ ಆಧಾರದ ಮೇಲೆ ಬಹಳ ದಿನ ಸರ್ಕಾರ ನಡೆಸಲು ಆಗಲ್ಲ. ಸರ್ಕಾರ ಹೇಗಿದೆ ಅನ್ನೋದರ ಪ್ರತಿಬಿಂಬವೇ ಗುಂಡಿಗಳು, ಆ ಗುಂಡಿಗಳೇ ಮಾತನಾಡುತ್ತಿವೆ ಎಂದರು.







