ಇತ್ತೀಚೆಗಷ್ಟೇ ಪಠ್ಯ ಪುಸ್ತಕಗಳಲ್ಲಿ ನಾರಾಯಣ ಗುರು, ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರನ್ನು ಅನಗತ್ಯವಾಗಿ ಹೀಗೆಳೆಯಲಾಗಿದೆ ಎಂದು ಕರ್ನಾಟಕದಾದ್ಯಂತ ವಿವಾದ ಭುಗಿಲೆದ್ದಿತ್ತು. ಕರ್ನಾಟಕದ ಹಲವು ಕಡೆಗಳಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು. ಕೊನೆಗೆ ಸರ್ಕಾರವೇ ಪಠ್ಯಪುಸ್ತಕ ರಚನಾ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿತ್ತು. ಇದೀಗ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ವಿವಾದ ಭುಗಿಲೆದ್ದಿದ್ದು ಪೈಥಾಗರಸ್ ಪ್ರಮೇಯ, ನ್ಯೂಟನ್ ನಿಯಮಗಳು ಎಲ್ಲಾ ಸುಳ್ಳು ಎಂದು ಪೊಸಿಸನ್ ಪೇಪರ್ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಯಾವುದಾದರೂ ಒಂದು ವಿಷಯವನ್ನು ಯಾವ ಆಧಾರದ ಮೇಲೆ ಬೋಧಿಸಬೇಕಾಗುತ್ತದೆ ಎಂದು ತಿಳಿಸುವ ಲೇಖನವೇ ಪೊಸಿಷನ್ ಪೇಪರ್. ಆದರೆ ಈ ವಿವಾದವನ್ನು ಸಂಪೂರ್ಣವಾಗಿ ಅಲ್ಲಗೆಳೆದಿರುವ ಕರ್ನಾಟಕದ ಶಾಲೆಗಳಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಲು ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿರುವ ಮಾಜಿ ಐಎಎಸ್ ಅಧಿಕಾರಿ ಮದನ್ ಗೋಪಾಲ್, ರಾಷ್ಟ್ರೀಯ ಪಠ್ಯಕ್ರಮವನ್ನು ತಯಾರಿಸಲು ಎನ್‌ಸಿಇಆರ್‌ಟಿಗೆ 26 ಪೊಸಿಸನ್ ಪೇಪರ್‌ಗಳನ್ನು ಸಲ್ಲಿಸಲಾಗಿದ್ದು “ಯಾರೋ ಅಸ್ತಿತ್ವದಲ್ಲಿಲ್ಲದ ವಿವಾದವನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಈ ಪತ್ರಿಕೆಗಳು ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕ ವಲಯದಲ್ಲಿವೆ, ಈಗ ಏಕೆ ಈ ವಿವಾದ ಎದ್ದಿದೆ?” ಎಂದು ಪ್ರಶ್ನಿಸುತ್ತಾರೆ.
ಆದರೆ, ಬೆಂಗಳೂರಿನ ಖಗೋಳ ಭೌತಶಾಸ್ತ್ರಜ್ಞೆ ಮತ್ತು ಬರಗೂರು ರಾಮಚಂದ್ರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಸದಸ್ಯರಾಗಿರುವ ಪ್ರಜ್ವಲಾ ಶಾಸ್ತ್ರಿ ” ಭಾರತದ ಸಿಲಿಕಾನ್ ಸಿಟಿಯೆಂದು ಕರೆಸಿಕೊಳ್ಳುವ ಬೆಂಗಳೂರಿನ ವಿದ್ಯಾವಂತರು ಖಗೋಳ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದ್ದರೂ ಸಹ ಗ್ರಹಣಗಳ ಸಮಯದಲ್ಲಿ ಏಕೆ ಮನೆಯೊಳಗೆ ಅಡಗಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಪೊಸಿಸನ್ ಪೇಪರ್ ಕೇಳ್ಬೇಕಿತ್ತು” ಎನ್ನುತ್ತಾರೆ. ಪುರಾಣವನ್ನು ಇತಿಹಾಸದೊಂದಿಗೆ ಸಂಬಂಧ ಕಲ್ಪಿಸುವ ಮತ್ತು ಪುರಾಣಗಳನ್ನು ವೈಜ್ಞಾನಿಕತೆಯೊಂದಿಗೆ ಸಂಯೋಜಿಸುವ ಪ್ರವೃತ್ತಿ ಕರ್ನಾಟಕದ ಪಠ್ಯಪುಸ್ತಕಗಳಲ್ಲಿ 2015ಕ್ಕೂ ಮುನ್ನವೇ ಆರಂಭವಾಗಿತ್ತು. ಈಗ ಪೊಸಿಸನ್ ಪೇಪರ್‌ಗಳಲ್ಲೂ ಈ ಪ್ರವೃತ್ತಿಯನ್ನು ಮುಂದುವರಿಸಿರುವುದು ವಿಷಾದನೀಯ ಎನ್ನುತ್ತಾರೆ ಅವರು.

“ಒಂದು ಪೊಸಿಸನ್ ಪೇಪರ್‌ಗಾಗಿ ತೆರಿಗೆದಾರರ ಲಕ್ಚಾಂತರ ಹಣವನ್ನು ಖರ್ಚು ಮಾಡಲಾಗುತ್ತದೆ ಮತ್ತು ಒಂದು ಕೋಟಿಗೂ ಹೆಚ್ಚು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ, ಅದರ ಸಂರಚನೆಯು ಗಂಭೀರವಾದ ಕಸರತ್ತಾಗಿರಬೇಕು. ಪ್ರಾಚೀನತೆಯ ಮೇಲಿನ ಹಕ್ಕುಗಳ ಹೆಸರಿನಲ್ಲಿ ಹಾಸ್ಯಮಯ ಮತ್ತು ಅಪ್ರಸ್ತುತತೆಗೆ ಸಮಿತಿ ಇಳಿಯಬಾರದು. ಜೊತೆಗೆ ಈಗ ಸಲ್ಲಿಸಲಾಗಿರುವ ಪೊಸಿಸನ್ ಪೇಪರ್ ‘ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು’ ಹಲವಿವೆ ಮತ್ತು ಕೇವಲ ವೈದಿಕ-ಸಂಸ್ಕೃತ ಮಾತ್ರವಲ್ಲ ಎಂಬುವುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ಜೊತೆಗೆ, ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಈ ಕಾಲದಲ್ಲೂ ಶೈಕ್ಷಣಿಕ ಪರಿಸರಗಳನ್ನು ಹಾಳುಮಾಡುವ ಜಾತಿ ಮತ್ತು ಲಿಂಗ ತಾರತಮ್ಯವನ್ನು ನಿರ್ಮೂಲನೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವ ಬದಲು ಮನುಸ್ಮೃತಿಯನ್ನು ಉನ್ನತೀಕರಿಸುತ್ತದೆ” ಎಂದು ಪ್ರಜ್ವಲಾ ಶಾಸ್ತ್ರಿ ಹೇಳುತ್ತಾರೆ.
ವಾರಣಾಸಿಯ ಐಐಟಿ (ಬಿಎಚ್‌ಯು) ದ ಡಾ. ವಿ. ರಾಮನಾಥನ್ ನೇತೃತ್ವದ ಸಮಿತಿಯು ಈ ಪೊಸಿಸನ್ ಪೇಪರ್‌ನ್ನು ರಚಿಸಿದ್ದು “ಇತರರಿಂದ ಕಲಿಯುವುದು ತಪ್ಪಲ್ಲ. ಆದರೆ ನಮ್ಮ ಪೂರ್ವಜರ ವೈಜ್ಞಾನಿಕ ಸಾಧನೆಗಳ ಬಗ್ಗೆ ನಮ್ಮ ದೇಶದ ಯುವಕರಿಗೆ ಯಾವುದೇ ಸುಳಿವು ಇಲ್ಲದ ಪರಿಸ್ಥಿತಿಗೆ ನಾವು ಬಂದಿದ್ದೇವೆ” ಎನ್ನುತ್ತಾರೆ. .
ವಾಸ್ತವವಾಗಿ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಿರುವುದಕ್ಕೆ ಅಥವಾ ಸ್ನಾನದ ತೊಟ್ಟಿಯಲ್ಲಿ ಆರ್ಕಿಮಿಡೀಸ್‌ನ ಯುರೇಕಾ ಕ್ಷಣದ ಬಗ್ಗೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಅಂತಹ ಕಥೆಗಳನ್ನು ವ್ಯಾಪಕವಾಗಿ ಹರಡಲಾಗಿದೆತ ಎಂದು ಹೇಳುವ ಪೊಸಿಸನ್ ಪೇಪರ್ “ಮತ್ತೊಂದೆಡೆ, ಸುಮಾರು ಎರಡು ಸಹಸ್ರಮಾನಗಳ ವಿವಿಧ ರೀತಿಯ ಆಕ್ರಮಣಗಳನ್ನು ತಡೆದುಕೊಂಡಿರುವ ಭಾರತವು ಇನ್ನೂ ಸಾವಿರಾರು ನೈಜ ಕಥೆಗಳನ್ನು ಹೇಳಲು ಕಾಯುತ್ತಿದೆ” ಎಂದು ಹೇಳುತ್ತದೆ.

ಜೊತೆಗೆ ಪೊಸಿಸನ್ ಪೇಪರ್ ಸಂಸ್ಕೃತದ (ಕಡ್ಡಾಯ) ಕಲಿಕೆಯನ್ನು ಶಿಫಾರಸು ಮಾಡುತ್ತದೆ. ಭಾರತೀಯ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟ ಮತ್ತು ಅವನ ‘ಕುಟ್ಟಕ ಅಲ್ಗಾರಿದಮ್’ ಪಠ್ಯಪುಸ್ತಕಗಳಲ್ಲಿ ಸೀಮಿತ ಉಲ್ಲೇಖವನ್ನು ಪಡೆದುಕೊಂಡಿರುವುದರ ಬಗ್ಗೆ ಇದು ಕಳವಳವನ್ನೂ ವ್ಯಕ್ತಪಡಿಸಿದೆ. ಜೊತೆಗೆ ‘ಭೂತ ಸಂಖ್ಯಾ’ (ಸಂಖ್ಯೆಯ ಮೌಲ್ಯದ ಅರ್ಥವನ್ನು ಹೊಂದಿರುವ ಸಾಮಾನ್ಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ದಾಖಲಿಸುವ ವಿಧಾನ) ಮತ್ತು ‘ಕಟಪಯಾದಿ ಸಂಖ್ಯಾ’ (ಸಂಖ್ಯೆಗಳಿಗೆ ಅಕ್ಷರಗಳನ್ನು ಚಿತ್ರಿಸಲು ಭಾರತೀಯ ವ್ಯವಸ್ಥೆ) ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಇದು ಶಿಫಾರಸು ಮಾಡುತ್ತದೆ.
‘ನಾಗ್ಪುರ ಶಿಕ್ಷಣ ನೀತಿ’ ಎಂದು ಕಾಂಗ್ರೆಸ್ ಕರೆದಿದ್ದ ಎನ್‌ಇಪಿಯನ್ನು ಅಂಗೀಕರಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದ್ದು ಹಲವಾರು ಶಿಕ್ಷಣ ತಜ್ಞರಿಂದ ಟೀಕೆಗೆ ಒಳಗಾಗಿದೆ. ಎನ್ಇಪಿ ಸೃಷ್ಟಿಸಲಿರುವ ಅನಾಹುತದ ಮುಂದೆ ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಏನೂ ಅಲ್ಲ ಎನ್ನುವ ತಜ್ಞರು ಎನ್‌ಇಪಿಯನ್ನು ಜಾರಿ ಮಾಡುವ ತರಾತುರಿಯಲ್ಲಿ ಶಿಕ್ಷಣದ ಮೂಲ ಉದ್ದೇಶವನ್ನೇ ಸರ್ಕಾರ ಮರೆತಂತಿದೆ ಎನ್ನುತ್ತಿದ್ದಾರೆ.
ಇನ್ಪುಟ್: ನ್ಯಾಷನಲ್ ಹೆರಾಲ್ಡ್