ಬೆಂಗಳೂರಿನಲ್ಲಿ ಎಲ್ಲಿ ಓಡಾಡೋದಕ್ಕೂ ಭಯ ಪಡಬೇಕಾದ ವಾತಾವರಣ ಸೃಷ್ಟಿಯಾಗ್ಗಿದೆ. ಯಾಕೆಂದರೆ ಟ್ರಾಫಿಕ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಿರ್ಮಿಸಿರುವ ಫ್ಲೈ ಓವರ್ ಗಳು ಯಾಕೋ ಅನ್ಫಿಟ್ ಆಗ್ತಿವೆ. ಈಗಾಗಲೇ ಪೀಣ್ಯಾ ಫ್ಲೈಓವರ್ನಿಂದ ಸಮಸ್ಯೆ ಎದುರಿಸ್ತಿದ್ದು, ಇದೀಗ ಈ ಸಾಲಿಗೆ ಮತ್ತೊಂದು ಫ್ಲೈಓವರ್ ಸೇರ್ಪಡೆಯಾಗಿದೆ.
ಗೊರಗುಂಟೆಪಾಳ್ಯ (MES) ರಸ್ತೆಯ ಫ್ಲೈಓವರ್ ವಾಹನ ಓಡಾಡಲು ಯೋಗ್ಯವಲ್ಲ : ಬಿಬಿಎಂಪಿ ವರದಿ
ಗೊರಗುಂಟೆ ಪಾಳ್ಯದಿಂದ ಹೆಬ್ಬಾಳಕ್ಕೆ ಹೋಗೋದಕ್ಕೆ ಬಳಸುವ ಎಂಇಎಸ್ ಫ್ಲೈ ಓವರ್ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಸರ್ವೇಯಲ್ಲಿ ಗೊತ್ತಾಗಿದೆ. ಪಾಲಿಕೆ ಫ್ಲೈ ಓವರ್ ಫಿಟ್ನೆಸ್ ಸರ್ವೇಯಲ್ಲಿ ಈ ವಿಚಾರ ಗೊತ್ತಾಗಿದ್ದು, ಈ ಫ್ಲೈ ಓವರ್ ಯಾವತ್ತಿಗೂ ಅಪಾಯವೇ ಸರಿ. ಈ ಫ್ಲೈಓವರ್ನ ಕನೆಕ್ಷನ್ ಸ್ಲಾಬ್ನಲ್ಲಿ ಲೋಪದೋಷ ಕಂಡು ಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
7 ವರ್ಷಗಳ ಹಿಂದೆ ರೈಲ್ವೇ ಇಲಾಖೆ ನಿರ್ಮಿಸಿದ್ದ ಮೇಲ್ಸೇತುವೆ.
ರೈಲ್ವೇ ಇಲಾಖೆಯಿಂದ 7 ವರ್ಷಗಳ ಹಿಂದೆ ಈ ಫ್ಲೈಓವರ್ ನಿರ್ಮಿಸಲಾಗಿತ್ತು. ಬಳಿಕ 2017 ರಲ್ಲಿ ಇದನ್ನು ಪಾಲಿಕೆ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ 2020 ರಲ್ಲಿ ಆಡಿಟ್ ಮಾಡಿದ ವೇಳೆ ಇದು ಸರಿಯಾಗಿ ಕಟ್ಟಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಇದೇ ವೇಳೆ ಸ್ಲಾಬ್ನಲ್ಲಿ ಮೊದಲ ಬಾರಿಗೆ ಸಮಸ್ಯೆ ಕಂಡು ಬಂದಿದೆ. ಆಗ ರೈಲ್ವೇ ಇಲಾಖೆಯಿಂದಲೇ ಇದಕ್ಕೆ ಮೆಟಲ್ ಪ್ಲೇಟ್ ಅಳವಡಿಸಲಾಗಿತ್ತು. ಆದರೀಗ ಮತ್ತೆ ಎರಡನೇ ಬಾರಿಗೆ ಅನ್ಫಿಟ್ ಅಂತ ಪ್ರೂ ಆಗಿದೆ ಈ ಫ್ಲೈಓವರ್.
ಇದರ ಸ್ಲಾಬ್ ಸರಿಯಾಗಿ ಜೋಡಣೆಯಾಗದ ಕಾರಣ ಪದೇ ಪದೇ ಸಮಸ್ಯೆ ಎದುರಾಗ್ತಿದೆ. ಆದರೂ ಕೂಡಾ ಗಾಡಿಗಳು ಓಡಾಡೋದು ಡೇಂಜರ್ ಅಂತಿದೆ ಸ್ವತಃ ಪಾಲಿಕೆ. ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಿದೆ. ಇದೀಗ ಸ್ಲಾಬ್ ಸಮಸ್ಯೆಯನ್ನೂ ಕೂಡಾ ನೀವೇ ಸರಿ ಮಾಡಿಕೊಡ್ಬೇಕು ಅಂತ ಪಾಲಿಕೆ ರೈಲ್ವೇ ಇಲಾಖೆಗೆ ಪತ್ರ ಬರೆದಿದೆ. ಹಾಗೂ ಇದಕ್ಕೆ ಪರ್ಮನೆಂಟ್ ಸೆಲ್ಯೂಷನ್ ನೀವೇ ಮಾಡ್ಬೇಕು. ಇದು ಪಾಲಿಕೆಯ ವ್ಯಾಪ್ತಿಗೆ ಬರೋದಿಲ್ಲ ಅಂತ ಪಾಲಕೆ ನುಣುಚಿಕೊಂಡಿದೆ.
ಇನ್ನು ರೈಲ್ವೇ ಇಲಾಖೆ ಹಾಗೂ ಪಾಲಿಕೆ ನಡುವಿನ ಕೆಸರರಚಾಟದ ಮಧ್ಯ ವಾಹನ ಸವಾರರು ದಿನನಿತ್ಯ ಆತಂಕದಲ್ಲೇ ಇಲ್ಲಿ ಸಂಚಾರ ಮಾಡುವಂತಾಗಿದೆ. ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವಾಗ ಇದನ್ನು ಸರಿ ಮಾಡ್ತಾರೋ ಅಂತ ತಿಳಿಯದೆ ಅನಿವಾರ್ಯವಾಗಿ ಈ ಫ್ಲೈಓವರ್ ಬಳಸೋ ಸ್ಥಿತಿಯಲ್ಲಿದ್ದಾರೆ ಸಾರ್ವಜನಿಕರು. ಒಟ್ಟಾರೆ ಪೀಣ್ಯಾದ ಫ್ಲೈಓವರ್ ಸಮಸ್ಯೆಯಿಂದ ವಾಹನ ಸವಾರರು ಮುಕ್ತಿ ಪಡೆಯುವ ಮೊದಲೇ ಎಂಇಎಸ್ ಫ್ಲೈಓವರ್ ಕೂಡಾ ಅನ್ಫಿಟ್ ಅನ್ನೋ ಮಾತು ಕೇಳಿ ಬಂದಿದ್ದು, ಆತಂಕಕ್ಕೆ ದೂಡಿದೆ. ಆದಷ್ಟು ಬೇಗ ರೈಲ್ವೇ ಇಲಾಖೆ ಎಚ್ಚೆತ್ತುಕೊಳ್ಬೇಕಿದೆ. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಿರ್ತಾರೆ.