ಕೇಂದ್ರ ಆರೋಗ್ಯ ಸಚಿವಾಲಯದ ಶನಿವಾರ ಮಧ್ಯಾಹ್ನದ ಮಾಹಿತಿಯ ಪ್ರಕಾರ ಕಳೆದ 24 ತಾಸಿನಲ್ಲಿ ದೇಶದಲ್ಲಿ ಸರಿಸುಮಾರು ಒಂದೂವರೆ ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ. 285 ಮಂದಿ ಕೋವಿಡ್ ನಿಂದ ಸಾವು ಕಂಡಿದ್ದಾರೆ. ಈವರೆಗೆ ದೇಶದಲ್ಲಿ 3071 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ರಾಜಸ್ತಾನದ ಉದಯ್ ಪುರದಲ್ಲಿ ವ್ಯಕ್ತಿಯೊಬ್ಬ ಓಮಿಕ್ರಾನ್ ಗೆ ಬಲಿಯಾಗಿದ್ದು, ಈವರೆಗೆ ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಜೀವಬಲಿ ತೆಗೆದುಕೊಂಡ ದೇಶದ ಮೊದಲ ಪ್ರಕರಣ ಅದು.
ಈ ನಡುವೆ, ಓಮಿಕ್ರಾನ್ ಭೀತಿಯಿಂದ ಕರ್ನಾಟಕ, ದೆಹಲಿ, ತಮಿಳುನಾಡು, ಹರ್ಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ, ಮಾಲ್, ಸಿನಿಮಾ ಮಂದಿರ, ಸಭೆ-ಸಮಾರಂಭಗಳ ನಿಷೇಧ ಮುಂತಾದ ನಿಯಂತ್ರಣ ಕ್ರಮಗಳು ಜಾರಿಗೆ ಬಂದಿವೆ. ಆದರೆ, ಒಂದು ಕಡೆ ಸರ್ಕಾರಗಳು ಮುಂಜಾಗ್ರತಾ ಕ್ರಮಗಳಾಗಿ ಹೀಗೆ ನಿಯಂತ್ರಣ, ನಿರ್ಬಂಧಗಳನ್ನು ಹೇರುತ್ತಿರುವಾಗಲೇ ಅದೇ ಸರ್ಕಾರಗಳನ್ನು ನಡೆಸುವ ಪಕ್ಷದ ನಾಯಕರುಗಳೇ ಚುನಾವಣಾ ರ್ಯಾಲಿಗಳಲ್ಲಿ, ಭಾರೀ ಸಭೆ ಸಮಾರಂಭಗಳಲ್ಲಿ ಭಾಗವಹಿಸುವತ್ತಾ ನೇರವಾಗಿ ಕರೋನಾ ವೈರಸ್ ಹಬ್ಬಿಸುವ ಕೃತ್ಯಗಳಲ್ಲಿ ಮುಳುಗಿದ್ದಾರೆ ಎಂಬ ಗಂಭೀರ ಆರೋಪಗಳು ಪ್ರತಿಪಕ್ಷಗಳಿಂದ ಕೇಳಿಬಂದಿವೆ. ಮತ್ತೊಂದು ವೀಕೆಂಡ್ ಮತ್ತು ನೈಟ್ ಕರ್ಫ್ಯೂನಂತಹ ನಿಯಂತ್ರಣ ಕ್ರಮಗಳಿಂದ ಏನು ಪ್ರಯೋಜನ ಎಂಬ ಪ್ರಶ್ನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಡಾ ಸೌಮ್ಯ ಸ್ವಾಮಿನಾಥನ್ ಅವರಂಥ ಜಾಗತಿಕ ಖ್ಯಾತಿಯ ಪರಿಣತರೇ ಎತ್ತಿದ್ದಾರೆ.
ಹಾಗೇ ಕರೋನಾ ವೈರಸ್ಸಿನ ಓಮಿಕ್ರಾನ್ ರೂಪಾಂತರಿ ತಳಿ ಎಷ್ಟು ಅಪಾಯಕಾರಿ? ಅದರಿಂದಾಗಿ ಆಗಿರುವ ಸಾವು ನೋವುಗಳು ಎಷ್ಟು? ಯಾವ ಪ್ರಮಾಣದಲ್ಲಿ ಅದು ಹಬ್ಬುತ್ತಿದೆ? ಎಂಬ ಪ್ರಶ್ನೆಗಳು ಎದ್ದಿವೆ ಮತ್ತು ಆ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರಗಳು ವೀಕೆಂಡ್ ಮತ್ತು ನೈಟ್ ಕರ್ಫ್ಯೂನಂತಹ ಬಿಗಿ ಕ್ರಮಗಳನ್ನು ಜಾರಿಗೆ ತರುತ್ತಿವೆಯೇ? ಅಥವಾ ಕೇವಲ ಭಯ ಮತ್ತು ಭೀತಿಯಿಂದ ಇಂತಹ ಕ್ರಮಗಳನ್ನು ಘೋಷಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳೂ ಇವೆ.
ಅಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ಓಮಿಕ್ರಾನ್ ರೂಪಾಂತರಿ ಮೊಟ್ಟಮೊದಲು ಪತ್ತೆಯಾದ ಮತ್ತು ಆ ವೈರಾಣು ಸೋಂಕಿಗೆ ಅತಿಹೆಚ್ಚು ಮಂದಿ ಒಳಗಾದ ದಕ್ಷಿಣ ಆಫ್ರಿಕಾದ ಸದ್ಯದ ಸ್ಥಿತಿಗತಿ ಏನು ಎಂಬುದನ್ನು ಪರಿಶೀಲಿಸಿದರೆ, ಸದ್ಯ ಭಾರತದಲ್ಲಿ ಆ ವೈರಾಣು ಕುರಿತು ಇರುವ ಭೀತಿ-ಭಯ ಮತ್ತು ಸರ್ಕಾರಗಳು ಅದರ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ನಿಯಂತ್ರಣ ಕ್ರಮಗಳು ನಿಜಕ್ಕೂ ಬೇಕಿವೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭ. ಆ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’ ವಿವಿಧ ಮಾಧ್ಯಮ ವರದಿಗಳನ್ನು ಕ್ರೋಡೀಕರಿಸಿ ದಕ್ಷಿಣ ಆಫ್ರಿಕಾದ ಓಮಿಕ್ರಾನ್ ಸ್ಥಿತಿಗತಿಯ ಕುರಿತು ಒಂದಿಷ್ಟು ಮಾಹಿತಿಯನ್ನು ನಿಮಗಾಗಿ ನೀಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಕೋವಿಡ್ ನ ಮೂರು ಅಲೆಗಳು ಬಂದುಹೋಗಿವೆ. ಕಳೆದ ನವೆಂಬರ್ ನಿಂದ ನಾಲ್ಕನೇ ಅಲೆಯಾಗಿ ಓಮಿಕ್ರಾನ್ ಅಲೆ ಆರಂಭವಾಗಿದೆ. ಡಿಸೆಂಬರ್ ಮೂರನೇ ವಾರದಿಂದಲೇ ಒಮಿಕ್ರೋನ್ ಅಲೆ ಕೂಡ ಅಲ್ಲಿ ಇಳಿಮುಖವಾಗಿದ್ದು, ಅಲ್ಲಿನ ಸರ್ಕಾರ ಬಹುತೇಕ ನಾಲ್ಕನೇ ಅಲೆಯ ಅಂತ್ಯಕ್ಕೆ ತಲುಪಿದೆ ಎಂದು ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಡಿಸೆಂಬರ್ ಕೊನೆಯ ವಾರದಿಂದಲೇ ಅಲ್ಲಿ ಕೋವಿಡ್ ಸೋಂಕಿತರ ಸಂಪರ್ಕಿತರ ಪತ್ತೆ(ಟ್ರೇಸಿಂಗ್) ಮತ್ತು ಪ್ರತ್ಯೇಕಿಸುವ(ಐಸೋಲೇಷನ್) ಕ್ರಮಗಳನ್ನು ಕೂಡ ಅಧಿಕೃತವಾಗಿ ಕೈಬಿಡಲಾಗಿದೆ. ಒಮಿಕ್ರೋನ್ ಅಲೆ ಆರಂಭವಾಗಿ ಒಂದು ತಿಂಗಳಲ್ಲಿ ದೇಶದ ಶೇ.80ಕ್ಕೂ ಅಧಿಕ ಜನಸಂಖ್ಯೆ ಸೋಂಕಿತರಾಗಿರುವುದು ಮತ್ತು ಈವರಗೆ ಯಾವುದೇ ನಿರ್ದಿಷ್ಟ ಓಮಿಕ್ರಾನ್ ಸಾವುಗಳು ದೃಢಪಡದೇ ಇರುವ ಹಿನ್ನೆಲೆಯಲ್ಲಿ ಹಾಗೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸಂಪರ್ಕ ಪತ್ತೆ ಮತ್ತು ಕ್ವಾರಂಟೈನ್ ಕ್ರಮಗಳನ್ನು ನಿಲ್ಲಿಸಲಾಗುವುದು ಎಂದು ಡಿಸೆಂಬರ್ 25ರಂದೇ ದಕ್ಷಿಣ ಆಫ್ರಿಕಾ ಸರ್ಕಾರ ಘೋಷಿಸಿತ್ತು.
ತಜ್ಞರ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಅಲ್ಲಿನ ಬಹುಪಾಲು ಜನಸಂಖ್ಯೆಗೆ ವ್ಯಾಪಿಸಿದ ಓಮಿಕ್ರಾನ್ ವೈರಸ್, ಕೋವಿಡ್ ರೋಗ ತೀವ್ರತೆಯನ್ನು ಉಂಟು ಮಾಡದೆ, ಸಾವಿಗೆ ಕಾರಣವಾಗದೆ ಮುಗಿದುಹೋಗಿದೆ. ಅಲ್ಲಿ ಕೋವಿಡ್ ಮೊದಲ ಅಲೆ 2020ರ ಜೂನ್ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಇತ್ತು. ಆ ಅವಧಿಯಲ್ಲಿ ಪ್ರತಿ ವಾರಕ್ಕೆ ಬರೋಬ್ಬರಿ 12 ಸಾವಿರ ಜನರಿಗೆ ಸೋಂಕು ಮತ್ತು 297 ಕೋವಿಡ್ ಸಾವು ಪ್ರಕರಣಗಳ ಸರಾಸರಿ ಪ್ರಮಾಣದಲ್ಲಿ ವೈರಸ್ ಹಾನಿ ಮಾಡಿತು. ಅದಾಗಿ ಮೂರು ತಿಂಗಳ ಬಳಿಕ 2020ರ ನವೆಂಬರ್ ನಲ್ಲಿ ಎರಡನೇ ಅಲೆ ಆರಂಭವಾಯಿತು. ಆ ಎರಡನೇ ಅಲೆಗೆ ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರವಾದ ಕೋವಿಡ್ ಬೀಟಾ ವೈರಸ್ ಕಾರಣವಾಗಿತ್ತು ಮತ್ತು ಏಳು ದಿನಗಳ ಸರಾಸರಿ ಲೆಕ್ಕದಲ್ಲಿ 19,042 ಸೋಂಕು ಮತ್ತು 510 ಕೋವಿಡ್ ಸಾವುಗಳ ಪ್ರಮಾಣದಲ್ಲಿ ಅದು ತನ್ನ ತೀವ್ರತೆ ತೋರಿತ್ತು. ಆ ಎರಡನೇ ಅಲೆ ಇಳಿಮುಖವಾಗಿ ಸಾವು ಮತ್ತು ಸೋಂಕಿನ ರೇಖೆ ಸಮಾನಾಂತರ ಸ್ಥಿತಿಗೆ ತಲುಪಲು ಮೂರು ತಿಂಗಳು ಹಿಡಿಯಿತು ಮತ್ತು ಈ ಅಲೆ ಆ ದೇಶದ ಪಾಲಿಗೆ ಸಾವು ನೋವಿನ ಪ್ರಮಾಣದಲ್ಲಿ ಭೀಕರ ಎಂದು ಪರಿಗಣಿತವಾಯಿತು.
ಅದಾದ ಮೂರು ತಿಂಗಳ ಬಳಿಕ 2021ರ ಮೇ ಹೊತ್ತಿಗೆ ಮೂನರೇ ಅಲೆ ಆರಂಭವಾಯಿತು. ಡೆಲ್ಟಾ ವೈರಸ್ ಕಾರಣದಿಂದಾಗಿ ವ್ಯಾಪಕವಾಗಿ ಹರಡಿದ ಸೋಂಕಿನ ಈ ಅಲೆಯಲ್ಲಿ ಏಳು ದಿನದ ಸರಾಸರಿ ಪ್ರಮಾಣದಲ್ಲಿ 19,184 ಸೋಂಕು ಮತ್ತು 305 ಸಾವುಗಳು ದಾಖಲಾದವು. ನಾಲ್ಕು ತಿಂಗಳ ಕಾಲ ಇದ್ದ ಈ ಅಲೆಯ ಬಳಿಕ 2021ರ ನವೆಂಬರ್ 20ರ ಸುಮಾರಿಗೆ ನಾಲ್ಕನೇ ಅಲೆ ಆರಂಭವಾಯಿತು. ಈ ಅಲೆಗೆ ಕೂಡ ಆ ದೇಶದಲ್ಲೇ ಮೊದಲು ಕಂಡುಬಂದ ಓಮಿಕ್ರಾನ್ ರೂಪಾಂತರಿ ಕೋವಿಡ್ ವೈರಸ್ ಕಾರಣವಾಯಿತು ಮತ್ತು ಏಳು ದಿನಗಳ ಸರಾಸರಿ ಪ್ರಮಾಣದಲ್ಲಿ 19,400 ಸೋಂಕು ಮತ್ತು 44 ಸಾವುಗಳನ್ನು ದಾಖಲಿಸಲಾಯಿತು. ಆದರೆ ಆ 44 ಸಾವುಗಳು ಕರೋನಾ ಕಾರಣದಿಂದಾದ ಸಾವುಗಳು ಎಂದು ದೃಢಪಟ್ಟಿದ್ದರೂ, ನಿರ್ದಿಷ್ಟವಾಗಿ ಓಮಿಕ್ರಾನ್ ವೈರಸ್ ರೂಪಾಂತರ ಸೋಂಕಿತರಲ್ಲ. ಬಹುಶಃ ಆ ಸಾವುಗಳಿಗೆ ಈಗಲೂ ಅಲ್ಲಿ ಹರಡುತ್ತಿರುವ ಡೆಲ್ಟಾ ರೂಪಾಂತರಿ ವೈರಸ್ ಕಾರಣವಿರಬಹುದು ಎಂದು ಅಲ್ಲಿನ ಸರ್ಕಾರ ಹೇಳಿದೆ.
ಈ ನಾಲ್ಕೂ ರೂಪಾಂತರಿ ವೈರಸ್ ಅಲೆಗಳ ಪೈಕಿ ಮೊದಲ ಅಲೆ ಹೊರತುಪಡಿಸಿ ಉಳಿದ ಮೂರು ಅಲೆಗಳಲ್ಲಿ ಏಳು ದಿನಗಳ ಸರಾಸರಿ ಸೋಂಕಿನ ಪ್ರಮಾಣ ಬಹುತೇಕ ಒಂದೇ ಪ್ರಮಾಣದಲ್ಲಿದ್ದು, ಸುಮಾರು 20 ಸಾವಿರದ ಆಸುಪಾಸಿನಲ್ಲಿದೆ. ಆದರೆ ಓಮಿಕ್ರಾನ್ ಅಲೆಯ ವಿಷಯದಲ್ಲಿ ಬಹಳ ದೊಡ್ಡ ವ್ಯತ್ಯಾಸ ಇರುವುದು ಅದು ಅತಿ ಕಡಿಮೆ ಅವಧಿಯಲ್ಲಿ; ಅಂದರೆ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಇತರೆ ಅಲೆಗಳು ಮೂರ್ನಾಲ್ಕು ತಿಂಗಳಲ್ಲಿ ಉಂಟುಮಾಡಿದ ಸೋಂಕಿಗಿಂತ ಹಲವು ಪಟ್ಟು ಸೋಂಕು ಹೆಚ್ಚಿಸಿದ್ದರಲ್ಲಿ. ಅಂದರೆ ಸೋಂಕು ಹರಡುವ ವೇಗ ಮತ್ತು ವ್ಯಾಪಕತೆ ವಿಷಯದಲ್ಲಿ ಓಮಿಕ್ರಾನ್ ಉಳಿದೆಲ್ಲಾ ರೂಪಾಂತರಿ ವೈರಸ್ ಗಳಿಗಿಂತ ಹಲವು ಪಟ್ಟು ಪ್ರಬಲ. ಆದರೆ, ಅದೇ ಹೊತ್ತಿಗೆ ಸೋಂಕಿನ ತೀವ್ರತೆಯ ವಿಷಯದಲ್ಲಿ ಉಳಿದೆಲ್ಲಾ ರೂಪಾಂತರಿಗಳಿಗಿಂತ ದುರ್ಬಲ. ಏಕೆಂದರೆ, ಒಮಿಕ್ರೋನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವು ಕಾಣುವ ಪ್ರಮಾಣ ಉಳಿದ ರೂಪಾಂತರಿ ವೈಸರ್ ಗಳಿಗೆ ಹೋಲಿಸಿದರೆ ತೀರಾ ಅಪರೂಪ ಎಂಬುದು ತಜ್ಞರ ಅಭಿಪ್ರಾಯ. ಅದು ದಕ್ಷಿಣ ಆಫ್ರಿಕಾದ ಸೋಂಕಿನ ಅಂಕಿಅಂಶಗಳಲ್ಲು ಸಾಬೀತಾಗಿದೆ ಕೂಡ!
“ಓಮಿಕ್ರಾನ್ ವೈರಸ್ ಸೋಂಕು ಹರಡುವುದು ತೀವ್ರಗತಿಯಲ್ಲಿದ್ದರೂ, ಹಿಂದಿನ ಡೆಲ್ಟಾ ವೈರಸ್ ಗೆ ಹೋಲಿಸಿದರೆ, ಮನುಷ್ಯನ ದೇಹದಲ್ಲಿ ಅದು ದ್ವಿಗುಣವಾಗುವ ಪ್ರಮಾಣ 12 ಪಟ್ಟು ಕಡಿಮೆ. ಆ ಕಾರಣದಿಂದಾಗಿಯೇ ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಮಟ್ಟಿನ ಗಂಭೀರ ಸ್ಥಿತಿಗೆ ತಲುಪುವ ಸೋಂಕಿತರ ಸಂಖ್ಯೆ ತೀರಾ ನಗಣ್ಯ ಎನ್ನುವಷ್ಟು ಕಡಿಮೆ ಮತ್ತು ಸಾವಿನ ಪ್ರಮಾಣವಂತೂ ಇಲ್ಲವೇ ಇಲ್ಲ ಎಂಬಷ್ಟು ವಿರಳ” ಎಂದು ಬನಾರಸ್ ಹಿಂದೂ ವಿವಿಯ ಜೆನೆಟಿಕ್ಸ್ ಪ್ರಾಧ್ಯಾಪಕ ಜ್ಞಾನೇಶ್ವರ್ ಚೌಬೆ ಹೇಳಿರುವುದಾಗಿ ‘ಔಟ್ ಲುಕ್’ ಉಲ್ಲೇಖಿಸಿದೆ. ದಕ್ಷಿಣ ಆಫ್ರಿಕಾದ ಎಲ್ಲಾ ನಾಲ್ಕು ಅಲೆಗಳ ಕೋವಿಡ್ ಬೆಳವಣಿಗೆಗಳನ್ನು ಅಧ್ಯಯನ ಮಾಡಿರುವ ಚೌಬೆ ಅವರ ಈ ಮಾತುಗಳು ಭಾರತದ ಸದ್ಯದ ಓಮಿಕ್ರಾನ್ ಆತಂಕಕ್ಕೆ ಸಮಾಧಾನ ನೀಡಲಿವೆ ಎಂಬುದು ಗಮನಾರ್ಹ.
ಹಾಗೇ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿಷಯದಲ್ಲಿ ಸಾಮ್ಯತೆ ಇರುವ ಮತ್ತೊಂದು ಅಂಶವೆಂದರೆ; ನೈಸರ್ಗಿಕ ಸೋಂಕಿನಿಂದ ಉಂಟಾಗಿರುವ ಪ್ರತಿಕಾಯ ಬೆಳವಣಿಗೆ. ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆ ಆರಂಭಕ್ಕೆ ಮುನ್ನವೇ ನಡೆಸಿದ ಸೀರೋ ಸರ್ವೆಯಲ್ಲಿ ಅಲ್ಲಿನ ಒಟ್ಟು ಜನಸಂಖ್ಯೆಯ ಶೇ.56.2ರಷ್ಟು ಮಂದಿಯಲ್ಲಿ ಕೋವಿಡ್ ವೈರಸ್ ಗೆ ಪ್ರತಿಕಾಯಗಳು ಕಂಡುಬಂದಿದ್ದವು. ಜೊತೆಗೆ ಅಲ್ಲಿನ ಶೇ.26.7ರಷ್ಟು ಮಂದಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಹಾಗಾಗಿ ಓಮಿಕ್ರಾನ್ ತೀವ್ರತೆ ತಗ್ಗಲು ಈ ಎರಡು ಅಂಶಗಳು ಕೂಡ ಕಾರಣವಿರಬಹುದು ಎಂಬುದು ಜ್ಞಾನೇಶ್ವರ್ ಚೌಬೆ ಅವರ ವಾದ.
ಇದೇ ವಾದವನ್ನು ಭಾರತಕ್ಕೂ ಅನ್ವಯ ಮಾಡುವುದೇ ಆದರೆ, ಭಾರತದಲ್ಲಿ ಈಗಾಗಲೇ ಶೇ.80ಕ್ಕೂ ಹೆಚ್ಚು ಮಂದಿಗೆ ನೈಸರ್ಗಿಕವಾಗಿಯೇ ಕೋವಿಡ್ ಪ್ರತಿಕಾಯಗಳು ವೃದ್ಧಿಯಾಗಿವೆ ಮತ್ತು ದೇಶದ ಶೇ.65ರಷ್ಟು ವಯಸ್ಕರು ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿದ್ದು, ಶೇ.90ರಷ್ಟು ವಯಸ್ಕರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಈಗಾಗಲೇ ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ ಎನ್ ಕೆ ಅರೋರಾ ಅವರೇ ಹೇಳಿದ್ದಾರೆ. ಹಾಗೇ ದಕ್ಷಿಣ ಆಫ್ರಿಕಾದ ಓಮಿಕ್ರಾನ್ ಸ್ಥಿತಿಗತಿಯನ್ನೂ ಉಲ್ಲೇಖಿಸಿರುವ ಅವರು, “ಕೋವಿಡ್ ಸಾಂಕ್ರಾಮಿಕದ ವಿಷಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಬಹಳಷ್ಟು ಸಾಮ್ಯತೆ ಇದೆ. ನೈಸರ್ಗಿಕ ಪ್ರತಿಕಾಯ ವೃದ್ಧಿ ಮತ್ತು ಲಸಿಕೆ ವಿಷಯದಲ್ಲಿ ನಾವು ಅವರಿಗಿಂತ ಮುಂದಿದ್ದೇವೆ. ಅಲ್ಲಿ ಕೇವಲ ಎರಡು ವಾರದಲ್ಲೇ ಒಮಿಕ್ರೋನ್ ಅಲೆ ತಗ್ಗಿದೆ. ಆ ಹಿನ್ನೆಲೆಯಲ್ಲಿ ನಮ್ಮಲ್ಲಿ ಅದು ಇನ್ನಷ್ಟು ಬೇಗನೇ ಮುಗಿದುಹೋಗಬಹುದು ಎಂಬ ನಿರೀಕ್ಷೆ ಇದೆ. ಸೋಂಕಿನ ಪ್ರಮಾಣ ಹೆಚ್ಚಿದ್ದರೂ ಸೋಂಕಿತರಲ್ಲಿ ರೋಗಲಕ್ಷಣರಹಿತರೇ (ಅಸಿಂಪ್ಟಮ್ಯಾಟಿಕ್) ಹೆಚ್ಚು ಮತ್ತು ಸೋಂಕಿನ ತೀವ್ರತೆ ಕೂಡ ಕಡಿಮೆ ಇದ್ದು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಅತ್ಯಲ್ಪ” ಎಂದಿದ್ದಾರೆ.
ಸ್ವತಃ ದೇಶದ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರೇ ಓಮಿಕ್ರಾನ್ ವೈರಾಣು ಸೋಂಕಿನ ತೀವ್ರತೆ ಕಡಿಮೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ಪ್ರಮಾಣ ಅತ್ಯಲ್ಪ ಎಂದು ಹೇಳಿರುವಾಗ, ಮತ್ತು ದೇಶದಲ್ಲಿ ಒಮಿಕ್ರೋನ್ ಸೋಂಕು ಪ್ರಾರಂಭವಾಗಿ ಹದಿನೈದು ದಿನಗಳಲ್ಲಿ ಈವರೆಗೆ ಕೇವಲ ಒಂದು ಸಾವು ಸಂಭವಿಸಿರುವಾಗ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ನಂತಹ ಕ್ರಮಗಳ ಮೂಲಕ ಜನಸಾಮಾನ್ಯರ ಬದುಕನ್ನು ಕಟ್ಟಿಹಾಕುವುದು ಮತ್ತು ದುಡಿಮೆಯನ್ನು ಕಿತ್ತುಕೊಳ್ಳುವುದು ಎಷ್ಟು ಸರಿ? ಮತ್ತು ಸರ್ಕಾರಗಳ ಅಂತಹ ನಿರ್ಧಾರಗಳಿಗೆ ಯಾವ ವೈಜ್ಞಾನಿಕ ಆಧಾರಗಳಿವೆ ಮತ್ತು ಅಂತಹ ಕ್ರಮಗಳನ್ನು ಯಾವ ತಜ್ಞರ ಯಾವ ಅಧ್ಯಯನಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂಬುದು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ.
ಆ ಹಿನ್ನೆಲೆಯಲ್ಲೇ ಜನಪ್ರಿಯ ವೈದ್ಯರಾದ ಡಾ ಶ್ರೀನಿವಾಸ ಕಕ್ಕಿಲಾಯ ಅವರು, ಸರ್ಕಾರದ ಇಂತಹ ವಿವೇಚನಾಹೀನ ನಿರ್ಬಂಧಗಳು ಮತ್ತು ಓಮಿಕ್ರಾನ್ ವಾಸ್ತವಾಂಶಗಳ ನಡುವಿನ ವೈರುಧ್ಯದ ಬಗ್ಗೆ ಪ್ರಸ್ತಾಪಿಸುತ್ತಾ, “ದೇಶದಲ್ಲಿ ಈಗಾಗಲೇ ಶೇ.80ರಷ್ಟು ಮಂದಿ ನೈಸರ್ಗಿಕವಾಗಿಯೇ ಕೋವಿಡ್ ಸೋಂಕಿತರಾಗಿ ಪ್ರತಿಕಾಯ ಹೊಂದಿದ್ದಾರೆ. ಹಾಗಿರುವಾಗ ಅವರಿಗೆ ಪರೀಕ್ಷೆ ಮಾಡುವುದು ವ್ಯರ್ಥ. ಪರೀಕ್ಷೆ ಮಾಡಿದರೆ ಅವರಲ್ಲಿರುವ ಪ್ರತಿಕಾಯಗಳ ಕಾರಣಕ್ಕಾಗಿಯೇ ಅದು ಪಾಸಿಟಿವ್ ಬಂದೇ ಬರುತ್ತದೆ. ಯಾವ ರೋಗ ಲಕ್ಷಣಗಳಿಲ್ಲದ ಅವರನ್ನು ಪ್ರತ್ಯೇಕಿಸುವುದು, ಸಂಪರ್ಕ ಪತ್ತೆ ಮಾಡುವುದು, ಕ್ಲಸ್ಟರ್ ಘೋಷಿಸುವುದು, ನಿರ್ಬಂಧಿಸುವುದು, ಕರ್ಫ್ಯೂ ಹೇರುವುದು.. ಮುಂತಾದ ಎಲ್ಲವೂ ಅರ್ಥಹೀನ. ಹಾಗಾಗಿ ಈ ಓಮಿಕ್ರಾನ್ ಅಲೆ ಎಂಬುದೇನಿದೆ ಅದು ರೋಗದ ಅಲೆಯಲ್ಲ; ಬದಲಾಗಿ ಆರ್ ಟಿಪಿಸಿಆರ್ ಪಾಸಿಟಿವ್ ಅಲೆ ಅಷ್ಟೇ. ಆ ಕಾರಣಕ್ಕಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಟೆಸ್ಟ್, ಟ್ರ್ಯಾಕಿಂಗ್, ಐಸೋಲೇಷನ್ ಅನ್ನೋದನ್ನೇ ಕೈಬಿಟ್ಟಿದೆ” ಎನ್ನುತ್ತಾರೆ!
ದೇಶದ ಕೋವಿಡ್ ನಿರ್ಹವಣೆಯ ಹೊಣೆ ಹೊತ್ತ ಡಾ ಅರೋರಾ, ಸಾಂಕ್ರಾಮಿಕ ಮತ್ತು ರೋಗ ನಿರ್ವಹಣೆಯ ವಿಷಯದಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಯೋಗಿಕ ಜ್ಞಾನದ ಆಧಾರದ ಮೇಲೆ ಸಲಹೆ ನೀಡುತ್ತಿರುವ ಡಾ ಕಕ್ಕಿಲಾಯ ಅವರಂಥ ತಜ್ಞರು ಹೇಳುವುದು ಒಂದು, ಸರ್ಕಾರಗಳು ಅಂತಿಮವಾಗಿ ಜಾರಿಗೆ ತರುತ್ತಿರುವುದು ಮತ್ತೊಂದು! ಸದ್ಯಕ್ಕೆ ಪ್ರತಿ ಬಾರಿ ಕೋವಿಡ್ ಹೊಸ ಅಲೆ ಬಂದಾಗಲೂ ಅಧಿಕಾರಸ್ಥರ ಯಡವಟ್ಟು ಮತ್ತು ಅವಿವೇಕಿತನದ ಹೊಸ ಅಲೆಯೂ ಆರಂಭವಾಗುತ್ತಿದ್ದು, ಜನ ನೆಮ್ಮದಿಯ ದಿನಗಳು ದೂರವೇ ಉಳಿದಿವೆ!













