ದೇಶದ ಕಾರ್ಪೊರೇಟ್ ಜಗತ್ತಿನ ವ್ಯವಹಾರಗಳು ಮತ್ತು ಷೇರುಪೇಟೆ ಎಂಬ ಬಾಜಿ ಮಾರುಕಟ್ಟೆಯ ಒಳಸುಳಿಗಳು ಅರ್ಥವಾಗಬೇಕಾದರೆ ನೀವು ಜಗತ್ತಿನ ಅತಿ ದೊಡ್ಡ ಷೇರುಪೇಟೆಗಳಲ್ಲಿ ಒಂದಾದ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ (National Stock Exchange) ಚಿತ್ರಾ ರಾಮಕೃಷ್ಣ ಪ್ರಕರಣವನ್ನು ಗಮನಿಸಬೇಕು.
ಹಲವು ಆರ್ಥಶಾಸ್ತ್ರಜ್ಞರ ಪ್ರಕಾರ ಅಪ್ಪಟ ಜೂಜುಕಟ್ಟೆಯಾಗಿರುವ ಷೇರುಪೇಟೆಯ ವ್ಯವಹಾರಗಳೇ ಅಯೋಮಯ. ಅಂತಹ ಷೇರುಪೇಟೆಯನ್ನೇ ನೆಚ್ಚಿಕೊಂಡಿರುವ ಭಾರತೀಯ ಕಾರ್ಪೊರೇಟ್ ವಲಯ ಕೂಡ ವ್ಯಾವಹಾರಿಕವಾಗಿ ಒಂದು ಬಗೆಯಲ್ಲಿ ಜೂಜುಕಟ್ಟೆಯೇ. ವಿಪರ್ಯಾಸವೆಂದರೆ, ಇಡೀ ಕಾರ್ಪೊರೇಟ್ ವಲಯದ ಏಳುಬೀಳು ನಿಂತಿರುವುದೇ ಷೇರುಪೇಟೆಯ ಏಳುಬೀಳಿನ ಮೇಲೆ. ಒಟ್ಟಾರೆಯಾಗಿ ಭಾರತೀಯ ಕಾರ್ಪೊರೇಟ್ ಮತ್ತು ಷೇರುಪೇಟೆಗಳೆರೆಡೂ ಒಂಥರಾ ಗಾಳಿಗೋಪುರದ ವ್ಯವಹಾರ. ಇಂತಹ ಗಾಳಿಗೋಪುರದ ವ್ಯವಹಾರವನ್ನು ಚಿತ್ರಾ ರಾಮಕೃಷ್ಣ (Chitra Ramkrishna) ಎಂಬ ಚತುರೆ ‘ಅನಾಮಿಕ ಯೋಗಿ’ ಅಲಿಯಾಸ್ ‘ಪರಮಹಂಸ’, ಅಲಿಯಾಸ್ ‘ಸಿದ್ಧಪುರುಷ’ ಎಂಬ ನಿಗೂಢ ವ್ಯಕ್ತಿಯ ಆಣತಿಯಂತೆ ನಡೆಸಿದ ಪ್ರಕರಣ ಭಾರತೀಯ ಕಾರ್ಪೊರೇಟ್ ವ್ಯವಸ್ಥೆ ಮತ್ತು ಷೇರುಪೇಟೆಯ ನಿರ್ವಹಣೆಯ ಮರ್ಮಗಳನ್ನು ಬೆತ್ತಲುಮಾಡಿದೆ.
ದೇಶದ ಕಾರ್ಪೊರೇಟ್ ಮತ್ತು ಉದ್ಯಮ ವಲಯದ ವ್ಯವಹಾರದ ಅಡಿಪಾಯವೇ ಆಗಿರುವ ಎನ್ ಎಸ್ ಇಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದ ಚಿತ್ರಾ ರಾಮಕೃಷ್ಣ, ತನ್ನ ಅಧಿಕಾರವಧಿಯಲ್ಲಿ ಜಗತ್ತಿನ ಅತ್ಯಂತ ಪ್ರಭಾವಿ ಕಾರ್ಪೊರೇಟ್ ಮಹಿಳೆ ಎಂದು ಗುರುತಿಸಿಕೊಂಡವರು. ಹಾಗೇ 2013ರ ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜೀನ್ ಬ್ಯುಸಿನೆಸ್ ಲೀಡರ್ ಶಿಫ್ ಪುರಸ್ಕಾರ ಪಡೆದಾಕೆ. ಅಷ್ಟೇ ಅಲ್ಲ, ಎನ್ ಎಸ್ ಇಯಲ್ಲಿ (NSE) ಆಕೆಯ ಅವಧಿಯಲ್ಲಿ ಅಲ್ಲಿನ ಕಚೇರಿಯ ಸಿಬ್ಬಂದಿಗಳು ಮಾತ್ರವಲ್ಲದೆ, ಇಡೀ ಸಂಸ್ಥೆಯ ಆಡಳಿತ ಮಂಡಳಿಯನ್ನು ಕೂಡ ತನ್ನ ತಾಳಕ್ಕೆ ಕುಣಿಸುತ್ತಿದ್ದ ‘ಐರನ್ ಲೇಡಿ’ ಎಂಬು ಸಂಸ್ಥೆಯಲ್ಲಿ ಕುಖ್ಯಾತಿ ಗಳಿಸಿದಾಕೆ.

ಇಂಥ ಚಿತ್ರಾ, ತನಗೆ ಕಳೆದ 20 ವರ್ಷಗಳಿಂದ ಹಿಮಾಲಯದ ಯೋಗಿಯೊಬ್ಬರು ಗುರುವಾಗಿದ್ದಾರೆ. ಅವರ ಮಾರ್ಗದರ್ಶನದಂತೆಯೇ ತಾನು ನಡೆಯುವುದು ಎಂದು ಇಡೀ ಎನ್ ಎಸ್ ಇಯ ವ್ಯವಹಾರ ಮತ್ತು ಆಡಳಿತದ ಪ್ರತಿ ವಿವರಗಳನ್ನೂ ಆ ನಿಗೂಢ ಬಾಬಾನೊಂದಿಗೆ ಇಮೇಲ್ ಮೂಲಕ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ; ಕಂಪನಿಯ ನೇಮಕಾತಿ, ಪ್ರಮೋಷನ್, ಇನ್ ಕ್ರಿಮೆಂಟ್, ಆಡಳಿತ ಮಂಡಳಿಯ ನೇಮಕಗಳ ವಿಷಯದಲ್ಲಿ ಕೂಡ ಆ ಯೋಗಿಯ ಆಣತಿಯನ್ನೇ ಚಾಚೂ ತಪ್ಪದೆ ಪಾಲಿಸಿದ್ದರು. ಆನಂದ್ ಸುಬ್ರಮಣಿಯನ್ ಎಂಬ ವ್ಯಕ್ತಿಯನ್ನು ಎನ್ ಎಸ್ ಇಯಲ್ಲಿ ತನ್ನ ನಂತರದ ಅತ್ಯುನ್ನತ ಸ್ಥಾನ ಗ್ರೂಪ್ ಆಪರೇಟಿಂಗ್ ಆಫೀಸರ್(ಜಿಒಒ) ಸ್ಥಾನಕ್ಕೆ ದಿಢೀರನೇ ತಂದು ಕೂರಿಸಿ, ಆತನಿಗೆ ಬರೋಬ್ಬರಿ ವಾರ್ಷಿಕ ನಾಲ್ಕು ಕೋಟಿಗೂ ಅಧಿಕ ವೇತನ ಮತ್ತು ಎಲ್ಲಾ ಐಷಾರಾಮಿ ಸವಲತ್ತುಗಳನ್ನು ಕೊಟ್ಟಿದ್ದು ಕೂಡ ಅದೇ ನಿಗೂಢ ಯೋಗಿಯ ಆಣತಿಯ ಮೇರೆಗೆ ಎಂದು ಸ್ವತಃ ಚಿತ್ರಾ ಸೆಬಿ(SEBI) ತನಿಖೆಯಲ್ಲಿ ಹೇಳಿದ್ದರು!
ಹಾಗಾದರೆ ಜಗತ್ತಿನ ಪ್ರಭಾವಿ ಬ್ಯುಸಿನೆಸ್ ಲೀಡರ್ ಪುರಸ್ಕಾರಕ್ಕೆ ಪಾತ್ರವಾದ ಮಹಿಳೆಗೇ ಮಾರ್ಗದರ್ಶನ ಮಾಡುವ, ತನ್ನ ತಾಳಕ್ಕೆ ತಕ್ಕಂತೆ ಆಕೆಯನ್ನು ಕುಣಿಸುವ ಮತ್ತು ಹಾಗೆ ಹಿಮಾಲಯದಲ್ಲಿ ಕುಳಿತು ಜಗತ್ತಿನ ಅತಿದೊಡ್ಡ ಷೇರುಪೇಟೆಗಳಲ್ಲಿ ಒಂದಾದ ಸುಮಾರು 300 ಲಕ್ಷ ಕೋಟಿ ರೂಪಾಯಿ ಸಂಪತ್ತಿನ ಎನ್ ಎಸ್ ಇಯನ್ನು ಕಿರುಬೆರಳಿನಲ್ಲಿ ಆಡಿಸುತ್ತಿರುವ ಆಡಿಸುವ ಆ ಮಹಾನುಭಾವ ಯೋಗಿ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಕಾರ್ಪೊರೇಟ್ ಜಗತ್ತಿನ ಈ ನಿಗೂಢ ರಹಸ್ಯವನ್ನು ಬೇಧಿಸಲು ಜಗತ್ತಿನ ಮಾಧ್ಯಮ ಮತ್ತು ಉದ್ಯಮ ವಲಯವೇ ಇನ್ನಿಲ್ಲದ ಮಾಹಿತಿ-ವಿವರಗಳನ್ನು ಬೆರಗುಗಣ್ಣಿನಿಂದ ಕೆದಕಾಡುತ್ತಿತ್ತು. ಅಷ್ಟರಮಟ್ಟಿಗೆ ಚಿತ್ರಾ ರಾಮಕೃಷ್ಣರ ನಿಗೂಢ ಗುರು ಎಲ್ಲರ ಹುಬ್ಬೇರಿಸಿದ್ದ.
ಸದ್ಯ ಚಿತ್ರಾ ಅವಧಿಯಲ್ಲಿ ನಡೆದಿರುವ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಎನ್ ಎಸ್ ಇಯ ಕೋ-ಲೊಕೇಶನ್ ಸೇರಿದಂತೆ ಹಲವು ಹಗರಣಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಎನ್ ಎಸ್ ಇಯ ಮಾಜಿ ಜಿಒಒ ಆನಂದ್ ಸುಬ್ರಮಣಿಯನ್ (Anand Subramanian) ನನ್ನು ಚೆನ್ನೈನಲ್ಲಿ ಬಂಧಿಸಿ ವಶಕ್ಕೆ ಪಡೆದಿದೆ. ಪ್ರಾಥಮಿಕ ವಿಚಾರಣೆ ಮತ್ತು ಕೆಲವು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಚಿತ್ರಾ ಹೇಳುತ್ತಿದ್ದ ‘ಪರಮಹಂಸ’, ‘ಶಿರೋನ್ ಮಣಿ’ ಮಹಾಯೋಗಿ ಎಂಬೆಲ್ಲಾ ಹೆಸರುಗಳ ‘ಅವತಾರ ಪುರುಷ’ ಇದೇ ಆನಂದ್ ಸುಬ್ರಮಣಿಯನ್ ಎಂದು ಸಿಬಿಐ ಹೇಳಿದೆ.
ಅಂದರೆ; ಷೇರುಪೇಟೆಯ ವ್ಯವಹಾರಗಳ ಬಗ್ಗೆಯಾಗಲೀ, ಎನ್ ಎಸ್ ಇಯಂತಹ ಲಕ್ಷಾಂತರ ಕೋಟಿ ವಹಿವಾಟಿನ ಮತ್ತು ಆ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಆಧಾರಸ್ತಂಭವಾದ ಸಂಸ್ಥೆಯ ಆಡಳಿತದ ಬಗ್ಗೆಯಾಗಲೀ ಹೆಚ್ಚು ಅರಿವಿಲ್ಲದೆ, ಅನುಭವವೂ ಇಲ್ಲದ ವ್ಯಕ್ತಿಯೊಬ್ಬ ಅಂತಹ ಸಂಸ್ಥೆಯ ಚುಕ್ಕಾಣಿ ಹಿಡಿಯವಂತಹ ಉನ್ನತ ಸ್ಥಾನಕ್ಕೇ ಯಾವ ಸಂದರ್ಶನವಿಲ್ಲದೆ, ನೇಮಕಾತಿ ಪ್ರಕ್ರಿಯೆಗಳಿಲ್ಲದೆ ನೇರವಾಗಿ ನೇಮಕವಾಗಲು ಮತ್ತು ಸಂಸ್ಥೆಯ ಮೇಲೆ ಹಿಡಿತ ಸಾಧಿಸಲು ಆನಂದ್ ಸುಬ್ರಮಣಿಯನ್ ಹಾಕಿದ ಮಾರುವೇಶವೇ ಚಿತ್ರಾ ಹೇಳುತ್ತಿದ್ದ ‘ಯೋಗಿ’! ತನ್ನದೇ ನೇಮಕಾತಿಗೆ, ವೇತನ ನಿಗದಿಗೆ, ವೇತನ ಹೆಚ್ಚಳಕ್ಕೆ, ಪ್ರಮೋಷನ್ ಗೆ, ಬ್ಯುಸಿನೆಸ್ ಕ್ಲಾಸ್ ವಿಮಾನ ಪ್ರಯಾಣವೂ ಸೇರಿದಂತೆ ವಿವಿಧ ಐಷಾರಾಮಿ ಸಲವತ್ತುಗಳಿಗೆ ತಾನೇ ಶಿಫಾರಸು ಮಾಡಿಕೊಳ್ಳಲು ಆನಂದ್ ಹೆಣೆದ ಸೂತ್ರ ಈ ಕಲ್ಪಿತ ಯೋಗಿಯ ಮಾರುವೇಷ!

ಚಿತ್ರಾ ಯಾಕೆ ಆನಂದ್ ಸುಬ್ರಮಣಿಯನ್ ಲಾಭಕ್ಕಾಗಿ ಹೀಗೆ ಕಲ್ಪಿತ ಯೋಗಿಯನ್ನು ಸೃಷ್ಟಿಸಿ ಆತನಿಂದ ಇಮೇಲ್ ಮೂಲಕ ತನಗೆ ಮಾರ್ಗದರ್ಶನ ಸಿಕ್ಕಂತೆ ಕಥೆ ಕಟ್ಟಿದರು ಎಂಬುದಕ್ಕೆ ಈಗಾಗಲೇ ಬಹಿರಂಗವಾಗಿರುವ ಚಿತ್ರಾ ಮತ್ತು ಯೋಗಿ ಅಲಿಯಾಸ್ ಆನಂದ್ ನಡುವಿನ ಇಮೇಲ್ ಸಂವಾದದಲ್ಲೇ ಉತ್ತರವಿದೆ. ಕೇವಲ ಕಂಪನಿಯ ವ್ಯವಹಾರ, ಆಡಳಿತ ಮಾತ್ರವಲ್ಲದೆ ಅವರಿಬ್ಬರ ನಡುವೆ ಸರಸ- ಸಲ್ಲಾಪವೂ ಇಮೇಲ್ ಮೂಲಕವೇ ನಡೆದಿರುವುದು, ಸ್ಯಾಶಿಲ್ಲೆ, ಸಿಂಗಾಪುರ್, ಬ್ಯಾಂಕಾಕ್ ನಂತಹ ಐಷಾರಾಮಿ ಪ್ರವಾಸಿ ತಾಣಗಳಿಗೆ ಇಬ್ಬರೂ ಪ್ರವಾಸ ಹೋಗುವುದು, ಅಲ್ಲಿ ಜಲಕ್ರೀಡೆ, ಈಜು, ಯೋಗ ಮಾಡುವ ಕುರಿತ ಯೋಜನೆಗಳು, ಆಕೆಯ ಸೌಂದರ್ಯದ ಕುರಿತ ಟಿಪ್ಸ್ ಕೂಡ ಆ ಇಮೇಲ್ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವುದು ಅವರಿಬ್ಬರ ನಡುವಿನ ಆಪ್ತ ನಂಟಿನ ಕುರಿತು ಸಾಕಷ್ಟು ಹೇಳುತ್ತವೆ. ಅಂತಹ ನಂಟಿನ ಕಾರಣಕ್ಕೇ ಕಂಪನಿಯ ಹಿತಾಸಕ್ತಿಯನ್ನು ಬಲಿಕೊಟ್ಟು ಆನಂದ್ ಸುಬ್ರಮಣಿಯನ್ ಗೆ ಭಾರೀ ಅವಕಾಶಗಳನ್ನೂ ನೀಡಲಾಗಿತ್ತು ಮತ್ತು ಅದರಿಂದಾಗಿ ಅಂತಿಮವಾಗಿ ಎನ್ ಎಸ್ ಇ ಮತ್ತು ಅದರಲ್ಲಿ ವಹಿವಾಟು ಮಾಡಿದ ಲಕ್ಷಾಂತರ ಉದ್ಯಮಿಗಳು ಮತ್ತು ವಹಿವಾಟುದಾರರಿಗೆ ಲಕ್ಷಾಂತರ ಕೋಟಿ ರೂ. ವಂಚನೆ ಎಸಗಲಾಗಿದೆ ಎಂಬುದು ಈಗ ತಾನೆ ಬೆಳಕಿಗೆ ಬರುತ್ತಿದೆ.
ಅಷ್ಟಕ್ಕೂ ಆನಂದ್ ಸುಬ್ರಮಣಿಯನ್ ನೇ ಯೋಗಿ ಎಂಬುದಕ್ಕೆ ಸಿಬಿಐಗೆ ಸದ್ಯಕ್ಕೆ ಸಿಕ್ಕಿರುವ ಪ್ರಮುಖ ಸಾಕ್ಷಿ, ‘ರುಗ್ ಯಜುರ್ ಸಾಮ’ ಹೆಸರಿನ ಯೂಸರ್ ನೇಮ್ ಹೊಂದಿದ್ದ ಇಮೇಲ್ ಐಡಿಯನ್ನು ನಿರ್ಮಿಸಿದ್ದು ಸ್ವತಃ ಆನಂದ್ ನೇ ಎಂಬುದು. ಆನಂದ್ ತನ್ನದೇ ಕಚೇರಿಯ ಲ್ಯಾಪ್ ಟಾಪ್ ಬಳಸಿ ಯೋಗಿ ಹೆಸರಿನ ಆ ನಕಲಿ ಐಡಿ ಸೃಷ್ಟಿಸಿದ್ದೇ ಅಲ್ಲದೆ, ಆ ಐಡಿಯಿಂದ ಚಿತ್ರಾಗೆ ತನ್ನ ನೇಮಕಾತಿ, ಪ್ರಮೋಷನ್, ವೇತನ ಹೆಚ್ಚಳ ಸೇರಿದಂತೆ ಹಲವು ವಿಷಯಗಳ ಕುರಿತು ಸಲಹೆ ನೀಡಿ ಇಮೇಲ್ ಮಾಡಿದ್ದ. ಮತ್ತು ಅಂತಹ ಕೆಲವು ಇ ಮೇಲ್ ಗಳನ್ನು ತನ್ನ ಅಧಿಕೃತ ಖಾಸಗಿ ಇಮೇಲ್ ಗೂ ಕಳಿಸಿದ್ದ! ಜೊತೆಗೆ ಕಚೇರಿಯ ಇತರೆ ಹಿರಿಯ ಅಧಿಕಾರಿಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರ ವರ್ತನೆ, ಕಾರ್ಯಕ್ಷಮತೆ, ವ್ಯಕ್ತಿತ್ವದ ಕುರಿತು ಅಂತಹ ಇಮೇಲ್ ಗಳಲ್ಲಿ ನಿಖರವಾಗಿ ಪ್ರಸ್ತಾಪಿಸಲಾಗಿತ್ತು. ಆ ಎಲ್ಲಾ ಹಿನ್ನೆಲೆಯಲ್ಲಿ ಚಿತ್ರಾ ಹೇಳುತ್ತಿದ್ದ ಆ ಯೋಗಿ ಇನ್ನಾರೂ ಅಲ್ಲ; ಆಕೆಯ ‘ಪ್ರಿಯಕರ’ ಆನಂದ್ ಸುಬ್ರಮಣಿಯನ್ ಎಂದು ಸಿಬಿಐ (CBI) ನಿರ್ಧಾರಕ್ಕೆ ಬಂದಿದೆ.
ಸದ್ಯಕ್ಕೆ ಈ ಹಗರಣದ ಕುರಿತು ಮತ್ತು ಯೋಗಿ ಮತ್ತು ಆನಂದ್ ಇಬ್ಬರೂ ಒಬ್ಬರೇ ಎಂಬುದರ ಕುರಿತು ಇನ್ನಷ್ಟು ವಿವರಗಳು ತನಿಖೆಯ ಬಳಿಕವೇ ಲಭ್ಯವಾಗಬೇಕಿದೆ. ಆದರೆ, ಸದ್ಯಕ್ಕೆ ಸಿಬಿಐ ಮಾಹಿತಿಯ ಪ್ರಕಾರ ಚಿತ್ರಾ ದೈವಿಕ ಸ್ವರೂಪದ ಯೋಗಿ ಎನ್ನುತ್ತಿದ್ದ ಮತ್ತು ಅದೇ ಹೊತ್ತಿಗೆ ಸ್ಯಾಶಿಲ್ಲೆ ದ್ವೀಪದಲ್ಲಿ ಜಲಕ್ರೀಡೆಗೆ ಹೋಗಿ ಬಂದ ಬಗ್ಗೆ ಇಮೇಲ್ ಸಂಭಾಷಣೆಯಲ್ಲಿ ಉಲ್ಲೇಖವಾಗಿರುವ ಯೋಗಿ ಮಹಾನುಭಾವ ಆನಂದ್ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಈ ನಡುವೆ, ಕೆಲವು ತಜ್ಞರ ಪ್ರಕಾರ ಆನಂದ್ ಹೊರಜಗತ್ತಿಗೆ ಕಾಣುವ ಮುಖ. ವಾಸ್ತವವಾಗಿ ಯೋಗಿಯ ಹೆಸರಿನಲ್ಲಿ ಆನಂದ್ ಮೂಲಕ ಆ ನಕಲಿ ಇಮೇಲ್ (E-Mail)ಖಾತೆ ಬಳಸಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದುದು 2014ಕ್ಕೂ ಮುನ್ನ ಕೇಂದ್ರ ಹಣಕಾಸು ಖಾತೆಯ ಹೊಣೆ ಹೊತ್ತ ಬಿಳಿ ಪಂಚೆಯ ಪ್ರಭಾವಿ ನಾಯಕ ಅಥವಾ ಆತನ ಕೈಕೆಳಗಿನ ಸಚಿವಾಲಯದ ಉನ್ನತ ಅಧಿಕಾರಿಗಳು ಎಂಬ ವಾದವೂ ಒಂದು ವಲಯದಿಂದ ಕೇಳಿಬರುತ್ತಿದೆ.

ಸ್ವತಃ ಪತ್ರಕರ್ತ ಹಾಗೂ ಆರ್ ಎಸ್ ಎಸ್ (RSS) ಥಿಂಕ್ ಟ್ಯಾಂಕ್ ಪ್ರಮುಖ ಎಸ್ ಗುರುಮೂರ್ತಿ ಕೂಡ ಈ ವಾದವನ್ನೇ ಮುಂದಿಟ್ಟಿದ್ದಾರೆ. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಚಿತ್ರಾ ನಡುವಿನ ಆಪ್ತತೆಯನ್ನು ಪ್ರಸ್ತಾಪಿಸಿರುವ ಅವರು, ಇಡೀ ಪ್ರಕರಣದಲ್ಲಿ ಆನಂದ್ ಸುಬ್ರಮಣಿಯನ್ ಕೇವಲ ದಾಳ. ನಿಜವಾದ ಸೂತ್ರಧಾರರು ಅಂದಿನ ಹಣಕಾಸು ಸಚಿವರೇ ಎಂದು ಹೇಳಿದ್ದಾರೆ. ಷೇರುಪೇಟೆ ತಜ್ಞೆ ಸುಚೇತಾ ದಲಾಲ್ (sucheta dalal)ಮತ್ತು ದೇಬಶಿಶ್ ಬಸು ಅವರ ‘ಆಬ್ಸಲ್ಯೂಟ್ ಪವರ್’ ಎಂಬ ಎನ್ ಎಸ್ ಇ ಹಗರಣದ ಕುರಿತ ಕೃತಿಯಲ್ಲೂ ಆ ಬಗ್ಗೆ ಪ್ರಸ್ತಾಪವಿದೆ. ಹಾಗೊಂದು ವೇಳೆ ಅವರ ವಾದ ನಿಜವಾದರೆ, ಪಿ ಚಿದಂಬರಂ (P Chidambaram) ಮತ್ತು ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಸವಾಲು ಎದುರಾಗಲಿದೆ.
ಜೊತೆಗೆ ಸ್ವತಃ ಸೆಬಿ ಮತ್ತು ಎನ್ ಎಸ್ ಇಗಳು ಈವರೆಗೆ ಕಣ್ಣೊರೆಸುವ ತನಿಖೆ ನಡೆಸಿ ತಿಪ್ಪೆ ಸಾರಿಸಿದ್ದ ಲಕ್ಷಾಂತರ ಕೋಟಿ ರೂ. ಮೊತ್ತದ ಭಾರೀ ಅಕ್ರಮ ಬೆಳಕಿಗೆ ಬರಲಿದೆ. ಆ ಅಕ್ರಮದ ಬಿರುಗಾಳಿಗೆ ಭಾರತೀಯ ಷೇರುಪೇಟೆಯಲ್ಲಿ (stock market) ಆಗಬಹುದಾದ ತಲ್ಲಣ ಮತ್ತು ಅದು ಅಂತಿಮವಾಗಿ ದೇಶದ ಉದ್ಯಮ ಮತ್ತು ಆರ್ಥಿಕತೆಗೆ ಕೊಡುವ ಪೆಟ್ಟು ಊಹಾತೀತ!