ಮೊದಲಿಗಿಂತಲೂ ಇತ್ತೀಚೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ವರ್ಗಾವಣೆ ಮಾಡಿಸಲು ಏಜೆಂಟರು ಶುರುವಾಗಿದ್ದಾರೆ ಹಾಗಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ನೇಮಕಾತಿ ಮತ್ತು ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿಯನ್ನು ಅಳವಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನಮಲ್ಲಿ ವರ್ಗಾವಣೆಗೆ ಏಜೆಂಟ್ಗಳು ಶುರುವಾಗಿದ್ದಾರೆ. ಯಾರಿಗೆ ಯಾರು ಹತ್ತಿರ ಇದ್ದಾರೆ ಎಂಬುವವರನ್ನೇ ಹುಡುಕುತ್ತಾರೆ. ಅವರ ಮೂಲಕ ವರ್ಗಾವಣೆ ಮಾಡಿಸಲು ಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಬೇಕಾದವರು ಏಜೆಂಟರಿಗೆ ಮತ್ತು ಪ್ರಭಾವಿಗಳಿಗೆ ಹಣ ನೀಡುವ ಪರಿಸ್ಥಿತಿ ಬರುತ್ತದೆ. ನಾನು 40 ವರ್ಷ ಶಾಸಕನಾಗಿ, ಸಚಿವನಾಗಿ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಮೊದಲೆಲ್ಲಾ ಅಷ್ಟೊಂದು ಭ್ರಷ್ಟಾಚಾರ ಇರಲಿಲ್ಲ. ಈಗ ಹೆಚ್ಚಾಗುತ್ತಿದೆ ಎಂದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯರು ಸೇರಿದಂತೆ 5700 ಹುದ್ದೆಗಳಿಗೆ ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯಬಾರದು. ಯಾರು ಕೂಡ ಶಿಫಾರಸು ಮಾಡಿಸಲು ಬೇರೆಯವರ ಬಳಿ ಹೋಗಬೇಡಿ ಎಂದು ಸಿಎಂ ಹೇಳಿದ್ದಾರೆ.






