ಬೆಂಗಳೂರು:ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಶನಿವಾರ ಬೆಂಗಳೂರು ವಿಭಾಗೀಯ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನೈಋತ್ಯ ರೈಲ್ವೇ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿರುವ ರೈಲ್ವೇ ಇಲಾಖೆ, ನೈಋತ್ಯ ರೈಲ್ವೇ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಮುಂದೂಡಿ, ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ. ಇದಕ್ಕೆ ಸಂಬಂಧಿಸಿದ ಆದೇಶ ಶೀಘ್ರದಲ್ಲಿ ಹೊರಬರಲಿದೆ ಎಂದರು.
ರಾಜ್ಯದಲ್ಲಿನ 59 ರೈಲು ನಿಲ್ದಾಣದಲ್ಲಿ 54ನ್ನು ಮೇಲ್ದಜೇìಗೇರಿಸುವ ಕಾಮಗಾರಿ 2025-26ರೊಳಗೆ ಪೂರ್ಣಗೊಳ್ಳಲಿದೆ. ಉಳಿದ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುತ್ತದೆ. ಇನ್ನು ಕೋವಿಡ್ ಸಂದರ್ಭ ಕಡಿತಗೊಳಿಸಲಾದ ರೈಲುಗಳ ಮರು ಚಾಲನೆ ಹಾಗೂ ಹೆಚ್ಚುವರಿ ಬೋಗಿ ಸೇರ್ಪಡೆ ಕೆಲಸಗಳಾಗುತ್ತಿವೆ.
ರೈಲ್ವೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ಚಿಂತನೆ ಇದೆ. ಅದಕ್ಕಾಗಿ ಕೇಂದ್ರ ಸಚಿವರು ತಾಂತ್ರಿಕ ತಜ್ಞರ ಸಮಿತಿ ರಚಿಸಿದ್ದು, ಅವರು ಜಗತ್ತಿನಾದ್ಯಂತ ಸಂಚರಿಸಿ, ಒಂದೂವರೆ ತಿಂಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದರು.