ಹಸಿವು ಕಾರಣದಿಂದ ಉಂಟಾಗುವ ಸಾವುಗಳ ಬಗ್ಗೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ.
ಮಂಗಳವಾರ ನಡೆದ ಕೋರ್ಟ್ ಕಲಾಪದಲ್ಲಿ, ಒಂದು ರಾಜ್ಯವೂ ಹಸಿವಿನಿಂದ ಸಾವು ಸಂಭವಿಸಿದ ಬಗ್ಗೆ ವರದಿ ಮಾಡಿಲ್ಲ ಎಂದು ಕೇಂದ್ರವು ಸಲ್ಲಿಸಿದ ಅಫಿಡವಿಟ್ ಉಲ್ಲೇಖಿಸಿ, ಹಸಿವಿನಿಂದಾಗಿ ಉಂಟಾದ ಸಾವುಗಳ ಕುರಿತು ಹಾಗೂ ಹಸಿವು ನಿರ್ಮೂಲನೆಗೆ ಪರಿಣಾಮಕಾರಿ ಯೋಜನೆ ಕಾರ್ಯಗತಗೊಳಿಸುವ ಕುರಿತು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ನು ಕೇಳಿದೆ.
ಈ ವೇಳೆ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಹಾಗೂ 2015 ರ ಆರೋಗ್ಯ ಅಂಕಿಅಂಶಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ಪರ ವಕೀಲರು ಉತ್ತರಿಸಿದ್ದಾರೆ.
ಕೇಂದ್ರದ ಉತ್ತರದಿಂದ ಸಮಾಧಾನಗೊಳ್ಳದ ಸಿಜೆಐ ರಮಣ, ನ್ಯಾಯಮೂರ್ತಿಗಳಾದ A.S. ಬೋಪಣ್ಣ ಮತ್ತು ಹಿಮಾ ಕೊಹ್ಲಿ ಇರುವ ತ್ರಿಸದಸ್ಯ ಪೀಠವು, “2015-16 ದತ್ತಾಂಶಗಳ ಮೊರೆ ಏಕೆ ಹೋಗುತ್ತಿದ್ದೀರ? ಆ ಅಂಕಿ ಅಂಶಗಳನ್ನು ಇಟ್ಟುಕೊಂಡು ಹಸಿವಿನಿಂದಾಗುವ ಸಾವು ಸಂಭವಿಸುತ್ತಿಲ್ಲ ಎಂದು ಹೇಳುತ್ತೀರಾ? ಅದಕ್ಕಾಗಿ ಆ ದಿನಪತ್ರಿಕೆಯ ವರದಿಯನ್ನು ನೋಡುತ್ತೀರ?” ಎಂದು ತರಾಟೆಗೆ ತೆಗೆದುಕೊಂಡಿದೆ.
“ದೇಶದಲ್ಲಿ ಹಸಿವಿನಿಂದಾಗಿ ಸಾವು ಸಂಭವಿಸಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದೇ? ಹಸಿವಿನಿಂದ ಸಾಯುವವರ ಇತ್ತೀಚಿನ ಮಾಹಿತಿ ನಿಮ್ಮ ಅಧಿಕಾರಿಗಳಿಗೆ ಇದೆಯೇ ಎಂಬುದು ನಮ್ಮ ಪ್ರಶ್ನೆ… ಹಸಿವಿನಿಂದ ಸಾವು ಸಂಭವಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುವ ಯಾವುದೇ ಸಮೀಕ್ಷೆಯ ವರದಿ ಇದೆಯೇ? ನಮಗೆ ಕೆಲವು ಅಂಕಿಅಂಶವನ್ನು ನೀಡಿ. ಮಾಹಿತಿಯನ್ನು ಒದಗಿಸುವಂತೆ ನಿಮ್ಮ ಅಧಿಕಾರಿಗಳಿಗೆ ಕೇಳಿ” ಎಂದು ನ್ಯಾಯಪೀಠವು ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಪ್ರಶ್ನಿಸಿದೆ. ಹಸಿವಿನಿಂದಾಗಿ ಯಾವುದೇ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವೇಣುಗೋಪಾಲ್ ಉತ್ತರಿಸಿದ್ದಾರೆ.
ಅರ್ಜಿದಾರರ ಪರ ವಕೀಲೆ ಅಶಿಮಾ ಮಂಡ್ಲಾ ಮಧ್ಯಪ್ರವೇಶಿಸಿ, ಹಸಿವಿನಿಂದ ಉಂಟಾಗುವ ಸಾವುಗಳನ್ನು ಶವಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ. ಹಸಿವಿನಿಂದ ಸಾಯುವವರನ್ನು ಗುರುತಿಸಲು ಅಧಿಕಾರಿಗಳು ಜಾಗೃತ ಪ್ರಯತ್ನವನ್ನು ಮಾಡಬೇಕು ಅಲ್ಲದಿದ್ದರೆ ಅವರು ಸರ್ಕಾರದ ಗಮನಕ್ಕೆ ಬರಲಾರರು ಎಂದು ಹೇಳಿದ್ದಾರೆ.
ಸಿಜೆಐ ರಮಣ ಮಾತನಾಡಿ, ಬೀದಿಬದಿಗಳಲ್ಲಿರುವ ಬಡವರ ಹಸಿವು ನೀಗಿಸುವ ಪ್ರಯತ್ನವಾಗಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಉಲ್ಲೇಖಿಸಿರುವ ನ್ಯಾಯಾಲಯ, ರಾಜ್ಯಗಳ ಎಲ್ಲೆಡೆ ಸಮುದಾಯ ಅಡುಗೆಮನೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಮಾದರಿ ಯೋಜನೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಮುದಾಯ ಅಡುಗೆಮನೆಗಳ ಸ್ಥಾಪನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾದರಿ ಯೋಜನೆ ರೂಪಿಸಬೇಕು. ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ವೇಳೇ, ರಾಜ್ಯಗಳಿಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ಪೂರೈಸುವ ಕುರಿತು ಕೇಂದ್ರ ಸರ್ಕಾರ ಪರಿಶೀಲಿಸಲಿ. ಆಹಾರ ಧಾನ್ಯಗಳ ಸಾಗಣೆಯ ಜವಾಬ್ಧಾರಿಯನ್ನು ರಾಜ್ಯ ಸರ್ಕಾರಗಳೇ ವಹಿಸಕೊಳ್ಳಲಿ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ನಮ್ಮ ಸರ್ಕಾರವು ಹಸಿವು ಸಂಬಂಧಿತ 131 ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದಿದ್ದಾರೆ.
ಅಪೌಷ್ಟಿಕತೆ ಇದೆ ಎಂಬುದರ ಬಗ್ಗೆಯಗಲಿ, ಸಮುದಾಯ ಅಡುಗೆಮನೆ ಬೇಕೆಂಬುದರ ಬಗ್ಗೆಯಾಗಲಿ ನಮಗೆ ತಕರಾರಿಲ್ಲ, ಆದರೆ, ಹಣಕಾಸಿನ ಸಮಸ್ಯೆ ಇದೆ ಎಂದು ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರವು ಈಗಾಗಲೇ ಹಸಿವು ಸಂಬಂಧಿತ 131 ಯೋಜನೆಗಳಿಗೆ ಅನುದಾನ ನೀಡುತ್ತಿದೆ. ಹೀಗಾಗಿ, ದೇಶದಾದ್ಯಂತ ಸಮುದಾಯ ಅಡುಗೆಮನೆಗಳ ಯೋಜನೆ ಅನುಷ್ಠಾನಗೊಳಿಸಲು ಹಣಕಾಸಿನ ಕೊರತೆಯಾಗಲಿದೆʼ ಎಂದು ಅವರು ಹೇಳಿದ್ದಾರೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೆಡೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಕ್ಯಾಂಟೀನ್ಗಳನ್ನು ಆರಂಭಿಸಬೇಕೆಂದು ಕೋರಿ ಅರುಣ್ ಧವನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲೆ ಅಸೀಮಾ ಮಾಂಡ್ಲಾ, ‘ದೇಶದಾದ್ಯಂತ ಸಮುದಾಯ ಅಡುಗೆಮನೆಗಳ ಸ್ಥಾಪಿಸುವ ಯೋಜನೆ ರೂಪಿಸಲು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕುʼಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಅಪೌಷ್ಟಿಕತೆ ಹಾಗೂ ದೇಶದಾದ್ಯಂತ ಹಸಿವಿನಿಂದಾಗಿ ಉಂಟಾಗುವ ಸಾವುಗಳ ಕುರಿತು ಎಲ್ಲ ರಾಜ್ಯಗಳು ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಬೇಕೆಂದೂ ನ್ಯಾಯಾಲಯ ಆದೇಶಿಸಿದೆ.