ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ಐಟಿ ತಜ್ಞರು ಹಾಗೂ ನವೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಕಳೆದ ಕೆಲ ದಿನಗಳಲ್ಲಿ ಸುರಿದ ಮಳೆಗೆ ಇವರ ಈ ಆತಂಕ ನಿಜವಾಗುತ್ತಿದೆಯೋನೊ ಎಂದು ಅನಿಸತೊಡಗಿದೆ. ಬೇಸಿಗೆ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದೇ ಇದಕ್ಕೆ ಕಾರಣ.
ಬೆಂಗಳೂರಿನಲ್ಲಿ ಹಳ್ಳ ಹಿಡಿದಿದೆ ಮೂಲಭೂತ ಸೌಕರ್ಯ ವ್ಯವಸ್ಥೆಗಳು !
ಬೇಸಿಗೆ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ಕೇವಲ ನಾಲ್ಕು ದಿನವಷ್ಟೇ ಮಳೆ ಸುರಿದಿತ್ತಾದರೂ, ನಗರದಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗಿತ್ತು. ಮನೆಗಳಿಗೆ ನೀರು ನುಗ್ಗಿ ಅನಾಹುತ, ಮರಗಳು ಧರೆಗುರುಳಿ ಆರಂಕದ ಛಾಯೆ ಮೂಡಿಸಿತ್ತು. ಇದಕ್ಕೂ ಮೊದಲು ವಿಶ್ವದಲ್ಲೇ ಐಟಿ ಪಾರ್ಕ್ ಎಂದು ಖ್ಯಾತಿ ಪಡೆದಿರುವ ನಗರದ ಐಟಿ ಬಿಟಿ ಉದ್ಯೋಗಿಗಳು, ತಜ್ಞರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನವೋದ್ಯಮಿಗಳು ತಮ್ಮ ಕಷ್ಟ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದರು. ಇದೀಗ ಮಳೆಯ ಹೊಡೆತಕ್ಕೆ ಇವರ ಆತಂಕ, ಸಂಕಷ್ಟವೆಲ್ಲಾ ವಾಸ್ತವ ರೂಪ ಪಡೆದುಕೊಂಡಂತಿದೆ.
ಬೇಸಿಗೆ ಮಳೆಗೆ ಬೆಂಗಳೂರಿನಲ್ಲಾದ ಅನಾಹುತಗಳೆಷ್ಟು ಗೊತ್ತಾ.!?
ಎರಡು ದಿನಗಳಿಂದ ಬಿಡುವು ಕೊಟ್ಟಿರುವ ಮಳೆ ಅದಕ್ಕೂ ಮೊದಲು ನಾಲ್ಕು ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದಿತ್ತು. ನಗರದ ಹಲವು ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ನಾಲ್ಕೇ ದಿನದ ಮಳೆಗೆ ಬೆಂಗಳೂರಿನ 37 ವಾರ್ಡ್ ಗಳಲ್ಲಿ ಜನ ಜೀವನ ತತ್ತರಿಸಿ ಹೋಗಿತ್ತು. ಕಾಮಾಕ್ಯ, ಉತ್ತರಹಳ್ಳಿ, ಚಿಕ್ಕಪೇಟೆ, ಬೊಮ್ಮನಹಳ್ಳಿ, ಯಲಹಂಕ ಸೇರಿದಂತೆ ಹಲವೆಡೆ ಪರಿಸ್ಥಿತಿ ಬುಡಮೇಲಾಗಿತ್ತು. ಈ ಬೇಸಿಗೆ ಮಳೆಗೆ ನಗರದಲ್ಲಿ 50ಕ್ಕೂ ಅಧಿಕ ಬೃಹತ್ ಮರಗಳು ನೆಲಕ್ಕಚ್ಚಿವೆ. 400ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಶಿಥಿಲಗೊಂಡಿದೆ. 35ಕ್ಕೂ ಅಧಿಕ ಮೋರಿ ಕಟ್ಟೆ ಹೊಡೆದು ಬಡಾವಣೆಗಳಿಗೆ ನೀರು ನುಗ್ಗಿ ರಸ್ತೆಗಳೆಲ್ಲಾ ಕೆರೆಯಂತಾಗಿತ್ತು. ಇದು ಮೂಲಭೂತ ಸೌಕರ್ಯಗಳ ಬಗ್ಗೆ ಐಟಿ ತಜ್ಞರು ತೋಡಿಕೊಂಡ ಆತಂಕ ನಿಜವಾಗ್ತಿದ್ಯಾ ಎನ್ನುವ ಪ್ರಶ್ನೆಗೆ ಕನ್ನಡಿಯಂತಿದೆ.
ಈ ಬಗ್ಗೆ ಆತಂಕ ತೋಡಿಕೊಂಡ ನವೋದ್ಯಮಿ ಅದ್ವಿತ್, ನಾಲ್ಕೈದು ದಿನದ ಮಳೆಗೆ ಬೆಂಗಳೂರು ನೀರು ಮಯವಾಗಿ ಹೋಗಿದೆ. ಬೆಂಗಳೂರು ಅಭಿವೃದ್ಧಿಗೊಂಡಿದೆ ನಿಜ. ಆದರೆ ನಿರ್ವಹಣೆ ಮಾಡದಿದ್ದರೆ ಸಮಸ್ಯೆ ಎದುರಾಗಲಿದೆ. ಈಗಾಗಲೇ ಅಕ್ಕಪಕ್ಕದ ರಾಜ್ಯಗಳು ನಮ್ಮಂಥಾ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ರೆಡ್ ಕಾರ್ಪೆಟ್ ಹಾಕ್ತಿದ್ದಾರೆ. ಟ್ರಾಫಿಕ್ ಕಳಂಕ ಹೊತ್ತುಕೊಂಡಿರುವ ಬೆಂಗಳೂರಲ್ಲಿ ಮಳೆ ಬಂದರೆ ರಸ್ತೆ ಕೆರೆಯಾಗ್ತಿದೆ. ಸರ್ಕಾರ ಆದಷ್ಟು ಇಂಥಾ ಸಮಸ್ಯೆಯಿಂದ ಮುಕ್ತಿ ಕೊಡಿಸಬೇಕು ಎಂದಿದ್ದಾರೆ.
ವಿಶ್ವ ಮಟ್ಟದಲ್ಲಿ ಐಟಿಬಿಟಿ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನ ಮೂಲ ಸೌಕರ್ಯಗಳ ಅಸಲಿಯತ್ತು ಒಂದೇ ಮಳೆಗೆ ಬಟಾ ಬಯಲಾಗುತ್ತಿದೆ. ಮುಂದೆ ಮಳೆಗಾಲ ಎದುರಾಗಲಿದೆ, ನೀರಿನಲ್ಲಿ ತೇಲಾಡುವಂತೆ ಆಗುತ್ತಾ ಗಾರ್ಡನ್ ಸಿಟಿ ಎಂಬ ಪ್ರಶ್ನೆ ಸದ್ಯದ್ದು. ಹೀಗೆ ನವೋದ್ಯಮಿಗಳು, ಐಟಿ ತಜ್ಞರು ಗಮನ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರನ್ನು ಕಾಪಾಡುವ ಜವಾಬ್ದಾರಿ ಬಿಬಿಎಂಪಿ ಹಾಗೂ ಸರ್ಕಾರದ ಮೇಲಿದೆ. ಅದನ್ನು ಸೂಕ್ತವಾಗಿ ಅವರು ನಿಭಾಯಿಸಲಿ ಎಂಬುವುದು ಸಾರ್ವಜನಿಕರ ಮಾತು.