ಕೊನೆಯ ಓವರ್ ನಲ್ಲಿ ನಡೆದ ನೋಬಾಲ್ ವಿವಾದದ ನಂತರ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ 15 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 20 ಓವರ್ ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಸಿಡಿಸಿದ ಶತಕದ ನೆರವಿನಿಂದ 2 ವಿಕೆಟ್ ಗೆ 222 ರನ್ ಗಳಿಸಿತು. ಬೃಹತ್ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಕೊನೆಯ ಓವರ್ ನಲ್ಲಿ 36 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ಪೊವೆಲ್ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಆದರೆ ಮೂರನೇ ಎಸೆತದಲ್ಲಿ ಫುಲ್ ಟಾಸ್ ನೋಬಾಲ್ ಆಗಿದ್ದರಿಂದ ನೋಬಾಲ್ ಘೋಷಿಸಬೇಕು ಎಂದು ಡೆಲ್ಲಿ ಆಟಗಾರರು ಪಟ್ಟು ಹಿಡಿದರು. ಆದರೆ ಇದಕ್ಕೆ ಅಂಪೈರ್ ಒಪ್ಪಲಿಲ್ಲ.
ಕೊನೆಯ ಹೈಡ್ರಾಮ ನಂತರ ಆಟ ಮುಂದುವರಿಯಿತು. ಆದರೆ ನಂತರ ಎರಡು ಎಸೆತಗಳಲ್ಲಿ 2 ರನ್ ಗಳಿಸಿದ ಪೊವೆಲ್ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ಪರ ಬಟ್ಲರ್ 65 ಎಸೆತಗಳಲ್ಲಿ 9 ಬೌಂಡರಿ ಮತ್ತು 9 ಸಿಕ್ಸರ್ ಸೇರಿದ 116 ರನ್ ಬಾರಿಸಿದರು. ಇದು ಈ ಋತುವಿನಲ್ಲಿ ಗಳಿಸಿದ ಮೂರನೇ ಶತಕವಾಗಿದೆ. ಬಟ್ಲರ್ ಮತ್ತು ದೇವದತ್ ಪಡಿಕಲ್ ಮೊದಲ ವಿಕೆಟ್ ಗೆ 155 ರನ್ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ನೀಡಿದರು. ಪಡಿಕಲ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 54 ರನ್ ಗಳಿಸಿದರೆ, ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ (46) ತಂಡದ ಮೊತ್ತ ಗಳಿಸಲು ನೆರವಾದರು.




