ಮುಂಬೈ: ಬ್ಯಾಂಕ್ ಖಾತೆ ಇಲ್ಲದಿದ್ದರೂ ಅಥವಾ ಸೂಕ್ತ ದಾಖಲೆಗಳಿಲ್ಲದಿದ್ದರೂ ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡುವ ಗ್ರಾಹಕರು (Walk-in customers) ನಗದು ಪಾವತಿ ಸೇವೆಯನ್ನು ಬಳಸಿಕೊಂಡು ರಾಷ್ಟ್ರೀಯ ವಿದ್ಯುನ್ಮಾನ ಹಣ ವರ್ಗಾವಣೆ (NEFT) ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ 50,000 ರೂ. ವರೆಗೆ ಹಣವನ್ನು ಜಮಾ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಬುಧವಾರ ತಿಳಿಸಿದೆ. ದೇಶೀಯ ಹಣ ವರ್ಗಾವಣೆ (Domestic Money Transfer – DMT) ನಿಯಮಗಳನ್ನು ಕ್ರೋಢೀಕರಿಸುವ ಹಾಗೂ ಸರಳೀಕರಿಸುವ ಉದ್ದೇಶದಿಂದ ಕೇಂದ್ರ ಬ್ಯಾಂಕ್ 2026ನೇ ಸಾಲಿನ ಹೊಸ ನಿರ್ದೇಶನಗಳನ್ನು ಹೊರಡಿಸಿದೆ.

ವಲಸೆ ಕಾರ್ಮಿಕರಿಗೆ ಅನುಕೂಲ
ಗುರುತಿನ ಚೀಟಿ ಅಥವಾ ವಿಳಾಸದ ಪುರಾವೆಗಳಿಲ್ಲದ ಕಾರಣ ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗಿರುವ ವಲಸೆ ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನರಿಗೆ ಸಣ್ಣ ಮೊತ್ತದ ಹಣವನ್ನು ಅಧಿಕೃತ ವಾಹಿನಿಗಳ ಮೂಲಕ ಕಳುಹಿಸಲು ಅನುಕೂಲವಾಗುವಂತೆ ಈ ದೇಶೀಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಬುಧವಾರದಿಂದಲೇ ಜಾರಿಗೆ ಬಂದಿರುವ ಹೊಸ ನಿರ್ದೇಶನಗಳ ಪ್ರಕಾರ, ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಗ್ರಾಹಕರು ಸುಲಭವಾಗಿ ಹಣ ವರ್ಗಾಯಿಸಬಹುದಾಗಿದೆ.
ಬಿಸಿನೆಸ್ ಕರೆಸ್ಪಾಂಡೆಂಟ್ ಮತ್ತು ಎಟಿಎಂ ಮೂಲಕ ವರ್ಗಾವಣೆ
ಗ್ರಾಹಕರು ಬಿಸಿನೆಸ್ ಕರೆಸ್ಪಾಂಡೆಂಟ್ (ಬ್ಯಾಂಕ್ ಮಿತ್ರರು) ಮತ್ತು ಎಟಿಎಂಗಳನ್ನು ಬಳಸಿಕೊಂಡು ಕೂಡ ಫಲಾನುಭವಿಯ ಖಾತೆಗೆ ಹಣವನ್ನು ಕಳುಹಿಸಲು ಬ್ಯಾಂಕುಗಳು ಅವಕಾಶ ಕಲ್ಪಿಸಬೇಕು. ಆದರೆ, ಈ ವಿಧಾನದಲ್ಲಿ ಪ್ರತಿ ವಹಿವಾಟಿಗೆ ಗರಿಷ್ಠ 5,000 ರೂ. ಮಿತಿಯಿರುತ್ತದೆ ಹಾಗೂ ಪ್ರತಿ ಕಳುಹಿಸುವವರ ಮೇಲೆ ತಿಂಗಳಿಗೆ ಗರಿಷ್ಠ 25,000 ರೂ. ಮಿತಿಯನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ನಗದು ಪಾವತಿ ಸೇವೆ (ಕ್ಯಾಶ್ ಪೇ-ಔಟ್)
ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಯಿಂದ ಬ್ಯಾಂಕ್ ಖಾತೆ ಇಲ್ಲದ ವ್ಯಕ್ತಿಗಳಿಗೆ ಎಟಿಎಂ, ಬಿಸಿನೆಸ್ ಕರೆಸ್ಪಾಂಡೆಂಟ್ ಅಥವಾ ಇತರ ಅಧಿಕೃತ ಪಾವತಿ ವಾಹಿನಿಗಳ ಮೂಲಕ ನಗದು ರೂಪದಲ್ಲಿ ಹಣ ತಲುಪಿಸುವ ವ್ಯವಸ್ಥೆಗೂ ಆರ್‌ಬಿಐ ಅವಕಾಶ ನೀಡಿದೆ. ಈ ನಗದು ಪಾವತಿ ಸೇವೆಯ ಅಡಿಯಲ್ಲಿ ಪ್ರತಿ ವಹಿವಾಟಿಗೆ ಗರಿಷ್ಠ 10,000 ರೂ. ವರ್ಗಾಯಿಸಬಹುದು ಮತ್ತು ಫಲಾನುಭವಿಯು ತಿಂಗಳಿಗೆ ಗರಿಷ್ಠ 25,000 ರೂ. ಪಡೆಯಲು ಮಾತ್ರ ಅವಕಾಶವಿರುತ್ತದೆ. ಕಾರ್ಡ್‌ನಿಂದ ಕಾರ್ಡ್‌ಗೆ ಮಾಡುವ ವರ್ಗಾವಣೆಗಳನ್ನು ಈ ನಿರ್ದೇಶನಗಳ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಭದ್ರತೆ ಮತ್ತು ನಿಗಾ ವ್ಯವಸ್ಥೆ
ಹೊಸ ನಿಯಮಗಳ ಅಡಿಯಲ್ಲಿ ಒದಗಿಸಲಾಗುವ ಸೌಲಭ್ಯಗಳನ್ನು ಬಳಸಿಕೊಂಡು ಖಾತೆಗಳಿಗೆ ಹಣ ಜಮೆಯಾಗುವ ಕುರಿತು ಗ್ರಾಹಕರಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸುವುದು ಸೇರಿದಂತೆ ಸದೃಢವಾದ ಭದ್ರತಾ ವ್ಯವಸ್ಥೆಯನ್ನು ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು. ಯಾವುದೇ ಖಾತೆ ಅಥವಾ ಖಾತೆಗಳ ಗುಂಪಿನಲ್ಲಿ ಹಠಾತ್ ಹಾಗೂ ಅಸಹಜ ಪ್ರಮಾಣದಲ್ಲಿ ಹಣ ಜಮೆಯಾದರೆ ತಕ್ಷಣವೇ ತನಿಖೆ ನಡೆಸಬೇಕು ಮತ್ತು ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸೂಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಎಲ್ಲ ಹಣ ವರ್ಗಾವಣೆ ಪ್ರಕ್ರಿಯೆಗಳು ಬಹುತೇಕ ನೈಜ ಸಮಯದಲ್ಲಿ (real-time) ಪೂರ್ಣಗೊಳ್ಳುವಂತೆ ನಿರೀಕ್ಷಿಸಲಾಗಿದೆ.






