ನವದೆಹಲಿ: ಗಾಂಧಿ ಕುಟುಂಬದ ಹಿಡಿತದಲ್ಲಿದ್ದ ಉತ್ತರ ಪ್ರದೇಶದ ರಾಯ್ ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳದ್ದೇ ಸದ್ಯ ಸದ್ದು ಎನ್ನುವಂತಾಗಿದ್ದು, ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ.

ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಗಾಂಧಿ ಕುಟುಂಬಸ್ಥರು ಈ ಕ್ಷೇತ್ರಗಳಿಂದ ದೂರವಾಗುವ ಮಾತು ಕೇಳಿ ಬರುತ್ತಿತ್ತು. ಈಗ ಮತ್ತೆ ಗಾಂಧಿ ಕುಟುಂಬ ಸದಸ್ಯರು ತಮ್ಮ ಕುಟುಂಬದ ಹಿಡಿತದಲ್ಲಿದ್ದ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಕಳೆದ ಬಾರಿ ಸೋಲುತ್ತಿದ್ದಂತೆ ಮತ್ತೆ ಅಲ್ಲಿ ಸ್ಪರ್ಧಿಸಲ್ಲ ಎನ್ನಲಾಗಿತ್ತು. ಈಗಾಗಲೇ ಕಳೆದ ಬಾರಿ ಗೆದ್ದಿದ್ದ ವಯನಾಡು ಕ್ಷೇತ್ರದಿಂದಲೇ ರಾಹುಲ್ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಅಮೇಥಿಯಿಂದಲೂ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಈಗ ದಟ್ಟವಾಗುತ್ತಿದೆ. ಇನ್ನೊಂದೆಡೆ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಅಲ್ಲಿಂದ ಸ್ಪರ್ಧಿಸುತ್ತಿಲ್ಲ. ತಾಯಿಯ ಕ್ಷೇತ್ರದಲ್ಲಿ ಮಗಳು ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.
ಈಗಾಗಲೇ ಅಮೇಥಿ ಮತ್ತು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ (Priyanka Gandhi) ಹಾಗೂ ಅಮೇಥಿಯಿಂದ ರಾಬರ್ಟ್ ವಾದ್ರಾ ಸ್ಪರ್ಧಿಸುವ ವಿಚಾರ ಕೇಳಿ ಬಂದಿದ್ದವು. ಆದರೆ, ಈಗ ರಾಹುಲ್ ಸ್ಪರ್ಧೆಗೆ ಪಕ್ಷದಲ್ಲಿ ಒಲವು ಹೆಚ್ಚಾಗಿದೆ ಎನ್ನಲಾಗಿದೆ. 1960 ರಿಂದ ರಾಯ್ ಬರೇಲಿ ಕ್ಷೇತ್ರ (Raebareli Constituency) ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಇಲ್ಲಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಮೇಥಿಯಲ್ಲಿ ಕಳೆದ ಬಾರಿ ರಾಹುಲ್ ಗಾಂಧಿ ಸೋತಿದ್ದರು.