ಯುವ ಮಹಿಳೆಯರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಲು ಅವಕಾಶ ನೀಡಬೇಕೆಂದು ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯದ ಆದೇಶವು ರಕ್ಷಣಾ ದಳಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಸಮಾಜದ ಪಿತೃಪ್ರಧಾನ ಮನಸ್ಥಿತಿಯನ್ನು ಧಿಕ್ಕರಿಸುತ್ತಾ ದಳಗಳಲ್ಲಿ ಮಹಿಳೆಯರ ಸಮಾನ ಸ್ಥಾನವನ್ನು ಗುರುತಿಸುವುದು ಸ್ವಾಗತಾರ್ಹ.
ಆದರೆ, ಯಾವುದೇ ಬದಲಾವಣೆ ಜಾರಿಗೆ ಬಂದು ವ್ಯವಸ್ಥೆಯ ಒಪ್ಪಿಗೆಗೆ ಒಳಗಾಗಬೇಕಾದರೆ ಒಂದಿಷ್ಟು ಸಮಯ ಹಿಡಿಯುತ್ತದೆ. ಇದಕ್ಕೆ ಉದಾಹರಣೆಯೊಂದನ್ನು ನೀಡುತ್ತೇನೆ. ಆರ್ಮಿ ಮೆಡಿಕಲ್ ಕಾರ್ಪ್, ಆರ್ಮಿ ಡೆಂಟಲ್ ಕಾರ್ಪ್ ಮತ್ತು ಮಿಲಿಟರಿ ನರ್ಸಿಂಗ್ ಸರ್ವಿಸ್ ಗಳನ್ನು ಒಳಗೊಂಡ ಆರ್ಮ್ಡ ಫೋರ್ಸಸ್ ಮೆಡಿಕಲ್ ಸರ್ವಿಸಸ್ ನ ಆರಂಭದಿಂದ ಮಹಿಳೆಯರು ಪ್ರಮುಖ ಪಾತ್ರಗಳನ್ನು ವಹಿಸುತ್ತಾ ಬಂದಿದ್ದಾರೆ. 1950 ಮತ್ತು 60ರ ದಶಕಗಳಲ್ಲಿ ಎ.ಎಫ್.ಎಂ.ಎಸ್. ನ ಪರ್ಮನೆಂಟ್ ಕಮಿಷನ್ಡ್ ಲೇಡಿ ಆಫಿಸರ್ ಆಗಿ ನೇಮಕವಾಗುವುದೆಂದರೆ ಹೆಮ್ಮೆಯ ಸಂಗತಿಯಾಗಿತ್ತು. ನನ್ನ ತಾಯಿ ವೈದ್ಯೆಯಾಗಿದ್ದು, ಅವರಲ್ಲಿ ಒಬ್ಬರಾಗಿದ್ದರು. ಆದರೆ ಅವರು ತಮ್ಮ ನಿವೃತ್ತಿಗೂ ಮುನ್ನ ಕುಟುಂಬಕ್ಕೆ ಆದ್ಯತೆ ನೀಡಿ ರಾಜೀನಾಮೆ ನೀಡಿದ್ದರು. ಆ ಕಾಲಘಟ್ಟದಲ್ಲಿ ‘ಸ್ಪೌಸ್ ಪೋಸ್ಟಿಂಗ್’ ಎಂಬ ಪರಿಕಲ್ಪನೆಯೇ ಬಹಳ ವಿರಳ. ಹೀಗಾಗಿ ವಿವಾಹಿತ ದಂಪತಿಗಳನ್ನು ಒಂದೇ ಠಾಣೆಯಲ್ಲಿ ನೇಮಖಾತಿ ಮಾಡಲಾಗುತ್ತಿರಲಿಲ್ಲ.
1994ರಲ್ಲಿ ನಾನು ಮಾಡ್ರಾಸಿನ ಆಫಿಸರ್ಸ್ ಟ್ರೇನಿಂಗ್ ಅಕಾಡೆಮಿಯನ್ನು ಸೇರಿದಾಗ ನನ್ನ ತಾಯಿ ಎದುರಿಸಬೇಕಾದಷ್ಟು ಅಡೆತಡೆಗಳಿರಲಿಲ್ಲ. ನನ್ನ ತಾಯಿಯೇ ನನಗೆ ಆರ್ಮಿಗೆ ಸೇರಲು ಸೂಚಿಸಿದ್ದು. ಅವರ ಸೇವೆಯನ್ನು ಅವರು ಎಷ್ಟು ಗೌರವಿಸುತ್ತಿದ್ದರು ಎಂಬುದನ್ನು ಮತ್ತು ಆರ್ಮಿ ಅವರನ್ನು ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ಇದು ನಿದರ್ಶಿಸುತ್ತದೆ. ನಾನು ಆರ್ಮಿಗೆ ಅರ್ಜಿ ಸಲ್ಲಿಸಿದಾಗ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ 25 ಮಹಿಳೆಯರಿಗೆ ಮಾತ್ರ ವಿವಿಧ ವಿಭಾಗಗಳಲ್ಲಿ ಅವಕಾಶ ಇತ್ತು. ಆರ್ಮಿ ಸರ್ವಿಸ್ ಕಾರ್ಪ್ಸ್ ನಲ್ಲಿ ಕೇವಲ ಒಂದೇ ಸ್ಥಾನ ಖಾಲಿಯಿತ್ತು. ಆ ಹುದ್ದೆ ನನಗೆಯೇ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಇದನ್ನು ಸಾಧಿಸಿದರ ಬಗ್ಗೆ ನನ್ನಲ್ಲಿ ಮೂಡಿದ್ದ ಉತ್ಸಾಹವನ್ನು ವರ್ಣಿಸುವುದು ಕಷ್ಟ. ಇದರೊಂದಿಗೆ ನನ್ನ ಕುಟುಂಬದ ಪ್ರತಿಯೊಬ್ಬರೂ ತಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಆರ್ಮಿಯ ಸಮವಸ್ತ್ರವನ್ನು ಧರಿಸಿದಂತಾಯಿತು – 1953 ರಲ್ಲಿ ನನ್ನ ತಂದೆ, ನಂತರ ತಾಯಿ, ಸಹೋದರ ಮತ್ತು ಕೊನೆಯದಾಗಿ ನಾನು.
ಮೊದ ಮೊದಲಿಗೆ ಮಹಿಳೆಯರನ್ನು ಕೇವಲ ಪ್ರಯೋಗಾತ್ಮಕವಾಗಿ ನೇಮಖಾತಿ ಮಾಡಿಕೊಳ್ಳಲಾಗಿತ್ತು. ಕೆಲವೇ ವರ್ಷಗಳಲ್ಲಿ, ನೇಮಖಾತಿ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿಲಾಯಿತು. ಈ ನಡೆ ಮಹಿಳೆಯರ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಷ್ಟೇ ಅಲ್ಲದೆ ಕಾಲಕ್ಕೆ ತಕ್ಕಂತೆ ಬದಲಾಗುವುದಕ್ಕೆ ಆರ್ಮಿ ಸಿದ್ಧಾವಾಗಿದೆ ಎಂಬುದನ್ನು ತೋರಿಸಿತು.
ವರ್ಷಗಳು ಕಳೆದಂತೆ ಎ.ಎಫ್.ಎಂ.ಎಸ್. ಮತ್ತು ಇತರ ರಕ್ಷಣಾ ದಳಗಳ ವಿಭಾಗಗಳಲ್ಲಿ ಮಹಿಳೆಯರ ನೇಮಖಾತಿ ಹೆಚ್ಚಾಗುತ್ತಾ ಹೋಗಿದೆ. ತಾಯ್ತನದ ರಜೆಯನ್ನು ಎರಡರಿಂದ ಆರು ತಿಂಗಳ ಕಾಲಕ್ಕೆ ಹೆಚ್ಚಿಸಿದ್ದು, ಪಿತೃತ್ವದ ರಜೆಯನ್ನು ಘೋಷಿಸಿದ್ದು, ಮತ್ತು ಮಹಿಳಾ ಅಧಿಕಾರಿಗಳಿಗೆ ಮಕ್ಕಳ ಪೋಷಣೆಗೆ ರಜೆಯನ್ನು ನೀಡುತ್ತಿರುವುದು – ಈ ಎಲ್ಲಾ ಬೆಳವಣಿಗೆಗಳು ಆರ್ಮಿಯ ಉದ್ದೇಶವನ್ನು ಸ್ಪಷ್ಟಗೊಳಿಸುತ್ತಲೇ ಇದೆ. ಇದೆಲ್ಲವೂ ರಾತ್ರೋರಾತ್ರಿ ಆದ ಬೆಳವಣಿಗೆ ಅಲ್ಲ, ದಶಕಗಳ ಕಾಲವನ್ನೇ ತೆಗೆದುಕೊಂಡಿದೆ.
ಲಿಂಗಬೇಧವಿಲ್ಲದ ಸಮವಸ್ತ್ರ
ಸಮವಸ್ತ್ರಕ್ಕೆ ಯಾವುದೇ ಲಿಂಗವಿಲ್ಲ ಮತ್ತು ಪ್ರತೀ ಅಧಿಕಾರಿಯನ್ನು ತಮ್ಮ ಸಾಮಾರ್ಥ್ಯಕ್ಕೆ ಅನುಸಾರವಾಗಿ ಗುರುತಿಸಲಾಗುವುದು ಎಂಬುದು ನನ್ನ ನಂಬಿಕೆ. ಆರ್ಮಿ ಮೆಡಿಕಲ್ ಕಾರ್ಪ್ಸ್ ನಲ್ಲಿ ಮಹಿಳಾ ಅಧಿಕಾರಿಗಳು ಅತ್ಯುನ್ನತ ಸ್ಥಾನಗಳಿಗೆ ಏರಿರುವುದು ಇದಕ್ಕೆ ಸಾಕ್ಷಿ. ಯಾವಾಗ ಎ.ಎಫ್.ಎಂ.ಎಸ್. ನಲ್ಲಿ ಕಮಾಂಡ್ಮೆಂಟ್ ಹುದ್ದೆಯನ್ನು ಓರ್ವ ಮಹಿಳೆಗೆ ನೀಡಿದಾಗ ಯಾವುದೇ ವಿವಾದಗಳು ಆಗಲಿಲ್ಲವೋ, ಆಗಲೇ ಆರ್ಮಿ ಮಹಿಳೆಯರಿಗೂ ಅಧಿಕಾರವನ್ನು ನೀಡುತ್ತದೆ ಎಂಬುದು ನನಗೆ ಮನದಟ್ಟಾಯಿತು.
ಆರ್ಮಿಯಲ್ಲಿನ ನನ್ನ ಸೇವೆಯು ನನಗೆ ವೈಯಕ್ತಿಕ ಮತ್ತು ವೃತ್ತಿ ಕುಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತು.
ದೈಹಿಕ ತರಬೇತಿ, ಪರೇಡ್, ಫೈರಿಂಗ್, ಇತ್ಯಾದಿ ದಿನನಿತ್ಯದ ಕಾರ್ಯಗಳನ್ನು ಎಲ್ಲಾ ಯುವ ಅಧಿಕಾರಿಗಳು ನಡೆಸಿಕೊಡಬೇಕು ಎಂಬ ನಿಯಮವಿದೆ. ಇದನ್ನು ನಾನು ನಡೆಸುವಾಗ ಯಾವುದೇ ಗೊಂದಲಗಳಿರಲಿಲ್ಲ. ನಾನು ಮಹಿಳೆ ಎಂದು ನಾನು ಮಾಡುತ್ತಿದ್ದ ಕೆಲಸಗಳು ನನಗೆ ವಿಶಿಷ್ಟವಾದದ್ದು ಎಂದು ಅನಿಸುತ್ತಲೂ ಇರಲಿಲ್ಲ ಅಥವಾ ವಿಶೇಷ ಮೆಚ್ಚುಗೆಯನ್ನೂ ನಾನು ಬಯಸುತ್ತಿರಲಿಲ್ಲ. ಅದೇ ಸಮಯದಲ್ಲಿ ನನ್ನ ಮುಂದಾಳತ್ವದ ದಳಗಳು ಯಾವುದೇ ವಿಚಿತ್ರ ವರ್ತನೆಯನ್ನು ತೋರಿಸುತ್ತಿರಲಿಲ್ಲ.
ಅಲ್ಲದೇ, ಆತಿಥ್ಯ ನಿರ್ವಹಣಾ ಕ್ಷೇತ್ರ ನನ್ನ ವಿಶೇಷತೆಯಾಗಿದ್ದರಿಂದ ಆ ಕ್ಷೇತ್ರದಲ್ಲಿ ಪುರುಷರಿಗೆ ಮತ್ತು ಅಧಿಕಾರಿಗಳಿಗೆ ನಾನು ತರಬೇತಿ ನೀಡಬೇಕಾಗಿತ್ತು. ಆ ಅನುಭವ ಅತ್ಯಂತ ಅಪೂರ್ವವಾದದ್ದು. ಅಲ್ಲಿನ ಅಲ್ಪಸಂಖ್ಯಾತ ಲಿಂಗ ಸಮುದಾಯಕ್ಕೆ ನಾನು ಸೇರಿದವಳು ಎಂಬ ಭಾವನೆ ನನ್ನ ಮನಸಿನಲ್ಲಿ ಎಂದಿಗೂ ಮೂಡಲೇ ಇಲ್ಲ.
ನನ್ನ ಕೆಲಸವನ್ನು ಗುರುತಿಸಿದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 1997ರಲ್ಲಿ ನನ್ನನ್ನು ಈ ಮೂರು ಸೇವೆಗಳನ್ನು ಒಳಗೊಂಡ ಸಂಸ್ಥೆಗೆ ಕೇಟರಿಂಗ್ ಆಫಿಸರ್ ಆಗಿ ನೇಮಕ ಮಾಡಿತು. ನಾನು ಆಗ ಎರಡು ವರ್ಷಗಳ ಸೇವೆಯೊಂದಿಗೆ ಲೆಫ್ಟಿನೆಂಟ್ ಹುದ್ದೆಯನ್ನು ಅಲಂಕರಿಸಿದ್ದೆ. ಆಗ ಆ ಹುದ್ದೆ ಹಿರಿಯ ಮೇಜರ್ ಗಳಿಗೆ ಸಂಪ್ರದಾಯಿಕವಾಗಿ ನೀಡುತ್ತಿದ್ದರಿಂದ ನನ್ನನ್ನು ಮೂರು ತಿಂಗಳ ಕಾಲಕ್ಕೆ ಅಡಿಷನಲ್ ಕೇಟರಿಂಗ್ ಆಫಿಸರ್ ಆಗಿ ನೇಮಕ ಮಾಡಲಾಗಿತ್ತೇನೋ. ಆದರೂ ಒಂದು ಸಣ್ಣದ್ದಾಗಿದ್ದರೂ ಮಹತ್ವದ ಬದಲಾವಣೆಯತ್ತ ನಾನು ಹೆಜ್ಜೆ ಇಟ್ಟಿದ್ದೆ ಎಂಬುದು ನನ್ನ ಭಾವನೆ.
1999ರಲ್ಲಿ ನಾನು ಕ್ಯಾಪ್ಟನ್ ಆಗಿದ್ದಾಗ ಇನ್ನೂ ಒಂದಿಷ್ಟು ಘಟನೆಗಳು ನಡೆದವು. ನನ್ನ ಐದು ವರ್ಷದ ಸೇವೆಗೆ ಅಂತ್ಯ ಹಾಡಿ ನನ್ನ ಮಗಳ ಕಡೆ ಗಮನ ವಹಿಸಬೇಕು ಎಂದು ನಾನು ನಿರ್ಧರಿಸಿದ್ದಾಗ ನನ್ನ ನೇಮಖಾತಿಯನ್ನು ಖಾಯಂಗೊಳಿಸಲಾಯಿತು. ಈ ಸುದ್ದಿ ಬಹಳ ಆನಂದದಾಯಕವಾಗಿದ್ದರೂ, ನಾನು ನನ್ನ ನಿರ್ಧಾರದ ಬಗ್ಗೆ ಗಟ್ಟಿ ನಿಲುವನ್ನು ತೆಗೆದುಕೊಂಡು ಕುಟುಂಬದ ಕಡೆ ನಡೆದೆ. ನಂತರ ಮಿಕ್ಕ ಕ್ಷೇತ್ರಗಳನ್ನು ಅನ್ವೇಶಿಸಬಹುದು ಎಂಬುದು ನನ್ನ ಯೋಜನೆಯಾಗಿತ್ತು. ಹಾಗಾಗಿ ನನ್ನ ನೇಮಖಾತಿಯನ್ನು ರದ್ದಾಗಿಸಲಾಯಿತು. ಆದರೂ, ಎನ್.ಡಿ.ಎ. ನಮ್ಮೊಂದಿಗೆ ಸದಾ ಇತ್ತು ಎಂಬುದನ್ನು ಇದು ಸೂಚಿಸುತ್ತದೆ.
ಆರ್ಮಿಯಲ್ಲಿ ನನ್ನ ವೈಯಕ್ತಿಕ ಅನುಭವಗಳು
ಆರ್ಮಿಯಲ್ಲಿ ನನ್ನ ಅನುಭವಗಳು ಬಹುತೇಕ ಸುಂದರವಾಗಿದ್ದರೂ, ನಾನು ಮತ್ತು ನನ್ನ ಮಹಿಳಾ ಸಹೋದ್ಯೋಗಿಗಳು ಹಲವು ಪೂರ್ವಾಗ್ರಹಗಳನ್ನು ಎದುರಿಸಬೇಕಾಗಿತ್ತು. ಆದರೆ ಇದು ವೈಯಕ್ತಿಕವಾದಂತದ್ದು. ಅದನ್ನು ಸಂಸ್ಥೆಯ ನಿಲುವು ಎಂದು ಪರಗಣಿಸಲಾಗುವುದಿಲ್ಲ.
ಬದಲಾವಣೆ ಸುಲಭದ್ದಲ್ಲ. ತಕ್ಷಣದ ಬದಲಾವಣೆಯನ್ನು ನಾವೆಲ್ಲರೂ ಬಯಸುವುದು ಸ್ವಾಭಾವಿಕವಾಗಿದ್ದರೂ ಪ್ರತೀ ಯೋಜನೆಯನ್ನು ತಯಾರಿಸುವಾಗ ಮತ್ತು ಅದನ್ನು ಜಾರಿ ಮಾಡುವಾಗ ಅದರದ್ದೇ ಆದ ಪರೋಕ್ಷ ಪರಿಣಾಮಗಳು ಇರುತ್ತವೆ. ಸಶಸ್ತ್ರ ಪಡೆಗಳ ಪೈಕಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ದಶಕಗಳ ದೂರದೃಷ್ಟಿ ಮತ್ತು ಶ್ರಮದಿಂದ ಉನ್ನತ ಸ್ಥಾನಕ್ಕೇರಿದೆ. ಈಗ ಹಲವಾರು ಧೀರ ಯುವತಿಯರನ್ನು ಒಳಗೊಳ್ಳಲು ಮುಂದಾಗಿದೆ. ಆದರೆ ಈ ಯುವತಿಯರಿಗೆ ಒಂದು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಲು ಸಂಸ್ಥೆಗೆ ಒಂದಿಷ್ಟು ಕಾಲಾವಕಾಶ ನೀಡಬೇಕು. ಸಂಸ್ಥೆಯ ಪ್ರತೀ ಹಂತದಲ್ಲೂ ಈ ಮನಸ್ಥಿತಿಯನ್ನು ಬದಲಾಯಿಸಿ ಪ್ರಸ್ತುತ ಸೌಕರ್ಯಗಳನ್ನು ಎಲ್ಲರಿಗೂ ಹೊಂದುವಂತೆ ಮಾಡುವುದು ಇದಕ್ಕೆ ಮುಖ್ಯ.
ಇದರ ಜೊತೆಗೆ ತುರ್ತು ಆರೋಗ್ಯ ಸೇವೆಯನ್ನು ಅಭಿವೃದ್ಧಿ ಪಡಿಸಿ ದೂರುಗಳನ್ನು ನಿವಾರಿಸುವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಜೊತೆಗೆ ‘ಸಮಾನ’ ಮತ್ತು ‘ತದ್ರೂಪ’ಕ್ಕೂ ನಡುವಿನ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರನ್ನು ಪುರುಷರಿಗೆ ಹೋಲಿಸದೇ ಅವರ ಸಾಮರ್ಥ್ಯವನ್ನು ಸಾಧಿಸಲು ಅವಕಾಶ ನೀಡಬೇಕು. ನನ್ನ ಸಮಯದಲ್ಲಿ ಆಫಿಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ಪುರುಷರಿಗೂ ಮಹಿಳೆಯರಿಗೂ ತರಬೇತಿ ಮಾನದಂಡಗಳು ಬೇರೆ ಬೇರೆಯಿದ್ದವು. ಆದರೂ ಅದು ಮಹಿಳೆಯರಿಗೆ ಕೊಂಚ ಕಷ್ಟಕರವಾಗಿತ್ತು. ಹಾಗಾಗಿ ಮುಂಬರುವ ಮಹಿಳಾ ಕೆಡೆಟ್ ಗಳಿಗೆ ಪ್ರಶಸ್ತವಾದ ತರಬೇತಿ ನೀಡಲು ವ್ಯಾಪಕ ಸಂಶೋಧನೆಗಳನ್ನು ನಡೆಸಬೇಕು.
ಇದಕ್ಕೆ ದೀರ್ಫಕಾಲಿಕ ಪರಿಣಾಮವಿರುವುದರಿಂದ ಇದರ ಕುರಿತು ಆಳವಾದ ಚರ್ಚೆಗಳು ನಡೆಯಬೇಕಿದೆ ಎಂಬುದು ನನ್ನ ಅಭಿಪ್ರಾಯ. ಈ ಬದಲಾವಣೆ ತಯಾರಿಯಿಲ್ಲದೇ ಏಣಿ ಏರುವ ಪ್ರಯತ್ನವೋ ಅಥವಾ ಯಶಸ್ಸನ್ನು ಬೆನ್ನೆಟ್ಟಿರುವ ಸ್ಥಿರವಾದ ಬೆಳವಣಿಗೆಯೋ ಎಂಬುದನ್ನು ಕಾದುನೋಡಬೇಕು.
ಕೃಪೆ: ದ ಪ್ರಿಂಟ್
ಮೂಲ: ಜಯಂತಿ ಸೇನ್ ಶರ್ಮಾ
ಜಯಂತಿ ಸೇನ್ ಶರ್ಮಾ ಅವರು ಭಾರತೀಯ ಆರ್ಮಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಕ್ಯಾಪ್ಟನ್ ಆಗಿದ್ದಾರೆ.