ಉಕ್ರೇನ್‌ನಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ನಂತರ ವಿದೇಶದಲ್ಲಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಡಿದ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾಗಿವೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸೋಮವಾರ “ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ಶೇ. 90 ರಷ್ಟು ವಿದ್ಯಾರ್ಥಿಳು, ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ” ಟ್ವೀಟ್ ಮಾಡಿದ್ದಾರೆ.
ಜೋಶಿ ಅವರು ಭಾರತೀಯ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ. “ಬಿಜೆಪಿ ಸರ್ಕಾರವು ಯಾವುದೇ ಯೋಜನೆಯನ್ನು ಹೊಂದಿಲ್ಲದಿರುವ ದುರಂತ ಇದು. ಆದರೆ ಪ್ರಲ್ಹಾದ್ ಜೋಶಿ ಅವರು ಉಕ್ರೇನ್‌ನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ. ಇದು ಕೇವಲ ಫೋಟೋ ಶೂಟ್ ಸರ್ಕಾರವಾಗಿದೆ. ಯಾವುದೇ ಅಭಿವೃದ್ಧಿ ಕ್ರಮವಿಲ್ಲ, ”ಎಂದು ಸುರ್ಜೇವಾಲಾ ಹೇಳಿದ್ದಾರೆ. ಎಂದು ʼದಿ ಟ್ರಿಬ್ಯೂನ್ʼ ವರದಿ ಮಾಡಿದೆ.
ಮಂಗಳವಾರ, ಉಕ್ರೇನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪನ ತಂದೆಯ ವೀಡಿಯೊ ಕ್ಲಿಪ್ ಅನ್ನು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ, ನವೀನ್ ತಂದೆ ತನ್ನ ಮಗನನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಏಕೆ ಕಳುಹಿಸಿದ್ದಾಗಿ ವಿವರಿಸಿದ್ದಾನೆ. “ಪಿಯುಸಿಯಲ್ಲಿ 97% ಅಂಕ ಗಳಿಸಿದ್ದರೂ, ನನ್ನ ಮಗ ರಾಜ್ಯದಲ್ಲಿ [ಕರ್ನಾಟಕ] ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸೀಟು ಪಡೆಯಲು ಕೋಟ್ಯಂತರ ರೂಪಾಯಿ ನೀಡಬೇಕು ಮತ್ತು ವಿದ್ಯಾರ್ಥಿಗಳು ಕಡಿಮೆ ಹಣ ಖರ್ಚು ಮಾಡಿ ವಿದೇಶದಲ್ಲಿ ಅದೇ ಶಿಕ್ಷಣ ಪಡೆಯುತ್ತಿದ್ದಾರೆ” ಎಂದು ನವೀನ್‌ನ ತಂದೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕೂಡ ಜೋಶಿ ಅವರ ಹೇಳಿಕೆಯನ್ನು ಗಮನಿಸಿದ್ದು, ಈ ವಿಷಯದ ಕುರಿತು ಲೇಖನವನ್ನು ಹಂಚಿಕೊಂಡ ಅವರು, “ಉಕ್ರೇನ್‌ನಲ್ಲಿನ ಪರಿಸ್ಥಿತಿ ಅಲ್ಲಿ ಸಿಲುಕಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಅತ್ಯಂತ ಆತಂಕ ಉಂಟುಮಾಡುವಂತದ್ದು, ನಮ್ಮ ಗಮನವು ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಮನೆಗೆ ಹಿಂದಿರುಗಿಸುವುದು. ನಮ್ಮ ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಕೇಂದ್ರ ಸರ್ಕಾರದ ಕೆಲವು ಸಚಿವರು ಚೆನ್ನಾಗಿ ತಿಳಿದಿದ್ದರೂ ಇಂತಹ ನಿರ್ದಾಕ್ಷಿಣ್ಯ, ಸಂವೇದನಾರಹಿತ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವುದು ನನಗೆ ದಿಗಿಲು ತಂದಿದೆ ಎಂದಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ವಿದೇಶಕ್ಕೆ ಹೋಗುವ ಸುಮಾರು 60 ಪ್ರತಿಶತ ಭಾರತೀಯರು ಚೀನಾ, ಉಕ್ರೇನ್ ಅಥವಾ ರಷ್ಯಾಕ್ಕೆ ಹೋಗಿದ್ದಾರೆ. ಈ ದೇಶಗಳಲ್ಲಿ MBBS ಕೋರ್ಸ್‌ಗೆ ಒಟ್ಟು ಶುಲ್ಕವು ಸುಮಾರು 35 ಲಕ್ಷ ರೂಪಾಯಿಗಳು ಎಂದು ಜೋಶಿ ಹೇಳಿದ್ದಾರೆ. ಇದರಲ್ಲಿ ಆರು ವರ್ಷಗಳ ಶಿಕ್ಷಣದ ವೆಚ್ಚ, ಜೀವನ ವೆಚ್ಚಗಳು ಎಲ್ಲ ಸೇರಿದೆ.
ಭಾರತದಲ್ಲಿ, ಸಂಪೂರ್ಣ MBBS ಕೋರ್ಸ್‌ನ ಶುಲ್ಕವು ಸುಮಾರು 45 ರಿಂದ 55 ಲಕ್ಷ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ. ಇದು ಖಾಸಗಿ ಕಾಲೇಜುಗಳಲ್ಲಿನ MBBS ಕೋರ್ಸ್‌ನ ಬೋಧನಾ ಶುಲ್ಕವನ್ನು ಮಾತ್ರ ಒಳಗೊಂಡಿರುತ್ತದೆ, ಇದು ಭಾರತೀಯ ವಿದ್ಯಾರ್ಥಿಗಳು ಹೊರಹೋಗಲು ಪ್ರಮುಖ ಕಾರಣವಾಗಿದೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.