ಬೆಂಗಳೂರು: ಏ.೦9: ಕರ್ನಾಟಕದಲ್ಲಿ ನಂದಿನಿ ಹಾಲು ಇನ್ಮುಂದೆ ಇತಿಹಾಸದ ಪುಟಗಳನ್ನು ಸೇರುತ್ತಾ..? ಈ ರೀತಿಯ ಅನುಮಾನ ಕರ್ನಾಟಕ ಜನರ ಮನಸ್ಸಲ್ಲಿ ಮನೆ ಮಾಡಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಮಾಡುತ್ತಿದೆ ಎನ್ನಲಾದ ಹುನ್ನಾರ. ನಂದಿನಿ ಬ್ರ್ಯಾಂಡ್ನ ದೇಶ-ವಿದೇಶದಲ್ಲಿ ಖ್ಯಾತಿ ಪಡೆಯುವಂತೆ ಮಾಡಿರುವ ಕರ್ನಾಟಕ ಮಿಲ್ಕ್ ಫೆಡರೇಷನ್ (KMF) ಗುಜರಾತ್ನ ಅಮುಲ್ ಸಂಸ್ಥೆ ಜೊತೆಗೆ ವಿಲೀನ ಮಾಡಲಿದ್ದಾರೆ ಎನ್ನುವ ವಿಚಾರ ಕನ್ನಡಿಗರನ್ನು ಕೆರಳಿಸಿದೆ. ಇದಕ್ಕೆ ಕಾರಣ ಈ ಹಿಂದೆ ಅಮಿತ್ ಷಾ ನೀಡಿದ್ದ ಹೇಳಿಕೆ. ಗುಜರಾತ್ ಮೂಲದ ಅಮುಲ್ ಜೊತೆಗೆ ನಂದಿನಿ ಸೇರಿಕೊಂಡರೆ ಪ್ರತಿ ಗ್ರಾಮದಲ್ಲೂ ಪ್ರಾಥಮಿಕ ಡೈರಿಗಳು ಶುರುವಾಗುತ್ತವೆ ಎಂದಿದ್ದರು.
ಮಂಡ್ಯದಲ್ಲಿ ಮಾಡಿದ್ದ ಭಾಷಣ, ಮರೆತು ಬಿಟ್ಟ ಬಿಜೆಪಿ..!

ಹೊಸ ವರ್ಷ ಆರಂಭದಲ್ಲಿ ಮಂಡ್ಯದಲ್ಲಿ ಮನ್ಮುಲ್ ಮೆಗಾ ಡೈರಿ ಉದ್ಘಾಟಿಸಿ ಮಾತನಾಡಿದ್ದ ಅಮಿತ್ ಷಾ, ಅಮುಲ್ ಹಾಗು ನಂದಿನಿ ಜಂಟಿಯಾಗಿ ಕೆಲಸ ಮಾಡಲಿವೆ. ಮುಂದಿನ ಮೂರು ವರ್ಷಗಳಲ್ಲಿ ಅಮುಲ್ನಿಂದ ನಂದಿನಿ ಎಲ್ಲಾ ತಾಂತ್ರಿಕ ಸಹಕಾರ ಮತ್ತು ಬೆಂಬಲ ಪಡೆಯಲಿದೆ. ಕರ್ನಾಟಕ ಹಾಗು ಗುಜರಾತ್ ಒಟ್ಟುಗೂಡಿದರೆ ಇಡೀ ದೇಶದ ರೈತರಿಗೆ ಅನುಕೂಲ ಎಂದಿದ್ದರು. ಇದರಲ್ಲಿ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಷಾ ಅವರ ಉದ್ದೇಶ ನೇರವಾಗಿ ಅಮುಲ್ ಜೊತೆಗೆ ನಂದಿನಿ ವಿಲೀನ ಮಾಡುವುದೇ ಆಗಿದ್ದರೂ, ರಾಜಕೀಯ ವಿರೋಧ ಹೆಚ್ಚಳವಾದ ಕಾರಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ತೇಪೆ ಹಾಕುವ ಕೆಲಸ ಮಾಡಿತ್ತು. ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಲಾಗಿದೆ. ಅಮಿತ್ ಷಾ ವಿಲೀನದ ಬಗ್ಗೆ ಮಾತನ್ನೇ ಆಡಲಿಲ್ಲ ಎಂದು ಷರಾ ಬರೆದುಕೊಂಡರು. ಇದೀಗ ಮತ್ತೆ #Savenandini ಕಾವು ಪಡೆದುಕೊಂಡಿದೆ.
ಚುನಾವಣೆಗಾಗಿ ನಡೆಯುತ್ತಿದೆ ನಂದಿನಿ ಹೋರಾಟ..?

ಬಿಜೆಪಿ ನಾಯಕರು ಹಾಗು ಬಿಜೆಪಿ ಕಾರ್ಯಕರ್ತ ಎಂದುಕೊಂಡವರು ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬಗ್ಗೆ ಹೋರಾಟ ಮಾಡುತ್ತಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅಮುಲ್ ವಿರೋಧ ಮಾಡುತ್ತಿರುವುದು ಏಕೆ..? ದೇಶಾದ್ಯಂತ ನಂದಿನಿ ಬೆಳೆಯುವುದು ಇಷ್ಟವಿಲ್ಲವೇ..? ಎಂದೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ. ಕೆಎಂಎಫ್ ಸಹಕಾರ ಸಂಸ್ಥೆ ಆಗಿದ್ದು, ರೈತರಿಂದ ರೈತರಿಗಾಗಿ ಸೃಷ್ಟಿಯಾಗಿರುವ ಸಂಸ್ಥೆ. ಸಣ್ಣ ಮಟ್ಟದಿಂದ ಇದೀಗ ಸಾವಿರಾರು ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದು ಹೆಮ್ಮರವಾಗಿ ನಿಂತಿದೆ. ಅಂದರೆ ಇದು ರೈತರ ಶ್ರಮದಿಂದ ಕಟ್ಟಿರುವ ಸಂಸ್ಥೆ. ಅದನ್ನು ಅಷ್ಟು ಸುಲಭವಾಗಿ ಗುಜರಾತ್ನ ಸಂಸ್ಥೆ ಜೊತೆಗೆ ವಿಲೀನ ಮಾಡುವುದು ಸಾಧ್ಯವಿಲ್ಲ. ನಮ್ಮ ಕರ್ನಾಟಕದಲ್ಲೇ ಸ್ಥಾಪನೆ ಆಗಿದ್ದ ವಿಜಯಾ ಬ್ಯಾಂಕ್ ಅನ್ನು ಇಂದು ಬ್ಯಾಂಕ್ ಆಫ್ ಬರೋಡಾ ಎಂದು ಮಾಡಲಾಗಿದೆ. ಅದರ ಬದಲು ವಿಜಯಾ ಬ್ಯಾಂಕ್ ಜೊತೆಗೆ ಯಾಕೆ ವಿಲೀನ ಮಾಡಲಿಲ್ಲ. ವಿಜಯ ಬ್ಯಾಂಕ್ ಅನ್ನೋ ಹೆಸರನ್ನೇ ಯಾಕೆ ಉಳಿಸಲಿಲ್ಲ…? ಬ್ಯಾಂಕ್ ಆಫ್ ಬರೋಡಾ ಗುಜರಾತ್ನದ್ದು..? ಅಲ್ಲವೇ ಎಂದು ಕನ್ನಡಪರ ಹೋರಾಟಗಾರರು ತಿರುಗೇಟು ನೀಡುತ್ತಿದ್ದಾರೆ.
ನಂದಿನಿ ವಿಲೀನದ ಭಯ ಸೃಷ್ಟಿಯಾಗಿದ್ದು ಯಾಕೆ..?
ಅಮಿತ್ ಷಾ ಈಗಾಗಲೇ ಹೇಳಿಕೆ ನೀಡಿದ್ದು ಆಯ್ತು. ಆಗ ಹೊತ್ತಿಕೊಂಡಿದ್ದ ಬೆಂಕಿ ನಂದಿದ್ದೂ ಆಯ್ತು. ಆದರೆ ಇದೀಗ ಅಮುಲ್ ತನ್ನ ಸಂಸ್ಥೆ ಕರ್ನಾಟಕದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದೇವೆ. ನಿಮ್ಮ ಮನೆಗೆ ಶೀಘ್ರದಲ್ಲೇ ಅಮುಲ್ ಹಾಲು ಬರಲಿದೆ ಎಂದು ಟ್ವೀಟ್ ಮಾಡಿತ್ತು. ಅದರ ಬೆನ್ನಲ್ಲೇ ಹೋಟೆಲ್ ಸೇರಿದಂತೆ ಮನೆಗಳಿಗೂ ನಂದಿನಿ ಹಾಲು ಸಿಗ್ತಿಲ್ಲ ಅನ್ನೋ ಮಾತುಗಳು ಶುರುವಾದವು. ಕೆಲವು ದಿನಗಳ ಕಾಲ ನಂದಿನಿ ಹಾಲನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿ, ರಾಜ್ಯದಲ್ಲಿ ಸಿಗದಂತೆ ಅಭಾವ ಸೃಷ್ಟಿ ಮಾಡುವುದು. ಆ ಮೂಲಕ ಅಮುಲ್ಗೆ ಮಾರುಕಟ್ಟೆ ಅವಕಾಶ ಮಾಡಿಕೊಡುವುದು. ನಂತರ ನಂದಿನಿ ವ್ಯಾಪಾರ ಕುಂಠಿತವಾದ ಬಳಿಕ ಸಂಸ್ಥೆ ನಷ್ಟದಲ್ಲಿದೆ ಎನ್ನುವ ಹುನ್ನಾರ ಮಾಡಿ ಅಮುಲ್ ಸಂಸ್ಥೆ ಜೊತೆಗೆ ಸೇರಿಸಿಕೊಳ್ಳುವುದು. ಸಾವಿರಾರು ಕೋಟಿ ಮೌಲ್ಯದ ಸಂಸ್ಥೆ ಬಿಟ್ಟಿಯಾಗಿ ಗುಜರಾತ್ ಸೇರುತ್ತದೆ ಎನ್ನುವುದಾದರೆ ವ್ಯಾಪಾರಿ ಮನಸ್ಥಿತಿಯ ವ್ಯಾಪಾರಿಗಳು ಬಿಡುವುದು ಉಂಟೇ ಎನ್ನುವುದು ಕನ್ನಡಿಗರ ಆತಂಕ..
ನಂದಿನಿ ಅಮುಲ್ ಸೇರಿದರೆ ಭಾರೀ ಲಾಭ ಆಗುತ್ತಾ..? ನಿರೀಕ್ಷಿಸಿ..
ಕೃಷ್ಣಮಣಿ