~ಎಂ ಎ ಅರುಣˌ ನಂಜನಗೂಡು
ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಹೊಸ ಮೆಗಾ ಡೈರಿಯನ್ನು ಉದ್ಘಾಟಿಸಲು ಬಂದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಕರ್ನಾಟಕದ ನೆಚ್ಚಿನ ನಂದಿನಿಯ ಮೇಲೆ ಅಮೂಲಿನ ಟೋಪಿಯನ್ನು ಇಡಲು ಪ್ರಯತ್ನಿಸಿದರು. ಯಾವುದೇ ಪೂರ್ವ ಚರ್ಚೆಯಿಲ್ಲದೆ ಈ ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸುವ ಅಥವಾ ಅವುಗಳ ನಡುವೆ ಸಹಕಾರದ ಕಬ್ಬಿಣದ ಕೊಂಡಿಯನ್ನು ಬೆಸೆಯಬೇಕು ಎನ್ನುವ ಅವರ ಹೇಳಿಕೆ ರಾಜ್ಯದ ಜನರ ಬ್ಲಡ್ ಪ್ರೆಷರ್ ಏರಿಸಿ, ಒಂದು ದೊಡ್ಡ ಪ್ರತಿರೋಧದ ಅಲೆಯನ್ನು ಎಬ್ಬಿಸಿತು. ಬಿಜೆಪಿಗರು ಶಾರ ಮಾತನ್ನು ವಿವಿಧವಾಗಿ ಸಮರ್ಥಿಸಿಕೊಂಡರೂ ಅವರ ಹೇಳಿಕೆಯ ಹಿಂದಿನ ಉದ್ದೇಶವನ್ನು ವಿವರಿಸುವ ಗೋಜಿಗೆ ಹೋಗಲಿಲ್ಲ. ಅನಗತ್ಯ ವಿಷಯಗಳ ಮೇಲೆ ಅನವಶ್ಯ ಹೇಳಿಕೆಗಳನ್ನು ನೀಡಿ ಬೇಡದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಸಣ್ಣ ಇತಿಹಾಸ ಈ ಬಿಜೆಪಿಯ ಚಾಣಕ್ಯರಿಗಿದೆ.
ಆದರೆ ಅನೇಕ ಕಾರಣಗಳಿಂದ ಶಾ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಗುತ್ತದೆ. ದೇಶವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಬಿಜೆಪಿಯ ಪ್ರಶ್ನಾತೀತ ನಾಯಕರಲ್ಲಿ ಇವರು ಎರಡನೆಯವರು. ಇವರು ಕೇಂದ್ರದ ಗೃಹ ಮಂತ್ರಿ ಮಾತ್ರವಲ್ಲ, ಸಹಕಾರ ಮಂತ್ರಿ ಕೂಡ ಹೌದು. ಗುಜರಾತಿನಲ್ಲಿ ಬಿಜೆಪಿ ಗಟ್ಟಿಯಾಗಿ ಬೇರು ಬಿಡುವಂತೆ ಮಾಡುವಲ್ಲಿ ಅಮೂಲಿನಂಥಹ ಸಹಕಾರ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿವೆ. ಈ ಸಹಕಾರ ಸಂಘಗಳ ‘ಗುಜರಾತ್ ಮಾಡೆಲ್’ ಈಗ ದೇಶಪೂರ ವಿಸ್ತರಿಸುವ ಲಕ್ಷಣಗಳು ಕಾಣುತ್ತಿವೆ. ೨೦೨೨ರ ಅಕ್ಟೋಬರ್ನಲ್ಲಿ ಗುವಾಹಟಿಯ ಸರಕಾರಿ ಅಧಿವೇಶನದಲ್ಲಿ ಮಾತನಾಡುತ್ತ ಅಮಿತ್ ಶಾ ಅವರು ದೇಶದ ಐದು ಸಹಕಾರ ಸಂಘಗಳನ್ನು ಅಮುಲ್ ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.
ಕೋಟ್ಯಂತರ ಜನರ ಬದುಕು ರೂಪಿಸುತ್ತಿರುವ ಸಹಕಾರಿ ಕ್ಷೇತ್ರದಲ್ಲಿ ಇದೊಂದು ಮಹತ್ವದ ಘೋಷಣೆ. ಆದರೆ ಇದರ ಬಗ್ಗೆ ಯಾವುದೇ ವಿವರ ಲಭ್ಯವಿಲ್ಲ ಅಥವಾ ಯಾವುದೇ ಚರ್ಚೆಯಾದ ಸುಳಿವಿಲ್ಲ. ವಿಲೀನವಾಗುತ್ತಿರುವ ಈ ಐದು ಸಂಸ್ಥೆಗಳು ಯಾವುವು , ಈ ಪ್ರಕ್ರಿಯೆಯನಂತರ ಅಸ್ಥಿತ್ವಕ್ಕೆ ಬರುವ “ಬಹು-ರಾಜ್ಯ ಸಹಕಾರ ಸಂಘ” ದಲ್ಲಿ ಅವುಗಳ ಪಾತ್ರವೇನು, ಅಲ್ಲಿನ ಅಧಿಕಾರದ, ಲಾಭ, ನಷ್ಟದ ಹಂಚಿಕೆ ಹೇಗೆ , ಈ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ. ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ಅಮೂಲಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ. ರೂಪಿಂದರ್ ಸಿಂಗ್ ಸೋಧಿರವರು ವಿಲೀನದ ಪ್ರಸ್ತಾವ ತಪ್ಪು ವರದಿ ಎಂದರು. ಅಮುಲ್ ಸಾವಯವ ಉತ್ಪನ್ನಗಳನ್ನು ಮಾರಾಟಮಾಡಲು ಕೆಲವು ಸಹಕಾರಿ ಸಂಸ್ಥೆಗಳ ಜತೆ ಕೈಜೋಡಿಸುತ್ತಿದೆ ಆದರೆ ವಿಲೀನದ ಯಾವುದೇ ಮಾತಿಲ್ಲ ಎಂದರು. ಪ್ರಜಾಪ್ರಭುತ್ವದಲ್ಲಿ ಸಹಕಾರಸಂಘಗಳಂತಹ ಜನಪರ ಸಂಸ್ಥೆಗಳಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಸಂಪೂರ್ಣ ಮಾಹಿತಿಯೊಂದಿಗೆ ಮುಕ್ತವಾದ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ. ಆದರೆ ಶಾರ ಕಾರ್ಯ ವೈಖರಿಯಲ್ಲಿ ಈ ಅಂಶಗಳು ಗೋಚರಿಸುವುದೇ ಇಲ್ಲದಿರುವುದು ಮತ್ತು ದಕ್ಷಿಣ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಅಮುಲ್ ನಡೆಸುತ್ತಿರುವ ಪ್ರಯತ್ನ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.
೨೦೨೦ ರಲ್ಲಿ ಡಾ. ಸೋಧಿರವರು ದೇಶದ ಪಶ್ಚಿಮ, ಉತ್ತರ, ಪೂರ್ವದ ರಾಜ್ಯಗಳಲ್ಲಿ ಬಲಿಷ್ಠವಾಗಿರುವ ಅಮುಲ್ ದಕ್ಷಿಣ ಭಾರತವನ್ನು ಆದ್ಯತೆಯ ಮೇರೆಗೆ ಪ್ರವೇಶಿಸಲಿದೆ ಎಂದು ಅನೇಕ ಮಾಧ್ಯಮಗಳಿಗೆ ಹೇಳಿದ್ದರು. ಹಲವಾರು ವರ್ಷಗಳಿಂದ ಅಮುಲ್ ದಕ್ಷಿಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಾಹಸ ಪಡುತ್ತಿದ್ದರೂ, ಅದು ಸಫಲವಾಗುತ್ತಿರುವುದು ಇತ್ತೀಚಿಗೆ, ಅದರಲ್ಲೂ ಮುಖ್ಯವಾಗಿ ಆಂಧ್ರ ಪ್ರದೇಶದಲ್ಲಿ. ಆಂಧ್ರದಲ್ಲಿ TDPಯ ಚಂದ್ರಬಾಬು ನಾಯ್ಡು ಕುಟುಂಬ ನಡೆಸುತ್ತಿರುವ ಹೆರಿಟೇಜ್ ಫುಡ್ಸ್ ನ ಪ್ರಾಬಲ್ಯವನ್ನು ಕುಗ್ಗಿಸಲು ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಅಮೂಲನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಬೆಂಬಲದಿಂದ ಅಮುಲ್ ಇಂದು ಕನಿಷ್ಠ ಆರು ಜಿಲ್ಲೆಗಳ ಸಾವಿರಾರು ರೈತರಿಂದ ಹಾಲು ಸಂಗ್ರಹಿಸುತ್ತಿದೆ. ತಿಂಗಳಿಗೊಂದಂತೆ ಆಂಧ್ರದ ವಿವಿದ ನಗರಗಳಲ್ಲಿ ಹಾಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೂಡ ಅಮುಲ್ ಮುಂದಾಗಿದೆಯಂತೆ. ಆ ಮದ್ಯೆ ನಾಯ್ಡುರ ಸ್ವಕ್ಷೇತ್ರದಲ್ಲಿರುವ ಚಿತ್ತೂರು ಡೈರಿಯನ್ನು ಜಗನ್ ಅಮುಲ್ ಕಂಪನಿಗೆ ೯೯ ವರ್ಷಗಳ ಗುತ್ತಿಗೆಗೆ ಹಸ್ತಾಂತರ ಮಾಡಿದ್ದಾರೆ.
೩೩ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ, ಒಟ್ಟು ₹೬೫೦ ಕೋಟಿ ಮೌಲ್ಯವಿರುವ ಚಿತ್ತೂರು ಡೈರಿಯನ್ನು, ಕೇವಲ ₹೧ ಕೋಟಿ ವಾರ್ಷಿಕ ಗುತ್ತಿಗೆಗೆ ಅಮುಲ್ ಪಡೆದಿರುವುದು ಈಗ ಅಲ್ಲಿ ದೊಡ್ಡ ವಿವಾದ. ಹಿಂದೆ ಹೆರಿಟೇಜ್ ಫೂಡ್ಸ್ನ ವಹಿವಾಟು ಬೆಳೆಸಲು ನಾಯ್ಡು ಕೂಡ ಚಿತ್ತೂರು ಡೈರಿಯನ್ನು ಮುಗಿಸಿದ್ದರು ಎಂಬ ಅಪಾದನೆಯೂ ಇದೆ. ಹಾಲು ಉತ್ಪಾದಕರ ಒಕ್ಕೂಟಗಳನ್ನು ನಡೆಸಲು ಅನುಕೂಲಕರವಾದ ರಾಜಕೀಯ ವಾತಾವರಣ ಅನಿವಾರ್ಯ. ಸಾವಿರಾರು ಹಳ್ಳಿಗಳಲ್ಲಿ ಸಂಘಗಳ್ಳನ್ನು ಕಟ್ಟಿ, ಅವುಗಳಲ್ಲಿ ಉದ್ಭವಿಸುವ ಪುಡಾರಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು, ರಾಜಕೀಯ ಶಕ್ತಿಯಿದ್ದರೆ ಮಾತ್ರ ಸಾದ್ಯ. ಸದ್ಯಕ್ಕೆ ಸಂಪೂರ್ಣವಾಗಿ ಬಿಜೆಪಿಯ ಹಿಡಿತದ್ಲಲಿರುವ ಅಮುಲಿಗೆ ಆ ಪಕ್ಷ ನೆಲೆಯಿರದ ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಕಬ್ಬಿಣದ ಕಡಲೆಗಳಿದ್ದಂತೆ.
೨೦೧೫ರಲ್ಲಿ ನಲಗೊಂಡ ಜಿಲ್ಲೆಯ ಸಂಘದೊಂದಿಗೆ ಒಪ್ಪಂದ ಮಾಡಿಕೊಂಡು ಅಮುಲ್ ತೆಲಂಗಾಣದಲ್ಲಿ ವಿಸ್ತರಿಸಲು ಪ್ರಯತ್ನಿಸಿತ್ತು . ಆದರೆ KCR ಸರಕಾರವು ಅಮುಲ್ ಗುಜರಾತಿನಿಂದ ಹಾಲನ್ನು ತಂದು ತೆಲಂಗಾಣದಲ್ಲಿ ಮಾರಿದರೆ ಸ್ಥಳೀಯ ರೈತರಿಗೆ ತೊಂದರೆಯುಂಟಾಗ ಬಹುದೆಂದು ಅದನ್ನು ವಿರೋಧಿಸಿತ್ತು. ಹಾಗೆಯೆ , ರಾಜ್ಯದ ವಿಜಯ ಡೇರಿ ಯನ್ನು ಅಮೂಲಿನ ಹೊಡೆತದಿಂದ ರಕ್ಷಿಸಿಕೊಳ್ಳಲ್ಲು ಅನೇಕ ಕ್ರಮಗಳನ್ನು ಕೈಗೊಂಡಿತ್ತು. ೨೦೨೧ರಲ್ಲಿ ತೆಲಂಗಾಣವನ್ನು ಮರುಪ್ರವೇಶಿಸಲು ಬಂದ ಅಮುಲ್, ೫೦೦ ಕೋಟಿ ಬಂಡವಾಳದ ಒಂದು ಬೃಹತ್ ಹಾಲಿನ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು, ರಾಜ್ಯ ಸರಕಾರದೊಂದಿಗೆ ಸಹಿ ಹಾಕಿತು. ದಿನಕ್ಕೆ 5 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಘಟಕ ತೆಲಂಗಾಣದ ರೈತರಿಂದ ಹಾಲನ್ನು ಸಂಗ್ರಹಿಸಲು ಒಪ್ಪಿದ್ದರೂ ಇದರಿಂದ ಸ್ಥಳೀಯ ಡೈರಿಗಳಿಗೆ ಹಿನ್ನಡೆಯಾಗಬಹುದೆಂದು ವಿರೋಧಪಕ್ಷಗಳು ಧ್ವನಿ ಎತ್ತಿವೆ.
ಇಡೀ ದಕ್ಷಿಣ ಭಾರತದಲ್ಲಿ ಅಮುಲ್ ಬೆಳೆಯಲು ಸೂಕ್ತವಾದ ಹವಾಮಾನ ಪರಿಸ್ಥಿತಿಯಿರುವುದು ಕರ್ನಾಟಕದಲ್ಲಿ. ರಾಜ್ಯ ಸರಕಾರದಿಂದ ಜಿಲ್ಲಾ ಸಂಘಗಳವರೆಗೆ ಬಿಜೆಪಿಯ ಪ್ರಭಾವವನ್ನು ಬಳಸಿಕೊಂಡು ಇಲ್ಲಿ ಬೇರು ಬಿಡುವ ಸಾಧ್ಯತೆ ಆಮೂಲಿಗಿದ್ದರೂ, ಅದಕ್ಕೆ ತೊಡಕಾಗಿರುವುದು ಇಡೀ ದೇಶದಲ್ಲಿ ಎರಡನೇ ದೊಡ್ಡ ಹಾಲಿನ ಉತ್ಪಾದಕರ ಸಂಘವಾಗಿರುವ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF). ಅಮುಲ್ ನಂದಿನಿ ನಡುವೆ ವಿಲೀನದ ಅಥವಾ ಸಹಕಾರದ ಮಾತೆತ್ತಿರುವ ಶಾ ರ ಪ್ರಸ್ತಾವವನ್ನು ಈ ಹಿನ್ನಲೆಯಲ್ಲಿ ನೋಡುವುದು ಅವಶ್ಯ. ಗುಜರಾತಿನ ೧೮ ಹಾಲು ಉತ್ಪಾದಕರ ಸಂಘಗಳ ಒಕ್ಕೊಟವಾದ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ (GCMMF) ಅಮುಲ್ ಬ್ರಾಂಡಿನ ಮೂಲಕ ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಈ ೧೮ ಸಂಘಗಳು ಬಾರಿ ಪ್ರಮಾಣದದಲ್ಲಿ ಬೆಳೆದು ಸಾವಿರಾರು ಕೋಟಿಯ ವಹಿವಾಟನ್ನು ನಡೆಸುತ್ತಿವೆ. ಹಾಲನ್ನು ರೈತರಿಂದ ಸಂಗ್ರಹಿಸಿ, ಅದರಿಂದ ಎಲ್ಲಾ ಉತ್ಪನ್ನಗಳನ್ನ ತಯಾರಿಸುವ ಜವಾಬ್ದಾರಿ ಈ ಸಂಘಗಳದ್ದು. ಅವುಗಳನ್ನು ಖರೀದಿಸಿ ದೇಶವ್ಯಾಪ್ತಿ ಮಾರಾಟ ಮಾಡುವ ಕೆಲಸವನ್ನು GCMMF ನೋಡಿಕೊಳ್ಳುತ್ತದೆ. ವರ್ಷದ ಕೊನೆಯಲ್ಲಿ ಉಳಿಯುವ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ಈ ೧೮ ಸಂಘಗಳಿಗೆ ಹಿಂತಿರುಗಿಸುತ್ತದೆ.
ಮೊದಲು ಕಾಂಗ್ರೆಸ್ ಅಧೀನದಲ್ಲಿದ್ದ ಈ ಜಿಲ್ಲಾ ಸಂಘಗಳನ್ನು ಬಿಜೆಪಿ ನಾನಾ ತಂತ್ರಗಳನ್ನು ಉಪಯೋಗಿಸಿ ತನ್ನ ವಶಕ್ಕೆ ತೆಗೆದುಕೊಂಡಿತು. ಇಂದು ಎಲ್ಲ ೧೮ ಸಂಘಗಳ ಅಧ್ಯಕ್ಷರು ಬಿಜೆಪಿ ಜೊತೆ ಸಂಬಂಧವಿರುವ ರಾಜಕಾರಣಿಗಳೇಯಾಗಿದ್ದಾರೆ. ಪ್ರತಿದಿನ ಕೋಟ್ಯಾಂತರ ರುಪಾಯಿಗಳನ್ನು ರೈತರಿಗೆ ಹರಿಸುವ ಈ ಸಂಘಗಳನ್ನು ನಿಯಂತ್ರಿಸಲು ದೊಡ್ಡ ರಾಜಕೀಯ ಹೋರಾಟವೇ ನಡೆಯಿತು. ಸಾಮಾನ್ಯವಾಗಿ ನಗರಪ್ರದೇಶಗಳ ಪಕ್ಷವೆಂದು ಗುರುತಿಸಲ್ಪಡುವ ಬಿಜೆಪಿಗೆ ಹಳ್ಳಿಗಳಲ್ಲಿ ತನ್ನ ಪ್ರಭಾವ ಬೆಳೆಸಿಕೊಳ್ಳಲು ಈ ಸಂಘಗಳು ಸಹಾಯ ಮಾಡಿದವು. ನಂದಿನಿ ಬೆಣ್ಣೆಯನ್ನು ಕರಗಿಸಲು ಯತ್ನಿಸುತ್ತಿರುವ ಅಮೂಲಿನ ಶಾಖವನ್ನು ಗ್ರಹಿಸಬೇಕಾದರೆ ಮೂಲತಃ ಗುಜರಾತಿನ ಸಂಸ್ಥೆಯಾದ ಅದು ದೇಶ ಪೂರ್ತಿ ಹರಡಿರುವ ರೀತಿಯನ್ನು ನೋಡಬೇಕಾಗುತ್ತದೆ. ಯಾವುದೇ ಸಂಸ್ಥೆ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಎರಡು ಕಾರಣಗಳು ಮುಖ್ಯವಾಗುತ್ತವೆ. ಒಂದು, ಬೇರೆ ಎಲ್ಲೂ ಸಿಗದ ವಿಶಿಷ್ಟ ಉತ್ಪನ್ನಗಳು ಅದರಲ್ಲಿರುವುದು . ಎರಡನೆಯದು, ಆ ಕಂಪನಿ ಅತಿಯಾಗಿ ಲಾಭಗಳಿಸುತಿದ್ದು ವ್ಯವಹಾರವನ್ನು ಮತ್ತಷ್ಟು ಬೆಳೆಸಲು ಹೆಚ್ಚುವರಿ ಹಣವನ್ನು ಬೇರೆ ಕಡೆ ತೊಡಗಿಸುವುದು. ಈ ಎರಡೂ ಅಂಶಗಳು ಅಮೂಲಿನಲ್ಲಿ ಕಾಣಬರುವುದಿಲ್ಲ
ಅಮೂಲಿನ ಹಾಲು, ಕೆನೆ, ಮೊಸರು, ಬೆಣ್ಣೆ ಇತ್ಯಾದಿಗಳಲ್ಲಿ ಬೇರೆ ಎಲ್ಲೂ ಸಿಗದ ಯಾವುದೇ ವೈಶಿಷ್ಟ್ಯತೆಯಿಲ್ಲ. ನೀವು ಕಣ್ಣು ಮುಚ್ಚಿ ಬಾಯಿಗಿಟ್ಟರೆ ಅದು ನಂದಿನಿಯ ಅಥವಾ ಅಮೂಲಿನ ಬೆಣ್ಣೆ ಎಂದು ಗೊತ್ತಾಗುವುದಿಲ್ಲ. ಅಮೂಲಿನ ಲಾಭ ನಷ್ಟದ ಬಗ್ಗೆ ಹೇಳುವುದು ಸ್ವಲ್ಪ ಕಷ್ಟ. ಸಾವಿರಾರು ಕೋಟಿಯ ವಹಿವಾಟಿರುವ ಜನರ ಸಂಘಟನೆಯಾದ ಅಮೂಲ್ ಹಣಕಾಸಿನ ವಿಷಯದಲ್ಲಿ ಅಷ್ಟು ಪಾರದರ್ಶಕವಾಗಿಲ್ಲ. ಅನೇಕ ಉತ್ತಮ ಸಂಸ್ಥೆಗಳು ನೀಡುವಂತೆ ವಾರ್ಷಿಕ ವರದಿಯನ್ನು ತನ್ನ ವೆಬ್ಸೈಟ್ನಲ್ಲಿ ಲಭ್ಯಗೊಳಿಸಿಲ್ಲ (ಇದೆ ಸಮಸ್ಯೆ KMF ನಲ್ಲಿ ಕೂಡ ಇದೆ ). ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ (AGM) ಅದರ ಹಣಕಾಸಿನ ಸ್ಥಿತಿ ಗತಿಗಳ ಬಗ್ಗೆ ಅಥವಾ ಉದ್ಯಮದ ಆರೋಗ್ಯದ ಬಗ್ಗೆ ಯಾವುದೇ ಕಠಿಣ ಚರ್ಚೆಗಳಾಗುವ ಸುಳಿವು ಅದರ ವೆಬ್ಸೈಟ್ ನಲ್ಲಿ ಇಲ್ಲ . ಅದರ ಬದಲು ನಮಗೆ ಕಾಣಸಿಗುವುದು ದೇಶ ಭಕ್ತಿಯ ಭಾಷಣಗಳು .
ಪ್ರಮುಖ ಸ್ಟಾಕ್ ಬ್ರೋಕರ್ ಐಸಿಐಸಿಐ ಸೆಕ್ಯುರಿಟೀಸಿನ ಇತ್ತೀಚಿನ ವರದಿಯ ಪ್ರಕಾರ ಆರ್ಥಿಕ ವರ್ಷ ೨೦೨೨ರಲ್ಲಿ ಅಮೂಲಿನ ಒಟ್ಟು ಆದಾಯ ಸುಮಾರು ೪೬,೬೨೬.೫ ಕೋಟಿ ರೂಪಾಯಿಗಳು. ಆದರೆ ಅದರ ಲಾಭ ಕೇವಲ ೭೪.೩ ಕೋಟಿಗಳು, ಅಂದರೆ ಶೇಕಡಾ ೦.೨ ರಷ್ಟು ಮಾತ್ರ. ಒಂದು ಸಾವಿರ ರೂಪಾಯಿ ಹಾಕಿ ೨ ರೂಪಾಯಿ ಲಾಭ ತೆಗೆಯುವ ಸಾಹಸ ಕಥೆಯಿದು. ಡಾಕ್ಟರ್ ಸೊಧಿಯವರ ಪ್ರಕಾರ ಅಮೂಲಿನ ಮುಖ್ಯ ದ್ಯೇಯ ರೈತರಿಗೆ ಹಣ ಹಿಂದಿರುಗಿಸುವುದು, ಲಾಭ ಮಾಡುವುದಲ್ಲ. ಲಾಭ ಮಾಡದ ಸಂಸ್ಥೆಗಳು ಅಪಾಯದಲ್ಲಿಯೇ ತಮ್ಮ ಜೀವನ ನಡೆಸುತ್ತವೆ. ಒಂದೆರಡು ವರ್ಷ ಸರಿಯಾಗಿ ಉತ್ಪಾದನೆಯಾಗದ್ದಿದರೆ ಅಥವಾ ಉತ್ಪನ್ನಗಳು ಸರಿಯಾಗಿ ಮಾರಾಟವಾಗದಿದ್ದರೆ ಅವು ನಷ್ಟಕ್ಕೆ ಗುರಿಯಾಗುತ್ತವೆ. ಹಾಲಿನ ಒಕ್ಕೂಟಗಳಲ್ಲಿ ಕೆಲವು ವರ್ಷ ತಯಾರಾದ ಉತ್ಪನ್ನಗಳು ಮಾರಾಟವಾಗದೆ ಉಳಿಯುವುದು ಸಾಮಾನ್ಯ. ಲಾಭವಿಲ್ಲದ ಅಮುಲ್ ಸಾಲ ಮಾಡಿ ಬಂಡವಾಳವನ್ನು ಈ ಪ್ರಮಾಣದಲ್ಲಿ ಹೊಂದಿಸಿಕೊಂಡು ಅತಿ ವೇಗದಲ್ಲಿ ವಿಸ್ತರಿಸುತ್ತಿರುವ ಕಾರ್ಯತಂತ್ರ ಅರ್ಥವಾಗುವುದು ಕಷ್ಟ. ಐಸಿಐಸಿಐ ಸೆಕ್ಯುರಿಟೀಸ್ ಪ್ರಕಾರ ಆರ್ಥಿಕ ವರ್ಷ ೨೦೨೨ರಲ್ಲಿ ಅಮೂಲಿನ ಮೇಲಿದ್ದ ಒಟ್ಟು ಸಾಲದ ೨,೦೦೦ ಕೋಟಿಗಿಂತ ಮಿಗಿಲಾಗಿತ್ತು.
ಮೊದಲಿಗೆ ಇದ್ದ ಆಲೋಚನೆಯ ಪ್ರಕಾರ ಅಮುಲ್ ಗುಜರಾತಿಗೆ ಸೀಮಿತವಾಗಿದ್ದು, ಅದೇ ಮಾದರಿ ದೇಶಪೂರ್ತಿ ಸಹಕಾರ ಸಂಘಗಳನ್ನು ಕಟ್ಟುವ ಜವಾಬ್ದಾರಿಯಿದ್ದಿದ್ದು, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (NDDB). ಆದರೆ ೧೯೯೦ರ ಹೊತ್ತಿಗೆ ಅಮೂಲಿನ ಮೂಲ ಸಂಘಗಳಲ್ಲಿ ಪ್ರಮುಖವಾಗಿದ್ದ ಬನಸ್ಕಾಂತ ಜಿಲ್ಲೆಯ ಡೈರಿಯ ಹಾಲಿನ ಸಂಗ್ರಹ ಹೆಚ್ಚಿ, ಅದನ್ನು ಗುಜರಾತ್ನ ಹೊರಗೆ ಮಾರಾಟ ಮಾಡಬೇಕಾದ ಅನಿವಾರ್ಯ ಎದುರಾಯಿತು. ಬನಸ್ಕಾಂತ ಡೈರಿಯು ಹಾಲನ್ನು ಶೀತಲಗೊಳಿಸಿ ಟ್ರಕ್ಗಳು ಮತ್ತು ರೈಲುಗಳ ಮೂಲಕ ಉತ್ತರ ಪ್ರದೇಶಕ್ಕೆ ಕಳುಹಿಸಲು ಪ್ರಾರಂಭಿಸಿತು. ಆದರೆ, ಅಮುಲ್ ಗುಜರಾತಿನ ರೈತರಿಗೆ ಕೊಡುತಿದ್ದ ಹೆಚ್ಚಿನ ಬೆಲೆ ಜೊತೆ ಸಾಗಾಣಿಕೆಯ ವೆಚ್ಚವೂ ಸೇರಿ, ಅದರ ಹಾಲು ಉತ್ತರಪ್ರದೇಶದ ಗ್ರಾಹಕರಿಗೆ ತಲಪುವ ವೇಳೆಗೆ ಅರಗಿಸಕೊಳ್ಳಲಾಗದಷ್ಟು ದುಬಾರಿಯಾಗುತ್ತಿತ್ತು. ನಂತರ ಬನಸ್ಕಾಂತ ಡೈರಿ ಮತ್ತು ಅಮುಲ್ ಉತ್ತರ ಪ್ರದೇಶದಿಂದಲೇ ಹಾಲು ಸಂಗ್ರಹಿಸಿ, ಅದರ ಜೊತೆ ಸುಲುಭವಾಗಿ ಸಾಗಿಸಬಹುದಾದ ಬೆಣ್ಣೆಯಂತಹ ಇತರ ಉತ್ಪನ್ನಗಳನ್ನು ಅಲ್ಲಿ ಮಾರಾಟ ಮಾಡಲು ಶುರುಮಾಡಿದವು.
ಇದೆ ಹಾದಿಯಲ್ಲಿ ಸಾಗಿ ಅಮುಲ್ ಮತ್ತು ಅದರ ಇತರ ಜಿಲ್ಲಾ ಸಂಘಗಳು ಗುಜರಾತಿನ ಹೊರಗೆ ವಿಸ್ತರಿಸಿರುವ ಹಾಗೆ ಕಾಣುತ್ತದೆ. ಕೆಲವು ಪ್ರಸಂಗಗಳಲ್ಲಿ ಬೇರೆ ರಾಜ್ಯಗಳಲ್ಲಿರುವ ಬೇಡಿಕೆಯನ್ನು ಬಳಸಿಕೊಂಡು ವೇಗವಾಗಿ ಬೆಳೆಯಲು ಅಮೂಲಿನ ಆಡಳಿತ ಮಂಡಳಿ ನಿರ್ಧರಿಸಿತು ಎಂದು ಕೂಡ ಕೆಲವರು ಹೇಳುತ್ತಾರೆ. ಅಮುಲ್ ಗುಜರಾತಿನ ಹೊರಗೆ ಬೆಳೆದಂತೆಯೇ ಅದಕ್ಕೆ ಸಂಬಂದಿಸಿದ ಅನೇಕ ಸಮಸ್ಯೆಗಳು ಹೊರ ಬರುತ್ತಿವೆ. ಹಾಲಿನ ಸಹಕಾರ ಸಂಘಗಳು ಎಲ್ಲೆಡೆ ಸಫಲತೆ ಕಂಡಿಲ್ಲ. ಗುಜರಾತ್, ಕರ್ನಾಟಕ, ರಾಜಸ್ಥಾನ, ಬಿಹಾರಗಳಂತಹ ರಾಜ್ಯಗಳಲ್ಲಿ ಅವು ಗಟ್ಟಿಯಾಗಿದ್ದರೆ, ಮಿಕ್ಕೆಡೆ ವೃತ್ತಿಪರ ನಿರ್ವಹಣೆಯಿಲ್ಲದೆ, ಅತಿಯಾದ ಸಿಬ್ಬಂದಿವರ್ಗ, ಹಳಕಲು ಯ೦ತ್ರಸಾಮಗ್ರಿ, ಮುಖ್ಯವಾಗಿ ರಾಜಕಾರಣಿಗಳ ಹಸ್ತಕ್ಷೇಪದಿಂದ ಅವು ಕ್ಷೀಣಿಸುತ್ತಿವೆ.
ಉದಾಹರಣೆಗೆ, 1940ರ ದಶಕದಲ್ಲಿ ಶುರುವಾದ ಮಹಾರಾಷ್ಟ್ರದ ಮಹಾನಂದ ಡೈರಿಯು ಕಳೆದ ಎರಡು ದಶಕಗಳಲ್ಲಿ, ರಾಜಕಾರಣಿಗಳ ಕಿತ್ತಾಟದಿಂದ ಛಿದ್ರಛಿದ್ರವಾಗಿ, ಅದರ ಅಧೀನದಲ್ಲಿರುವ ಸಂಘಗಳಿಂದ ಹಾಲು ಸಂಗ್ರಹಿಸಲು ಒದ್ದಾಡುತಿದೆ. ಬಿಸಿನೆಸ್ ಟುಡೇಯ ಒಂದು ವರದಿಯ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಸಹಕಾರ ಸಂಘಗಳ ಮೂಲಕ ಶೇಖರಣೆಯಾಗುತ್ತಿರುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಖಾಸಗಿ ಕಂಪನಿಗಳ ಕೈ ಮೇಲಾಗುತ್ತಿವೆ. ಈ ಸನ್ನಿವೇಶದಲ್ಲಿ ಪೆಡಂಬೂತದ ಹಾಗೆ ಬೆಳೆದಿರುವ ಅಮುಲ್ ಹೆಜ್ಜೆಯಿಟ್ಟರೆ ಈಗಾಗಲೇ ದುರ್ಬಲವಾಗಿರುವ ಸ್ಥಳೀಯ ಒಕ್ಕೊಟಗಳಿಗೆ ಮತ್ತಷ್ಟು ಹಿನ್ನಡೆಯಾಗುತ್ತದೆ
ಒರಿಸ್ಸಾ ಹಾಲು ಒಕ್ಕೂಟದ (OMFED) ಅಧ್ಯಕ್ಷೆ ಸರೋಜಿನಿ ಮಿಶ್ರಾ ಹೇಳುವಂತೆ ಆ ರಾಜ್ಯದ ರೈತರಿಗೆ ೪.೨ ದಶಲಕ್ಷ ಹಾಲನ್ನು ಪೂರೈಸುವ ಸಾಮರ್ಥ್ಯವಿದೆಯಂತೆ. ಆದರೆ ಅಮುಲ್ ಮತ್ತು ಪತಂಜಲಿಗಳಿಗೆ ಅಲ್ಲಿ ಹಾಲನ್ನು ಮಾರುವ ಅವಕಾಶ ನೀಡಿ ನವೀನ್ ಪಾಟ್ನಾಯಕ್ ಸರಕಾರವು ಸ್ಥಳೀಯ ಸಂಘಗಳ ಬೆಳವಣಿಗೆಯನ್ನು ಚಿವುಟಿ ಹಾಕಿದ್ದಾರೆ ಎಂದು ಅವರು ಅಪಾದಿಸುತ್ತಾರೆ. ಒಡಿಶಾದ ಮತ್ತೊಬ್ಬ ಹೈನುಗಾರಿಕೆ ಉದ್ಯಮಿ ಶ್ರೀಕುಮಾರ್ ಮಿಶ್ರಾರವರ ಪ್ರಕಾರ ಅಮುಲ್ಗೆ ಸಿಗುತ್ತಿರುವ ಅಸಮಾನ ಪ್ರಮಾಣದ ಸರ್ಕಾರಿ ಬೆಂಬಲ ಬೇರೆ ಸಂಸ್ಧೆಗಳಿಗೆ ತೊಡಕಾಗಿದೆ. “ಅಮುಲ್ ಗುಜರಾತ್ನಲ್ಲಿ ಅತಿಯಾದ ಹಾಲಿನ ಪೂರೈಕೆಯನ್ನು ಸೃಷ್ಟಿಸಿ, ಅದನ್ನು ದೇಶಾದ್ಯಂತ ಕೊಂಡೊಯ್ಯುತ್ತಿದೆ. ಇದರಿಂದ ತಾಜಾ ಹಾಲಿನ ಬಳಕೆ ಮತ್ತು ಸ್ಥಳೀಯ ರೈತರ ಆದಾಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ,” ಎನ್ನುತ್ತಾರೆ.
ಬಿಸಿನೆಸ್ ಟುಡೇ ವರದಿಯಲ್ಲಿ ಕಂಡುಬರುವ ಈ ಟೀಕೆಗಳಿಗೆ ಅನೇಕ ರಾಜ್ಯಗಳಲ್ಲಾಗಿರುವ ಬೆಳವಣಿಗೆಗಳು ಪುಷ್ಠಿ ನೀಡುತ್ತವೆ. ಎರಡು ದಶಕಗಳ ಹಿಂದೆ ಉತ್ತರ ಪ್ರದೇಶದ ‘ಪರಾಗ್’ ದೇಶದ ಮೂರನೇ ಅತಿದೊಡ್ಡ ಸಹಕಾರಿ ಡೈರಿಯಾಗಿದ್ದು, ದಿನಕ್ಕೆ ೨ ದಶಲಕ್ಷ ಲೀಟರ್ವರೆಗೆ ಹಾಲು ಸಂಗ್ರಹಿಸುತ್ತಿತ್ತು. ಅದು ಇಂದು ಕೇವಲ ೩-೪ ಲಕ್ಷ ಲೀಟರ್ಗಳಿಗೆ ಇಳಿದಿದೆ. ಪರಾಗ್ ಹೊಂದಿರುವ 10 ಸಂಸ್ಕರಣಾ ಘಟಕಗಳಲ್ಲಿ ಹೆಚ್ಚಿನವು ಇಂದು ಬಳಕೆಯಾಗದೆ ಬಿದ್ದಿವೆ. ತಜ್ಞರು ಹೇಳುವಂತೆ ಉತ್ತರ ಪ್ರದೇಶದ ಸರಕಾರಗಳು ರಾಜಕೀಯ ಭಿನ್ನಾಭಿಪ್ರಾಯದಿಂದ ಪರಾಗ್ನ ಹಿತಾಸಕ್ತಿಗಳನ್ನು ಕಡೆಗಣಿಸಲು ಶುರು ಮಾಡಿದವು. ಪರಾಗ್ ದುರ್ಬಲಗೊಂಡಂತೆ ಅದನ್ನು ಪುನರುಜ್ಜೀವನಗೊಳಿಸುವ ಬದಲು ಅಮುಲನ್ನು ವಿಸ್ತರಿಸಲು ಅವು ಉತ್ತೇಜಿಸಿದವು.
ವಾರಣಾಸಿ, ಕಾನ್ಪುರ ಮತ್ತು ಲಕ್ನೋದಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿರುವ ಅಮುಲ್ ಆ ರಾಜ್ಯದಲ್ಲಿ ೨೫೦೦ ಕೋಟಿ ಬಂಡವಾಳ ಹೂಡುವದಾಗಿ ಘೋಷಿಸಿದೆ. ಅಮುಲ್ ಬೆಳೆದಂತೆ ಉತ್ತರ ಪ್ರದೇಶದಲ್ಲಿ ಪರಾಗ್ ಇತಿಹಾಸವಾಗುತ್ತಿರುವುದು ಅಲ್ಲಿನ ದುರಂತ. ಆಂಧ್ರದಲ್ಲಿಯೂ ಕಳೆದ ಚುನಾವಣೆಯಲ್ಲಿ ಸ್ಥಳೀಯ ಸಂಘಗಳಿಗೆ ಮತ್ತೆ ಶಕ್ತಿ ತುಂಬಲು ಜಗನ್ ಆಶ್ವಾಸನೆ ನೀಡಿದ್ದರೂ, ಗೆದ್ದ ನಂತರ ಅವರು ಕೂಡ ಅಮೂಲಿನ ಮೊರೆ ಹೋದರು. ಅಮುಲ್ ವಿರುದ್ಧ ಕೇಳಿಬರುತ್ತಿರುವ ಮುಖ್ಯ ಅಪಸ್ವರವೆಂದರೆ ಅದರ ರಾಷ್ಟ್ರೀಯ ವಿಸ್ತರಣೆಯಿಂದ ಹೆಚ್ಚಿನ ಲಾಭವಾಗುತ್ತಿರುವುದು ಸ್ಥಳೀಯ ರೈತರಿಗಿಂತ ಗುಜರಾತಿನ ರೈತರಿಗೆಂದು. ಐಸಿಐಸಿಐ ಸೆಕ್ಯುರಿಟೀಸ್ ಪ್ರಕಾರ ಅಮುಲ್ ಆರ್ಥಿಕ ವರ್ಷ ೨೦೨೨ರಲ್ಲಿ ಸುಮಾರು ೨೬ ಲಕ್ಷ ಲೀಟರ್ ಹಾಲು ಸಂಗ್ರಹಿಸಿತು. ಇದರಲ್ಲಿ ಗುಜರಾತಿನ ರೈತರ ಕೊಡುಗೆ ಸುಮಾರು ೨೨ ಲಕ್ಷ ಲೀಟರ್ನಷ್ಟು. ಬೇರೆ ರಾಜ್ಯಗಳ ಹಾಲಿನ ಪ್ರಮಾಣ ಹೆಚ್ಚುತ್ತಿದರೂ ಇಂದೂ ಕೂಡ ಅಮೂಲಿನ ಶೇಕಡಾ ೮೪ರಷ್ಟು ಹಾಲಿನ ಪೂರೈಕೆಯಾಗುತ್ತಿರುವುದು ಅದರ ಮಾತೃ ರಾಜ್ಯದಿಂದ.
ಸ್ಕ್ರೋಲ್ ಮಾಧ್ಯಮದಲ್ಲಿ ಬಂದ ಒಂದು ಹಳೆಯ ವರದಿಯಂತೆ ಕಾನೂನಿನಲ್ಲಿ ಅಮುಲ್ ತನ್ನ ವಾರ್ಷಿಕ ಡಿವಿಡೆಂಡ್ ಹಂಚುವ ಅವಕಾಶವಿರುವುದು ಅದರ ಅಂಗವಾಗಿರುವ ಗುಜರಾತಿನ ೧೮ ಸಂಘಗಳಿಗೆ ಮಾತ್ರ. ಇದರಿಂದ ಬೇರೆ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿಲ್ಲ, ಅವರಿಗೆ ಕೊಡುವ ದರದಲ್ಲೇ ಡಿವಿಡೆಂಡ್ ಕೂಡ ಅಡಕವಾಗಿರುತ್ತದೆ ಎಂದು ಅಮೂಲಿನ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು. ಕಳೆದ ಕೆಲವು ವರ್ಷಗಳಲ್ಲಿ ಬೇರೆ ಬೇರೆ ರಾಜ್ಯದ ರೈತರಿಗೆ ಅಮೂಲಿನಿಂದ ಸಂದಾಯವಾಗಿರುವ ಹಣದ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. KMF ಕರ್ನಾಟಕದ ಅಧೀನದಲ್ಲಿರುವಂತೆ ಅಮುಲ್ ಕೂಡ ಗುಜರಾತ್ ಸರ್ಕಾರದ ಹಿಡಿತದಲ್ಲಿದೆ. ಅದರ ನೀತಿ ನಿಯಮಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅಲ್ಲಿನ ಸರಕಾರ ರೂಪಿಸಿಕೊಂಡಿರುವ ಅನೇಕ ನಿದರ್ಶನಗಳೂ ಇವೆ.
ಕಳೆದ ಅಕ್ಟೋಬರ್ನಲ್ಲಿ ಚುನಾವಣೆ ಎದುರಿಸುತ್ತಿದ್ದ ಗುಜರಾತ್ ಬಿಟ್ಟು ಬೇರೆ ರಾಜ್ಯಗಳಲ್ಲಿ ಅಮುಲ್ ಹಾಲಿನ ಬೆಲೆ ಹೆಚ್ಚಿಸಿತು. ಆಗ ಬಂಗಾಳದ ಮುಖಮಂತ್ರಿ ಮಮತಾ ಬಾನೆರ್ಜಿ ಅವರು ಇದು ತಮ್ಮ ರಾಜ್ಯದ ವಿರುದ್ಧ ಬಿಜೆಪಿ ನಡೆಸುತ್ತಿರುವ ತಾರತಮ್ಯವೆಂದು ಸಿಟ್ಟಿಗೆದ್ದರು. “ಮುಖ್ಯಮಂತ್ರಿಯಾಗಿ, ನಾನು ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಲು ಜನರಿಗೆ ಹೇಳಬಹುದಿತ್ತು, ಆದರೆ ನಾನು ಹಾಗೆ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಿಂದಾಗಿ ಗುಜರಾತ್ನಲ್ಲಿ ಡೈರಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಹೇಳಿದರು. ಎಲ್ಲಾ ಸಹಕಾರ ಸಂಘಗಳಲ್ಲಿ ಕಂಡುಬರುವ ಗಂಭೀರ ಸಮಸ್ಯೆಗಳು ಅಮೂಲಿನ ಸಂಘಗಳಲ್ಲಿಯೂ ಕಂಡುಬರುತ್ತದೆ . ಅಲ್ಲಿ ಕೂಡ ರಾಜಕಾರಿಣಿಗಳ ಅಧಿಪತ್ಯ, ಚುನಾವಣೆಗಳ ಮಿತಿಮೀರಿದ ಖರ್ಚು, ಗುಂಪುಗಾರಿಕೆ, ಭ್ರಷ್ಟಾಚಾರಗಳು ತಾಂಡವಿಸುತ್ತಿವೆ. ಹೋದ ವರ್ಷ ದೂಧಸಾಗರ್ ಡೈರಿಯ ಮಾಜಿ ಅಧ್ಯಕ್ಷ ವಿಪುಲ್ ಚೌಧರಿಯವರನ್ನು 750 ಕೋಟಿಗೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದರು . ಹಣಕಾಸಿನ ಅವ್ಯವಹಾರಕ್ಕಿಂತ ಮೋದಿ-ಶಾ ಜೋಡಿಯ ವಿರುದ್ಧವಾಗಿ ಕೆಲಸ ಮಾಡಿದ್ದು ಚೌಧರಿಯವರಿಗೆ ಮುಳುವಾಯಿತು ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ.
ಇಷ್ಟೆಲ್ಲಾ ಗೊಂದಲವಿರುವಾಗ ಅಮುಲ್ ಕೈ ಹಿಡಿದರೆ ನಂದಿನಿಗೆ ಆಗುವ ಲಾಭವೇನು ಎಂಬ ಪ್ರಶ್ನೆಗೆ ಉತ್ತರ ಹೊಳೆಯುವುದು ಕಷ್ಟ. ಅನೇಕ ಮಾರುಕಟ್ಟೆಗಳಲ್ಲಿ ಒಂದೇ ರೀತಿಯ ಉತ್ಪನ್ನಗಳನ್ನು ಮಾರುತ್ತಿರುವ ಎರಡೂ ಸಂಸ್ಥೆಗಳು ಪ್ರತಿಸ್ಪರ್ದಿಗಳು. ಈ ಸಹಯೋಗದಿಂದ ಕರ್ನಾಟಕದಲ್ಲಿ ಗಟ್ಟಿಯಾಗಲು ಅಮೂಲಿಗೆ ಅವಕಾಶವಾಗಬಹುದೇ ಹೊರತು ಗುಜರಾತನ್ನು ಪ್ರವೇಶಿಸಲು ನಂದಿನಿಗೆ ಸಾಧ್ಯವಾಗದು. ಕನ್ನಡಿಗರೊಂದಿಗೆ ಭಾವನಾತ್ಮಕವಾಗಿ ಬೆಸೆದಿರುವ ನಂದಿನಿಯಲ್ಲಿ ಅನೇಕ ಸಮಸ್ಯೆಗಳಿವೆ. ಕಳೆದ ಮೂರು ವರ್ಷಗಳಿಂದ ಸಣ್ಣ ಲಾಭ ಮಾಡುತ್ತಿದೆ ಎಂಬ ಅಪಾದನೆಯಿದ್ದರೂ, KMF ಪ್ರತಿವರ್ಷ ರಾಜ್ಯ ಸರಕಾರದಿಂದ ಬರುತ್ತಿರುವ ಸಾವಿರ ಕೋಟಿಗೂ ಹೆಚ್ಚಿನ ಸಬ್ಸಿಡಿಯ ಮೇಲೆ ಅವಲಂಬಿತವಾಗಿದೆ. ಆ ಸಬ್ಸಿಡಿ ಕಳೆದುಕೊಂಡು KMF ತನ್ನ ಹಾಲಿಗೆ ಸೂಕ್ತ ಬೆಲೆ ನಿರ್ಧರಿಸುವ ಸ್ವಾತಂತ್ರ್ಯ ಗಳಿಸಿಕೊಳ್ಳದಿದ್ದರೆ ಅದು ನಷ್ಟದ ಸುಳಿವಿಗೆ ಸಿಲುಕುತ್ತದೆ .
ಅಮೂಲಿಗಿರುವ ಸಂಸ್ಕರಣಾ ಮೂಲಸೌಕರ್ಯ, ರಾಷ್ಟ್ರವ್ಯಾಪಿ ಮಾರುಕಟ್ಟೆ ಜಾಲ ಅಥವಾ ಬ್ರ್ಯಾಂಡ್ ಶಕ್ತಿ ನಂದಿನಿಗಿಲ್ಲ. KMF ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಒಮ್ಮೆ ಹೇಳಿದಂತೆ ನಂದಿನಿಯ ಸಂಸ್ಕರಣಾ ಘಟಕಗಳು ಹಳತಾಗಿದ್ದರೂ ಅವುಗಳನ್ನು ನವೀಕರಿಸಲು ಸಂಸ್ಥೆಯಲ್ಲಿ ಹಣವಿಲ್ಲ. ಅನವಶ್ಯ ಹೆಚ್ಚುವರಿ ಸಿಬ್ಬಂದಿ ಹೊಂದಿ, ದಕ್ಷತೆಯ ಕೊರತೆಯಿರುವ ನಂದಿನಿ ಖಾಸಗಿ ಕಂಪನಿಗಳ ಅಥವಾ ಅಮೂಲಿನಂತಹ ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಕಳೆದುಕೊಳ್ಳುತಿದೆ. KMFಗಿರುವ ಮತ್ತೊಂದು ತಲೆನೋವೆಂದರೆ ಇರುವ ಬೇಡಿಕೆಗಿಂತ ಹೆಚ್ಚಿಗೆ ಸಂಗ್ರಹವಾಗುತ್ತಿರುವ ಹಾಲು. ಹೆಚ್ಚುವರಿ ಹಾಲನ್ನು ಮಾರಾಟ ಮಾಡಲು ಹೊಸ ಮರುಕ್ಕಟ್ಟೆಗಳಿಗೆ ವಿಸ್ತರಿಸಲು ಅದು ತಿಣುಕಾಡುತ್ತಿದೆ.
ಇಷ್ಟೊಂದು ದುರ್ಬಲವಾಗಿರುವ ನಂದಿನಿಯ ವಹಿವಾಟು ಸ್ವಲ್ಪ ಪ್ರತಿಕೂಲ ಪರಿಸ್ಥಿತಿ ಉಂಟಾದರೂ ಕೆಲವೇ ವರ್ಷಗಳಲ್ಲಿ ಕುಸಿದು ಬೀಳುವ ಸಾಧ್ಯತೆಯಿದೆ. ಆ ದಿನ ಬಂದರೆ ಕರ್ನಾಟಕದ ರೈತರ ಹಣೆಬರಹ ದೂರದ ಗುಜರಾತಿನ ರಾಜಕಾರಣಿಗಳು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಹುತ್ತದೆ. ಇದು ಶಾ ಅವರ ಪ್ರಸ್ತಾವದಲ್ಲಿರುವ ರೆಡ್ ಸಿಗ್ನಲ್.
~ಎಂ ಎ ಅರುಣˌ ನಂಜನಗೂಡು.