• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಜೋಷಿಮಠದ ದುರಂತ – ನಮ್ಮಲ್ಲಿ ನಿಸರ್ಗಪ್ರಜ್ಞೆ ಹೆಚ್ಚಿಸುವುದೇ ?

ನಾ ದಿವಾಕರ by ನಾ ದಿವಾಕರ
January 14, 2023
in Top Story, ಅಂಕಣ
0
ಜೋಷಿಮಠದ ದುರಂತ – ನಮ್ಮಲ್ಲಿ ನಿಸರ್ಗಪ್ರಜ್ಞೆ ಹೆಚ್ಚಿಸುವುದೇ ?
Share on WhatsAppShare on FacebookShare on Telegram

ಪರಿಸರ ರಕ್ಷಣೆಯ ಕೂಗನ್ನು ಮಾರುಕಟ್ಟೆಯ ಆವರಣ ಹೊರಗಿಟ್ಟು ಆಲಿಸುವುದು ವಿವೇಕಯುತ

ADVERTISEMENT



ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದಲ್ಲಿ ಸೂಕ್ಷ್ಮ ಪರಿಸರ ವಲಯಗಳನ್ನೂ ಸೇರಿದಂತೆ, ನಿಸರ್ಗ ಒದಗಿಸುವ ಸಕಲ ಸಂಪನ್ಮೂಲಗಳೂ ಸಹ ಮಾರುಕಟ್ಟೆಯನ್ನು ಪೋಷಿಸುವ ಕಚ್ಚಾವಸ್ತುಗಳಾಗಿ ಅಥವಾ ಸಲಕರಣೆಗಳಾಗಿ ಪರಿಗಣಿಸಲ್ಪಡುತ್ತವೆ. ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳ ಕ್ರೋಢೀಕರಣವನ್ನೇ ಪ್ರಧಾನವಾಗಿ ಪರಿಗಣಿಸುವ ನವ ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ನಿಸರ್ಗದ ಎಲ್ಲ ಮೂಲಗಳನ್ನೂ ಶೋಧಿಸುವುದೇ ಅಲ್ಲದೆ, ಪರ್ವತ-ಶಿಖರಗಳಿಂದ ಪಾತಾಳದವರೆಗೆ ಲಭ್ಯವಾಗುವ ಎಲ್ಲ ಸಂಪನ್ಮೂಲಗಳನ್ನೂ ಔದ್ಯಮೀಕರಣಗೊಳಿಸುವ ಒಂದು ಪ್ರಕ್ರಿಯೆ ಸದಾ ಚಾಲ್ತಿಯಲ್ಲಿರುತ್ತದೆ. ಇದನ್ನು ದೇಶದ ಆರ್ಥಿಕ ಪ್ರಗತಿ ಮತ್ತು ಜನತೆಯ ಉಜ್ವಲ ಭವಿಷ್ಯದ ಹೆಸರಿನಲ್ಲಿ, ಆಡಳಿತ ನೀತಿಗಳ ಮೂಲಕ ಪೋಷಿಸಲಾಗುತ್ತದೆ. ಜಗತ್ತಿನ ಎಲ್ಲ ಬಂಡವಾಳಶಾಹಿ ದೇಶಗಳಲ್ಲೂ ಈ ನೀತಿಯನ್ನು ಸರ್ವಾನುಮತದಿಂದ ಅನುಮೋದಿಸಲಾಗುತ್ತದೆ. ನಿಸರ್ಗದ ಒಡಲಲ್ಲಿ ಅಡಗಿರುವ ಸಂಪತ್ತಿನ ಕಣಜ ವರ್ತಮಾನದ ಸಮಾಜದ ಆರ್ಥಿಕ ಏಳಿಗೆಗಾಗಿ ಮಾತ್ರವೇ ಇದೆ ಎನ್ನುವ ಗ್ರಹಿಕೆ ಒಂದೆಡೆಯಾದರೆ, ಈ ಸಂಪತ್ತಿನ ಮೂಲಗಳನ್ನು ಶತಮಾನಗಳ ಭವಿಷ್ಯದ ಪೀಳಿಗೆಗೂ ಉಳಿಸಬೇಕಿದೆ ಎಂಬ ವಿವೇಕದ ಕೊರತೆ ಮತ್ತೊಂದೆಡೆ ಢಾಳಾಗಿ ಕಾಣಬಹುದು.

ತನ್ನ ಅಭಿವೃದ್ಧಿ ಪಥದಲ್ಲಿ ಭಾರತವೂ ಇಂತಹುದೇ ಸನ್ನಿವೇಶಗಳನ್ನು ಎದುರಿಸುತ್ತಲೇ ಬಂದಿದೆ. ನಿಸರ್ಗದ ಒಡಲನ್ನು ಬಗೆದು ಮಾರುಕಟ್ಟೆಯ ಕಟ್ಟೆಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳು, ಯಾತ್ರಾಸ್ಥಳಗಳು ಮತ್ತು ಚಾರಿತ್ರಿಕ ತಾಣಗಳೂ ಸಹ ಬಲಿಯಾಗುತ್ತಿರುತ್ತವೆ. ಜನಸಾಮಾನ್ಯರ ಧಾರ್ಮಿಕ ಶ್ರದ್ಧೆಯನ್ನು ಗೌರವಿಸಿ ಕಾಪಾಡುವ ನಿಟ್ಟಿನಲ್ಲಿ ನಿಸರ್ಗದ ಒಡಲಲ್ಲಿರುವ, ದಟ್ಟಾರಣ್ಯಗಳಲ್ಲಿರುವ, ಗಿರಿಪರ್ವತಗಳ ಮೇಲಿರುವ ಹಲವು ಧಾರ್ಮಿಕ ಕ್ಷೇತ್ರಗಳನ್ನು ಭಕ್ತಾದಿಗಳಿಗೆ ಮುಕ್ತಗೊಳಿಸುವುದು ಸಹಜ ಪ್ರಕ್ರಿಯೆಯಾಗಿ ಕಂಡರೂ ಸಹ , ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ಜಂಗಮ ಸ್ವರೂಪದ ನಗರೀಕರಣ, ಔದ್ಯಮೀಕರಣ ಮತ್ತು ಮಾರುಕಟ್ಟೆ ವ್ಯತ್ಯಯಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾದ್ದು ಸರ್ಕಾರಗಳ ನೈತಿಕ ಜವಾಬ್ದಾರಿ. ಈ ನಿಟ್ಟಿನಲ್ಲಿ ಪರಿಸರ ತಜ್ಞರ ಮತ್ತು ವಿಜ್ಞಾನಿಗಳ ಮುನ್ನೆಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಜವಾಬ್ದಾರಿಯೂ ಸರ್ಕಾರಗಳ ಮೇಲಿರುತ್ತದೆ. ಸರ್ಕಾರಗಳು ಪರಿಸರ ತಜ್ಞರ ಮತ್ತು ಭೂವಿಜ್ಞಾನಿಗಳ ಮುನ್ನೆಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸಿದಾಗ ಜೋಷಿಮಠಗಳು ಸಂಭವಿಸುತ್ತವೆ.

ಹಿಮಾಲಯದ ಮಡಿಲ ಕೂಸುಗಳಲ್ಲೊಂದು

ಸಮುದ್ರಮಟ್ಟದಿಂದ 6107 ಅಡಿ ಎತ್ತರದಲ್ಲಿರುವ ಜೋಷಿಮಠ ಉತ್ತರಖಂಡದ ಚಮೋಲಿ ಜಿಲ್ಲೆಯ ಒಂದು ಗಿರಿಧಾಮ, ಪಟ್ಟಣ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರ . ಹಿಂದೂಗಳ ಶ್ರದ್ಧಾಕೇಂದ್ರ ಚಾರ್‌ಧಾಮ್ ಮತ್ತು ಸಿಖ್ಖರ ಹೇಮಕುಂಡ ಸಾಹಿಬ್‌ಗೆ ಹೋಗುವ ಯಾತ್ರಾರ್ಥಿಗಳಿಗೆ ಈ ಪಟ್ಟಣವೇ ಪ್ರವೇಶದ್ವಾರ. ಅಷ್ಟೇ ಅಲ್ಲದೆ ಯುನೆಸ್ಕೋದಿಂದ ಪಾರಂಪರಿಕ ತಾಣ ಎಂದು ಪ್ರಮಾಣಿಸಲ್ಪಟ್ಟಿರುವ ಹೂಗಳ ಕಣಿವೆಗೂ ಇದೇ ಮಾರ್ಗವನ್ನು ಹಾದು ಹೋಗಬೇಕು. 23 ಸಾವಿರ ಜನಸಂಖ್ಯೆ ಇರುವ ಜೋಷಿಮಠ್‌ ಪಟ್ಟಣ ಸಹಜವಾಗಿಯೇ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. 1962ರ ಚೀನಾ ಯುದ್ಧದ ನಂತರ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಮುಖ್ಯವಾಗಿರುವ ಈ ತಾಣವು ಅನಿವಾರ್ಯವಾಗಿ ದೇಶದ ಬಹುದೊಡ್ಡ ಸೇನಾ ನೆಲೆಯೂ ಆಗಿದೆ.
‌
ಈ ಯಾತ್ರಾಸ್ಥಳ ಇಂದು ಅಪಾಯಕ್ಕೀಡಾಗಿದೆ. 2020ರ ಜುಲೈನಿಂದ 2022ರ ಮಾರ್ಚ್‌ ನಡುವೆ ಈ ಭಾಗದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದನ್ನು ಬಾಹ್ಯಾಕಾಶ ವಿಜ್ಞಾನಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅಕ್ಟೋಬರ್‌ 2021ರಲ್ಲೇ ಪಟ್ಟಣದ ಗಾಂಧಿನಗರ ಮತ್ತು ಸುನಿಲ್‌ ವಾರ್ಡ್‌ಗಳಲ್ಲಿ ಮನೆಗಳು ಬಿರುಕುಬಿಟ್ಟಿರುವುದನ್ನು ಸಹ ಗಮನಿಸಲಾಗಿದ್ದು, ಈವರೆಗೂ 723 ಕಟ್ಟಡಗಳು ಕುಸಿದಿವೆ. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ 6.65 ಸೆಂಟಿಮೀಟರ್‌ ಭೂಕುಸಿತವನ್ನು ಇಲ್ಲಿ ದಾಖಲಿಸಲಾಗುತ್ತಿದೆ. 145 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನೂ ನೀಡಲಾಗುತ್ತಿದೆ. ಲಕ್ಷಾಂತರ ಜನರು ನಿರ್ವಸತಿಗರಾಗಲಿದ್ದು, ಪ್ರವಾಸೋದ್ಯಮ ಮತ್ತು ಔದ್ಯಮಿಕ ಪ್ರಗತಿಯನ್ನೇ ಅವಲಂಬಿಸಿ ನೆಲೆಸಿದ್ದ ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತವಾಗಲಿದೆ. ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿಯೇ ಬದುಕು ಕಟ್ಟಿಕೊಂಡ ಸಾಮಾನ್ಯ ಜನತೆ ಅನಿಶ್ಚಿತತೆಯ ದಿನಗಳನ್ನು ಎದುರಿಸಬೇಕಾಗಿದೆ.

ಪಟ್ಟಣದಲ್ಲಿ ಸೂಕ್ತ ಪೂರ್ವ ಯೋಜನೆಗಳಿಲ್ಲದೆ ಕಟ್ಟಡ ನಿರ್ಮಾಣ ಮತ್ತು ಇತರ ಕಾಮಗಾರಿಗಳನ್ನು ನಡೆಸುತ್ತಿರುವುದೇ ಪ್ರಸ್ತುತ ದುರಂತಕ್ಕೆ ಕಾರಣ ಎಂದು ಉತ್ತರಖಾಂಡ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವರದಿಯೊಂದರಲ್ಲಿ ಹೇಳಲಾಗಿದೆ. ತ್ಯಾಜ್ಯಜಲವನ್ನು ನಿರ್ವಹಿಸಲು ಜೋಷಿಮಠದಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವ ಕಾರಣ ಮಲಿನಕಾರಕ ಪದಾರ್ಥಗಳೂ ಭೂಗರ್ಭವನ್ನು ಪ್ರವೇಶಿಸುತ್ತವೆ ಹಾಗಾಗಿ ಭೂಕುಸಿತ ತೀವ್ರವಾಗುತ್ತದೆ ಎಂದು ಭೂವಿಜ್ಞಾನಿಗಳು ಹೇಳುತ್ತಾರೆ. ಹಿಮಾಲಯ ತಪ್ಪಲಿನ ಈ ರಾಜ್ಯದ ಹಲವು ಪ್ರದೇಶಗಳಲ್ಲಿ ಇದೇ ಪರಿಸ್ಥಿತಿ ಉದ್ಭವಿಸುತ್ತಿದ್ದು ಚಮೋಲಿ ಜಿಲ್ಲೆಯಲ್ಲೇ 2013ರ ಭೀಕರ ಪ್ರವಾಹದ ನಂತರದಲ್ಲಿ ಹಲವು ಗ್ರಾಮಗಳು ಕುಸಿಯಲಾರಂಭಿಸಿವೆ. ಜೋಷಿಮಠದಲ್ಲಿ ಈಗ ಕುಸಿತ ಕಂಡುಬರುತ್ತಿದೆ.

ಅವಘಡಗಳ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ

ಜೋಷಿಮಠ ಪಟ್ಟಣವು ಈ ಹಿಂದೆ ಭೂಕುಸಿತವಾಗಿ, ಈಗ ಇಳಿಜಾರಿನಲ್ಲಿರುವ ಭೂಮಿಯ ಮೇಲೆ ನಿರ್ಮಿತವಾಗಿದೆ. ಕಾಲಕ್ರಮೇಣ ಈ ಭೂತಳದ ರಾಶಿಯು ಗಟ್ಟಿಯಾಗಿರಬಹುದಾದರೂ, ವ್ಯಾಪಕ ಕಟ್ಟಡ ನಿರ್ಮಾಣ ಮತ್ತು ರಸ್ತೆ, ಸೇತುವೆ , ಅಣೆಕಟ್ಟುಗಳ ನಿರ್ಮಾಣ ಕಾಮಗಾರಿಗಳಿಂದ, ಈ ಪ್ರಕ್ರಿಯೆಯಲ್ಲಿ ನಡೆಸುವ ಸ್ಪೋಟಗಳಿಂದ, ಭೂಮಿಯನ್ನು ಕೊರೆಯುವ ಚಟುವಟಿಕೆಗಳಿಂದ ಇಳಿಜಾರು ಪ್ರದೇಶಗಳು ದುರ್ಬಲವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಸಮಸ್ಯೆಯೇನೂ ಹೊಸತಲ್ಲ. 1976ರಲ್ಲೇ ಎಮ್‌ ಸಿ ಮಿಶ್ರಾ ಸಮಿತಿಯು ಭೂ ಕುಸಿತದ ಸಮಸ್ಯೆಯ ಕಾರಣಗಳನ್ನು ಶೋಧಿಸಿ ವರದಿಯನ್ನೂ ಸಲ್ಲಿಸಿತ್ತು. ಈ ವರದಿಯಲ್ಲೇ ಇಳಿಜಾರು ಪ್ರದೇಶದಲ್ಲಿ ಉತ್ಖನನ ಪ್ರಕ್ರಿಯೆಯನ್ನು ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಹೊರತೆಗೆಯುವುದರ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ಮುನ್ನೆಚ್ಚರಿಕೆಯ ಹೊರತಾಗಿಯೂ ಜೋಷಿಮಠ್‌ ಸುತ್ತಮುತ್ತ ರಸ್ತೆ ಮತ್ತು ಅಣೆಕಟ್ಟುಗಳ ನಿರ್ಮಾಣವನ್ನು ನಿಲ್ಲಿಸಲಿಲ್ಲ ಎನ್ನುತ್ತಾರೆ ʼ ಜೋಷಿಮಠ್‌ ಉಳಿಸಿ ಸಂಘರ್ಷ ಸಮಿತಿಯʼ ಕಾರ್ಯಕರ್ತ ಅಟುಲ್‌ ಸಾತಿ. ಈ ಸಮಿತಿಯು ಜೋಷಿಮಠದ ಬಳಿ ಎನ್‌ಟಿಪಿಸಿ ನಿರ್ಮಿಸುತ್ತಿರುವ 520 ಮೆಗಾವ್ಯಾಟ್‌ ಸಾಮರ್ಥ್ಯದ ತಪೋವನ್‌ ವಿಷ್ಣುಗಡ್‌ ಜಲವಿದ್ಯುತ್‌ ಘಟಕದ ವಿರುದ್ಧ 2004ರಿಂದಲೂ ಹೋರಾಟ ನಡೆಸುತ್ತಾ ಬಂದಿದೆ. ಜೋಷಿಮಠದ ಭೂಕುಸಿತಕ್ಕೆ ಈ ಯೋಜನೆಯೇ ಮೂಲ ಕಾರಣ ಎಂದು ಅಟುಲ್‌ ಸಾತಿ ಹೇಳುತ್ತಾರೆ.

ಡೆಹ್ರಾಡೂನ್‌ನಲ್ಲಿರುವ ಡಿಎಮ್‌ಎಮ್‌ಸಿ ಮತ್ತು ಘರ್ವಾಲ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಜೋಷಿಮಠದ ಬಳಿ ಇರುವ ಔಲಿಯ ಕೆಳಗಿನ ಪ್ರದೇಶದಲ್ಲಿ ಒಂದು ಕಿಲೋಮೀಟರ್‌ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಸುರಂಗವನ್ನು ಕೊರೆಯಲು ಬಳಸಿದ್ದ ಯಂತ್ರವು ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿನ ನೀರುಪೊಟರೆಗೆ ರಂಧ್ರ ಕೊರೆದಿತ್ತು. ಇದರಿಂದ ಒಂದು ಸೆಕಂಡಿಗೆ , 20 ರಿಂದ 30 ಲಕ್ಷ ಜನರ ಬಳಕೆಗೆ ಲಭ್ಯವಾಗಬಹುದಾಗಿದ್ದ 700-800 ಲೀಟರ್‌ ನೀರು ಹೊರಹರಿಯಲಾರಂಭಿಸಿತ್ತು. ಈ ಬೆಳವಣಿಗೆಯ ಕೆಲ ದಿನಗಳಲ್ಲೇ ಜೋಷಿಮಠದ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತ್ತು. ಜೋಷಿಮಠದ ಪ್ರಮುಖ ಜಲಸಂಪನ್ಮೂಲವಾದ ಸುನಿಲ್‌ ಕುಂಡ್‌ ಒಣಗಿಹೋಗಿತ್ತು. ಈ ನೀರಿನ ಹೊರಹರಿವಿನ ಪರಿಣಾಮವಾಗಿಯೇ ಭೂಕುಸಿತ ಉಂಟಾಗಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದನ್ನು ದೃಢಪಡಿಸುವಂತಹ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ ಎನ್ನುವುದೂ ವಾಸ್ತವ.

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸುತ್ತಿರುವ 6 ಕಿಲೋಮೀಟರ್‌ ವ್ಯಾಪ್ತಿಯ ಹೆಲಾಂಗ್-ಮಾರ್ವಾರಿ ಬೈಪಾಸ್‌ ರಸ್ತೆಯೂ ಸಹ ಉತ್ತರಖಂಡದ 825 ಕಿಲೋಮೀಟರ್‌ ಉದ್ದದ ಚಾರ್‌ಧಾಮ್‌ ರಸ್ತೆ ವಿಸ್ತರಣಾ ಯೋಜನೆಯ ಒಂದು ಭಾಗವಾಗಿದ್ದು ಇದರಿಂದಲೂ ಸಮಸ್ಯೆ ಉದ್ಭವಿಸಿರಬಹುದು ಎಂದು ಹೇಳಲಾಗುತ್ತದೆ. ಇಳಿಜಾರಿನ ಮೇಲಿರುವ ಈ ಪಟ್ಟಣದಲ್ಲಿ ಅತಿವೃಷ್ಟಿಯ ಕಾರಣದಿಂದಲೂ ಭೂಮಿ ಸಡಿಲವಾಗುತ್ತಿರುತ್ತದೆ. ಡಿಎಂಎಂಸಿ ದತ್ತಾಂಶದ ಅನುಸಾರ 2015 ರಿಂದ 2021ರ ಜೂನ್‌ವರೆಗೆ ಉತ್ತರಖಂಡದಲ್ಲಿ 7,750 ಮೇಘಸ್ಪೋಟಗಳು, ಅತಿವೃಷ್ಟಿ ಸಂಭವಿಸಿವೆ. ಇದರಿಂದ ಅನೇಕ ಬಾರಿ ಪ್ರವಾಹಗಳೂ ಉಂಟಾಗಿವೆ. ಫೆಬ್ರವರಿ 2021ರಲ್ಲಿ ಮತ್ತು ಜೂನ್‌ 2013ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಜೋಷಿಮಠದಲ್ಲಿ ಅತಿ ಹೆಚ್ಚಿನ ಭೂಸವಳಿಕೆ ಉಂಟಾಗಿದೆ ಎಂದು ಯುಎಸ್‌ಡಿಎಮ್‌ಎ ವರದಿಯಲ್ಲಿ ಹೇಳಲಾಗಿದೆ. 2019-21ರ ಅವಧಿಯಲ್ಲಿ ಸಂಭವಿಸಿದ ಅತಿವೃಷ್ಟಿಯ ಪರಿಣಾಮ ಭೂಕುಸಿತವೂ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2021ರಲ್ಲಿ ಬೃಹತ್‌ ಹಿಮಗಡ್ಡೆಯ ಪ್ರಪಾತವೊಂದು ಉರುಳಿ ಚಮೋಲಿ ಜಿಲ್ಲೆಯಲ್ಲಿ‌ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ತಪೋವನ್‌ ವಿಷ್ಣುಗಡ್‌ ಜಲವಿದ್ಯುತ್‌ ಘಟಕದ ಒಂದು ಭಾಗವೂ ನಾಶವಾಗಿತ್ತು. ಈಗ ಸಂಭವಿಸುತ್ತಿರುವ ಭೂಕುಸಿತಕ್ಕೆ ಇದೂ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಅಗಸ್ಟ್‌ 2022ರಲ್ಲೇ ಸ್ಥಳೀಯರು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯನ್ನು ಸಂಪರ್ಕಿಸಿದ್ದು, ಮನೆಗಳು ಬಿರುಕು ಬಿಡುತ್ತಿರುವುದನ್ನು ವರದಿ ಮಾಡಿದ್ದರು. ಆದರೆ ತಕ್ಷಣವೇ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುತ್ತಾರೆ ಅಟುಲ್‌ ಸಾತಿ. ಕಳೆದ ಹಲವು ದಿನಗಳಿಂದ ಈ ಸಮಸ್ಯೆ ಉಲ್ಬಣಿಸುತ್ತಿದ್ದು, ಮನೆಗಳಲ್ಲಿ ಹಠಾತ್ತನೆ ಬಿರುಕು ಕಾಣಿಸಿಕೊಳ್ಳುತ್ತಿವೆ. ಜೋಷಿಮಠದ ಒಂಬತ್ತು ವಾರ್ಡ್‌ಗಳಲ್ಲಿ ಜನವರಿ 11ರವರೆಗೆ 723 ಮನೆಗಳು ಕುಸಿದಿದ್ದು 169 ಕುಟುಂಬಗಳನ್ನು, 589 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜೋಷಿಮಠದ ಎಲ್ಲ ಒಂಬತ್ತು ವಾರ್ಡ್‌ಗಳನ್ನೂ ವಿಪತ್ತು ಬಾಧಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಜೀವಿಸಲು ಅಸುರಕ್ಷಿತವಾದ ಪ್ರದೇಶ ಎಂದು ಗುರುತಿಸಲಾಗಿದೆ.

ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಜಾರಿಗೊಳಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳಾಂತರಗೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನೂ ನೀಡುತ್ತಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರೂರ್ಕಿಯ ಐಐಟಿ, ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ, ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆ ಇವುಗಳನ್ನೊಳಗೊಂಡ ತಜ್ಞರ ಸಮಿತಿಯೊಂದನ್ನು ನೇಮಿಸಿದ್ದು ಇಡೀ ಪ್ರದೇಶದ ಪರಿವೀಕ್ಷಣೆ ನಡೆಸಲು ಆದೇಶಿಸಿದೆ. ಇಡೀ ಪ್ರದೇಶದ ಭೂತಾಂತ್ರಿಕ ಹಾಗೂ ಭೂಭೌತಿಕ ಪರಿವೀಕ್ಷಣೆ ನಡೆಸುವಂತೆ ಹಲವು ತಜ್ಞರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಭಾಗಶಃ ಕುಸಿದಿರುವ ಅಥವಾ ಹಾನಿಗೊಳಗಾಗಿರುವ ಮನೆಗಳ ದುರಸ್ತಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರವೂ ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟರ ನೇತೃತ್ವದಲ್ಲಿ 18 ಸದಸ್ಯರ ಸಮಿತಿಯೊಂದನ್ನು ನೇಮಿಸಿದ್ದು ಪಟ್ಟಣದ ಪುನರ್ವಸತಿಯ ಯೋಜನೆಯನ್ನು ಸಲ್ಲಿಸುವಂತೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಹೆಲಾಂಗ್‌ ಮತ್ತು ಮಾರ್ವಾರಿ ನಡುವಿನ ಚಾರ್‌ ಧಾಮ್‌ ರಸ್ತೆ ಕಾಮಗಾರಿಯನ್ನೂ ತಡೆಹಿಡಿಯಲಾಗಿದೆ. ಎನ್‌ಟಿಪಿಸಿ ನಿರ್ಮಿಸುತ್ತಿರುವ ತಪೋವನ್‌ ವಿಷ್ಣುಗಡ್‌ ಜನವಿದ್ಯುತ್‌ ಘಟಕ ಮತ್ತು ಜೋಷಿಮಠ್‌-ಔಲಿ ನಡುವೆ ನಿರ್ಮಿಸಲಾಗುತ್ತಿರುವ ರೋಪ್‌ವೇ ನಿರ್ಮಾಣವನ್ನೂ ತಡೆಹಿಡಿಯಲಾಗಿದೆ.

ಪರಿಸರ-ಅಭಿವೃದ್ಧಿ ಮತ್ತು ಪ್ರವಾಸೋದ್ಯಮ

ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆಯು ಸಾಕಷ್ಟು ಧಾರ್ಮಿಕ ಮಹತ್ವವನ್ನು ಹೊಂದಿದ್ದು ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಈ ಯಾತ್ರಾಸ್ಥಳಗಳಿಗೆ ಭೇಟಿ ನೀಡುತ್ತಾರೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ ಕ್ಷೇತ್ರಗಳು ಆಸ್ತಿಕರಿಗೆ ಪವಿತ್ರ ಯಾತ್ರಾಸ್ಥಳಗಳಾಗಿ ಕಂಡರೆ, ಪ್ರವಾಸ ಪ್ರಿಯರಿಗೂ, ಚಾರಣಪ್ರಿಯರಿಗೂ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರಿಗೂ ಈ ತಾಣಗಳು ಆಕರ್ಷಣೀಯವಾಗಿವೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ಇರುವಂತೆಯೇ ಆಸ್ತಿಕ ಸಮುದಾಯದಲ್ಲಿ ಚಾರ್‌ಧಾಮ್‌ ವೀಕ್ಷಣೆಯ ಬಗ್ಗೆಯೂ ಅಪಾರವಾದ ನಂಬಿಕೆ ಮತ್ತು ವಿಶ್ವಾಸಗಳಿವೆ. ಮುಗಿಲುಮುಟ್ಟುವ ಪರ್ವತ ಶ್ರೇಣಿಯಲ್ಲಿ ಸಂಚರಿಸುವ ಮಹದಾನಂದವನ್ನು ಸವಿಯುವ ಲಕ್ಷಾಂತರ ಪ್ರವಾಸಪ್ರಿಯ ಜನರಿಗೆ ಚಾರ್‌ಧಾಮ್‌ ಯಾತ್ರೆ ಮುಖ್ಯ ಅಕರ್ಷಣೆಯಾಗಿ ಕಾಣುತ್ತದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಈ ಮಾರ್ಗದಲ್ಲಿ ಜನಸಂಚಾರ, ಜನದಟ್ಟಣೆ ಮತ್ತು ಜನಸಂದಣಿ ಎಲ್ಲವೂ ಹೆಚ್ಚಾಗಿದ್ದು, ಈ ಕೋಟ್ಯಂತರ ಜನರ ಭಾರವನ್ನು ಹಿಮಾಲಯದ ಈ ನಿಸರ್ಗ-ಕೂಸುಗಳು ಹೊರಬೇಕಿದೆ.

ಪ್ರವಾಸೋದ್ಯಮವೂ ದೇಶದ ಜಿಡಿಪಿ ವೃದ್ಧಿಗೆ ಪೂರಕವಾದ ಒಂದು ಪ್ರಧಾನ ಔದ್ಯಮಿಕ ಕ್ಷೇತ್ರವಾಗಿರುವುದರಿಂದ ಈ ತಾಣಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ ಸೂಕ್ತ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವುದು ಸರ್ಕಾರಗಳಿಗೆ ಅನಿವಾರ್ಯವೂ ಆಗಿರುತ್ತದೆ. ಚಾರ್‌ಧಾಮ್‌ಗೆ ಹೋಗಲು ಜೋಷಿಮಠ್‌ ಮೂಲಕವೇ ಹಾದು ಹೋಗಬೇಕಿರುವುದರಿಂದ, ಜೋಷಿಮಠ್‌ ಪಟ್ಟಣವೂ ಕಳೆದ ಐವತ್ತು ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಪ್ರವಾಸೋದ್ಯಮಕ್ಕೆ ಅತ್ಯವಶ್ಯವಾದ ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳು, ಪ್ರವಾಸಿ ಗೃಹಗಳು ನಿರ್ಮಾಣವಾಗುತ್ತಿವೆ. ಹಾಗೆಯೇ ಇಲ್ಲಿಯೇ ಒಂದು ಸ್ಥಳೀಯವಾದ ಮಾರುಕಟ್ಟೆಯೂ ಸೃಷ್ಟಿಯಾಗಿದೆ. ಈ ಬೆಳವಣಿಗೆಗಳ ನಿರೀಕ್ಷೆಯಲ್ಲೇ 1976ರಲ್ಲಿ ನೇಮಿಸಲಾಗಿದ್ದ ಎಮ್‌ ಸಿ ಮಿಶ್ರಾ ಸಮಿತಿಯು ತನ್ನ ವರದಿಯಲ್ಲಿ “ ಜೋಷಿಮಠವು ಮಣ್ಣು ಮತ್ತು ಕಲ್ಲುಗಳ ರಾಶಿಯ ಮೇಲೆ ನಿಂತಿರುವ ಭೂಪ್ರದೇಶವಾಗಿದೆ,,,,ಹಾಗಾಗಿ ಇದು ಪಟ್ಟಣವನ್ನು ನಿರ್ಮಿಸಲು ಯೋಗ್ಯ ಸ್ಥಳವಲ್ಲ. ಸ್ಪೋಟಗಳಿಂದ ಉಂಟಾಗುವ ಕಂಪನ ಮತ್ತು ಭಾರಿ ವಾಹನ ಸಂಚಾರ ದಟ್ಟಣೆ ಇಲ್ಲಿನ ನೈಸರ್ಗಿಕ ಸಮತೋಲನವನ್ನು ಭಂಗಗೊಳಿಸುತ್ತದೆ ” ಎಂದು ಹೇಳಿತ್ತು. ಆದರೆ ಜೋಷಿಮಠದ ಬೆಳವಣಿಗೆ ವಿರುದ್ಧ ದಿಕ್ಕಿನಲ್ಲೇ ಸಾಗಿತ್ತು.

ನಿಸರ್ಗ ತನ್ನದೇ ಆದ ಸ್ವಾಭಾವಿಕ ನಿಯಮಗಳ ಅನುಸಾರ ತನ್ನ ನಡೆಯನ್ನು ನಿರ್ಧರಿಸಿಕೊಳ್ಳುತ್ತದೆ. ಮಾನವ ಸಮಾಜ ನಿಸರ್ಗದ ನೆಲೆಗಳನ್ನು ಬಳಸಿಕೊಂಡು ತನ್ನದೇ ಆದ ಸೌಕರ್ಯಗಳನ್ನು ನಿರ್ಮಿಸಿಕೊಳ್ಳುವ ಮುನ್ನ ನಿಸರ್ಗಸೂಕ್ಷ್ಮ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯ. ಈ ಹಾದಿಯಲ್ಲಿ ಮಾನವ ಸಮಾಜ ಎಡವಿದ ಸಂದರ್ಭದಲ್ಲೆಲ್ಲಾ ನೈಸರ್ಗಿಕ ವಿಕೋಪಗಳು ನಮ್ಮನ್ನು ಬಡಿದೆಬ್ಬಿಸುತ್ತಲೇ ಬಂದಿವೆ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಔದ್ಯಮಿಕ ಪ್ರಗತಿಯ ಮಾದರಿಗಳು ನಿಸರ್ಗಸೂಕ್ಷ್ಮಗಳನ್ನು ಉಲ್ಲಂಘಿಸುತ್ತಲೇ ನಡೆಯುವುದರಿಂದಲೇ ಜಗತ್ತಿನಾದ್ಯಂತ ಅನೇಕಾನೇಕ ದುರಂತಗಳು ಸಂಭವಿಸಿವೆ. ಭೂಕುಸಿತದಿಂದಲೇ ಲಕ್ಷಾಂತರ ಜನರು ನಿರ್ಗತಿಕರಾಗಿರುವ ಪ್ರಸಂಗಗಳು ನಮ್ಮ ಮುಂದಿವೆ. ಆಧುನಿಕ ಜಗತ್ತಿಗೆ ಅವಶ್ಯವಾದ ಮತ್ತು ಕೆಲವೊಮ್ಮೆ ಅವಶ್ಯವಲ್ಲದ ಐಷಾರಾಮಿ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಪರ್ವತ ಶ್ರೇಣಿಗಳನ್ನು, ದಟ್ಟಾರಣ್ಯಗಳನ್ನು, ಹುಲ್ಲುಗಾವಲು ಪ್ರದೇಶಗಳನ್ನು ಮತ್ತು ಕಣಿವೆ ಪ್ರದೇಶಗಳನ್ನು ಆಕ್ರಮಿಸುತ್ತಲೇ ಬಂದಿರುವ ಆಧುನಿಕ ಮಾನವ ಸಮಾಜವು ಇಂತಹ ಅವಘಡಗಳಿಂದ ಪಾಠ ಕಲಿಯಬೇಕಿದೆ.

ಮೈಸೂರಿನ ಪವಿತ್ರ ಹಾಗೂ ಇತಿಹಾಸಪ್ರಸಿದ್ಧ ಚಾಮುಂಡಿ ಬೆಟ್ಟದ ಮೇಲೆ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳು, ನಿರ್ಮಾಣ ಕಾರ್ಯಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವಂತಹ ಕಾಮಗಾರಿಗಳ ವಿರುದ್ಧ ಈಗಾಗಲೇ ಮೈಸೂರಿನ ನಾಗರಿಕರು ಧ್ವನಿ ಎತ್ತಿದ್ದಾರೆ. “ ಚಾಮುಂಡಿ ಬೆಟ್ಟ ಉಳಿಸಿ ಹೋರಾಟ ಸಮಿತಿ ”ಯ ನೇತೃತ್ವದಲ್ಲಿ ಈಗಾಗಲೇ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಒಂದು ಪ್ರವಾಸಿ ಕೇಂದ್ರವಾಗಿ, ಧಾರ್ಮಿಕ ಕೇಂದ್ರವಾಗಿ ಚಾಮುಂಡಿಬೆಟ್ಟದ ಅಭಿವೃದ್ಧಿ ಅತ್ಯವಶ್ಯವಾದರೂ, ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳಲಾಗುವ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜನತೆ ಜಾಗೃತರಾಗಬೇಕಿದೆ. ಈಗಾಗಲೇ ಬೆಟ್ಟದ ಮೇಲೆ ವಸತಿಗೃಹಗಳು, ಅತಿಥಿಗೃಹ, ಪಾರ್ಕಿಂಗ್‌ ತಾಣ, ವಾಣಿಜ್ಯ ಕಟ್ಟಡಗಳು ಮುಂತಾದ ಕಾಮಗಾರಿಗಳಿಗೆ ಸರ್ಕಾರವು ಪ್ರಸಾದ ಯೋಜನೆಯಡಿ ಅನುಮತಿ ನೀಡಿರುವುದು ಪರಿಸರವಾದಿಗಳಲ್ಲಿ ಆತಂಕ ಮೂಡಿಸುವಂತಿದೆ.

ದೇವಿಕೆರೆಗೆ ಹೊಸ ರೂಪ ನೀಡುವ ಭರದಲ್ಲಿ ಹೂಳೆತ್ತುವ ಕಾಮಗಾರಿಗೂ ಚಾಲನೆ ನೀಡಲಾಗಿದ್ದು ಆಧುನಿಕ ಮಾದರಿಯ ಟೈಲ್ಸ್‌ ಹಾಕಿದ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ, ಜನಸಂಚಾರ ಮತ್ತು ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. 1500 ಎಕರೆಗೂ ಹೆಚ್ಚು ಅರಣ್ಯ ಪ್ರದೇಶದ ಚಾಮುಂಡಿಬೆಟ್ಟದಲ್ಲಿ 550 ಜಾತಿಯ ಸಸ್ಯ-ವೃಕ್ಷಗಳು, 150 ಜಾತಿಯ ಚಿಟ್ಟೆಗಳು, 90 ಜಾತಿಯ ಪಕ್ಷಿಗಳು, 10 ಚಿರತೆಗಳು ಇರುವುದನ್ನು ಪರಿಸರ ಇಲಾಖೆಯೇ ಗುರುತಿಸಿದೆ. ಚಾಮುಂಡಿಬೆಟ್ಟ ಮೈಸೂರಿನ ಜಲಾನಯನ ಪ್ರದೇಶವಾಗಿದ್ದು 20 ಕೆರೆಗಳಿಗೆ ನೀರು ಉಣಿಸುತ್ತದೆ. ಹಾಗಾಗಿ ಚಾಮುಂಡಿಬೆಟ್ಟ ಕಾಂಕ್ರೀಟ್‌ಮಯವಾದಷ್ಟೂ ಅಂತರ್ಜಲಕ್ಕೆ ಹಾನಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಈ ನಿಸರ್ಗ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪತ್ತು ನಾಶವಾಗದಂತೆ ಎಚ್ಚರವಹಿಸುವುದು ಅತ್ಯವಶ್ಯ. ಈ ಕಾರಣಕ್ಕಾಗಿಯೇ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಯನ್ನೂ ವಿರೋಧಿಸಲಾಗುತ್ತಿದೆ.

ಉಪಸಂಹಾರ

ಪರ್ವತಶ್ರೇಣಿಗಳಲ್ಲಿರಲಿ, ದಟ್ಟ ಅರಣ್ಯದಲ್ಲಿರಲಿ ಅಥವಾ ನದಿತೀರಗಳಲ್ಲೇ ಇರಲಿ, ಧಾರ್ಮಿಕ ಕೇಂದ್ರಗಳು ಜನಸಾಮಾನ್ಯರ ಪಾಲಿಗೆ ಸಾಂತ್ವನದ ನೆಲೆಗಳಾಗಿರುತ್ತವೆ. ತಮ್ಮ ಬದುಕು ಸವೆಸಲು, ಕಷ್ಟಗಳ ಪರಿಹಾರಕ್ಕಾಗಿ ಮತ್ತು ಭವಿಷ್ಯದ ಭರವಸೆಗಾಗಿ ಜನಸಾಮಾನ್ಯರು ಯಾತ್ರಾಸ್ಥಳಗಳಿಗೆ , ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡುವುದು ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಸಹಜವಾದ ಪ್ರವೃತ್ತಿಯಾಗಿಯೇ ಕಾಣುತ್ತದೆ. ಜನಸಾಮಾನ್ಯರ ಈ ಶ್ರದ್ಧಾಕೇಂದ್ರಗಳಿಗೆ ಕಾಯಕಲ್ಪ ನೀಡುವುದು, ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವೂ ಆಗಿರುತ್ತದೆ. ಹಾಗೆಯೇ ನಿಸರ್ಗದ ಮಡಿಲಲ್ಲಿರುವ ಸಾವಿರಾರು ಶ್ರದ್ಧಾಕೇಂದ್ರಗಳನ್ನು ಜನಸ್ನೇಹಿಯನ್ನಾಗಿ ಮಾಡುವುದರೊಂದಿಗೇ, ಈ ಸ್ಥಾವರಗಳಿಗೆ ನೆಲೆ ನೀಡುವ ನಿಸರ್ಗದ ಒಡಲನ್ನು ಸಂರಕ್ಷಿಸುವ ಜವಾಬ್ದಾರಿಯೂ ಇರುತ್ತದೆ.

ಪರಿಸರ ಸಮತೋಲನಕ್ಕೆ ಹಾನಿಯಾಗದಂತೆ ಇಂತಹ ಕೇಂದ್ರಗಳ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ರೂಪಿಸುವುದು ಆಡಳಿತ ವ್ಯವಸ್ಥೆಯ, ಸರ್ಕಾರಗಳ ಮತ್ತು ನಾಗರಿಕರ ಆದ್ಯತೆಯಾಗಬೇಕಿದೆ. ಹಾಗಾದಲ್ಲಿ ಮಾತ್ರ ಭವಿಷ್ಯದ ತಲೆಮಾರಿಗೆ ಈ ಪವಿತ್ರ/ಸುಂದರ/ಆಕರ್ಷಕ ನೈಸರ್ಗಿಕ ಶ್ರದ್ಧಾಕೇಂದ್ರಗಳನ್ನು ಮತ್ತು ಅದನ್ನು ಪೋಷಿಸುವ ನಿಸರ್ಗದ ಮಡಿಲನ್ನು ಸುರಕ್ಷಿತವಾಗಿ ಉಳಿಸಿಹೋಗಲು ಸಾಧ್ಯವಾದೀತು. ನಮ್ಮ ಹಿಂದಿನ ಮತ್ತು ಇಂದಿನ ತಲೆಮಾರು ಕಂಡು ಅನಂದಿಸುವ ನಿಸರ್ಗ ಸೌಂದರ್ಯವನ್ನು ಮತ್ತು ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಭವಿಷ್ಯದ ತಲೆಮಾರು ಸಹ ನೋಡಿ ಆನಂದಿಸುವ ಹಕ್ಕು ಹೊಂದಿರುತ್ತದೆ. ಇಷ್ಟು ವಿವೇಕ ವರ್ತಮಾನದ ಸಮಾಜದಲ್ಲಿ ಇರಬೇಕಾಗುತ್ತದೆ. ಈ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸಿಗರಲ್ಲೂ ಈ ಪ್ರಜ್ಞೆ ಇರಬೇಕಾಗುತ್ತದೆ. ಸರ್ಕಾರಗಳೂ ಸಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಹಂತದಲ್ಲಿ ಪರಿಸರತಜ್ಞರ ಮತ್ತು ವಿಜ್ಞಾನಿಗಳ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಶೀಲಿಸಿ, ಸಾರ್ವಜನಿಕ ಚರ್ಚೆಯ ನಂತರದಲ್ಲೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದು ಒಳಿತು. ಹಾಗಾದಲ್ಲಿ ನಿಸರ್ಗವೂ ಉಳಿಯುತ್ತದೆ, ನಾವೂ ಉಳಿಯುತ್ತದೆ ಭವಿಷ್ಯದ ತಲೆಮಾರಿಗೂ ಏನನ್ನಾದರೂ ಬಿಟ್ಟುಹೋಗಲು ಸಾಧ್ಯವಾಗುತ್ತದೆ.

(ಲೇಖನದಲ್ಲಿನ ಕೆಲವು ತಾಂತ್ರಿಕ ದತ್ತಾಂಶ ಮತ್ತು ಮಾಹಿತಿಗಳಿಗೆ ಆಧಾರ : ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ. Why is the land sinking in Joshimath 13 ಜನವರಿ 2023)

Tags: ವಿವೇಕಾನಂದ
Previous Post

ಸ್ಯಾಂಟ್ರೋ ರವಿಗೆ ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ: ಎಡಿಜಿಪಿ ಅಲೋಕ್ ಕುಮಾರ್

Next Post

ನಂದಿನಿಯ ತಲೆಯ ಮೇಲೆ ತುಪ್ಪ ಸವರಲು ಬಂದಿರುವ ಅಮುಲ್

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ನಂದಿನಿಯ ತಲೆಯ ಮೇಲೆ ತುಪ್ಪ ಸವರಲು ಬಂದಿರುವ ಅಮುಲ್

ನಂದಿನಿಯ ತಲೆಯ ಮೇಲೆ ತುಪ್ಪ ಸವರಲು ಬಂದಿರುವ ಅಮುಲ್

Please login to join discussion

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada