ಮಂಡ್ಯ:ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Mandya violence) ಗಣೇಶ ಮೂರ್ತಿಯ ವಿಸರ್ಜನೆ (Ganesha visarjan) ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Crime news) ಹಾಗೂ ಗಲಭೆ (Nagamangala Violence) ಪ್ರಕರಣದಲ್ಲಿ ಬಂಧಿತರಾದ ಎಲ್ಲ 55 ಆರೋಪಿಗಳಿಗೆ ನ್ಯಾಯಾಲಯ ಜಾಮೀನು (Bail) ನೀಡಿದೆ.
ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಗಲಭೆಯಲ್ಲಿ ಬಂಧನವಾಗಿದ್ದ ಎಲ್ಲ ಆರೋಪಿಗಳಿಗೆ ಮಂಡ್ಯದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಒಟ್ಟು 55 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಈ ಎಲ್ಲರಿಗೂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಆರೋಪಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್, ಪ್ರತೀ ಭಾನುವಾರ ಠಾಣೆಗೆ ಬಂದು ಸಹಿ ಹಾಕುವುದು, ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ ಹಾಗೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ. ನಾಗಮಂಗಲದಲ್ಲಿ ಗಲಭೆಯಾದ ನಂತರ ಪೊಲೀಸರು ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಿದ್ದರು. ಸೆಪ್ಟೆಂಬರ್ 12 ರಿಂದ ಆರೋಪಿಗಳು ಮಂಡ್ಯ ಜೈಲಿನಲ್ಲೇ ಇದ್ದರು. ಆರೋಪಿಗಳಿಗೆ ಸೋಮವಾರ ಬಿಡುಗಡೆ ಭಾಗ್ಯ ಸಿಗಬಹುದು.