ನಾಗಾಲ್ಯಾಂಡ್ನಲ್ಲಿ ಉಗ್ರಗಾಮಿಗಳ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾದವೊಂದು ನಡೆದುಹೋಗಿದೆ. ಈ ಪ್ರಮಾದಕ್ಕೆ 13 ಮಂದಿ ಅಮಾಯಕ ಬುಡಕಟ್ಟು ಜನರು ತಮ್ಮ ಪ್ರಾಣ ತೆತ್ತಿದ್ದಾರೆ. ಉಗ್ರರೆಂದು ಭಾವಿಸಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿ 13 ಜನ ನಾಗರಿಗರೀಕರ ಜೀವ ತೆಗೆದಿದೆ.
ಭಾರತೀಯ ಸೇನೆಯೂ ನಾಗಾಲ್ಯಾಂಡ್ನಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಗಿಳಿತ್ತು. ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿರುವ ಮಾನ್ ಜಿಲ್ಲೆಯಲ್ಲಿ ಉಗ್ರಗಾಮಿಗಳ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕೂಲಿಗೆ ತೆರಳಿ ವಾಪಸ್ಸಾಗುತ್ತಿದ್ದ ಬುಡಕಟ್ಟು ಜನರನ್ನು ಉಗ್ರರೆಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿದ್ದು, ಸೇನೆಯ ಗುಂಡಿಗೆ 13 ಜನ ಉಸಿರು ಚೆಲ್ಲಿದ್ದಾರೆ.
ಉಗ್ರಗಾಮಿಗಳ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ಮಾನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಬುಡಕಟ್ಟು ಜನರನ್ನೇ ಉಗ್ರರೆಂದು ಭಾವಿಸಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದವರ ಮೇಲೆ ಸೇನೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳ ಗುಂಡಿಗೆ 13 ಬುಡಕಟ್ಟು ಯುವಕರು ಸಾವನ್ನಪ್ಪಿದ್ದಾರೆ.
ಇನ್ನು ಹತ್ಯೆ ಖಂಡಿಸಿ ಗ್ರಾಮಸ್ಥರು ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಓರ್ವ ಯೋಧ ಮೃತಪಟ್ಟಿದ್ದಾನೆ. ಸದ್ಯ ಮಾನ್ ಜಿಲ್ಲೆಯಲ್ಲಿ ಉದ್ರಿಕ್ತ ವಾತಾವಾರಣ ನಿರ್ಮಾಣಗೊಂಡಿದೆ. ದುರಂತದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಷಾದ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ತೀವ್ರ ನೋವಾಗಿದೆ.
ಜೀವಗಳನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಅತೀವ ಸಂತಾಪಗಳು. ರಾಜ್ಯ ಸರ್ಕಾರವು ಉನ್ನತ ಮಟ್ಟದ ಎಸ್‌ಐಟಿ ರಚಿಸಿದ್ದು, ಈ ಘಟನೆ ಬಗ್ಗೆ ಅದು ಕೂಲಂಕಷ ತನಿಖೆ ನಡೆಸಲಿದೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಕೂಡ ಘಟನೆಯನ್ನು ಖಂಡಿಸಿದ್ದು, ಉನ್ನತ ಮಟ್ಟದ ವಿಶೇಶ ತನಿಖಾ ತಂಡ ತನಿಖೆ ನಡೆಸಲಿದೆ ಎಂದಿದ್ದಾರೆ. ಓಟಿಂಗ್ನಲ್ಲಿ ನಾಗರಿಕರ ಹತ್ಯೆ ನಡೆದಿರುವುದು ದುರದೃಷ್ಟಕರ. ಮೃತರ ಕುಟುಂಬಗಳಿಗೆ ಸಂತಾಪಗಳು ಹಾಗೂ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಉನ್ನತ ಮಟ್ಟದ ವಿಶೇಷ ತನಿಖಾ ತಂಡ ಘಟನೆಯ ತನಿಖೆ ನಡೆಸಲಿದ್ದು, ಕಾನೂನಿನ ಮೂಲಕ ನ್ಯಾಯ ಸಿಗಲಿದೆ. ಸಮಾಜದ ಎಲ್ಲ ವರ್ಗದವರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ನೆಫಿಯು ರಿಯೊ.
ಇನ್ನು ಘಟನೆ ಬಗ್ಗೆ ಸೇನೆ ಕೂಡ ವಿಷಾದ ವ್ಯಕ್ತಪಡಿಸಿದೆ. ಸದ್ಯ ಮಾನ್ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡತಂತಿದೆ. ಭದ್ರತಾ ಪಡೆಗಳ ಪ್ರಮಾದದಿಂದಾಗಿ 13 ಜನ ಅಮಾಯಕರು ಸಾವನ್ನಪ್ಪಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.