ಇಂದು ಪ್ರತಿಯೊಬ್ಬ ವ್ಯಕ್ತಿಯ ಕನಸು ಮನೆಯೊಂದನ್ನು ಹೊಂದುವುದು. ಅದರೆ ಮನೆ ನಿರ್ಮಾಣ ಎನ್ನೋದು ಸುಲಭದ ಮಾತಲ್ಲ. ಸೈಟ್ ಕೊಳ್ಳಲು ಲಕ್ಷಾMತರ ರೂಪಾಯಿ ವ್ಯಯಿಸುವ ಜತೆಗೇ ಮನೆ ನಿರ್ಮಾಣಕ್ಕೂ ಅಷ್ಟೇ ಹಣ ವ್ಯಯಿಸಬೇಕಿದೆ. ಆದರೆ ಮೈಸೂರಿನ ಸಂಸ್ಥೆಯೊಂದು ಮನೆ ನಿರ್ಮಾಣದ ತ್ಯಾಜ್ಯವನ್ನೇ ಬಳಸಿಕೊಂಡು ಇಟ್ಟಿಗೆ ನಿರ್ಮಿಸಿ ಆ ಮೂಲಕ ಮನೆ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡುತಿದ್ದು ಈ ವಿನೂತನ ವಿಧಾನ ಜನಪ್ರಿಯವೂ ಆಗುತ್ತಿದೆ. ನಗರದಲ್ಲಿ ಸುಸ್ಥಿರ ಟ್ರಸ್ಟ್ ಎಂಬ ಸಂಸ್ಥೆಯೊಂದು ಈ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ. ಎಲ್ಲ ಮಹಾನಗರಗಳನ್ನೂ ಪೆಡಂಭೂತವಾಗಿ ಕಾಡುತ್ತಿರುವ ಸಮಸ್ಯೆ ಕಟ್ಟಡ ತ್ಯಾಜ್ಯ. ಪ್ರತಿದಿನ ಅಭಿವೃದ್ಧಿಯಾಗುತ್ತಿರುವ ನಗರಗಳಲ್ಲಿ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯವೂ ಹೆಚ್ಚಾಗುತ್ತಲೇ ಇದೆ. ಕಟ್ಟಡ ತ್ಯಾಜ್ಯದ ಸಮಸ್ಯೆ ಬಗೆಹರಿಸಿ ಅಭಿವೃದ್ಧಿ ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸುಸ್ಥಿರ ಟ್ರಸ್ಟ್ ನ ಆರ್ಕಿಟೆಕ್ಟ್ ಎಂ.ರಾಜೇಶ್ ಜೈನ್ ಹೊಸ ಹೆಜ್ಜೆಯೊಂದನ್ನಿಟ್ಟಿದ್ದಾರೆ.
ಸುಸ್ಥಿರ ಟ್ರಸ್ಟ್ ನ ಸದಸ್ಯರಲ್ಲೊಬ್ಬರಾದ ರಾಜೇಶ್ ಜೈನ್ ಅವರು ಕಟ್ಟಡ ತ್ಯಾಜ್ಯ ಬಳಸಿ ಹೊಸ ಮನೆ, ಕಟ್ಟಡಗಳನ್ನು ಕಟ್ಟುವ ವಿಶಿಷ್ಟ ಯೋಜನೆಯನ್ನು ಆರಂಭಿಸಿ ಈವರೆಗೂ ಈ ರೀತಿಯ ಸುಮಾರು 150 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಮೈಸೂರು ತಾಲ್ಲೂಕಿನ ಕಡಕೊಳ ಬಳಿ ಇರುವ ಇವರ ಕಾರ್ಖಾನೆಯಲ್ಲಿ ಕಟ್ಟಡ ತ್ಯಾಜ್ಯ ಬಳಸಿ ಮನೆ ನಿರ್ಮಾಣಕ್ಕೆ ಬೇಕಾದ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಎಲ್ಲರೂ ಕಾಂಕ್ರೀಟ್, ಇಟ್ಟಿಗೆ, ಸಿಮೆಂಟ್ ಬಳಸಿ ಮನೆ ಕಟ್ಟಿದ ಮೇಲೆ ಉಳಿಯುವ ತ್ಯಾಜ್ಯದಿಂದ ಇಲ್ಲಿ ಹೊಸ ಕಟ್ಟಡಕ್ಕೆ ಮೆಟ್ಟಿಲು, ಗೋಡೆ, ಇಟ್ಟಿಗೆ, ತಾರಸಿಗಳು ತಯಾರಾಗುತ್ತವೆ.
ಸಾಮಾನ್ಯ ಕಟ್ಟಡ ಕಟ್ಟಿದಮೇಲೆ ಸಿಗುವ ಕಟ್ಟಡ ತ್ಯಾಜ್ಯವನ್ನು ಹಣ ಕೊಟ್ಟು ಕೊಂಡುಕೊಳ್ಳುವ ಇವರು, ಮಣ್ಣು, ಎಂ ಸ್ಯಾಂಡ್, ಕಾಂಕ್ರೀಟ್, ಬೂದಿ ಬಳಸಿ ಇಂಟರ್ಲಾಕ್ ಮಡ್ ಬ್ಲಾಕ್ಗಳನ್ನು ತಯಾರಿಸಿ ಅದನ್ನೇ ಇಟ್ಟಿಗೆಯಂತೆ ಬಳಸುತ್ತಾರೆ. ಈ ಇಟ್ಟಿಗೆಯನ್ನು ಸುಡಬೇಕಾಗಿಲ್ಲ. ಇಂಟರ್ಲಾಕ್ ಮಾಡಿದರೆ ಗಟ್ಟಿಯಾದ ಗೋಡೆ ತಯಾರಾಗುತ್ತದೆ. ವಿಶೇಷವೆಂದರೆ ಇದಕ್ಕೆ ಕ್ಯೂರಿಂಗ್ ಹಾಗೂ ಪೇಂಟಿಂಗ್ ಅವಶ್ಯಕತೆ ಇಲ್ಲ. ಇದರಿಂದ ಸಾಕಷ್ಟು ಹಣ ಹಾಗೂ ನೀರನ್ನು ಉಳಿಸಬಹುದು. ಈ ರೀತಿಯ ಇಟ್ಟಿಗೆಗಳನ್ನು ತಯಾರಿಸಲು ಇಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದಕ್ಕೆಂದೇ ವಿಶೇಷವಾದ ಯಂತ್ರವೂ ಇದೆ. ಇದರಿಂದಾಗಿ ಕೆಲವರಿಗೆ ಕೆಲಸ ಸಿಕ್ಕಂತಾಗಿರುವುದು ಗಮನಾರ್ಹ. ಅಲ್ಲದೆ ಈ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಉಕ್ಕು ಬಳಸಲಾಗುತ್ತದೆ. ‘ಹಿಂದಿನ ಕಾಲದಲ್ಲಿ ಸ್ಟೀಲ್, ಕಬ್ಬಿಣ ಬಳಸದೆ ಮನೆ ಕಟ್ಟುತ್ತಿದ್ದರು. ಆದರೂ ಆ ಕಟ್ಟಡಗಳು ಶತಮಾನಗಳ ಕಾಲ ಗಟ್ಟಿಮುಟ್ಟಾಗಿವೆ. ನಾವು ಅದೇ ರೀತಿ ಸ್ಟೀಲ್ ಬಳಕೆ ಕಡಿಮೆ ಮಾಡಿ ಸುಣ್ಣದ ಗಾರೆಯನ್ನು ಬಳಸುತ್ತೇವೆ’ ಎನ್ನುತ್ತಾರೆ ರಾಜೇಶ್ ಜೈನ್.
ಸಾರ್ವಜನಿಕರಿಗೆ ಇಂತಹ ಮನೆಗಳ ಬಗ್ಗೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ಇಂತಹ ಮನೆಗಳನ್ನು ಅವರೇ ಮುಂದೆ ಬಂದು ಕಟ್ಟಿಸುವಂತಾಗಬೇಕಾದರೆ ಅವರಲ್ಲಿ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಅರಿವು ಮೂಡುವುದು ಅವಶ್ಯಕ. ಕಟ್ಟಡದ ಗುಣಮಟ್ಟ, ಹೊರನೋಟದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸಾರ್ವಜನಿಕರು ಇಂತಹ ಮನೆಗಳಿಂದ ದೂರ ಉಳಿದಿದ್ದಾರೆ. ಬಳಸುವುದು ಕಟ್ಟಡ ತ್ಯಾಜ್ಯವಾದರೂ ನಿರ್ಮಾಣವಾಗುವ ಕಟ್ಟಡದ ಗುಣಮಟ್ಟ, ಸಾಮರ್ಥ್ಯ ಅತ್ಯುತ್ತಮವಾಗಿಯೇ ಇರುತ್ತದೆ ಎಂಬುದು ಸಾರ್ವಜನಿಕರು ಗಮನದಲ್ಲಿಡಬೇಕಾದ ಅಂಶವಾಗಿದ್ದು ರಾಜೇಶ್ ಜೈನ್ ಇಂತಹ ಮನೆಗಳನ್ನು ಮೈಸೂರಿನ ಸುತ್ತಮುತ್ತ ಕಟ್ಟಿಸುತಿದ್ದಾರೆ.
ಹೆಚ್ಚು ಮಣ್ಣು ಹಾಗೂ ಕಡಿಮೆ ಸಿಮೆಂಟ್, ಕಾಂಕ್ರೀಟ್ ಬಳಸಿ ಕಟ್ಟುವ ಈ ಮನೆಗಳು ಸ್ವಾಭಾವಿಕವಾಗಿಯೇ ಬಹಳ ತಣ್ಣಗಿರುತ್ತವೆ. ಆದ್ದರಿಂದ ಇಲ್ಲಿ ವಾಸಿಸುವವರಿಗೆ ಫ್ಯಾನ್, ಎ.ಸಿ. ಬೇಕಿಲ್ಲ. ಮನೆಯ ಹೊರಗೆ ಬರುವ ಬಿಸಿಲಿನ ಶಾಖವನ್ನು ಇಂಟರ್ಲಾಕ್ ಬ್ಲಾಕ್ಗಳು ಒಳಗೆ ಬರಲು ಬಿಡುವುದಿಲ್ಲ. ಇದರಿಂದಾಗಿ ಹೊರಗೆ ಎಷ್ಟು ಸೆಖೆ ಇದ್ದರೂ ಮನೆಯೊಳಗೆ ತಣ್ಣನೆಯ ವಾತಾವರಣ ಇರುತ್ತದೆ. ಮೊದಲ ನೋಟಕ್ಕೆ ಮಂಗಳೂರು ಹಂಚಿನಂತೆ ಕಾಣುವ ಮೈಕ್ರೋ ಕಾಂಕ್ರೀಟ್ ರೂಫಿಂಗ್ ಟೈಲ್ಸ್ ಅನ್ನು ಈ ಮನೆಗಳಿಗೆ ಬಳಸಲಾಗುತ್ತಿದೆ. ಸಿಮೆಂಟ್, ಎಂ ಸ್ಯಾಂಡ್, ಜೆಲ್ಲಿಕಲ್ಲು ಬಳಸಿ ತಯಾರಾಗುವ ಈ ಟೈಲ್ಸ್ಗಳನ್ನು ರೂಫ್ ಭಾಗಕ್ಕೆ ಬಳಸಿದರೆ ಬಿಸಿಲಿನ ಝಳ ಕಡಿಮೆ ಮಾಡಬಹುದು. ಇದರಿಂದ ನೀರು ಸೋರುವುದಿಲ್ಲ. ಆದ್ದರಿಂದ ವಾಸಿಸುವವರು ಆತಂಕ ಪಡುವಂತಿಲ್ಲ. ಈಗ ನಾವು ಬಳಸುತ್ತಿರುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಚಟುವಟಿಕೆ ಕೈಗೊಳ್ಳಬೇಕಾದರೆ ನಮಗೆ ೫ ರಿಂದ ೧೦ ಎಕರೆ ಬೂಮಿಯ ಅವಶ್ಯಕತೆ ಇದೆ. ಈಗಾಗಲೇ ಸರ್ಕಾರಕ್ಕೆ ಭೂಮಿಯನ್ನು ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಮೈಸೂರು ಹೊರವಲಯದಲ್ಲಿ ಭೂಮಿ ಒದಗಿಸುವ ನಿರೀಕ್ಷೆ ಇದೆ. ಭೂಮಿ ದೊರೆತ ಕೂಡಲೇ ಈ ರೀತಿಯ ಪರಿಸರ ಸ್ನೇಹಿ ಮನೆಗಳ ನಿರ್ಮಾಣ ಕಾರ್ಯ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ರಾಜೇಶ್ ಜೈನ್ ಹೇಳಿದರು.