ರೋಹಿಣಿ ಸಿಂಧೂರಿ ಮೈಸೂರಿಗೆ ವರ್ಗವಾಗಿ ಬಂದಾಗಿನಿಂದಲೂ ರಾಜಕೀಯ ಮುಖಂಡರು ಅವರ
ಬಗ್ಗೆ ಆಗಾಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.
ಅವರುಗಳೆಷ್ಟೇ ಕಿಡಿಕಾರುತ್ತಿದ್ದರೂ ರೋಹಿಣಿ ಸಿಂಧೂರಿ ತಮ್ಮ ಈ ಹುದ್ದೆಯಲ್ಲೇ
ಮುಂದುವರಿಯುವಲ್ಲಿ ಯಶಸ್ಸು ಕಂಡಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ರಾಜಕೀಯ ಮುಖಂಡರು
ಸಂಚು ಹೂಡಿ ಅವರಿಗಿಂತ ಕಿರಿಯ ಐಎಎಸ್ ಅಧಿಕಾರಿಯಾದ ಶಿಲ್ಪಾನಾಗ್ ಅವರನ್ನು
ನೆಪವೊಂದನ್ನಿಟ್ಟುಕೊಂಡು ದಾಳವಾಗಿ ಬಳಸಿಕೊಂಡಿರಬಹುದೆಂಬ ಅನುಮಾನ ಸಾರ್ವಜನಿಕ
ವಲಯದಲ್ಲೇ ವ್ಯಕ್ತವಾಗುತ್ತಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ನಡೆದ ಹಲವು ಪ್ರಮುಖ
ಕಾರ್ಯಕ್ರಮಗಳು ಹಾಗೂ ಕೋವಿಡ್ ಸಭೆಗಳಲ್ಲಿ ಜಿಲ್ಲಾಧಿಕಾರಿ ಗೈರುಹಾಜರಿ ಎದ್ದು
ಕಾಣುವಂತಿತ್ತು. ಬದಲಿಗೆ ಪಾಲಿಕೆ ಆಯುಕ್ತೆಯನ್ನಷ್ಟೇ ಆಹ್ವಾನಿಸಲಾಗುತ್ತಿತ್ತು. ಆ
ಬಳಿಕ ರಾಜಕೀಯ ಮುಖಂಡರು ಟಾಸ್ಕ್ ಫೋರ್ಸ್ ರಚಿಸಿದಾಗಲೂ ಪಾಲಿಕೆ ಆಯುಕ್ತೆ ಶಿಲ್ಪಾ
ನಾಗ್ ಅವರನ್ನಷ್ಟೇ ಆಹ್ವಾನಿಸಿ, ಜಿಲ್ಲಾಧಿಕಾರಿಯನ್ನು ದೂರವಿಟ್ಟಿದ್ದು ಕೂಡ ಎದ್ದು
ಕಾಣುವಂತಿತ್ತು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಮ್ಮ
`ರಾಜಕೀಯ ಚದುರಂಗ ದಾಟ’ದಲ್ಲಿ ದಾಳವಾಗಿಸಿಕೊಂಡ ನಮ್ಮ ರಾಜಕಾರಣಿಗಳು ನಿಜಕ್ಕೂ
ಸಮಾಜಕ್ಕೆ ಮಾಡಿದ ಮೋಸ ಅಲ್ಲದೆ ಬೇರೇನಲ್ಲ. . ಕಳೆದ ತಿಂಗಳವರೆಗೂ ಪರಸ್ಪರ
ಸಾಮರಸ್ಯದಿಂದಲೇ ಕೆಲಸ ಮಾಡುತ್ತಾ ಬಂದಿದ್ದ ರೋಹಿಣಿ ಹಾಗೂ ಶಿಲ್ಪಾ ಅವರ ನಡುವೆ ಕಳೆದ
20 ದಿನಗಳಿಂದ ಮಾತ್ರ ಸಂಬಧ ಸಂಪೂರ್ಣ ಹದಗೆಟ್ಟಿತ್ತು. ರೋಹಿಣ ಸಿಂಧೂರಿ ವರ್ಗವಾಗಿ
ಹೋಗಲಿ ಎಂದು ಹಲವು ರಾಜಕೀಯ ಮುಖಂಡರು ಪ್ರಬಲ ಲಾಬಿ ಆರಂಭಿಸಿದ್ದರು. ಯಾವ
ಕಾರಣಕ್ಕೆ? ಇದನ್ನು ಯಾರೂ ಈಗಲೂ ಬಾಯಿ ಬಿಟ್ಟು ಹೇಳುತ್ತಿಲ್ಲ. ಚಾಮರಾಜನಗರದಲ್ಲಿ
ಕೋವಿಡ್-19 ಸೋಂಕಿತರಲ್ಲಿ 24 ಮಂದಿ ಆಮ್ಲಜನಕ ಕೊರತೆ ಯಿಂದ ಸಾವನ್ನಪ್ಪಿದರೂ ಅಲ್ಲಿನ
ಯಾವುದೇ ಅಧಿಕಾರಿ ಯನ್ನು ಅಮಾನತು ಮಾಡುವುದಿರಲಿ, ಎತ್ತಂಗಡಿ ಮಾಡು ವಂತೆಯೂ ಈ ಯಾವ
ರಾಜಕೀಯ ನಾಯಕರುಗಳೂ ಒತ್ತಾಯಿಸಲಿಲ್ಲ. ಆದರೆ ಮೈಸೂರಿನ ಜಿಲ್ಲಾಧಿಕಾರಿಯವರು ಮಾತ್ರ
ಹೊರಹೋದರೆ ಸಾಕು ಎಂದು ಒತ್ತಾಯಿಸಿದ್ದರು
ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅವರ ವಿರುದ್ಧ ಮಾಜಿ ಪಾಲಿಕೆ ಆಯುಕ್ತೆ ಶಿಲ್ಪಾ
ನಾಗ್ ಮಾಡಿರುವ ಆರೋಪಗಳು ಕೂಡ ಭಾವನಾತ್ಮಕ ಮಾತುಗಳಂತಿವೆಯೇ ಹೊರತು, ಅವರ ಪತ್ರದಲ್ಲಿ
ಯಾವುದೇ ನಿರ್ದಿಷ್ಟ ಕಾರಣಗಳ ಪ್ರಸ್ತಾಪವೇ ಇಲ್ಲ. ರೋಹಿಣಿ ಸಿಂಧೂರಿ ಅವರನ್ನಂತೂ
“ಮಹಾರಾಣಿ ,” “ಮಾಡೆಲ್” ಮುಂತಾದ ಪದಗಳನ್ನು ಬಳಸಿ ಪದೇ ಪದೆ ಸಾರ್ವಜನಿಕವಾಗಿ
ಅಪಹಾಸ್ಯ ಮಾಡಲಾಯಿತು. ಪಾರಂಪರಿಕ ಕಟ್ಟಡ ಹಾಳು ಮಾಡಿದರು ಎಂದು ಆರೋಪಿಸಿದರು.
ಸಭೆ-ಸಮಾರಂಭಗಳಲ್ಲಿ ಏರುದನಿಯಲ್ಲಿ ಅವರ ವಿರುದ್ಧ ಬೊಬ್ಬಿರಿದರು. ಕರ್ತವ್ಯಲೋಪ
ಎಸಗಿದ್ದಾರೆಂದು ಪತ್ರಿಕಾ ಗೋಷ್ಠಿ ಕರೆದು ಆರೋಪ ಮಾಡಿದ್ದಷ್ಟೇ ಅಲ್ಲದೆ ಮುಖ್ಯ
ಮಂತ್ರಿಗೂ ದೂರು ನೀಡಲಾಯಿತು.

ಹತ್ತು ಪಥದ ಮೈಸೂರು-ಬೆಂಗಳೂರು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಸದ್ಯದಲ್ಲೇ ಮುಗಿಯಲಿದೆ. ಐದು ಹೊಸ ಬೃಹತ್ ಕೈಗಾರಿಕೆಗಳು ಜಿಲ್ಲೆಯಲ್ಲಿ ಆರಂಭ
ಗೊಳ್ಳಲಿದ್ದು, ಐಟಿ ಕ್ಷೇತ್ರದ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನಲ್ಲಿ
ನೆಲೆ ನಿಲ್ಲಲು ಮುಂದಾಗಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಹಬಂದಿಗೆ ಬಂದ ಕೂಡಲೇ ಈ
ಎಲ್ಲ ಕಾರಣಗಳಿಂದಾಗಿ ಮೈಸೂರು ನಗರ-ಜಿಲ್ಲೆಯ ರಿಯಲ್ ಎಸ್ಟೇಟ್ ವಹಿವಾಟೂ
ಉತ್ತುಂಗಕ್ಕೇರಲಿದೆ.ಈ ಪರಿಸ್ಥಿತಿಯ`ಸಂಪೂರ್ಣ ಲಾಭ’ ಪಡೆಯಲು ಭೂ ಮಾಫಿಯಾ ಈಗಾಗಲೇ
ಸಾಕಷ್ಟು ಸಜ್ಜಾಗಿದ್ದು, ರಿಂಗ್ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ
ಹೊಂಚುಹಾಕಿ ನಿಂತಿದೆ.
ಮೈಸೂರು ಹೊರವಲಯದಲ್ಲಿ ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ
ಭೂಗಳ್ಳರು ತಮ್ಮ ತಂಟೆಗೆ ಯಾರೂ ಬರಬಾರದು ತಾವು ನೀಡಿದ ಹಣವನ್ನು ತೆಗೆದುಕೊಂಡು
ಅಧಿಕಾರಿಗಳು ಸುಮ್ಮನಿರಬೇಕು ಎಂದು ಬಯಸುತಿದ್ದಾರೆ. ಇವರು ಒತ್ತುವರಿ ಮಾಡಿಕೊಂಡಿರುವ
ಭೂಮಿಯಲ್ಲಿ ಖರಾಬು , ಗೋಮಾಳ ಮತ್ತು ಕೆರೆ ಜಾಗವೂ ಸೇರಿದೆ. ಇಲ್ಲಿ ಬಹುಮುಖ್ಯ
ಸಂಗತಿಯೆಂದರೆ ಒತ್ತುವರಿ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ
ಕಾಂಗ್ರೆಸ್ , ಜೆಡಿಎಸ್ ಮತ್ತು ಅಧಿಕಾರಾರೂಢ ಬಿಜೆಪಿ ಪಕ್ಷದವರೂ ಇದ್ದಾರೆ. ಇವರದು
ಒಂದು ರೀತಿಯಲ್ಲಿ ಅಪವಿತ್ರ ಮೈತ್ರಿ. ಯಾವುದೇ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ
ಬಂದರೂ ಇವರು ಆಯಕಟ್ಟಿನ ಸ್ಥಳಗಳಿಗೆ ತಂದು ಕೂರಿಸಲು ಯತ್ನಿಸೋದು ಮಾತ್ರ ಭ್ರಷ್ಟ
ಅಧಿಕಾರಿಗಳನ್ನೇ.

ನಮ್ಮನ್ನು ಆಳುವ ಸರ್ಕಾರಗಳೂ ರಿಯಲ್ ಎಸ್ಟೇಟ್ ಲಾಬಿಗೆ ಮಣಿದಿವೆ. ಈಗ ಓರ್ವ ದಕ್ಷ
ಅಧಿಕಾರಿ ಭೂಗಳ್ಳರ ವಿರುದ್ದ ಸಮರ ಸಾರಿದರೆ ಅವನನ್ನು ಹಣಿಯಲ್ಲು ಎಲ್ಲಾ ಪಕ್ಷಗಳ
ಭೂಗಳ್ಳರೂ ಒಂದಾಗುತ್ತಾರೆ. ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಅವರ ವಿಷಯದಲ್ಲಿ
ಆಗಿರೋದೂ ಕೂಡ ಇದೆ. ಹೀಗಾಗಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗುವುದಿಲ್ಲ. ಮುಂದಾದರೆ
ಇದನ್ನು ಪಕ್ಷದೊಳಗೇ ಇರುವ ಕಾಣದ ಕೈಗಳು ತಡೆಯೊಡ್ಡುತ್ತವೆ.