ಪಾಲಿಕೆ ಆಯುಕ್ತರ ರಾಜೀನಾಮೆಯ ಹಿಂದಿದ್ಯಾ ಭೂ ಮಾಫಿಯಾ ಸಂಚು ಸಂಚು..?

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ವಿಚಾರ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು,ಪಾಲಿಕೆ ಆಯುಕ್ತರ ಈ ನಿರ್ಧಾರದ ಹಿಂದಿರುವ ಅಸಲಿ ಕಾರಣವೇನು? ಎಂಬ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಮೇಲ್ನೋಟಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮಾನಸಿಕ ಕಿರುಕುಳದಿಂದ ತಾವು ರಾಜೀನಾಮೆ ನೀಡುತ್ತಿರುವುದಾಗಿ ಶಿಲ್ಪಾನಾಗ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿರುವ ಭೂ ಒತ್ತುವರಿ ಕುರಿತು ತನಿಖೆ ಆರಂಭವಾಗುತ್ತಿರುವ ಬೆನ್ನಲ್ಲೇ ಶಿಲ್ಪಾನಾಗ್ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಐಎಎಸ್ ಅಧಿಕಾರಿ ಶಿಲ್ಪಾನಾಗ್,ಪಾಲಿಕೆ ಆಯುಕ್ತರಾಗಿ ಮೈಸೂರಿಗೆ ಬಂದಾಗಿನಿಂದ ತಮ್ಮ ಕೆಲಸದಿಂದ ಗಮನ ಸೆಳೆದಿದ್ದರು. ಮುಖ್ಯವಾಗಿ ಕೊರೊನಾ ನಿರ್ವಹಣೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದ ಅವರು, ಹಲವು ಹೊಸ ಕಾರ್ಯಕ್ರಮಗಳನ್ನು ಸಹ ಜಾರಿಗೊಳಿಸುವ ಮೂಲಕ ಕೊರೊನಾ ಕಂಟ್ರೋಲ್ಗೆ ನಿರಂತರವಾಗಿ ಶ್ರಮಿಸುತ್ತಿದ್ದರು. ಆದರೆ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ,ಏಕಾಏಕಿ ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.ಅಸಲಿಗೆ ರೋಹಿಣಿ ಸಿಂಧೂರಿ ಕಾರ್ಯವೈಖರಿಗೆ ಬೇಸತ್ತು ಶಿಲ್ಪಾನಾಗ್ ರಾಜೀನಾಮೆ ನೀಡಿದ್ದರೂ,ಸ್ಥಳೀಯ ಜನಪ್ರತಿನಿಧಿಗಳ ಚದುರಂಗದ ಆಟಕ್ಕೆ ಪಾಲಿಕೆ ಆಯುಕ್ತೆ ಬಲಿಯಾದರೆ ಎಂಬ ಅನುಮಾನ ಕಾಡುತ್ತಿದೆ.

ಹೇಳಿ ಕೇಳಿ ಮೈಸೂರು ವೇಗವಾಗಿ ಬೆಳೆಯುತ್ತಿರುವ ನಗರ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಕೂಡ ಜೋರಾಗಿ ಬೆಳೆಯುತ್ತಿದೆ. ಸಾಂಸ್ಕೃತಿಕ ನಗರಿ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಗರವಾಗಿದ್ದು ಭೂಮಿಯ ಬೆಲೆ ಚಿನ್ನವಾಗಿದೆ. ಕೇವಲ ಎರಡು ದಶಕಗಳ ಹಿಂದೆ ನಗರದಿಂದ 20 ಕಿಲೋಮೀಟರ್ ದೂರದಲ್ಲಿದ್ದ ಜಮೀನಿಗೆ ಎಕರೆಯೊಂದಕ್ಕೆ ಸಾವಿರಗಳ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಜಮೀನೊಂದರ ಬೆಲೆ ಇಂದು ಕೋಟಿಗಳ ಲೆಕ್ಕದಲ್ಲಿದೆ.ನಗರದ ಹೊರವಲಯದ ಭೂಮಿಗೆ ಚಿನ್ನದ ಬೆಲೆ ಬಂದಂತೆಯೇ ಭೂ ಮಾಫಿಯಾ ತನ್ನ ಕಬಂಧ ಬಾಹು ಚಾಚಿದೆ. ನಗರದ ಹೊರವಲಯದಲ್ಲಿದ್ದ ಗೋಮಾಳ,ಕೆರೆ ಜಾಗ,ಸರ್ಕಾರಿ ಭೂಮಿ ಸಾವಿರಾರು ಎಕರೆ ಒತ್ತುವರಿ ಆಗಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ)ಭೂಮಿಯನ್ನೂ ಒತ್ತುವರಿ ಮಾಡಿಕೊಂಡ ನೂರಾರು ಪ್ರಕರಣಗಳಿವೆ. ಇಲ್ಲಿ ಸುಳ್ಳು ದಾಖಲೆ ಸೃಷ್ಟಿಸುವ ಜಾಲವೇ ಸಕ್ರಿಯವಾಗಿದೆ. ಮೂಡ ಗೆ ನೀಡಿದ ಜಮೀನನ್ನೂ ಕೂಡ ಭೂ ಮಾಫಿಯಾ ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದು ಮೂಡ  ಒತ್ತುವರಿದಾರರ ವಿರುದ್ದ  ಕಠಿಣ ಕ್ರಮ ಕೈಗೊಂಡಿದೆ. ಇನ್ನು ಮುಂದಕ್ಕೆ ನಕಲಿ ಭೂ ದಾಖಲೆ ಸೃಷ್ಟಿಸದಂತೆ ದಾಖಲೆಗಳಿಗೆ ಹಾಲೋಗ್ರಾಮ್ ಕೂಡ ಅಳವಡಿಸಲಾಗಿದೆ.ಮೂಡ ಅದ್ಯಕ್ಷ ರಾಜೀವ್ ಅವರು ಬೆಂಗಳೂರಿನಲ್ಲಿಇರುವಂತೆ ಬಿಎಂಟಿಎಫ್ ರೀತಿಯಲ್ಲೇ ಮೂಡಾಗೆ ಪ್ರತ್ಯೇಕ ಪೋಲೀಸ್ ಪಡೆ ರಚಿಸುವಂತೆ  ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕೋವಿಡ್ ನಿರ್ಮೂಲನೆ ಮುಗಿದ ನಂತರ ಮೂಡಕ್ಕೂ ಪ್ರತ್ಯೇಕ ಪೋಲೀಸ್ ವ್ಯವಸ್ಥೆ ಸಿಗಲಿದೆ.

ಈ ನಡುವೆ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಭೂ ಒತ್ತುವರಿ ಆರೋಪ ಕೇಳಿಬಂದಿದ್ದು, ತಾಲೂಕಿನ ಕೇರ್ಗಳ್ಳಿ, ಯಡಹಳ್ಳಿ ವ್ಯಾಪ್ತಿಯಲ್ಲಿ ಭೂ ಕಬಳಿಕೆ ಮಾಡಿರುವುದು ಆರ್ಟಿಐ ಕಾರ್ಯಕರ್ತರೊಬ್ಬರ ಮೂಲಕ ಬೆಳಕಿಗೆ ಬಂದಿತ್ತು. ಜೊತೆಗೆ ಇದಕ್ಕೆ ಸಂಬಂಧಿಸಿದ ಕಡತಗಳನ್ನು ಮುಡಾ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಹೀಗಾಗಿ ಪಾಲಿಕೆ ಆಯುಕ್ತೆ ರಾಜೀನಾಮೆ ಹಿಂದೆ ಭೂ ಮಾಫಿಯಾ ಕೈವಾಡವಿದೆಯೇ? ಎಂಬ ಅನುಮಾನ ಮೂಡಿದೆ. ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದ ಬಳಿಕ ಅವರ ಕಾರ್ಯವೈಖರಿ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ದಿನ ಕಳೆದಂತೆ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳ ಕೆಲಸದ ಬಗ್ಗೆ ಸಾಕಷ್ಟು ಆಕ್ಷೇಪಗಳು ಬಂದರೂ ಸರ್ಕಾರ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ. ಈ ಎಲ್ಲದರ ಬೆನ್ನಲ್ಲೇ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿರುವ ಭೂ ಒತ್ತುವರಿ ಸಂಬಂಧಿಸಿದಂತೆ ಡಿಸಿ ರೋಹಿಣಿ ಸಿಂಧೂರಿ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ಬೆಳವಣಿಗೆ ಭೂ ಮಾಫಿಯಾದಾರರು ಹಾಗೂ ಅದರ ಹಿಂದಿರುವ ಕೆಲವು ಜನಪ್ರತಿನಿಧಿಗಳ ನಿದ್ದೆಗೆಡಿಸಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಭೂ ಒತ್ತುವರಿ ಕುರಿತು ತನಿಖೆ ಮಾಡದಂತೆ ತಡೆಯುವ ಸಲುವಾಗಿ ಹಾಗೂ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸುವ ಹುನ್ನಾರ ನಡೆದಿದೆ. ಇದಕ್ಕಾಗಿ ಬಲವಾದ ಕಾರಣ ಹುಡುಕುತ್ತಿದ್ದ ಭೂ ಮಾಫಿಯಾದಾರರು, ಜನಪ್ರತಿನಿಧಿಗಳು ತಮ್ಮ ಚದುರಂಗದ ಆಟಕ್ಕೆ ಪಾಲಿಕೆ ಆಯುಕ್ತರನ್ನ ಬಳಸಿಕೊಂಡಿದ್ದಾರೆ. ಅವರ ಮೂಲಕ ಡಿಸಿ ವಿರುದ್ಧ ಗಂಭೀರ ಆರೋಪ ಮಾಡಿಸಿ, ರೋಹಿಣಿ ಸಿಂಧೂರಿ ಅವರ ಕಾರ್ಯಕ್ಷಮತೆಯನ್ನು ಹಾಳು ಮಾಡುವ ಹಾಗೂ ವರ್ಗಾವಣೆ ಮಾಡಿಸುವ ಸಂಚು ನಡೆದಿದೆ ಎಂಬ ಗುಮಾನಿ ಹರಿದಾಡುತ್ತಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ವಭಾವತಃ ಖಡಕ್ ಅಧಿಕಾರಿ ಆಗಿರುವುದರಿಂದ ಭೂ ಒತ್ತುವರಿದಾರರು,ಭೂ ಮಾಫಿಯಾ ಕುಳಗಳು ಈ ಜಿಲ್ಲೆಯಿಂದ ಇವರು ಹೋದರೆ ಸಾಕಪ್ಪಾ ಎಂದು ಕಾಯುತಿದ್ದಾರೆ. ಕಳೆದ ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ್ದ 24 ಸಾವುಗಳಿಗೆ ಡಿಸಿ ಸಿಂಧೂರಿ ಅವರೇ ಅಕ್ಸಿಜನ್ ಕೊಡದ ಕಾರಣ ಸಂಭವಿಸಿತ್ತು ಎಂದು ಅವರ ತಲೆಗೆ ಕಟ್ಟುವ ಕೆಲಸವೂ ನಡೆದಿತ್ತು. ಆದರೆ ಹೈ ಕೋರ್ಟ್ ನೇಮಿಸಿದ್ದ ಸಮಿತಿಯು ಸಿಂಧೂರಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಈ ಆರೋಪ ಹೊರಿಸಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸುವ ಲಾಬಿಯೂ ನಡೆದಿತ್ತು. ಆದರೆ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವರ್ಗಾವಣೆ ಮಾಡುವುದಕ್ಕೆ ಒಲವು ತೋರದಿದ್ದುದರಿಂದ ವರ್ಗಾವಣೆ ಸಾದ್ಯವಾಗಲಿಲ್ಲ.

ಇವರ ವರ್ಗಾವಣೆಗೆ ಭೂ ಮಾಫಿಯಾ ಶತ ಪ್ರಯತ್ನ ನಡೆಸಿದೆ ಎಂದು ಮೂಲಗಳು ತಿಳಿಸಿದ್ದು ಮುಂದೇನಾಗುವುದೋ ಕಾದು ನೋಡಬೇಕಷ್ಟೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...