ಬೆಂಗಳೂರು:ಮಾ.18: ಇತ್ತೀಚೆಗೆ ಪ್ರಧಾನಮಂತ್ರಿ.ಲೋಕಾರ್ಪಣೆ ಮಾಡಿದ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಎಲ್ಲಾ ಬಾಕಿ ಕಾಮಗಾರಿಗಳು ಮುಗಿಯುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ. ಜತೆಗೆ, ಅಂಡರ್ ಪಾಸ್ ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು ಹಾಗೂ ಇಡೀ ರಸ್ತೆಯ ಕಾಮಗಾರಿಗಳು ಮುಗಿಯುವ ತನಕ ಜನರು ಕೂಡ ಟೋಲ್ ಕಟ್ಟುವ ಅಗತ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಎಕ್ಸ್ ಪ್ರೆಸ್ ಹೆಮ್ಮಾರಿ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.




ಕಳೆದ ವರ್ಷ ಸುರಿದ ಮಹಾಮಳೆಗೆ ಕೊಚ್ಚಿ ಹೋಗಿದ್ದ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ, ಬೆಳಗಿನ ಜಾವದ ಸಣ್ಣ ಮಳೆಗೂ ತತ್ತರಿಸಿ ಹೋಗಿದೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಎಕ್ಸ್ ಪ್ರೆಸ್ ಹೆಮ್ಮಾರಿ ಈಗ ಜನರ ಪಾಲಿಗೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದೆ. ಇದು ಎಕ್ಸ್ ಪ್ರೆಸ್ ಹೆದ್ದಾರಿಯೋ, ಎಕ್ಸ್ ಪ್ರೆಸ್ ಹೆಮ್ಮಾರಿಯೋ? ಎಂದು ಅವರು ಕಿಡಿಕಾರಿದ್ದಾರೆ. ಸಣ್ಣ ಮಳೆಯಿಂದಲೇ ಹೆದ್ದಾರಿಯ ಅಂಡರ್ ಪಾಸ್ ಗಳು ಜಲಾವೃತವಾಗಿವೆ. ವಾಹನಗಳು ಸಿಕ್ಕಸಿಕ್ಕಲ್ಲಿ ನೀರಿನಲ್ಲಿ ಮುಳುಗಿವೆ. ಸರಣಿ ಅಪಘಾತಗಳಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅವಾಂತರ ಸೃಷ್ಟಿ ಆಗಿದೆ. ಇದಕ್ಕೆ ರಾಜ್ಯ, ಕೇಂದ್ರ ಸರಕಾರಗಳು, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಅವರು ಹೇಳಿದ್ದಾರೆ. ಇವರು ಮಾಡಿದ ಪಾಪಕ್ಕೆ ಜನರು ನೋಯುವಂತಾಗಿದೆ. ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು, ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಬಾಕಿ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಮುಗಿಸಬೇಕು. ಅದುವರೆಗೂ ಟೋಲ್ ಸಂಗ್ರಹ ಮಾಡಬಾರದು. ಜನರೂ ಟೋಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಅವರು ಜನರಿಗೆ ತಿಳಿಸಿದ್ದಾರೆ.











