ಬೆಂಗಳೂರು ಮಾ.21: ಒಕ್ಕಲಿಗರನ್ನು ಧರ್ಮದ ಆಧಾರದ ಮೇಲೆ ಓಲೈಕೆ ಮಾಡುವ ಯತ್ನದಲ್ಲಿ ಬಿಜೆಪಿ ಸೋಲುಂಡಿದೆ. ಉರಿಗೌಡ-ನಂಜೇಗೌಡ ಕುರಿತ ವಿವಾದವನ್ನು ಪರ ವಿರೋಧ ಅಲೆಯಾಗಿ ಸೃಷ್ಟಿಸಿಕೊಂಡು ಪರವಾದ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಬಿಜೆಪಿ ರೂಪಿಸಿತ್ತು. ಆದರೆ ಹಳೇ ಮೈಸೂರು ಭಾಗದ ಒಕ್ಕಲಿಗರು, ಕರಾವಳಿ ಭಾಗದ ರೀತಿ ಬಿಜೆಪಿ ಪಾಲಿಗೆ ಶರಣಾಗದೆ ಸೆಟೆದು ನಿಂತ ಪರಿಣಾಮ ಬಿಜೆಪಿ ಯೂ ಟರ್ನ್ ತೆಗೆದುಕೊಂಡಿದೆ. ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ದಿನ ಮಂಡ್ಯದಲ್ಲಿ ನಾಲ್ಕು ದ್ವಾರಗಳ ಪೈಕಿ ಒಂದು ದ್ವಾರಕ್ಕೆ ಉರಿಗೌಡ, ದೊಡ್ಡ ನಂಜೇಗೌಡ ಎಂದು ಹೆಸರಿಟ್ಟು ವಿರೋಧ ವ್ಯಕ್ತವಾದ ಬಳಿಕ ಹೆಸರಿನ ದ್ವಾರವನ್ನು ತೆಗೆದು, ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಮರುನಾಮಕರಣ ಮಾಡಿತ್ತು. ಅಂದು ಮುಖಭಂಗ ಅನುಭವಿಸಿದ್ದ ಭಾರತೀಯ ಜನತಾ ಪಾರ್ಟಿ, ಮತ್ತೊಮ್ಮೆ ಉರಿಗೌಡ-ನಂಜೇಗೌಡ ಎನ್ನುವ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಹೇಳಿಕೆ ಕೊಟ್ಟು ಇದೀಗ ಎರಡನೇ ಬಾರಿ ತನ್ನ ಹೇಳಿಕೆಯಿಂದ ಹಿಂದೆ ಸರಿಯುವ ಮೂಲಕ ಮುಖಭಂಗ ಅನುಭವಿಸಿದೆ.
ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದ ಮುನಿರತ್ನ..
ಉರಿಗೌಡ – ನಂಜೇಗೌಡ ಬಗ್ಗೆ ಬಿಜೆಪಿ ನಾಯಕರಾದ ಸಿಟಿ ರವಿ ಹಾಗು ಅಶ್ವತ್ಥ ನಾರಾಯಣ ಬೆಂಕಿ ಕಿಡಿ ಹಚ್ಚುತ್ತಿದ್ದ ಹಾಗೆ ಸಚಿವ ಮುನಿರತ್ನ ಉರಿಗೌಡ – ನಂಜೇಗೌಡ ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಟೈಟಲ್ ರಿಜಿಸ್ಟರ್ ಮಾಡಿದ್ದರು. ಮೇ ಎರಡನೇ ವಾರದಲ್ಲಿ ಚಲನಚಿತ್ರಕ್ಕೆ ಮುಹೂರ್ತ ಕಂಠೀರವ ಸ್ಟೇಡಿಯಂನಲ್ಲಿ ಎಂದು ಘೋಷಣೆ ಕೂಡ ಮಾಡಿದ್ದರು. ಇದಕ್ಕೆ ಚಿತ್ರಕಥೆಯನ್ನು ಸಚಿವ ಅಶ್ವತ್ಥ ನಾರಾಯಣ ಮಾಡ್ತಾರೆ ಎನ್ನುವಾಗಲೇ ಕೊಂಚ ಹಿನ್ನಡೆ ಆಗಿತ್ತು. ಸಚಿವ ಅಶ್ವತ್ಥ ನಾರಾಯಣ ನಾನು ಚಿತ್ರಕಥೆ ಮಾಡ್ತಿಲ್ಲ, ನಮ್ಮ ಸ್ನೇಹಿತರು ಚಿತ್ರ ಮಾಡ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ. ನಾನು ಯಾವುದೇ ಚಿತ್ರಕಥೆ ಮಾಡ್ತಿಲ್ಲ ಎನ್ನುವ ಮೂಲಕ ಯೂಟರ್ನ್ ಹೊಡೆದಿದ್ದರು. ಆ ಬಳಿಕ ಸಚಿವ ಮುರುಗೇಶ್ ನಿರಾಣಿ ಸ್ವಪಕ್ಷದ ನಾಯಕರ ಉರಿಗೌಡ-ನಂಜೇಗೌಡ ರಾಜಕೀಯ ಹೇಳಿಕೆಗಳನ್ನು ಬಹಿರಂಗವಾಗಿ ಟೀಕೆ ಮಾಡಿದ್ದರು. ಅಂತಿಮವಾಗಿ ಆದಿಚುಂಚನಗಿರಿ ಒಕ್ಕಲಿಗ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಮುನಿರತ್ನ ಕರೆದು ಮಾತನಾಡ್ತಿದ್ದ ಹಾಗೆ ಎಲ್ಲದ್ದಕ್ಕೂ ಬ್ರೇಕ್ ಬಿತ್ತು.
ಸಿಎಂ ಬೊಮ್ಮಾಯಿ, ಆರ್ ಅಶೋಕ್, ಸಿ.ಟಿ ರವಿ ಗಪ್ಚುಪ್..!
ಉರಿಗೌಡ – ನಂಜೇಗೌಡ ವಿವಾದ ಬಗ್ಗೆ ಮುನಿರತ್ನ ಅವರನ್ನು ಕರೆಸಿಕೊಂಡು ಮಾತನಾಡಿದ ನಿರ್ಮಲಾನಂದ ಶ್ರೀಗಳು, ಕಾಲ್ಪನಿಕ ಕಥೆಗಳನ್ನು ಚಿತ್ರಕಥೆ ಮಾಡುವುದು ಸೂಕ್ತವಲ್ಲ, ಕಾಲ್ಪನಿಕ ಪಾತ್ರಗಳು ಕಾದಂಬರಿಯಲ್ಲಿ ಬರುತ್ತವೆ. ಹಾಗೇನಾದರೂ ನಿಖರವಾದ ಸಾಕ್ಷ್ಯಗಳು ಇದ್ದರೆ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ತಂದುಕೊಡಿ, ಈಗ ಸಾಕಷ್ಟು ಆಯಾಮಗಳಲ್ಲಿ ತನಿಖೆ ಮಾಡಬಹುದಾಗಿದೆ. ಸತ್ಯವಿದ್ದರೆ ಒಪ್ಪಿಕೊಳ್ಳೋಣ. ಆದರೆ ಕಾಲ್ಪನಿಕ iತಿಹಾಸಕಾರರು ಹೇಳದೆ ಇರುವ ಹೆಸರುಗಳನ್ನು ಬಳಸಿಕೊಂಡು ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸ್ವಾಮೀಜಿ ಹೇಳಿದಂತೆ ಕೇಳುತ್ತೇವೆ ಎಂದಿದ್ದಾರೆ. ಸಿ.ಟಿ ರವಿ ಹಾಗು ಆರ್ ಅಶೋಕ್ ಕೂಡ ಶ್ರೀಗಳು ನಮ್ಮ ಜೊತೆಗೂ ಫೋನ್ನಲ್ಲಿ ಮಾತನಾಡಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಮುಕ್ತಾಯ ಮಾಡುವುದು ಒಳ್ಳೆಯದು. ಶ್ರೀಗಳು ಈ ರೀತಿಯ ಸಿನಿಮಾ ಬೇಡ ಅಂತ ಹೇಳಿದ್ರು ಎಂದಿದ್ದಾರೆ. ಇನ್ನು ಸಂಸದ ಡಿ.ಕೆ ಸುರೇಶ್ ಮಾತನಾಡಿ, ವ್ಯಾಪಾರಸ್ಥರು, ಯಾರನ್ನು ಬೇಕಾದರೂ ಇಟ್ಟುಕೊಂಡು ವ್ಯಾಪಾರ ಮಾಡ್ತಾರೆ. ಅಂತವರನ್ನು ಯಾಕೆ ಶ್ರೀಗಳು ಯಾಕೆ ಕರೆಸಿದ್ರು ಅಂತ ಗೊತ್ತಿಲ್ಲ. ಹಣ ಮಾಡೋದೆ ಅವರೆ ಗುರಿ, ಒಕ್ಕಲಿಗರನ್ನು ಮುಂದಿಟ್ಟುಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದರು ಎಂದು ಟೀಕಿಸಿದ್ದಾರೆ.
ಕೃಷ್ಣಮಣಿ