ತುಮಕೂರು : ರಾಜ್ಯದಲ್ಲಿ ಸದ್ಯ ಉರಿಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳು ತುಂಬಾನೇ ಚಾಲ್ತಿಯಲ್ಲಿದೆ. ರಾಜಕೀಯವಾಗಿ ಈ ಎರಡು ಹೆಸರುಗಳು ತುಂಬಾನೇ ಸದ್ದು ಮಾಡುತ್ತಿದೆ . ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ಬೇಡ ಅಂತಾ ನಿರ್ಮಲಾನಂದ ಶ್ರೀಗಳು ಸೂಚನೆ ನೀಡಿದ್ದರೂ ಸಹ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತ್ರ ಮೌನ ವಹಿಸುವಂತೆ ಕಾಣುತ್ತಿಲ್ಲ. ಉರಿಗೌಡ ಹಾಗೂ ನಂಜೇಗೌಡರನ್ನು ಸಿಟಿ ರವಿ ಮತ್ತು ಅಶ್ವತ್ಥ ನಾರಾಯಣರಿಗೆ ಹೋಲಿಕೆ ಮಾಡಿದ್ದ ವಿಪಕ್ಷಗಳಿಗೆ ಇಂದು ತುಮಕೂರಿನಲ್ಲಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ನಿರ್ಮಲಾನಂದ ಸ್ವಾಮೀಜಿಗಳು ನನ್ನ ಜೊತೆ ಈ ವಿಚಾರವಾಗಿ ಮಾತನಾಡಿದ್ದಾರೆ. ಅಲ್ಲದೇ ಸ್ವಾಮೀಜಿಗಳ ಮಾತಿಗೆ ನಾನು ಗೌರವ ನೀಡುತ್ತೇನೆ. ಆದರೆ ಉರಿಗೌಡ ಹಾಗೂ ನಂಜೇಗೌಡ ಕಾಲ್ಪನಿಕ ಹೆಸರುಗಳಲ್ಲ. ಸುವರ್ಣ ಮಂಡ್ಯ ಎಂಬ ಪುಸ್ತಕದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ. ನಾವು ಎಲ್ಲಾ ದಾಖಲೆಗಳ ಸಮೇತ ನಿರ್ಮಲಾನಂದ ಸ್ವಾಮೀಜಿಗಳ ಬಳಿ ತೆರಳಿ ವಾಸ್ತವ ಪರಿಚಯ ಮಾಡಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಇತಿಹಾಸದಲ್ಲಿ ಟಿಪ್ಪುವನ್ನು ಕೊಂದಿದ್ದು ಯಾರು ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲ. ಟಿಪ್ಪುವನ್ನು ಕೊಂದಿದ್ಯಾರು ಎಂದರೆ ಅಪರಿಚಿತರು ಎಂದು ಹೇಳುತ್ತಾರೆ. ಬ್ರಿಟೀಷರು ಹಾಗೂ ಪರ್ಶಿಯನ್ನರು ಎಲ್ಲರೂ ದೇಶವನ್ನು ಲೂಟಿ ಮಾಡಲು ಬಂದವರೇ. ಇತಿಹಾಸದಲ್ಲಿ ಟಿಪ್ಪುವನ್ನು ಮತಾಂಧ ಎಂದು ಬಿಂಬಿಸಬೇಕಿತ್ತು. ಆದರೆ ಆತನನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಸುಮ್ಮನೇ ವೈಭವೀಕರಿಸಲಾಗಿದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧವೂ ಗುಡುಗಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ, ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೇ ಹೆಚ್ಡಿಕೆ ಉರಿಗೌಡ ಹಾಗೂ ನಂಜೇಗೌಡರನ್ನು ಕೇವಲ ಕಾಲ್ಪನಿಕ ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡಿದ ಹೆಚ್ಡಿಕೆ ಈ ಕೂಡಲೇ ನಿರ್ಮಲಾನಾಂದ ಸ್ವಾಮೀಜಿಗಳ ಬಳಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.