ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿ ಹಿಂದೂ ಯುವಕನಿಗೆ ಚಾಕು ಇರಿಯಲಾಗಿದೆ. 23 ವರ್ಷದ ಉಪನ್ಯಾಸಕ ಸುಶೀಲ್ ಚಾಕು ಇರಿತಕ್ಕೊಳಗಾದ ಯುವಕ. ಕುಮದ್ವತಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬೈಕ್‌ನಲ್ಲಿ ವೀಲಿಂಗ್ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಚಾಕು ಇರಿಯಲಾಗಿದೆ. ಸುಶೀಲ್‌ಗೆ ಚಾಕು ಇರಿತ ಘಟನೆ ಬಳಿಕ ಶಿಕಾರಿಪುರ ಪಟ್ಟಣದಲ್ಲಿ ಜನರು ಜಮಾಯಿಸಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾಲ್ಕು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ವೀಲಿಂಗ್ ಮಾಡುವಾಗ ಬುದ್ಧಿ ಹೇಳಿದ್ದಕ್ಕೆ ಚಾಕು ಇರಿಯಲಾಗಿದೆ. ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ಮುಖ್ಯರಸ್ತೆಯಲ್ಲಿರುವ ವಿಠ್ಠಲ ದೇವಸ್ಥಾನದ ಬಳಿ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರ ತಂಡ, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು ಎನ್ನಲಾಗ್ತಿದೆ.

ವೀಲಿಂಗ್ ಮಾಡುತ್ತಿದ್ದಾಗ ಅದರಿಂದ ಸಾಮಾನ್ಯ ಜನರಿಗೆ ಆಗುವ ತೊಂದರೆ ಬಗ್ಗೆ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕೆ, ಉಪನ್ಯಾಸಕ ಸುಶೀಲ್‌ಗೆ ಆವಾಜ್ ಹಾಕಿ ಅಲ್ಲಿಂದ ತೆರಳಿದ್ದ ಮುಸ್ಲಿಂ ಯುವಕ, ಕೆಲ ಸಮಯದ ಬಳಿಕ ಸ್ನೇಹಿತರೊಂದಿಗೆ ಸ್ಥಳಕ್ಕೆ ಆಗಮಿಸಿ, ಸುಶೀಲ್‌ಗೆ ಚಾಕು ಇರಿದಿದ್ದಾರೆ. ಸುಶೀಲ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿರುವ ದುಷ್ಕರ್ಮಿಗಳ ತಂಡ, ಪರಾರಿಯಾಗಿದೆ.
ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಸುಶೀಲ್‌ಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿಎಸ್ಪಿ ಕೇಶವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಶೀಲ್ ಮೇಲಿನ ದಾಳಿಯನ್ನು ಹಿಂದೂ ಜಾಗರಣ ವೇದಿಕೆಯ ಮುಖಂಡ ದೇವರಾಜ್ ಅರಳಿಹಳ್ಳಿ ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.