ನಾ ದಿವಾಕರ
ನಂಬಿಕೆ, ಭಕ್ತಿ ಮತ್ತು ಆರಾಧನೆ ಈ ಮೂರೂ ಮಾನಸಿಕ ಮನೋಭಾವಗಳು ಮನುಷ್ಯನ ಮೇಲೆ ಅಗಾಧವಾದ ಪರಿಣಾಮ ಬೀರುವುದು ಸಹಜ. ಭಾರತವನ್ನೂ ಒಳಗೊಂಡಂತೆ ಎಲ್ಲ ಸಾಂಪ್ರದಾಯಿಕ ಸಮಾಜಗಳಲ್ಲೂ ತಳಮಟ್ಟದ ಸಾಮಾನ್ಯ ಜನರನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಸಲುವಾಗಿ, ಸಮಾಜದ ಪ್ರಬಲ ವರ್ಗಗಳು, ಅಂದರೆ ಆಳುವ ವರ್ಗಗಳು, ಈ ಮೂರೂ ಮನಸ್ಥಿತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ಭಾರತದಂತಹ ಸಾಂಪ್ರದಾಯಿಕ ಶ್ರೇಣೀಕೃತ ಸಮಾಜದಲ್ಲಿ ಈ ಮನೋಭಾವವನ್ನು ನಿರ್ವಚಿಸಲು ಹಾಗೂ ಅವುಗಳ ಸುತ್ತ ನಿರೂಪಣೆಗಳನ್ನು ಸಿದ್ಧಪಡಿಸಲು ಜಾತಿ ಶ್ರೇಷ್ಠತೆ, ಮತ ಪಾರಮ್ಯ ಅಥವಾ ಧಾರ್ಮಿಕ ಆಚರಣೆಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ.
ಸಮಾಜದ ಮೇಲ್ಪದರವನ್ನು ಪ್ರತಿನಿಧಿಸುವ ಒಂದು ವರ್ಗ (Elite class) ತಾನು ಒಲಿಸಿಕೊಂಡಿರುವ ಶಿಕ್ಷಣ, ಆರ್ಥಿಕ-ಸಾಮಾಜಿಕ ಸ್ಥಾನಮಾನ ಹಾಗೂ ಸಾಂಸ್ಕೃತಿಕ ಔನ್ನತ್ಯಗಳನ್ನು ಬಳಸಿಕೊಂಡು ಪ್ರಚುರಪಡಿಸುವ ಸಾಂಸ್ಕೃತಿಕ ನಿರೂಪಣೆಗಳು (Cutural narratives) ಸಾಮಾಜಿಕ ಪಿರಮಿಡ್ಡಿನ ಎಲ್ಲ ಸ್ತರಗಳನ್ನೂ ಆವರಿಸುತ್ತಲೇ, ಈ ನಿರೂಪಣೆಗಳಿಗೆ ಅಧಿಕೃತತೆಯನ್ನು ಒದಗಿಸುತ್ತವೆ. ಕೆಳಹಂತದ ಸಮಾಜದ ಮೇಲೆ ಆಧಿಪತ್ಯ ಸಾಧಿಸಲು ಸದಾ ಹಪಹಪಿಸುವ ಆಳ್ವಿಕೆಯ ಭಾಗಿದಾರ ಶಕ್ತಿಗಳು ಒಂದೆಡೆ ಅಧಿಕಾರ ಕೇಂದ್ರಗಳಿಗೆ ನಿಕಟವಾಗಲು ಈ ನಿರೂಪಣೆಗಳನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಲೇ ಮತ್ತೊಂದೆಡೆ ಸಾಮಾನ್ಯ ಜನತೆಯನ್ನು ತಮ್ಮ ಗುರಿಯೆಡೆಗೆ ಕರೆದೊಯ್ಯುವ ಕಿಂದರಜೋಗಿಗಳಂತೆ ಕ್ರಿಯಾಶೀಲ ಮಾರ್ಗಗಳನ್ನು ಕಂಡುಕೊಳ್ಳುತ್ತವೆ.

ಧರ್ಮ ಸಂಸ್ಕೃತಿಯ ನಿರ್ವಚನೆ:
ಈ ಪ್ರಯತ್ನಗಳ ಒಂದು ಭಾಗವಾಗಿಯೇ ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಪುನರ್ ನಿರ್ವಚನೆ ಮಾಡುತ್ತಾ ಆದಷ್ಟೂ ಸಂಕುಚಿತಗೊಳಿಸುವುದನ್ನು ಭಾರತದ ಸಂದರ್ಭದಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ನಿರ್ದಿಷ್ಟ ಮತಶ್ರದ್ಧೆ, ಧರ್ಮನಿಷ್ಠೆ ಹಾಗೂ ಗ್ರಾಂಥಿಕ ಆಚರಣೆಗಳನ್ನು ವಿಶಾಲಾರ್ಥದ ಸಂಸ್ಕೃತಿಯೊಡನೆ ಸಮೀಕರಿಸುವ ಮೂಲಕ ಸಂಸ್ಕೃತಿ ಮತ್ತು ಧರ್ಮ ಎರಡನ್ನೂ ಸಮಾನ ನೆಲೆಯಲ್ಲಿ ನಿರ್ವಚಿಸುವ ಒಂದು ಪ್ರಕ್ರಿಯೆಗೂ ಭಾರತ ಸಾಕ್ಷಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಕಳೆದುಹೋಗಿರುವುದು/ಹೋಗುತ್ತಿರುವುದು ಈ ದೇಶದ ನೆಲಮೂಲದ ಸಾಂಸ್ಕೃತಿಕ ಹೆಜ್ಜೆಗಳು/ಬೇರುಗಳು ಎನ್ನುವ ಅಂಶ ನಮ್ಮ ಪ್ರಜ್ಞೆಯನ್ನು ಬಾಧಿಸಬೇಕಿದೆ. ಭಾರತದ ಸಂವಿಧಾನ ಮೂಲತಃ ಎಲ್ಲರನ್ನೊಳಗೊಳ್ಳುವ (Inclusive) ತತ್ವವನ್ನು ಅನುಸರಿಸುವುದಾದರೂ, ಭಾರತದಲ್ಲಿ ಆಳ್ವಿಕೆಯ ನಿರೂಪಣೆಗಳಲ್ಲಿ ಆಯ್ದವರನ್ನು ಹೊರಗಿಟ್ಟು ನೋಡುವ ಹೊರಗುಳಿಸುವ (Exclusionary) ನೀತಿಗಳು ಗಟ್ಟಿಯಾಗುತ್ತಿರುವುದು ಪ್ರಸ್ತುತ ಸಂದರ್ಭದಲ್ಲಿ ಗಹನವಾದ ಸಮಸ್ಯೆಯಾಗಿ ಕಾಣುತ್ತದೆ.
ಇಂದಿಗೂ ಸಹ ಭಾರತೀಯ ಸಮಾಜದ ಎಲ್ಲ ಜಾತಿಸ್ತರಗಳನ್ನೂ ಗಾಢವಾಗಿ ಆವರಿಸಿರುವ ಮನುಸ್ಮೃತಿ ಪ್ರತಿಪಾದಿಸುವ ಸಮಾಜವನ್ನು ವರ್ಗೀಕರಿಸಿ ಹೊರಗಿಟ್ಟು ನೋಡುವ ತಾತ್ವಿಕ ನೆಲೆಗಳು ನಮ್ಮ ಸಾಂಸ್ಕೃತಿಕ ಅರಿವು ಮತ್ತು ವಿವೇಚನೆಯನ್ನೂ ನಿರ್ದೇಶಿಸುತ್ತಿವೆ. ಡಾ. ಬಿ.ಆರ್. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ ಭ್ರಾತೃತ್ವದ ಔದಾತ್ಯವನ್ನು ಅರಗಿಸಿಕೊಳ್ಳಲು ಭಾರತದ ಮೇಲ್ಪದರದ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಹಿಂದುತ್ವ ರಾಜಕಾರಣದಲ್ಲಿ, ಮೇಲ್ಜಾತಿಯ ನೆಲೆಗಳಲ್ಲಿ, ಅಲ್ಪಸಂಖ್ಯಾತ ಸಮಾಜದ ಸಂಪ್ರದಾಯವಾದಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅಂಬೇಡ್ಕರರು ಮತ್ತೆಮತ್ತೆ ಹೇಳುವಂತೆ ಭಾರತೀಯ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನೆರೆಯ ವ್ಯಕ್ತಿಯನ್ನು ಮತ್ತೊಂದು ಅಸ್ಮಿತೆಯ ನೆಲೆಯಲ್ಲೇ ಗುರುತಿಸುತ್ತಾನೆ ಎನ್ನುವುದು ಇಂದಿಗೂ ವಾಸ್ತವವಾಗಿರುವುದು ದುರಂತವಾದರೂ ಸತ್ಯ. ಹಾಗಾಗಿಯೇ ಸಂವಿಧಾನ ಬಯಸುವ ಒಳಗೊಳ್ಳುವ ಸಮಾಜದ (Inclusive society) ಬದಲಾಗಿ ಆಳ್ವಿಕೆಯ ಶಕ್ತಿಗಳು ಹೊರಗುಳಿಸುವ ಸಮಾಜವನ್ನು (Exclusionary society) ವ್ಯವಸ್ಥಿತವಾಗಿ ಪೋಷಿಸುತ್ತಿವೆ.
ನಂಬಿಕೆ ಹಾಗೂ ಶ್ರದ್ಧಾಭಕ್ತಿಗಳು ಪ್ರಧಾನವಾಗಿ ಪ್ರಭಾವಿಸುವ ಭಾರತೀಯ ಸಮಾಜದಲ್ಲಿ ಈ ಹೊರಗುಳಿಸುವಿಕೆಯ ಸಾಂಸ್ಕೃತಿಕ ರಾಜಕಾರಣಕ್ಕೆ (Exclusionary Cultural Politics) ಚಿಹ್ನೆ, ಲಾಂಛನ, ಧ್ವಜ, ಪ್ರತಿಮೆ ಮತ್ತು ಸ್ಥಾವರಗಳು ಬಹುಮುಖ್ಯ ಬಂಡವಾಳವೂ, ಸಾಧನವೂ ಆಗುತ್ತವೆ. ಸಮಾಜದ ಮೇಲ್ಪದರದಲ್ಲಿ ತಿಳಿಯಾಗಿ ಕಾಣುವ ಶ್ರದ್ಧಾನಂಬಿಕೆಗಳು ತಳಮಟ್ಟಕ್ಕೆ ಹೋಗುತ್ತಿದ್ದಂತೆಲ್ಲಾ ಭಾವನಾತ್ಮಕ ರೂಪ ಪಡೆದುಕೊಳ್ಳುತ್ತವೆ. ಈ ಭಾವನೆಗಳನ್ನು ಸಾಮುದಾಯಿಕ ಚೌಕಟ್ಟಿನಲ್ಲಿ ಘನೀಕರಿಸುವ ಮೂಲಕ ಸಾಂಸ್ಕೃತಿಕ ಶಕ್ತಿಗಳು ಮೇಲೆ ಉಲ್ಲೇಖಿಸಿದಂತಹ ಸಾಧನಗಳ ಸುತ್ತ ಒಂದು ಭಾವೋನ್ಮಾದದ ಅಲೆಯನ್ನು ಸೃಷ್ಟಿಸಿ ಇಡೀ ಸಮಾಜವನ್ನು ಸಮೂಹ ಸನ್ನಿಗೊಳಪಡಿಸುವುದು ಸುಲಭವಾಗುತ್ತದೆ. ಇಂತಹ ವಿದ್ಯಮಾನಗಳನ್ನು ಇತಿಹಾಸದುದ್ದಕ್ಕೂ ಎಲ್ಲ ದೇಶಗಳಲ್ಲೂ, ಎಲ್ಲ ಧರ್ಮಗಳ ನಡುವೆಯೂ, ಎಲ್ಲ ಸಾಂಸ್ಕೃತಿಕ ನೆಲೆಗಳಲ್ಲೂ ಕಾಣುತ್ತಲೇ ಬಂದಿದ್ದೇವೆ.

ಸಾಂಸ್ಕೃತಿಕ ಸಂಕೇತಗಳ ಸುತ್ತ:
ಧ್ವಜ-ಲಾಂಛನ-ಚಿಹ್ನೆಗಳ ಸುತ್ತ ನಿರ್ಮಾಣವಾಗುವ ಸಾರ್ವಜನಿಕ ಸಂಕಥನಗಳನ್ನು ರೂಪಿಸುವ-ನಿರೂಪಿಸುವ ಅಧಿಕಾರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವ ಸಮಾಜದ ಪ್ರಬಲ ವರ್ಗಗಳು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅನುಕೂಲಕರ ನಿರೂಪಣೆಗಳನ್ನೂ (Narratives) ಸೃಷ್ಟಿಸಿಕೊಳ್ಳಲೆತ್ನಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅಧಿಕಾರ ರಾಜಕಾರಣವು ಸಮಾಜದಲ್ಲಿ ಲಭ್ಯವಿರುವ ಎಲ್ಲ ಬೌದ್ಧಿಕ-ಸಾಂಸ್ಥಿಕ ನೆಲೆಗಳನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತದೆ. ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏಕತೆ, ರಾಮಾನುಜರ ಪ್ರತಿಮೆಯಲ್ಲಿ ಸಮನ್ವಯತೆ, ಶಿವಾಜಿಯ ಪ್ರತಿಮೆಯಲ್ಲಿ ಸಾಮ್ರಾಜ್ಯಶಾಹಿ ಶೌರ್ಯ ಹೀಗೆ ಗುರುತಿಸಿಕೊಳ್ಳುತ್ತಲೇ ಬಂದಿರುವ ಹಿಂದುತ್ವ ರಾಜಕಾರಣ ಈ ಶ್ರೀರಾಮನ ಪ್ರತಿಮೆಯಲ್ಲಿ ಇಡೀ ದೇಶ-ಸಂಸ್ಕೃತಿಯನ್ನೇ ಕಾಣಲು ಯತ್ನಿಸುತ್ತಿದೆ. ಹಾಗಾಗಿಯೇ ಕೆಲವೇ ವರ್ಷಗಳ ಮುನ್ನ “ಭಾರತ್ ಮಾತಾ ಕಿ ಜೈ” ಘೋಷಣೆಯಲ್ಲಿ ಕಾಣಲಾಗುತ್ತಿದ್ದ ದೇಶಭಕ್ತಿ ಈಗ “ಜೈ ಶ್ರೀರಾಮ್” ಘೋಷಣೆಯಲ್ಲಿ ಗುರುತಿಸಲಾಗುತ್ತಿದೆ. ಅಂದರೆ ದೇಶ ಎನ್ನುವ ಒಂದು ಅಮೂರ್ತ ಕಲ್ಪನೆಗೆ ಹೊಸ ರೂಪ ನೀಡಲಾಗಿದ್ದು ಮತ್ತಷ್ಟು ಸಂಕುಚಿತಗೊಳಿಸಲಾಗಿದೆ.
ನವ ಭಾರತದ ಸಾಂಸ್ಕೃತಿಕ ರಾಜಕಾರಣವು ಹೆಚ್ಚು ಹೆಚ್ಚಾಗಿ ಪಿತೃಪ್ರಧಾನ ಮೌಲ್ಯಗಳೆಡೆಗೆ ಹೊರಳುತ್ತಿರುವುದನ್ನೂ ಈ ವಿದ್ಯಮಾನದಲ್ಲಿ ಗಮನಿಸಬಹುದಾಗಿದೆ. ಪುರಾಣ ಕಥನಗಳಿಗೆ ಸಮಕಾಲೀನ ನಿರೂಪಣೆಗಳನ್ನು ನೀಡುವ ಮೂಲಕ ಪೌರಾಣಿಕ ಕಥನಗಳಿಗೆ ಚರಿತ್ರೆಯ ಸ್ಪರ್ಶ ನೀಡುವುದು, ದಾಖಲಿತ ಚಾರಿತ್ರಿಕತೆಯನ್ನೂ ಮಿಥ್ಯೆಯನ್ನಾಗಿ ವ್ಯಾಖ್ಯಾನಿಸುವುದು , ಇದರೊಟ್ಟಿಗೇ ಸಮಕಾಲೀನ ವಾಸ್ತವಗಳನ್ನು ಸುಳ್ಳುಗಳ ಮೂಲಕ ಅಲ್ಲಗಳೆಯುವುದು/ನಿರಾಕರಿಸುವುದು, ವರ್ತಮಾನ ಭಾರತದ ಸಾಂಸ್ಕೃತಿಕ ರಾಜಕಾರಣದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾದ ಲಕ್ಷಣ. ಈ ನಿರೂಪಣೆಗಳ ಚೌಕಟ್ಟಿನಲ್ಲೇ ವಾಲ್ಮೀಕಿ ರಾಮಾಯಣದ ಹನುಮ ಅಥವಾ ಆಂಜನೇಯ ತನ್ನ ಭಕ್ತಿ-ಭಾವದ ವಿನಮ್ರತೆಯನ್ನು ಕಳೆದುಕೊಂಡು ಉಗ್ರಸ್ವರೂಪಿಯಾಗಿ, ಪುರುಷಸಿಂಹನಂತೆ ಶೌರ್ಯದ ಸಂಕೇತವಾಗಿ ಕಾಣತೊಡಗುತ್ತಾನೆ. ಹನುಮನ ಸುತ್ತ ನಿರ್ಮಿಸಲಾಗುವ ಸಾಂಸ್ಕೃತಿಕ ವಾತಾವರಣದಲ್ಲಿ ಚಿಹ್ನೆ, ಲಾಂಛನ ಅಥವಾ ಧ್ವಜಗಳು ವರ್ತಮಾನದ ಸಾಂಸ್ಕೃತಿಕ ರಾಜಕಾರಣಕ್ಕೆ ಪ್ರಬಲ ಅಸ್ತ್ರಗಳಾಗುತ್ತವೆ.
ಧರ್ಮ ಅಥವಾ ಸಂಸ್ಕೃತಿ ರಕ್ಷಣೆಗಾಗಿ ಸಹಜವಾಗಿಯೇ ಪಿತೃಪ್ರಧಾನ ಸಮಾಜವು ಪುರುಷ ದೇವತೆಗಳ, ಅವತಾರಗಳ ಮತ್ತು ಅತೀತ ಶಕ್ತಿಗಳ ಮೊರೆ ಹೋಗುತ್ತದೆ. ಶತಮಾನಗಳಿಂದಲೂ ಉತ್ತರಭಾರತದ ಸಾರ್ವಜನಿಕ ಬದುಕಿನಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಗುಡ್ ಮಾರ್ನಿಂಗ್ ಎಂಬ ಸಂಬೋಧನೆಗೆ ಸಂವಾದಿಯಾಗಿ ಬಳಕೆಯಲ್ಲಿದ್ದ ʼಜೈ ಸಿಯಾ ರಾಮ್ʼ( ಜೈ ಸೀತಾ ರಾಮ್) ಎಂಬ ಘೋಷಣೆ ಈಗ ನೇಪಥ್ಯಕ್ಕೆ ಸರಿದು ʼಜೈ ಶ್ರೀರಾಮ್ʼ ಬಳಕೆಗೆ ಬಂದಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಹಿಂದೂ ಧಾರ್ಮಿಕ ನಡವಳಿಕೆಗಳಲ್ಲಿ ಮಾತ್ರ ಕಾಣಬಹುದಾಗಿದ್ದ ಅಲ್ಪ ಪ್ರಮಾಣದ ಸಾಂಕೇತಿಕ ಮಹಿಳಾ ಪ್ರಾತಿನಿಧ್ಯವನ್ನೂ ಅಯೋಧ್ಯೆಯ ಬೆಳವಣಿಗೆಗಳು ನೆನೆಗುದಿಗೆ ತಳ್ಳಿಬಿಟ್ಟಿವೆ. ವಾಲ್ಮೀಕಿಯ ಸೀತೆ ಮತ್ತು ಅಮೂರ್ತ ಭಾರತ ಮಾತೆ ಎರಡೂ ಕಲ್ಪನೆಗಳೂ ಸಹ ಪಿತೃಪ್ರಧಾನತೆಯ ದಾಳಿಯಲ್ಲಿ ಇತಿಹಾಸದ ವಿಸ್ಮೃತಿಗೆ ಜಾರಿಬಿಡುತ್ತವೆ.

ಸಾಂಸ್ಕೃತಿಕ ರಾಜಕಾರಣದ ನೆಲೆಗಳು:
ಭಾರತದ ಸಮಕಾಲೀನ ರಾಜಕಾರಣ ಹಾಗೂ ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ನೆಲೆಯಲ್ಲಿ ನೋಡಿದಾಗ, ಸಾರ್ವಜನಿಕ ಸಂಕಥನಗಳಲ್ಲೂ ಈ ಪಿತೃಪ್ರಧಾನ್ಯ ಮನಸ್ಥಿತಿ ಮತ್ತೊಮ್ಮೆ ಹೊಸ ರೂಪಾಂತರಗಳೊಂದಿಗೆ ವ್ಯಕ್ತವಾಗುತ್ತಿದೆ. “ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಗಳು, ಜಗತ್ತನ್ನೇ ದಿಗ್ಭ್ರಮೆಗೊಳಿಸುವ ಸ್ಥಾವರಗಳು, ಚರಿತ್ರೆಯನ್ನು ಸಾರಿ ಹೇಳುವ ಭವ್ಯ/ದಿವ್ಯ ಸ್ಮಾರಕಗಳು” ಇವೆಲ್ಲವೂ ಸಹ ಚರಿತ್ರೆ-ಪುರಾಣದಿಂದ ಹೆಕ್ಕಿತೆಗೆದ ಪುರುಷಾಧಿಪತ್ಯದ ಕುರುಹುಗಳನ್ನೇ ಪ್ರತಿನಿಧಿಸುತ್ತವೆ. ಒಂದು ಸಣ್ಣ ಪ್ರಾಂತ್ಯವನ್ನು ಆಳಿದ ಕೇಂಪೇಗೌಡ ನಾಡಪ್ರಭು ಎನಿಸಿಕೊಂಡರೆ ಭೌಗೋಳಿಕವಾಗಿ ಇನ್ನೂ ಹೆಚ್ಚಿನ ವ್ಯಾಪ್ತಿಯನ್ನು ಆಳಿದ ಕಿತ್ತೂರು ಚೆನ್ನಮ್ಮ ಪ್ರಾದೇಶಿಕವಾಗಿಯೇ ಉಳಿದುಬಿಡುತ್ತಾಳೆಯೇ ಹೊರತು ನಾಡರಾಣಿ ಎನಿಸಿಕೊಳ್ಳುವುದಿಲ್ಲ. ರಾಣಿ ಅಬ್ಬಕ್ಕ ಒಂದು ನಿರ್ದಿಷ್ಟ ಸಮುದಾಯದ ಅಸ್ಮಿತೆಯಾಗಿ ಉಳಿದುಬಿಡುತ್ತಾಳೆ. ಅಯೋಧ್ಯೆಯ ಬಾಲರಾಮ ಪ್ರತಿಷ್ಠಾಪನೆಯ ಸಂದರ್ಭದಲ್ಲೂ ಇದೇ ಪುರುಷ ಪ್ರಧಾನ ಲಕ್ಷಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಯೋಧ್ಯೆಯ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳು ಇದರ ಮೂಲವಾಗಿ ಕಂಡುಬಂದರೆ, ಉಳಿದಂತೆ ಇದು ಸಾಮಾಜಿಕ ಆಧಿಪತ್ಯದ ಪಿತೃಪ್ರಧಾನ ಲಕ್ಷಣವಾಗಿಯೇ ಕಾಣುತ್ತದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಕೋಮುವಾದಿ ಧೃವೀಕರಣಕ್ಕೆ ನೆಲೆಯಾಗುತ್ತಿರುವ ಹನುಮಧ್ವಜದ ಸುತ್ತಲಿನ ಬೆಳವಣಿಗೆಗಳನ್ನೂ ಈ ದೃಷ್ಟಿಯಿಂದಲೇ ನೋಡಬೇಕಾಗಿದೆ. ಹನುಮನನ್ನು ಸ್ವಾಮಿಭಕ್ತಿ, ಸ್ವಾಮಿನಿಷ್ಠೆ ಮತ್ತು ಕರ್ತವ್ಯಬದ್ಧತೆಯ ನೆಲೆಯಿಂದ ವಿಮುಖಗೊಳಿಸಿ ಶೌರ್ಯದ ಸಂಕೇತವನ್ನಾಗಿ ಮಾಡುವ ಮೂಲಕ ಹಿಂದುತ್ವ ರಾಜಕಾರಣ ಪುರುಷಾಧಿಪತ್ಯದ ನೆಲೆಗಳನ್ನು ಮತ್ತಷ್ಟು ಬಲಪಡಿಸಲು ಯತ್ನಿಸುತ್ತಿದೆ. ಈ ರಾಜಕಾರಣವನ್ನು ಮುಂದೊಯ್ಯಲು ಸಜ್ಜಾಗಿರುವ ಕಾರ್ಯಕರ್ತರ ಪಡೆಗಳಲ್ಲಿ ಶೂದ್ರ-ದಲಿತ ಸಮುದಾಯದ ಯುವಕರೇ ಹೆಚ್ಚಾಗಿರುವುದನ್ನು ವಿಶಾಲ ಅಧಿಕಾರ ರಾಜಕಾರಣದ ನೆಲೆಯಲ್ಲಿಟ್ಟು ನೋಡಿದಾಗ, ಜಾತಿ ಪೀಡಿತ/ವಿಘಟಿತ ಸಮಾಜದಲ್ಲಿ ಶೋಷಿತ ಜಾತಿಗಳೂ ಸಹ ತಮ್ಮ ಶೋಷಕರನ್ನು ಮನ್ನಿಸಿ, ಅಥವಾ ಶೋಷಣೆಯನ್ನು ಸಹಜವೆಂದು ಸ್ವೀಕರಿಸಿ, ಮತಶ್ರದ್ಧೆಗೆ ಹೆಚ್ಚು ಒಲವು ತೋರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಹಾಗಾಗಿ ಹನುಮನನ್ನು ಆರಾಧಿಸುವ ಅಪಾರ ಜನಸ್ತೋಮ ರೂಪಾಂತರಗೊಂಡ ಹನುಮನ ಭಕ್ತರಾಗುತ್ತಾರೆ. ವಾಲ್ಮೀಕಿಯ ಹನುಮ ಗುಡಿಯಲ್ಲಿ ಮಾತ್ರ ಕಾಣಸಿಗುತ್ತಾನೆ. ಭಾವನಾತ್ಮಕವಾಗಿ ಭಾರತದ ಜನಕೋಟಿಯ ಭಕ್ತಿಭಾವದ ಕೇಂದ್ರವಾಗಿರುವ ಶ್ರೀರಾಮ ಅಥವಾ ಹನುಮ, ಸಮಕಾಲೀನ ಸಾಮಾಜಿಕ ನೆಲೆಯಲ್ಲಿ ಆರಾಧನೆಗಿಂತಲೂ ಮಿಗಿಲಾಗಿ ಉನ್ಮಾದದ ಕೇಂದ್ರಗಳಾಗಿದ್ದಾರೆ. ಯಾವುದೇ ನೆಲೆಯಲ್ಲಾದರೂ ಜನಸಾಮಾನ್ಯರಲ್ಲಿ ಭಾವೋನ್ಮಾದವನ್ನು ಉದ್ಧೀಪನಗೊಳಿಸಲು ನೆರವಾಗುವುದು ಪ್ರತಿಮೆಗಳು/ಸ್ಥಾವರಗಳು ಹಾಗೂ ಅವುಗಳ ಸುತ್ತ ಸೃಷ್ಟಿಸಲ್ಪಡುವ ಚಿಹ್ನೆ, ಲಾಂಛನಗಳು. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಪ್ರಬಲ ಸಾಮಾಜಿಕ ವರ್ಗಗಳಿಗೆ ತಮ್ಮ ಪಾರಮ್ಯ/ಪ್ರಾತಿನಿಧ್ಯ/ಆಧಿಪತ್ಯವನ್ನು ಸಾಧಿಸಲು ಇದು ಬಹಳ ಸುಲಭವಾಗಿ ನೆರವಾಗುವುದನ್ನು ಗುರುತಿಸಿಯೇ ಡಾ. ಬಿ. ಆರ್. ಅಂಬೇಡ್ಕರ್ ಆರಾಧನಾ ಮನೋಭಾವದಿಂದ ಮುಕ್ತರಾಗುವಂತೆ ದಲಿತರಿಗೆ ಕರೆ ನೀಡಿದ್ದರು.

ಒಂದು ಹೊಸ ಚಿಂತನೆಯ ಕಡೆಗೆ:
ದುರದೃಷ್ಟವಶಾತ್ ಸ್ವತಃ ಅಂಬೇಡ್ಕರ್ ಅವರೇ ಈಗ ಆರಾಧನೆಯ ಕೇಂದ್ರಬಿಂದುವಾಗಿದ್ದಾರೆ. ದಲಿತ ಅಸ್ಮಿತೆಗಾಗಿ ಅಂಬೇಡ್ಕರ್ ಪ್ರತಿಮೆ/ಸ್ಥಾವರಗಳನ್ನು ನಿರ್ಮಿಸುವುದು ವರ್ತಮಾನ ಭಾರತದಲ್ಲಿ ಅತ್ಯವಶ್ಯ ಆದರೆ ನಮ್ಮ ಪ್ರಜಾಸತ್ತಾತ್ಮಕ ಸಮಾಜಮುಖಿ ಆಲೋಚನೆಗಳು ಇವುಗಳನ್ನು ದಾಟಿ ವಿಸ್ತರಿಸಬೇಕಿದೆ. ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ರಸ್ತೆಗೆ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ “ ಎರಡು ಶೋಷಿತ ಸಮುದಾಯಗಳ ” ನಡುವೆ ನಡೆದಿರುವ ಸಂಘರ್ಷ ನಮ್ಮ ನಡುವಿನ ಆಲೋಚನಾ ಮಿತಿಗಳನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತಿದೆ. ದಲಿತರ ಒಂದು ವರ್ಗಕ್ಕಿಂತಲೂ ಹೆಚ್ಚಿನ ಶೋಷಣೆಗೊಳಗಾಗಿರುವ ಮತ್ತೊಂದು ಸಮುದಾಯ ಅಂಬೇಡ್ಕರರ ಹೆಸರನ್ನೂ ಸಹಿಸಿಕೊಳ್ಳಲಾರದಷ್ಟು ಅಸಹಿಷ್ಣುತೆ ಬೆಳೆಸಿಕೊಂಡಿರುವುದು, ಬಾಹ್ಯ ಸಮಾಜದ ಶ್ರೇಣಿ ಮನೋಧರ್ಮ ಮತ್ತು ಮೇಲರಿಮೆಯ ಸಂಕೇತವಾಗಿಯೇ ಕಾಣುತ್ತದೆ. ಇದಕ್ಕೆ ಪ್ರಧಾನವಾಗಿ ರಾಜಕೀಯ ಕಾರಣಗಳೇ ಇರಬಹುದಾದರೂ, ಸಾಮುದಾಯಿಕ ನೆಲೆಯಲ್ಲಿ ನಿಂತು ನೋಡಿದಾಗ, ಅಂಬೇಡ್ಕರ್ ತಾತ್ವಿಕವಾಗಿ ನಮ್ಮನ್ನು ಸಂಪೂರ್ಣವಾಗಿ ತಲುಪಿದ್ದಾರೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.
ತಲುಪಿಲ್ಲ ಎಂದಾದರೆ ಅದಕ್ಕೆ ಕಾರಣ ದೇಶವನ್ನು ಆವರಿಸಿರುವ ಉನ್ಮತ್ತ ಸಾಂಸ್ಕೃತಿಕ ರಾಜಕಾರಣ ಎನ್ನುವುದಂತೂ ಸ್ಪಷ್ಟ. ಚುನಾವಣಾ ರಾಜಕಾರಣವನ್ನು ಅತಿಕ್ರಮಿಸಿರುವ ಅಸ್ಮಿತೆಯ ಚೌಕಟ್ಟುಗಳು ಸಾಂಸ್ಕೃತಿಕ ನೆಲೆಯಲ್ಲಿ ಮತ್ತಷ್ಟು ವಿಘಟನೆಗೊಳಗಾಗಿ ಸಮಾಜದಲ್ಲಿ ಸಹಜವಾಗಿ ಇರಬೇಕಾದ ಭ್ರಾತೃತ್ವದ ನೆಲೆಗಳನ್ನು ನಾಶಪಡಿಸುತ್ತಿರುವುದನ್ನು ಕೆರಗೋಡು, ಹಲ್ಲರೆ ಘಟನೆಗಳಲ್ಲಿ ಗುರುತಿಸಬಹುದು. ಸಂವಿಧಾನ ಪೀಠಿಕೆಯಲ್ಲಿ ಸೆಕ್ಯುಲರಿಸಂ ಎಂಬ ಪದವು ತದನಂತರದ ಸೇರ್ಪಡೆ ಎಂದು ವಾದಿಸುವವರು ಗಮನಿಸಬೇಕಾದ್ದು ಮೂಲ ಸಂವಿಧಾನದಲ್ಲಿರುವ ʼಭ್ರಾತೃತ್ವʼದ ಪರಿಕಲ್ಪನೆಯನ್ನು. ಡಾ. ಅಂಬೇಡ್ಕರ್ ಹೆಚ್ಚು ಒತ್ತು ನೀಡಿದ ಮೌಲ್ಯವಾಗಿ ʼಭ್ರಾತೃತ್ವʼ ಸಹಜವಾಗಿಯೇ ಸೆಕ್ಯುಲರಿಸಂನ ಮೂಲ ಧಾತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಭ್ರಾತೃತ್ವ ಕಲ್ಪನೆ ಒಳಗೊಳ್ಳುವ ಸಮಾಜದ (Inclusive society) ಮೂಲ ಧಾತುವೂ ಹೌದು ಹಾಗೆಯೇ ಮನುಸ್ಮೃತಿ ಪ್ರತಿಪಾದಿಸುವ ಹೊರಗುಳಿಸುವ ಸಮಾಜದ (Exclusionary society) ವಿರುದ್ಧವಾದ ತತ್ವವೂ ಹೌದು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಪ್ರಜಾಸತ್ತಾತ್ಮಕ ಮಾನವೀಯ ಸಮಾಜ ಹಾಗೂ ಸಮನ್ವಯತೆಯ ಭಾರತವನ್ನು ಕಟ್ಟಲು ಬಯಸುವ ಪ್ರತಿಯೊಂದು ಮನಸ್ಸೂ ಸಹ ಈ ಭ್ರಾತೃತ್ವವನ್ನು ಮತ್ತಷ್ಟು ಪಸರಿಸುವ, ಹಿಗ್ಗಿಸುವ, ವಿಶಾಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಪ್ರಜಾಪ್ರಭುತ್ವ-ಸಂವಿಧಾನದ ರಕ್ಷಣೆಗಾಗಿ ಅಹರ್ನಿಶಿ ಹೋರಾಡುತ್ತಿರುವ ಪ್ರಗತಿಪರ-ಎಡಪಂಥೀಯ-ಸಮಾಜಮುಖಿ ಸಂಘಟನೆಗಳು ತಮ್ಮೊಳಗಿನ ಭಿನ್ನ ಭೇದಗಳನ್ನು ಬದಿಗೊತ್ತಿ ಸಾಂಸ್ಥಿಕ-ಸಾಂಘಿಕ ಭ್ರಾತೃತ್ವವನ್ನು ಸಾಧಿಸುವ ಮೂಲಕ ವರ್ತಮಾನ/ಭವಿಷ್ಯದ ಯುವ ಸಮುದಾಯಕ್ಕೆ ನಿದರ್ಶನವಾಗಬೇಕಿದೆ. ಇಲ್ಲಿ ಎದುರಾಗಬಹುದಾದ ಅಸ್ಮಿತೆಯ ತೊಡಕುಗಳನ್ನು ನಿವಾರಿಸಿ/ಮರೆತು ಮುನ್ನಡೆದಾಗ ಮಾತ್ರ ಅಂಬೇಡ್ಕರ್ ಕನಸಿನ ಭ್ರಾತೃತ್ವವನ್ನು ಸಾಧಿಸಲು ಸಾಧ್ಯವಾದೀತು. ಈ ಅರಿವು ನಮ್ಮೊಳಗಿರಬೇಕು. ಇದು ಕಾಲದ ಕರೆಯೂ ಹೌದು, ಅನಿವಾರ್ಯವೂ ಹೌದು.






