ಬೆಂಗಳೂರು: ರಾಜ್ಯದಲ್ಲಿ ಈವರೆಗೂ ಕೊಂಚ ತಣ್ಣಗಾಗಿದ್ದ ಅಧಿಕಾರ ಹಸ್ತಾಂತರದ ಮುಸುಗಿನ ಗುದ್ದಾಟ ಇದೀಗ ಮತ್ತೆ ಮುಖ್ಯ ಭೂಮಿಕೆಗೆ ಬರುತ್ತಿದೆ. ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಸಿಎಂ ಕುರ್ಚಿಗಾಗಿ ಶೀತಲ ಸಮರ ದೊಡ್ಡ ಸವಾಲಾಗಿದೆ.

ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಸ್ಥಾನ ಪೂರೈಸಿಯೇ ಸಿದ್ಧ ಎನ್ನುತ್ತಿದ್ದರೆ, ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಪಟ್ಟ ಪಡೆದೇ ಸಿದ್ಧ ಎನ್ನುತ್ತಿದ್ದಾರೆ. ಅಲ್ಲದೇ ಆ ಸ್ಥಾನ ಪಡೆಯಲು ಏನೇನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದು, ದೆಹಲಿಯಲ್ಲಿ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಈ ಇಬ್ಬರ ಸಿಎಂ ಸ್ಥಾನ ಪೈಪೋಟಿಯಿಂದ ಹೈರಾಣಾಗಿರುವ ಕಾಂಗ್ರೆಸ್ ಹೈಮಾಂಡ್ ಈ ಬಜೆಟ್ ಅಧಿವೇಶದವರೆಗೂ ಸುಮ್ಮನಿರಿ ಎಂದು ಡಿ.ಕೆ ಶಿವಕುಮಾರ್‌ಗೆ ಸಮಯ ನೀಡಿದೆ ಎನ್ನಲಾಗಿದೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಒಳಜಗಳ ತೀವ್ರವಾಗಿರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಬಣದ ಕೆಲ ಶಾಸಕರು ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ತೆರಳಲು ಯೋಜನೆ ಮಾಡಲಾಗಿದ್ದು, ಈ ಪ್ರವಾಸಕ್ಕೆ ಸಿದ್ದರಾಮಯ್ಯ ಬಣದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾಗಿದೆ.

ವೀಸಾ ಸಿಗದ ಕಾರಣದಿಂದ ಕೆಲವರು ಪ್ರವಾಸವನ್ನು ರದ್ದುಪಡಿಸಿದ್ದರೆ, ಇನ್ನೂ ಕೆಲವರು ಹೈಕಮಾಂಡ್ ಅಸಮಾಧಾನಕ್ಕೆ ಗುರಿಯಾಗುವ ಭಯದಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕುಟುಂಬದೊಂದಿಗೆ ಟಿಕೆಟ್ ಬುಕ್ ಮಾಡಿರುವ ಶಾಸಕರು ಪ್ರವಾಸ ರದ್ದುಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಣದ ಕೆಲ ಶಾಸಕರು ನಾಳೆ ಆಸ್ಟ್ರೇಲಿಯಾಗೆ ಹಾರಲಿದ್ದು, ಮಾರ್ಚ್ 1ರಂದು ಶಾಸಕರು ವಾಪಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 6 ರಿಂದ ಮಾರ್ಚ್27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಹೀಗಾಗಿ ವಿದೇಶಕ್ಕೆ ಹಾರಲಿರುವ ಎಲ್ಲಾ ಶಾಸಕರು ಮಾರ್ಚ್ 1ರಂದು ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ.






