ಜಾಗತಿಕ ರಾಜಕೀಯ ಕ್ಷೋಭೆ ಮತ್ತು ಆರ್ಥಿಕ ಅಸ್ಥಿರತೆಗಳಿಂದಾಗಿ ಷೇರುಪೇಟೆಯಲ್ಲಿ ತೀವ್ರ ಕುಣಿತ ಪ್ರಾರಂಭವಾಗಿದೆ. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1700 ಅಂಶಗಳಷ್ಟು ಕುಸಿತ ದಾಖಲಿಸಿದೆ. ದಿನದ ಅಂತ್ಯಕ್ಕೆ 1456 ಅಂಶಗಳ ಕುಸಿತದೊಂದಿಗೆ 52846ಕ್ಕೆ ಸ್ಥಿರಗೊಂಡಿದೆ. 2022ನೇ ಸಾಲಿನಲ್ಲಿ ಸೆನ್ಸೆಕ್ಸ್ 5400 ಅಂಶಗಳಷ್ಟು ಕುಸಿತ ದಾಖಲಿಸಿದೆ. ಅಂದರೆ ಹೆಚ್ಚುಕಮ್ಮಿ ಶೇ.10ರಷ್ಟು ಕುಸಿದಂತಾಗಿದೆ.
ಕೋವಿಡ್ ಅಪ್ಪಳಿಸಿದಾಗ 2020ರ ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ದಾಖಲಿಸಿದ್ದ ಷೇರುಪೇಟೆ ನಂತರ ತ್ವರಿತವಾಗಿ ಚೇತರಿಸಿಕೊಂಡಿತ್ತು. ನಂತರ ಗೂಳಿ ಓಟದ್ದೇ ಕಾರುಬಾರು. ಸಾರ್ವಕಾಲಿಕ ಗರಿಷ್ಠ ಮಟ್ಟ 62,245ಕ್ಕೆ ಜಿಗಿದಿದ್ದ ಸೆನ್ಸೆಕ್ಸ್ ನಂತರ ಇಳಿಜಾರಿನಲ್ಲಿ ಸಾಗಿತ್ತು. ಇದೀಗ ಕರಡಿ ಹಿಡಿತಕ್ಕೆ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಸಾಮಾನ್ಯವಾಗಿ ಗರಿಷ್ಠ ಮಟ್ಟದಿಂದ ಸತತವಾಗಿ ಶೇ.20ರಷ್ಟು ಕುಸಿತ ದಾಖಲಿಸಿದರೆ ಅದನ್ನು ಕರಡಿ ಹಿಡಿತ ಎನ್ನುತ್ತಾರೆ. ಸದ್ಯಕ್ಕೆ ಸತತ ಕುಸಿತದ ಪ್ರಮಾಣ ಶೇ.10ರ ಆಜುಬಾಜು.
ಈ ಲೆಕ್ಕದಲ್ಲೀಗ ಷೇರುಪೇಟೆ ಗೂಳಿ ಓಟದಲ್ಲೂ ಇಲ್ಲ, ಕರಡಿ ಹಿಡಿತಕ್ಕೂ ಸಿಕ್ಕಿಲ್ಲ. ನಡುವೆ ಜೀಕುತ್ತಿದೆ.
ಬರುವ ದಿನಗಳಲ್ಲಿ ಚೇತರಿಕೆ ಕಾಣಬಹುದೇ? ಹೌದು ಎನ್ನಬಹುದಾದ ಸಕಾರಾತ್ಮಕ ಕಾರಣಗಳಾವೂ ಇಲ್ಲ. ಇಲ್ಲವೆನ್ನಲು ಹತ್ತಾರು ಕಾರಣಗಳಿವೆ. ಹೀಗಾಗಿ 2022ನೇ ಸಾಲು ಷೇರುಪೇಟೆಯ ಪಾಲಿಗೆ ಕರಡಿ ಹಿಡಿತ ವರ್ಷವೇ ಆಗಬಹುದು.
ಹಣದುಬ್ಬರ ಜಾಗತಿಕವಾಗಿ ವ್ಯಾಪಿಸಿದೆ. ಅಮೆರಿಕಾ, ಇಂಗ್ಲೆಂಡ್ ನಂತಹ ದೇಶಗಳಲ್ಲೇ 40 ವರ್ಷಗಳಲ್ಲೇ ಅಧಿಕ ಹಣದುಬ್ಬರ ದಾಖಲಾಗಿದೆ. ಕಚ್ಚಾ ತೈಲ ಏರುಹಾದಿಯಲ್ಲಿದೆ. ಬಹುತೇಕ ಸರಕು ಸೇವೆಗಳ ದರ ಏರುತ್ತಲೇ ಇವೆ. ಇವೆಲ್ಲಕ್ಕೂ ಮಿಗಿಲಾಗಿ ರಷ್ಯಾ- ಉಕ್ರೇನ್ ಯುದ್ಧ ಮುಗಿಯುವ ಸಾಧ್ಯತೆ ಇಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ 2022ರ ಉತ್ತರಾರ್ಧದಲ್ಲಿ ಮತ್ತಷ್ಟು ಕುಸಿತ ನಿರೀಕ್ಷಿಸಲಾಗಿದೆ.
ಆದರೆ, ಮಾರುಕಟ್ಟೆ ತಜ್ಞರಲ್ಲಿ ಈ ಬಗ್ಗೆ ಒಮ್ಮತವಿಲ್ಲ. ಕೆಲವರು ಗೂಳಿ ಓಟ ಮತ್ತಷ್ಟು ದಿನ ಸಾಗಲಿದೆ ಎಂಬ ಆಶಾವಾದ ಹೊಂದಿದ್ದರೆ, ಮತ್ತೆ ಕೆಲವರು ಕರಡಿ ಕುಣಿತ ಅಬಾಧಿತ ಎನ್ನುತ್ತಾರೆ.
ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂಬುದನ್ನು ಗಮನಿಸಿ.
ಎಲ್ಲಾ ಜಾಗತಿಕ ತಲೆನೋವಿನ ನಡುವೆಯೂ ಭಾರತೀಯ ಮಾರುಕಟ್ಟೆಯು ಅತಿಯಾದ ಆಶಾವಾದವನ್ನು ಮುಂದುವರೆಸಿರುವುದರಿಂದ ಷೇರುಗಳ ಮಾರಾಟದ ಅಗತ್ಯವಿದೆ ಎನ್ನುತ್ತಾರೆ ಡೈಮೆನೆಷನ್ ಕಾರ್ಪೊರೆಟ್ ಫೈನಾನ್ಷಿಯಲ್ ಸರ್ವೀಸಸ್ ನ ಸಿಇಒ ಅಜಯ್ ಶ್ರೀವಾಸ್ತವ. ನಾವು ಅತ್ಯಂತ ಸಾಮಾನ್ಯವಾದ ಮಾರಾಟವನ್ನು ನೋಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ನಾನು ಭಾವಿಸುತ್ತೇನೆ. ಇದು ಮಾರುಕಟ್ಟೆಗೆ ಒಳ್ಳೆಯದು. ಪೇಟೆಯಿಂದ ದುರ್ಬಲ ಕೈಗಳು ಹೊರಹೋಗಲಿ, ನಂತರವಷ್ಟೇ ಷೇರುಗಳನ್ನು ಹಿಡಿದಿಡಲು ಬಲವಾದ ಕೈಗಳು ಮಾತ್ರ ಉಳಿಯುತ್ತವೆ ಎನ್ನುತ್ತಾರವರು.
ಅಲ್ಪಾವಧಿಯ ಮಾರುಕಟ್ಟೆಯ ಪ್ರವೃತ್ತಿಯು ದುರ್ಬಲವಾಗಿದೆ ಮತ್ತು ವಿಶೇಷವಾಗಿ ಜಾಗತಿಕ ಬೆಳವಣಿಗೆಯ ಕುಸಿತದ ಈ ಸಂದರ್ಭದಲ್ಲಿ ಅಪಾಯಕಾರಿ ಆಸ್ತಿಯಾಗಿರುವ ಷೇರುಗಳ ಮೇಲಿನ ಹೂಡಿಕೆ ನಕಾರಾತ್ಮಕವಾಗಿರುತ್ತದೆ ಎನ್ನುತ್ತಾರೆ ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ವಿಕೆ ವಿಜಯಕುಮಾರ್. ಅಮೆರಿಕದ ಮಾರುಕಟ್ಟೆ ಸ್ಥಿರವಾದಾಗ ಮಾತ್ರ ಭಾರತೀಯ ಮಾರುಕಟ್ಟೆ ಸ್ಥಿರಗೊಳ್ಳುತ್ತದೆ. ಹೀಗಾಗಿ ಹೂಡಿಕೆದಾರರು ಸ್ಪಷ್ಟತೆ ಬರುವವರೆಗೂ ಕಾದು ನೋಡಬಹುದು,ಆತುರಪಡಬಾರದು ಎಂಬುದು ಅವರ ಸಲಹೆ.
ಮಾರುಕಟ್ಟೆ ಕುಸಿದಾಗ ತಮ್ಮ ಹೂಡಿಕೆಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ಮಾರುಕಟ್ಟೆ ಕುಸಿದಾಗಲೇ ಹೂಡಿಕೆದಾರರಿಗೆ ಅನುಕೂಲ ಎನ್ನುತ್ತಾರೆ ಆಶಿಕಾ ಗ್ರೂಪ್‌ನ ಇನ್‌ಸ್ಟಿಟ್ಯೂಶನಲ್ ಇಕ್ವಿಟಿಯ ಸಂಶೋಧನಾ ಮುಖ್ಯಸ್ಥ ಅಸುತೋಷ್ ಮಿಶ್ರಾ.
ಮಾರುಕಟ್ಟೆ ಪ್ರವೇಶಿಸಲು ಯಾವಾಗಲೂ ಕಾಲ ಸೂಕ್ತವಾಗಿರುತ್ತದೆ. ಆದರೆ, ದೀರ್ಘಕಾಲೀನ ಹೂಡಿಕೆಯಾದರೆ ಮಾತ್ರ. ಅಲ್ಪಕಾಲೀನ ಹೂಡಿಕೆದಾರರಿಗೆ ಇದು ಸಕಾಲವಲ್ಲ!