ಕನ್ನಡಕ್ಕೆ. ನಾ ದಿವಾಕರ
2024ರ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣಾ ಆಯೋಗ ಮತ್ತು ನ್ಯಾಯಾಂಗವು ಮಾಡಲು ಸಾಧ್ಯವಾಗದ್ದನ್ನು ಭಾರತದ ಮತದಾರರು ಮಾಡಿದ್ದಾರೆ. ಹಿಂದೂ-ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಗೆ, ತಮ್ಮ ಆಪ್ತ ಉದ್ಯಮಿಗಳೊಡನೆ ಸ್ನೇಹಪರ ಸಂಬಂಧವನ್ನು ಹೊಂದುವ ಮೂಲಕ ಅನುಮಾನಾಸ್ಪದ ದೇಣಿಗೆಯನ್ನು ಪಡೆಯುವ ಸರ್ಕಾರದ ನೀತಿಗಳಿಗೆ ಮತದಾರರು ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಹತ್ತು ವರ್ಷಗಳ ಆಳ್ವಿಕೆಯ ನಂತರ ಮೋದಿ ನೇತೃತ್ವದ ಬಿಜೆಪಿ ಬಹುಮತ ಕಳೆದುಕೊಂಡಿದ್ದು, ಈಗ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಅನಿವಾರ್ಯತೆ ಎದುರಿಸಿದೆ. ಈ ಸರ್ಕಾರದ ಕೆಲವು ಪಾಲುದಾರ ಪಕ್ಷಗಳ ಚಂಚಲತೆಯು ಮೋದಿಯವರಿಗೆ ಸವಾಲಾಗಬಹುದು. ಏಕೆಂದರೆ ಈ ಹಿಂದೆ ಮೋದಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದ ಉದಾಹರಣೆಗಳಿಲ್ಲ. ಕೃಷಿ ಕಾಯ್ದೆಗಳ ಸಂದರ್ಭದಲ್ಲಿ ಅಕಾಲಿ ದಳ ನಿರ್ಗಮಿಸಿದ ಹಾಗೆ ಈಗಿರುವ ಸಹಭಾಗಿಗಳು ಸುಮ್ಮನೆ ನಿರ್ಗಮಿಸುವುದಿಲ್ಲ. ಏಕೆಂದರೆ ಈ ಪಕ್ಷಗಳಿಗೆ ಸರ್ಕಾರವನ್ನು ಉರುಳಿಸುವ ಸಾಮರ್ಥ್ಯವೂ ಇದೆ.
ತಾವು ಮೂರನೆ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವುದನ್ನು ಐತಿಹಾಸಿಕ ಸಾಧನೆ ಎಂದು ಮೋದಿ ಬಣ್ಣಿಸಿದ್ದಾರೆ. ವಾಸ್ತವವೆಂದರೆ, ತಮ್ಮನ್ನು ಸೋಲಿಲ್ಲದ ನಾಯಕರಂತೆ ಬಿಂಬಿಸಿಕೊಳ್ಳುತ್ತಾ, ತಾವು ಜೈವಿಕ ಶಿಶು ಅಲ್ಲ ದೈವೀಕ ಶಿಶು ಎಂದು ಘೋಷಿಸಿದ್ದ ನರೇಂದ್ರ ಮೋದಿಗೆ ಈ ಫಲಿತಾಂಶವು ತೀವ್ರ ಹಿನ್ನಡೆಯನ್ನು ಕಾಣಿಸಿದೆ. “ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಾನು ಭಾವಿಸುತ್ತಿದ್ದೆ . ಆದರೆ ಅವಳ ಮರಣದ ನಂತರ, ನನ್ನ ಎಲ್ಲಾ ಅನುಭವಗಳನ್ನು ನೋಡಿದಾಗ, ನನಗೆ ಮನವರಿಕೆಯಾಗಿದೆ … ದೇವರು ನನ್ನನ್ನು ಕಳುಹಿಸಿದ್ದಾನೆ. ನನ್ನಲ್ಲಿರುವ ಶಕ್ತಿ ಜೈವಿಕ ದೇಹದಿಂದ ಬಂದಿಲ್ಲ.” ಎಂದು ಅವರು ಚುನಾವಣಾ ಪ್ರಚಾರದ ಮಧ್ಯದಲ್ಲಿ ಸಂದರ್ಶಕರಿಗೆ ಹೇಳಿದ್ದನ್ನು ಸ್ಮರಿಸಬಹುದು. ಮತದಾರರು ಈ ಸ್ವಯಂ ಘೋಷಿತ ದೇವದೂತನನ್ನು ಬಲವಾಗಿಯೇ ಭೂಮಿಗೆ ಇಳಿಸಿದ್ದಾರೆ.
ಚುನಾವಣಾ ಪ್ರಚಾರದ ಆರಂಭದಲ್ಲಿ ಮಾಡಿದ ಭಾಷಣದ ಬಗ್ಗೆ ಸುಳ್ಳು ಹೇಳಿದ ಅದೇ ಸಂದರ್ಶನದಲ್ಲಿ ಮೋದಿ ಅವರು ದೈವತ್ವದ ಹಕ್ಕನ್ನು ಪ್ರತಿಪಾದಿಸಿದ್ದರು. ಬನ್ಸಾರಾದಲ್ಲಿ ಮಾಡಿದ ಪ್ರಚಾರ ಭಾಷಣದಲ್ಲಿ ಮೋದಿ ಭಾರತದ ಮುಸ್ಲಿಮರನ್ನು ಒಳನುಸುಳುವವರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ನಿಸ್ಸಂದಿಗ್ಧವಾಗಿ ಮೂದಲಿಸಿದ್ದರು. ಮೋದಿ ಕೇವಲ ಮುಸ್ಲಿಮರನ್ನು ಮಾತ್ರ ನಿಂದಿಸಲಿಲ್ಲ, ಜನರ ಆಸ್ತಿ ಮತ್ತು ಸ್ವತ್ತುಗಳನ್ನು ವಶಪಡಿಸಿಕೊಂಡು ಮುಸ್ಲಿಮರಿಗೆ ಹಸ್ತಾಂತರಿಸುವ ಪ್ರತಿಪಕ್ಷಗಳ ಯೋಚನೆಯನ್ನು ತಡೆಯುವ ಏಕೈಕ ನಾಯಕ ತಾವು ಎಂದು ಬಿಂಬಿಸುವ ಮೂಲಕ ಹಿಂದೂ ಮತದಾರರಲ್ಲಿ ತರ್ಕಬದ್ಧವಲ್ಲದ ಆತಂಕಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದರು. ಮತ್ತೊಂದು ಭಾಷಣದಲ್ಲಿ ಮೋದಿ ಸಣ್ಣ ವ್ಯತ್ಯಾಸಗಳೊಂದಿಗೆ ಈ ಆರೋಪವನ್ನು ಪುನರಾವರ್ತಿಸಿದರು. ಈ ಅಸಂಬದ್ಧ ಹೇಳಿಕೆಯನ್ನು ನಂಬುವಂತೆ ಹಿಂದೂಗಳನ್ನು ಹೆದರಿಸುವ ಉದ್ದೇಶದಿಂದ ಅವರ ಪಕ್ಷವು ಅನಿಮೇಟೆಡ್ ವೀಡಿಯೊಗಳನ್ನು ರಚಿಸಿತು. ಮತ್ತೊಂದು ಸಂದರ್ಶನದಲ್ಲಿ, ಭಾರತದ ಮುಸ್ಲಿಂ ಜನಸಂಖ್ಯೆಯು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಅವರು ಶೀಘ್ರದಲ್ಲೇ ಬಹುಸಂಖ್ಯಾತರಾಗಲಿದ್ದಾರೆ ಎಂದು ಹಿಂದೂಗಳಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಅವರು ಐಟಿ ಸೆಲ್ ಸಂಶೋಧಕರು ನಡೆಸಿದ ಅಧ್ಯಯನದ ಅನುಮಾನಾಸ್ಪದ ಫಲಿತಾಂಶಗಳನ್ನು ತಿರುಚಿದರು.
ಮೋದಿಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಗೀಳು ಅವರ ರಾಜಕೀಯ ಆಲೋಚನೆಯ ಭಾಗವಾಗಿದೆ. ಅವರ ವೃತ್ತಿಜೀವನವು ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರಾರಂಭವಾಯಿತು ಮತ್ತು ಭಾರತವು 800 ವರ್ಷಗಳ ಕಾಲ ಮುಸ್ಲಿಮರಿಂದ ಗುಲಾಮಗಿರಿಗೆ ಒಳಗಾದ ಹಿಂದೂ ರಾಷ್ಟ್ರ ಎಂಬ ಆರೆಸ್ಸೆಸ್‌ನ ನಂಬಿಕೆಯ ಸುತ್ತ ನಿರ್ಮಿಸಲಾಗಿದೆ. ಅಂಕಿಅಂಶಗಳ ಪ್ರಕಾರ ದೇಶದ ಅತ್ಯಂತ ಬಡ ಗುಂಪುಗಳಲ್ಲಿ ಒಂದಾದ ಭಾರತೀಯ ಮುಸ್ಲಿಮರು ವಾಸ್ತವವಾಗಿ ಸವಲತ್ತು ಹೊಂದಿದ್ದಾರೆ ಮತ್ತು ಹಿಂದೂಗಳಿಗಿಂತ ಹೆಚ್ಚಿನ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಅನುಭವಿಸುತ್ತಾರೆ ಮತ್ತು ಮುಸ್ಲಿಮರ ತುಷ್ಟೀಕರಣ ಮುಂದುವರಿಯುವವರೆಗೂ ಭಾರತವು ನಿಜವಾದ ವೈಭವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಮೋದಿ ನಂಬುತ್ತಾರೆ. ಆದರೆ ಅವರ ಮುಸ್ಲಿಂ ವಿರೋಧಿ ಘೋಷಣೆಗಳು ಇತ್ತೀಚೆಗೆ ಹೆಚ್ಚಾಗಲು ಮತ್ತೊಂದು ಕಾರಣವೂ ಇದೆ. ಜನತೆಯ ಮುಂದಿಡಲು ಸರ್ಕಾರದ ನೈಜ ಸಾಧನೆಗಳನ್ನು ಏನೂ ಇಲ್ಲದೆ ನೀವು ಚುನಾವಣೆಗಳನ್ನು ಎದುರಿಸಿದಾಗ ಮುಸ್ಲಿಂ ನಿಂದನೆಯ ಮೂಲಕ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುವುದು ಅನಿವಾರ್ಯವಾಗುತ್ತದೆ, ಸುಲಭವೂ ಆಗುತ್ತದೆ. ವ್ಯಾಪಕವಾದ ನಿರುದ್ಯೋಗ ಮತ್ತು ಗ್ರಾಮೀಣ ಹತಾಶೆಯ ನಡುವೆ 80 ಕೋಟಿ ಭಾರತೀಯರು ಸರ್ಕಾರವು ಅವರಿಗೆ ನೀಡುವ ಉಚಿತ ಧಾನ್ಯದಿಂದ ಬದುಕುತ್ತಿರುವುದು ಸರ್ಕಾರದ ವೈಫಲ್ಯದ ಸಂಕೇತವಾಗಿದ್ದು, ಇದನ್ನು ಮರೆಮಾಚಲು ಮುಸ್ಲಿಂ ನಿಂದನೆ ನೆರವಾಗುತ್ತದೆ.
ಮತಗಳನ್ನು ಗಳಿಸುವ ಸಲುವಾಗಿ ಧರ್ಮವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರದಲ್ಲಿ ಬಳಸುವುದು ಚುನಾವಣಾ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಹಾಗೆ ಮಾಡಿದವರನ್ನು ಆರು ವರ್ಷಗಳ ಕಾಲ ಸ್ಪರ್ಧಿಸದಂತೆ ನಿಷೇಧಿಸುವ ನಿಯಮವೂ ಜಾರಿಯಲ್ಲಿದೆ. ಆದಾಗ್ಯೂ ಈ ಕಾನೂನನ್ನು ಜಾರಿಗೊಳಿಸಬೇಕಾದ ಮೂವರು ಚುನಾವಣಾ ಆಯುಕ್ತರು ಮೌನ ವಹಿಸುತ್ತಾರೆ ಎಂದು ಮೋದಿ ಎಣಿಸಿದ್ದರು. ಅದು ಆದದ್ದೂ ಹಾಗೆಯೇ. ಮೋದಿ ಅವರ ದ್ವೇಷ ಭಾಷಣಗಳಿಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಚುನಾವಣಾ ಆಯೋಗಕ್ಕೆ ತಿಳಿಸಬೇಕೆಂದು ಕೋರಿ ಕೆಲವು ನಾಗರಿಕರು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದಾಗ, ಅವರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇರಬೇಕು ಎಂಬ ಸಲಹೆಯೊಂದಿಗೆ ಅದನ್ನು ತಿರಸ್ಕರಿಸಲಾಯಿತು. ಮತದಾನ ಮುಗಿದ ನಂತರ ಮುಖ್ಯ ಚುನಾವಣಾ ಆಯುಕ್ತರನ್ನು ನೀವು ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದಾಗ ಅವರು ಚುನಾವಣಾ ಆಯೋಗವು ಕ್ರಮ ಕೈಗೊಳ್ಳುವಂತೆ ಕೋರಿದ ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.
ನ್ಯಾಯಾಲಯಗಳು ಮತ್ತು ಚುನಾವಣಾ ಆಯೋಗವು ಒಂದರತ್ತ ಮತ್ತೊಂದು ಬೆಟ್ಟು ತೋರಿಸುವ ಮೂಲಕ ನುಣುಚಿಕೊಂಡಿರಬಹುದು. ಆದರೆ ದುರದೃಷ್ಟವಶಾತ್ ಮೋದಿಯವರಿಗೆ ಬಹಳಷ್ಟು ಹಿಂದೂ ಮತದಾರರು ಉತ್ತರ ನೀಡಿದ್ದಾರೆ. ಬಿಜೆಪಿ ಮತ್ತು ಮೋದಿಯವರ ಪ್ರಚಾರ ವೈಖರಿಯನ್ನು ಗಮನಿಸಿರುವ ಮತದಾರರು ಧಾರ್ಮಿಕ ವಿಚಾರಗಳ ಮೂಲಕ ಪ್ರಸ್ತಾಪಿಸಲಾಗುತ್ತಿರುವ ಆಂತರಿಕ ಕಲಹಗಳನ್ನು ಚುನಾವಣಾ ಕಣದಲ್ಲಿ ವ್ಯಾಪಾರ ಮಾಡಲು ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮತ ಹಂಚಿಕೆ ಕುಸಿದಿರುವುದು ಇದನ್ನೇ ಸೂಚಿಸುತ್ತದೆ. ಮೋದಿಯವರ ಕೋಮುವಾದಿ ರಾಜಕೀಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಅಯೋಧ್ಯೆ ಕೂಡ ಅವರ ಕೈಬಿಟ್ಟಿದೆ. ರಾಜಸ್ಥಾನ ಮತ್ತು ಹರಿಯಾಣದಲ್ಲಿ ಮೋದಿ ಅವರ ರೈತ ವಿರೋಧಿ ನೀತಿಗಳಿಂದ ಕೋಪಗೊಂಡ ಗ್ರಾಮೀಣ ಮತದಾರರು ಪ್ರತಿಪಕ್ಷಗಳನ್ನು ಬೆಂಬಲಿಸಿದ್ದಾರೆ. ಕೆಂದ್ರ ಸರ್ಕಾರದ 22 ಹಾಲಿ ಮಂತ್ರಿಗಳು ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ.
ಬಿಜೆಪಿಯ ಹಣಬಲ, ಮುಖ್ಯವಾಹಿನಿ ಮಾಧ್ಯಮಗಳ ಪಕ್ಷಪಾತ ಧೋರಣೆ ಮತ್ತು ಪ್ರತಿಪಕ್ಷಗಳ ವಿರುದ್ಧ ಸರ್ಕಾರದ ಬಲಾತ್ಕಾರವನ್ನು ಬಳಸಲು ತಮ್ಮದೇ ಆದ ಇಚ್ಛೆಯಿಂದಾಗಿ ಮೋದಿ ಅವರು ತಮ್ಮ ನಷ್ಟವನ್ನು ಮಿತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಸಮ್ಮಿಶ್ರ ಸರ್ಕಾರದ ಸಹಾಯದಿಂದ ಅಂತಿಮ ರೇಖೆಯನ್ನು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಜೂನ್ 9ರ ಭಾನುವಾರ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ದುರ್ಬಲರಾಗಿದ್ದಾರೆ ಎಂಬುದು ಭಾರತದ ಪ್ರಜಾಪ್ರಭುತ್ವಕ್ಕೆ ಶುಭ ಸಂದೇಶವೇನೋ ಆಗಿದೆ ಆದರೆ ಈ ಬಾರಿ ಅವರ ಆದ್ಯತೆಗಳು ಏನು ಎಂದು ಪ್ರಶ್ನಿಸಬೇಕಾದ್ದು ನ್ಯಾಯಯುತವೇ ಆಗಿದೆ.
ಮೋದಿಯವರ ಚುನಾವಣಾ ಸೋಲುಗಳು ಅವರ ಹಿಂದೂ ಕೋಮುವಾದಿ ಕಾರ್ಯಸೂಚಿಯನ್ನು ಮುಂದುವರಿಸುವುದನ್ನು ತಡೆಗಟ್ಟುವುದೇ ? ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಅವರ ಪ್ರಯತ್ನಗಳು ಕಡಿಮೆಯಾಗುವುದೇ ? ದೊಡ್ಡ ಉದ್ಯಮಗಳ ಬಗೆಗೆ ಇರುವ ಸಹಾನುಭೂತಿಯನ್ನು ಕಡಿಮೆ ಮಾಡಲು ಇದು ಸುಸಮಯ ಎಂದು ಅವರು ನಿರ್ಧರಿಸುತ್ತಾರೆಯೇ? ಅಥವಾ ಅವರು ನಿಜವಾಗಿಯೂ ತಮ್ಮ ಪ್ರಸ್ತುತ ಕಾರ್ಯಸೂಚಿಯನ್ನು ದುಪ್ಪಟ್ಟು ಕಾರ್ಯಗತಗೊಳಿಸುತ್ತಾರೆಯೇ ? ಈ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಯಾವುದೇ ಬಲಶಾಲಿ ವ್ಯಕ್ತಿಯನ್ನು ದುರ್ಬಲನೆಂದು ಭಾವಿಸಿದಾಗ ಸಂಗತಿಗಳು ಅಪಾಯಕಾರಿಯಾಗಬಹುದು ಎಂಬ ಟರ್ಕಿಶ್ ಸ್ನೇಹಿತನ ಮಾತುಗಳು ನೆನಪಾಗುತ್ತದೆ. ಟರ್ಕಿಯಲ್ಲಿ ಎರ್ಡೋಗನ್ ಅವರೊಂದಿಗಿನ ಅನುಭವದ ಹಿನ್ನೆಲೆಯಲ್ಲಿ ನೋಡಿದಾಗ ಮೋದಿ ಭಿನ್ನವಾಗಿರುತ್ತಾರೆ ಎಂದು ನಿರೀಕ್ಷಿಸಲು ಯಾವುದೇ ಕಾರಣಗಳು ಕಾಣುವುದಿಲ್ಲ.
ಮೋದಿಯವರ ಎರಡನೆ ಅವಧಿಯಲ್ಲಿ ಭಾರತದ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಈ ನಿಯಂತ್ರಣಗಳಿಂದ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ಬೆದರಿಕೆಗಳಿಗೆ ಮಣಿದು ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದ್ದವು. ಈ ನಡುವೆಯೂ ಡಿಜಿಟಲ್ ಮಾಧ್ಯಮಗಳು ಕೋಟ್ಯಂತರ ಜನರನ್ನು ತಲುಪುವುದರಲ್ಲಿ ಯಶಸ್ವಿಯಾಗಿವೆ. ತಮ್ಮ ಮೂರನೇ ಅವಧಿಯಲ್ಲಿ ಮೋದಿ ಅವರು ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಗಳನ್ನು ಬಳಸುವಲ್ಲಿ ಹೆಚ್ಚು ಆಕ್ರಮಣಕಾರಿಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಅವರು ಮತ್ತೊಮ್ಮೆ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ವೈಯಕ್ತಿಕ ನಾಯಕರ ಹಿಂದೆ ಹೋಗುವ ಮೂಲಕ ವಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುವ ಸಾಧ್ಯತೆಗಳಿವೆ.
ಮೋದಿ ಅವರು ಇಲ್ಲಿಯವರೆಗೆ ತೆಗೆದುಕೊಂಡ ಹಾದಿಯಲ್ಲಿ ಮುಂದುವರಿದರೆ ಅವರ ಸಮ್ಮಿಶ್ರ ಪಾಲುದಾರರು ಅಡ್ಡಪಡಿಸಬಹುದು, ನ್ಯಾಯಾಂಗವೂ ಮಧ್ಯಪ್ರವೇಶಿಸುವ ಸಾಧ್ಯತೆಗಳಿವೆ. ಮೋದಿಯವರು ಸಂಖ್ಯಾತ್ಮಕವಾಗಿ ದುರ್ಬಲರಾಗಿರುವುದರಿಂದ ಈ ನಿಟ್ಟಿನಲ್ಲಿ ಕೆಲವು ಪ್ರತಿರೋಧವನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಇದು ಹೀಗೆಯೇ ನಡೆಯುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ತಮ್ಮ ಮೊದಲ ಎರಡು ಅವಧಿಗಳಲ್ಲಿ ಮೋದಿ ಅವರು ವಿದೇಶಿ ಶಕ್ತಿಗಳ, ವಿಶೇಷವಾಗಿ ಅಮೆರಿಕ ಮತ್ತು ಯುರೋಪಿನ ಬೆಂಬಲ ಮತ್ತು ಸದ್ಭಾವನೆಯನ್ನು ರಾಜಕೀಯವಾಗಿ ತಮ್ಮ ಬಲವರ್ಧನೆಯ ಶಕ್ತಿಯಾಗಿ ಬಳಸಿದರು. ಅದೂ ಸಹ ಮುಂದೆ ಬದಲಾಗುವುದಿಲ್ಲ. ಮತ್ತೆ ಅಧಿಕಾರಕ್ಕೆ ಬಂದ ಅವರು ಪಾಶ್ಚಿಮಾತ್ಯ ಕಂಪನಿಗಳಿಗೆ ಲಾಭದಾಯಕ ವ್ಯಾಪಾರ ಅವಕಾಶಗಳನ್ನು ನೀಡುವ ಮೂಲಕ ಅಮೆರಿಕ ಮತ್ತು ಚೀನಾ ನಡುವಿನ ತೀಕ್ಷ್ಣವಾದ ಬಿರುಕುಗಳನ್ನು ತಮ್ಮ ಮುಕ್ತ ಇಸ್ಲಾಮೋಫೋಬಿಯಾ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳಿಂದ ಉಂಟಾಗುವ ಯಾವುದೇ ಗೊಂದಲವನ್ನು ನಿವಾರಿಸಲು ಬಳಸಿಕೊಳ್ಳುವುದು ಖಚಿತ.
ಭಾರತೀಯ ಪ್ರಜಾಪ್ರಭುತ್ವವನ್ನು ಕುಸಿತದಿಂದ ತಪ್ಪಿಸಿದ್ದೇವೆ ಎಂಬ ವಿಶ್ವಾಸದಿಂದ ಭಾರತೀಯರು ಇಂದು ಸುಲಭವಾಗಿ ಉಸಿರಾಡುವಂತಾಗಿದೆ. ಆದರೆ ಮೋದಿಯವರು ತಮ್ಮ ಪೂರ್ವ ಯೋಜಿತ ಆಲೋಚನೆಗಳಿಗೆ ಮರಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಬಿಜೆಪಿಯ ಮುಸ್ಲಿಂ ವಿರೋಧಿ ರಾಜಕೀಯಕ್ಕೆ ಭಾರತದ ಉತ್ತರ ಮತ್ತು ಪಶ್ಚಿಮದಲ್ಲಿ ಬೆಂಬಲ ಉತ್ತುಂಗಕ್ಕೇರಿರಬಹುದು ಆದರೆ ಅವರು ದಕ್ಷಿಣ ಮತ್ತು ಪೂರ್ವದಲ್ಲಿ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ. ಭಾರತದ ಮತದಾರರು ಮೋದಿಯವರ ಈ ದೃಷ್ಟಿಕೋನಕ್ಕೆ ದೊಡ್ಡ ಪೆಟ್ಟು ನೀಡಿದ್ದಾರೆ ಆದರೆ ವಾಸ್ತವವಾಗಿ ಮೋದಿ ಹಿಂತಿರುಗಿದ್ದಾರೆ. ತಮ್ಮ ಸಂವಿಧಾನವನ್ನು ಪ್ರೀತಿಸುವ ಮತ್ತು ಗೌರವಿಸುವ ಭಾರತೀಯರು, ತಮ್ಮ ಹಕ್ಕುಗಳು, ತಮ್ಮ ನಾಗರಿಕತೆ ಮತ್ತು ಅವರ ಭ್ರಾತೃತ್ವವನ್ನು ಬಯಸುವ ಭಾರತೀಯರು, ಇನ್ನೂ ಹೆಚ್ಚು ನಿರ್ಣಾಯಕ ದಿನಗಳಿಗಾಗಿ ಸಜ್ಜಾಗಬೇಕಿದೆ. “ ನಾವಿನ್ನೂ ಆ ಗಡಿಯನ್ನು ತಲುಪಿಲ್ಲ ನಡೆಮುಂದೆ ನಡೆಮುಂದೆ ” ಎಂಬ ಫೈಜ್ ಅವರ ಕವಿತೆಯ ಸಾಲುಗಳು ನಮ್ಮನ್ನು ಜಾಗೃತರನ್ನಾಗಿ ಇರಿಸಬೇಕಿದೆ.
ಸಿದ್ಧಾರ್ಥ ವರದರಾಜನ್
( ಮೂಲ : Modi stands defeated but he is not giving up his destructive plan for a 1000 year Riech – ದ ವೈರ್ ಪತ್ರಿಕೆ – ಜೂನ್ 6 2024)