ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಹೀನಾಯ ಸೋಲುಂಡಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ನೋಡಿ ಕಣ್ಣಲ್ಲಿ ನೀರು ಹಾಕಿದ್ದೆ. ಆದರೆ ಇವತ್ತು ಚುನಾವಣೆಯಲ್ಲಿ ಸೋತಿದ್ದೇನೆ ಅಂತಾ ಕಣ್ಣೀರು ಹಾಕಿಲ್ಲ. ಕಣ್ಣೀರು ಹಾಕಿ ಮತ ಗಿಟ್ಟಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ನನ್ನ ಕುಟುಂಬ ನನ್ನ ಪಕ್ಷದ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರ ದೃಷ್ಟಿಯಿಂದಲೇ ಯೋಚನೆ ಮಾಡಬೇಕು. ಕುಟುಂಬ ಅಂದರೆ ನನ್ನ ತಾತ, ನಮ್ಮ ಅಪ್ಪ, ನಮ್ಮ ಅಮ್ಮ, ನಮ್ಮ ಹೆಂಡತಿ ಅನ್ನೋ ಪ್ರಶ್ನೇ ಬರೋದಿಲ್ಲ. ಆದರೆ ಕಾರ್ಯಕರ್ತರ ಭಾವನೆಗಳಿಗೆ ನೋವು ಆಗಿದೆ. ಅವರಿಗೆ ನಾನು ಸ್ಪಂದಿಸುವ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಸೋಲುಂಡಿದ್ದೇನೆ ಎಂದು ಜಿಲ್ಲೆ ಬಿಟ್ಟು ಹೋಗುವುದಾಗಲಿ, ಬೇರೆ ಕಡೆ ಸ್ಪರ್ಧೆ ಮಾಡುವ ಬಗ್ಗೆ ಆಗಲಿ ಚರ್ಚೆ ಮಾಡಲ್ಲ. ರಾಮನಗರ, ಚನ್ನಪಟ್ಟಣದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದಿದ್ದಾರೆ.
ನನಗೆ ಶಾಸಕ ಸ್ಥಾನದ ಪಟ್ಟ ಇಲ್ಲದೇ ಇರಬಹುದು. ಆದರೆ ರಾಮನಗರ ಜಿಲ್ಲೆ ಹಾಗೂ ರಾಜ್ಯದ ಜನರು ಕುಮಾರಣ್ಣಗೆ ಶಕ್ತಿ ತುಂಬಿದ್ದಾರೆ. ಇಲ್ಲೇ ಇದ್ದುಕೊಂಡು ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಸೋಲಿನ ಬೇಸರದಲ್ಲೇ ಜನರ ಜೊತೆಗೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಆದರೆ ಸೋಲುಂಡು ಬೇಸರದ ಬೆಂಕಿಯಲ್ಲಿ ಕೊತಕೊತನೆ ಕುದಿಯುತ್ತಿರುವ ನಿಖಿಲ್ಗೆ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಜಿ.ಟಿ ದೇವೇಗೌಡ, ಆಡಳಿತ ಪಕ್ಷ ಅವರದ್ದೇ ಇದೆ. ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಯಾವಾಗಲೂ ಆಡಳಿತ ಪಕ್ಷವೇ ಉಪಚುನಾವಣೆ ಗೆಲ್ಲೋದು ಸಹಜ.. ನಾನು ಚನ್ನಪಟ್ಟಣ ಪ್ರಚಾರಕ್ಕೆ ಹೋಗಿರಲಿಲ್ಲ.. ಹರೀಶ್ ಗೌಡ, ವಿವೇಕಾನಂದ ಪ್ರಚಾರಕ್ಕೆ ಹೋಗಿದ್ದರು.. ನಿಖಿಲ್ ಗೆಲ್ಲಬೇಕಿತ್ತು, ಆದ್ರೆ ಸೋತಿದ್ದಾರೆ. ಧೈರ್ಯದಿಂದ ಈ ಸೋಲನ್ನ ಎದುರಿಸಬೇಕು. ಎದೆಗುಂದದೆ ಪಕ್ಷ ಸಂಘಟನೆ ಮಾಡಲಿ.. ಮೂರು ಬಾರಿ ಸೋತು ರಾಜಕೀಯದಲ್ಲಿ ಉನ್ನತ ಹುದ್ದೆಗೆ ಏರಿರೋರು ಇದ್ದಾರೆ ಎಂದಿದ್ದಾರೆ.