ನಾಗರಿಕತೆ ಮತ್ತು ನಾಗರಿಕ ಈ ಎರಡು ಪದಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಹಾಗೆಯೇ ಅನಾಗರಿಕ ಎಂಬ ಹೀಗಳೆಯುವ ಪದವನ್ನೂ ಬಳಸುತ್ತಿರುತ್ತೇವೆ. ಆಧುನಿಕ ಸಮಾಜ ಬಯಸುವ ಒಂದು ಸಂಯಮ, ಶಿಸ್ತು ಮತ್ತು ಸಹಾನುಭೂತಿಯ ಲಕ್ಷಣಗಳನ್ನು ಹೊಂದದ ವ್ಯಕ್ತಿಯನ್ನು ಅನಾಗರಿಕ ಎಂದು ಹೇಳುವುದು ವಾಡಿಕೆ. ಈ ಸಂಯಮ, ಶಿಸ್ತು ಇತ್ಯಾದಿಗಳು ರೂಪುಗೊಂಡುದಾದರೂ ಹೇಗೆ ? ಹೀಗೆಯೇ ಇರಬೇಕೆಂದು ನಿಷ್ಕರ್ಷೆ ಮಾಡಿದವರಾರು ? ಇಲ್ಲಿ ನಾಗರಿಕತೆಯ ಪ್ರಶ್ನೆ ಎದುರಾಗುತ್ತದೆ. ಮಾನವ ಸಮಾಜ ವಿವಿಧ ಹಂತಗಳಲ್ಲಿ ಬೆಳೆದುಬಂದು ಶಿಲಾಯುಗದಿಂದ ನವ ನಾಗರಿಕತೆಗೆ ಬಂದು ತಲುಪಿದೆಯಲ್ಲವೇ. ಈ ಅಭ್ಯುದಯದ ಹಾದಿಯಲ್ಲಿ ಇದನ್ನು ಕಾಣಲು ಸಾಧ್ಯ.
ಸೃಷ್ಟಿಯ ಜೀವಿಗಳಲ್ಲಿ ಪ್ರತಿಯೊಂದು ಸೂಕ್ಷ್ಮ ಜೀವಿಗೂ ತನ್ನದೇ ಆದ ಅಭಿವ್ಯಕ್ತಿ ಇದೆ. ಮಾನವನಿಗೂ ಇದೆ. ಈ ಅಭಿವ್ಯಕ್ತಿಯನ್ನು ತಾನು ಬದುಕುವ ಪರಿಸರಕ್ಕೆ ಹೊಂದುವಂತೆ ಬದಲಿಸಿಕೊಳ್ಳುವ ಜಾಣ್ಮೆ, ಬುದ್ಧಿವಂತಿಕೆ ಇರುವುದು ಮಾನವನಿಗೆ ಮಾತ್ರ. ಹಾಗಾಗಿಯೇ ಈ ಚೌಕಟ್ಟನ್ನು ಮೀರಿದವರನ್ನು ನಾವು ಮೃಗೀಯ ಎಂದು ವರ್ಗೀಕರಿಸಿಬಿಡುತ್ತೇವೆ. ಆದರೆ ಮಾನವನನ್ನು ಹೊರತುಪಡಿಸಿ ಮತ್ತಾವುದೇ ಪ್ರಭೇದಗಳ ಸಹಜ ಅಭಿವ್ಯಕ್ತಿಗೆ ಸಮಯ, ಪರಿಸರ, ವಾತಾವರಣ ಮತ್ತು ಅಗತ್ಯತೆಗಳ ಹಂಗು ಇರುವುದಿಲ್ಲ. ಹಾಗಾಗಿ ಈ ಜೀವಿಗಳ ವರ್ತನೆ ಒಂದೇ ರೀತಿಯದ್ದಾಗಿರುತ್ತದೆ. ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ತನ್ನ ವರ್ತನೆಯನ್ನು ಬದಲಿಸಿಕೊಳ್ಳುವ ಜಾಣ್ಮೆಯನ್ನು ತನ್ನ ಅಭ್ಯುದಯದ ಹಾದಿಯಲ್ಲಿ ಕಲ್ಪಿಸಿಕೊಂಡಿದ್ದಾನೆ.
ಈ ಬದಲಾವಣೆಯ ಹಾದಿಯಲ್ಲೇ ಮಾನವ ಸಮಾಜ ಆಧುನಿಕತೆಯನ್ನೂ ಒಗ್ಗಿಸಿಕೊಂಡಿದೆ. ಸಾರ್ವತ್ರಿಕವಲ್ಲದ ಒಂದು ಆಧುನಿಕತೆಯ ಪೋಷಾಕನ್ನು ಪ್ರತಿಯೊಂದು ಸಮಾಜವೂ ಕಾಲದಿಂದ ಕಾಲಕ್ಕೆ ತೊಟ್ಟುಕೊಳ್ಳುತ್ತಾ ಬದಲಿಸಿಕೊಳ್ಳುತ್ತಾ ಹೋಗುತ್ತಿರುತ್ತದೆ. ನಾವು ಈಗ ಕಾಣುತ್ತಿರುವ ಮಾನವ ಸಮಾಜವನ್ನು ಅತ್ಯಾಧುನಿಕ ನಾಗರಿಕ ಸಮಾಜ ಎಂದು ಕರೆದುಕೊಳ್ಳುತ್ತೇವೆ. ಇದೂ ಸಹ ನಮಗೆ ನಾವೇ ಕಲ್ಪಿಸಿಕೊಂಡಿರುವ ಒಂದು ಚೌಕಟ್ಟು. ಸಾರ್ವಜನಿಕ ಸಂಕಥನಗಳು ಮತ್ತು ಆಖ್ಯಾನಗಳು ಹೇಗೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸಿರುವ ಒಂದು ಸಮುದಾಯ ಅಥವಾ ಸಮಾಜದ ಮೂಲಕ ನಿರ್ಧರಿಸಲ್ಪಡುತ್ತದೆಯೋ ಹಾಗೆಯೇ ಈ ನಾಗರಿಕ ಎನ್ನುವ ಪದದ ಚೌಕಟ್ಟು ಸಹ ನಿರ್ಮಾಣವಾಗುತ್ತದೆ.
ಭಾರತದ ಸಂದರ್ಭದಲ್ಲಿ ಈ ನಿಷ್ಕರ್ಷೆಯ ಅಧಿಕಾರವನ್ನು ಮೇಲ್ಜಾತಿಯ ಅಥವಾ ಮೇಲ್ವರ್ಗದ ಒಂದು ಸಮುದಾಯ ತನಗೆ ತಾನೇ ವಹಿಸಿಕೊಂಡುಬಿಡುತ್ತದೆ. ಬಳಸುವ ಭಾಷೆ, ನಡವಳಿಕೆಯ ರೀತಿ, ಸಾರ್ವಜನಿಕ ವಲಯದಲ್ಲಿನ ಶಿಸ್ತು ಮತ್ತು ನಿತ್ಯ ಬದುಕಿನ ಪರಿಭಾಷೆ ಇವೆಲ್ಲವೂ ಸಹ ಯಾವುದೋ ಒಂದು ಪ್ರಬಲ ಸಾಮುದಾಯಿಕ ಅಸ್ಮಿತೆಯಲ್ಲಿ ಸಿಲುಕಿ ಸಂಕುಚಿತವಾಗುತ್ತಾ ಹೋಗುತ್ತದೆ. ಈ ಶಿಷ್ಟ ಭಾಷೆ ಎನ್ನುವ ಪರಿಕಲ್ಪನೆ ಮೂಡಿರುವುದು ಹೀಗೆಯೇ. ಆಧುನಿಕ ನಾಗರಿಕ ಸಮಾಜವೂ ಸಹ ಈ ಶಿಷ್ಟ ಭಾಷೆ ಎನ್ನುವ ಪರಿಕಲ್ಪನೆಯನ್ನೇ ರೂಢಿಸಿಕೊಂಡುಬಂದಿದೆ. ಈ ಪರಿಕಲ್ಪನೆಯನ್ನು ಯಾವುದೋ ಒಂದು ಮತಧಾರ್ಮಿಕ ಅಥವಾ ಮತಧರ್ಮ ಪ್ರೇರಿತ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಅಳವಡಿಸುವ ಪ್ರಯತ್ನಗಳನ್ನೂ ಭಾರತದ ಸಂದರ್ಭದಲ್ಲಿ ನೋಡಿದ್ದೇವೆ.
ಸಹಜವಾಗಿಯೇ ಈ ಶಿಷ್ಟ ಎನ್ನುವ ಕಲ್ಪನೆ ಶುದ್ಧ ಅಥವಾ ಪರಿಶುದ್ಧ ಎಂಬ ವರ್ಗೀಕರಣಕ್ಕೊಳಗಾಗುತ್ತದೆ. ಶಿಷ್ಟವಲ್ಲದ ಭಾಷೆಯನ್ನು ತುಚ್ಚೀಕರಿಸುವ ಅಥವಾ ಕೆಲವೊಮ್ಮೆ ಬಹಿಷ್ಕರಿಸುವ ಸಾಂಸ್ಕೃತಿಕ ವಲಯವೊಂದು ಇಡೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮೇಲೆ ಹಿಡಿತ ಸಾಧಿಸುತ್ತದೆ. ಇಲ್ಲಿ ಭಾಷೆ ಕೇವಲ ಸಂವಹನ ಮಾಧ್ಯಮವಾಗಿ ಉಳಿಯುವುದಿಲ್ಲ. ನಿಯಂತ್ರಿತ ಸಂವಹನ ಸಾಧನವಾಗಿಬಿಡುತ್ತದೆ. ಇನ್ನಿಲ್ಲದ ಕಟ್ಟಳೆಗಳು ಭಾಷೆಯ ಬಳಕೆಯನ್ನೂ ನಿರ್ಬಂಧಿಸಿಬಿಡುತ್ತದೆ. ಜನಸಾಮಾನ್ಯರ ನಿತ್ಯ ಬಳಕೆಯ ಪರಿಭಾಷೆಯೂ ಸಹ ಸಾರ್ವಜನಿಕ ವಲಯದಲ್ಲಿ ಅಪಥ್ಯವಾಗಿಬಿಡುತ್ತದೆ. ಈ ಬೆಳವಣಿಗೆಯನ್ನು ನಮ್ಮ ಚಲನಚಿತ್ರಗಳ ಬೆಳವಣಿಗೆಯೊಂದಿಗೇ ನೋಡಬಹುದು.
ಇದನ್ನು ನಾಗರಿಕತೆ ಎನ್ನಲಾಗುವ ಪರಿಕಲ್ಪನೆಯೊಡನೆ ಮುಖಾಮುಖಿಯಾಗಿಸಿದಾಗ ನಾವು ಗೊಂದಲಕ್ಕೊಳಗಾಗುತ್ತೇವೆ. ಅನಾಗರಿಕ ಎಂಬ ಪದಬಳಕೆಯೂ ಈ ಚೌಕಟ್ಟಿನೊಳಗೇ ಬಳಕೆಯಾಗುತ್ತದೆ. ಸಾರ್ವಜನಿಕ ಸಂಕಥನದಲ್ಲಿ ನಾವು ಬಳಸುವ ಪದಗಳು ಯಾವ ಶಿಷ್ಟತೆಗೆ ಒಳಪಡಬೇಕು ಎನ್ನುವ ಜಿಜ್ಞಾಸೆ ಮೂಡುತ್ತದೆ. ಈ ಸಂದರ್ಭದಲ್ಲಿ ನಾವು ಮೇಲೆ ವ್ಯಾಖ್ಯಾನಿಸಲಾದ ಶಿಷ್ಟತೆ ಅಥವಾ ಶಿಷ್ಟ ಭಾಷೆಗೆ ಬದ್ಧರಾಗಲೇಬೇಕೆಂಬ ಅಲಿಖಿತ ನಿಯಮವನ್ನು ಧಿಕ್ಕರಿಸುವ ಪ್ರವೃತ್ತಿ ಇಂದು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ವ್ಯಾಪಕ ಬಳಕೆಗೊಳಗಾಗುತ್ತಿರುವ ಸಂದರ್ಭದಲ್ಲಿ ಈ ಸಂಕಥನಗಳು ಸಹಜವಾಗಿಯೇ ಕಾಣುತ್ತದೆ.
ಈ ಬೆಳವಣಿಗೆಯನ್ನು ನಾವು ನಿರಾಕರಿಸಿದಷ್ಟೂ ಹೆಚ್ಚು ಹೆಚ್ಚಾಗಿ ಸ್ಥಾಪಿತ ಅಥವಾ ಸ್ವೀಕೃತ ಸಾಂಸ್ಕೃತಿಕ ಪರಂಪರೆಯ ಬಂಧಿಗಳಾಗಿಬಿಡುವ ಅಪಾಯ ಎದುರಿಸಬೇಕಾಗುತ್ತದೆ. ಜನರನ್ನು ಸುಲಭವಾಗಿ ತಲುಪಬೇಕು ಎನ್ನುವ ಹಂಬಲ ನಮ್ಮನ್ನು ಹೇಗೆ ದಿಕ್ಕು ತಪ್ಪಿಸುವುದೋ ಹಾಗೆಯೇ ಈ ಶಿಷ್ಟತೆಯ ಬಂಧನಕ್ಕೊಳಗಾಗುವುದೂ ಒಂದು ರೀತಿಯಲ್ಲಿ ದಾರಿ ತಪ್ಪಿಸುತ್ತದೆ. ಭಾರತದಂತಹ ದೇಶದಲ್ಲಿ ವೈವಿಧ್ಯಮಯ ಭಾಷಾ ಸಂಸ್ಕೃತಿಗಳ ನಾಡಿನಲ್ಲಿ ಈ ಅಪಾಯವನ್ನು ಮನಗಂಡೇ ನಾವು ನಮ್ಮ ಪ್ರತಿರೋಧದ ದನಿಗಳನ್ನು ದಾಖಲಿಸುತ್ತಿರಬೇಕು. ಸ್ಥಾಪಿತ ಶಿಷ್ಟತೆಯ ಪರಿಕಲ್ಪನೆಯನ್ನು ಭಂಗಗೊಳಿಸುವ ಪ್ರಯತ್ನಗಳು ಈ ನಿಟ್ಟಿನಲ್ಲಿ ಸ್ವಾಗತಾರ್ಹವೇ ಆಗುತ್ತದೆ.
******** ******* *******
ಆದರೆ ಇಲ್ಲಿ ನಾವು ಶಿಷ್ಟತೆಯ ಮತ್ತೊಂದು ಆಯಾಮವನ್ನೂ ಗಮನಿಸಬೇಕಾದ ಅನಿವಾರ್ಯತೆ ಕಾಣುತ್ತದೆ. ಆಧುನಿಕ ಸಮಾಜದ ಸಾರ್ವಜನಿಕ ಜೀವನದಲ್ಲಿಯೂ ಕೆಲವು ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳುತ್ತಲೇ ನಾವು ಸಮಾಜ ಸುಧಾರಣೆಯತ್ತ ನಡೆದಿರುತ್ತೇವೆ. ಹೇಗೆ ಸಾಹಿತ್ಯ, ಕಲೆ ಮತ್ತಿತರ ಪ್ರಕಾರಗಳು ಪ್ರಬಲ ಸಾಮುದಾಯಿಕ ಸಮಾಜೋ ಸಾಂಸ್ಕೃತಿಕ ಪ್ರಭಾವಳಿಯಿಂದ ಪ್ರಭಾವಿತವಾಗಿರುವುದೋ ಹಾಗೆಯೇ ಸಾರ್ವಜನಿಕ ಬದುಕೂ ಸಹ ಅಷ್ಟೇ ಪ್ರಭಾವಕ್ಕೊಳಗಾಗಿರುತ್ತದೆ. ಜನಸಾಮಾನ್ಯರನ್ನು ತಲುಪಬೇಕಾದ ಭಾಷೆ ಮತ್ತು ಪರಿಭಾಷೆಗಳನ್ನೂ ಮತ್ತದೇ ಚೌಕಟ್ಟಿನಲ್ಲಿ ಅಳವಡಿಸುವ ಒಂದು ಪರಂಪರೆಯೂ ಬೆಳೆದುಬಂದಿರುವುದನ್ನು ನಾವು ಗಮನಿಸಬಹುದು.
ಈ ಸ್ಥಾಪಿತ ಪರಂಪರೆಯನ್ನು ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಧಿಕ್ಕರಿಸುತ್ತಲೇ ನಾವು ಸಾರ್ವಜನಿಕ ಬದುಕಿನಲ್ಲಿ ಒಂದು ಮಾರ್ಗದರ್ಶಿ ಸೂತ್ರವನ್ನು ಅಳವಡಿಸಿಕೊಂಡಿರುತ್ತೇವೆ. ಇದು ನಾವು ಸಮಾಜ ಸುಧಾರಣೆಗಳ ಹಾದಿಯಲ್ಲಿ ರೂಪಿಸಿಕೊಳ್ಳುವ ಚಳುವಳಿಗಳು, ಆಂದೋಲನಗಳು, ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಭಾರತೀಯ ಇತಿಹಾಸದಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ ರೂಪುಗೊಂಡ ಕ್ರಾಂತಿಕಾರಿ ಜನಾಂದೋಲನಗಳನ್ನು ಒಮ್ಮೆ ಗಮನಿಸಿದಾಗ ಈ ಸಮಾಜೋ ಸಾಂಸ್ಕೃತಿಕ ಕಥನಗಳ ಪರಿಭಾಷೆ ನಮಗೆ ಪರಿಚಯವಾಗುತ್ತದೆ. 12ನೆಯ ಶತಮಾನದ ವಚನ ಚಳುವಳಿಯಿಂದ ಅಂಬೇಡ್ಕರರ ಜಾತಿ ವಿನಾಶ ಚಳುವಳಿಯವರೆಗೂ ಹೋರಾಟದ ವಿಶಿಷ್ಟ ಭಾಷೆ ಮತ್ತು ಪರಿಭಾಷೆಯನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಅದಕ್ಕೂ ಮುಂಚಿನ , ದೇಶದ ವಿಮೋಚನೆಗೆ ಪೂರಕವಾದ, ಸಮಾಜ ಸುಧಾರಕ ಚಳುವಳಿಗಳಲ್ಲಿ ಮೂಲತಃ ಎರಡು ಧೃವಗಳನ್ನು ಕಾಣುತ್ತೇವೆ. ಮೊದಲನೆಯದು ಶೋಷಕ ವರ್ಗ ಎರಡನೆಯದು ಶೋಷಿತ ವರ್ಗ. ಶೋಷಕ ವರ್ಗದಲ್ಲಿ ಜಾತಿ ವ್ಯವಸ್ಥೆಯ ಶ್ರೇಷ್ಠತೆ, ತಾರತಮ್ಯಗಳು ಮತ್ತು ದೌರ್ಜನ್ಯಗಳು, ಸಾಂಸ್ಕೃತಿಕ ಅಧಿಪತ್ಯ ಮತ್ತು ಸಮಾಜೋ ಆರ್ಥಿಕ ಪ್ರಾಬಲ್ಯ ಮುಖ್ಯವಾದರೆ, ಶೋಷಿತ ವರ್ಗಗಳಲ್ಲಿ ಅವಕಾಶವಂಚಿತರ ಬವಣೆ, ಸಾಮಾಜಿಕ ಮೇಲ್ ಚಲನೆಗಾಗಿನ ತುಡಿತ, ಜಾತಿ ದೌರ್ಜನ್ಯದಿಂದ ವಿಮೋಚನೆ, ದಾಸ್ಯದ ಸಂಕೋಲೆಗಳಿಂದ ಮುಕ್ತಿ ಇವು ಮುಖ್ಯವಾಗಿ ಕಾಣುತ್ತವೆ. ಈ ಎರಡೂ ಧೃವಗಳ ನಡುವೆ ನಡೆಯುವ ಸಂಘರ್ಷವನ್ನೇ ವಿಭಿನ್ನ ನೆಲೆಗಳಲ್ಲಿ ಶತಮಾನಗಳ ಕಾಲ ನಾವು ಕಂಡಿದ್ದೇವೆ. 19ನೆಯ ಶತಮಾನದಲ್ಲಿ ಮತ್ತು ನಂತರದಲ್ಲಿ ತೀವ್ರವಾದ ಜನಾಂದೋಲನಗಳನ್ನೂ ಕಂಡಿದ್ದೇವೆ.
ಈ ಹೋರಾಟಗಳ ಚೌಕಟ್ಟಿನಲ್ಲೇ ಇಂದಿಗೂ ಭಾರತದ ಪ್ರಜಾಂದೋಲನಗಳು ರೂಪುಗೊಳ್ಳುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹೋರಾಟದ ಮಾರ್ಗಗಳು, ಮಾದರಿಗಳು ಮತ್ತು ಧ್ಯೇಯೋದ್ದೇಶಗಳು ಬದಲಾಗುತ್ತಿದ್ದರೂ ಆ ಒಂದು ಚೌಕಟ್ಟಿನಿಂದ ಹೊರತಾದ ಒಂದು ಜನಾಂದೋಲನದ ಸ್ವರೂಪವನ್ನು ನಾವು ಕಾಣಲಾಗುವುದಿಲ್ಲ. ಈ ಹೋರಾಟದ ಪರಂಪರೆಯನ್ನೇ ನಾವು ಇನ್ನು ಮುಂದೆಯೂ ಅನುಸರಿಸುವುದೂ ಅನಿವಾರ್ಯವಾಗಿದೆ. ಕಾರಣ, ಬದಲಾದ ಭಾರತ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಲವು ದಶಕಗಳಷ್ಟು ಹಿಂದಕ್ಕೆ ಚಲಿಸಿಬಿಟ್ಟಿದೆ. ರಾಜಕೀಯವಾಗಿ ವಸಾಹತು ಕಾಲದ ಊಳಿಗಮಾನ್ಯ ವ್ಯವಸ್ಥೆಗೆ ಜಾರಿಬಿಟ್ಟಿದೆ. ಸಾಮಾಜಿಕವಾಗಿ 20ನೆಯ ಶತಮಾನದ ಆರಂಭದಲ್ಲಿದ್ದ ಪರಿಸ್ಥಿತಿಗೆ ತಲುಪಿದ್ದೇವೆ. ಸಾಂಸ್ಕೃತಿಕವಾಗಿ ಮಧ್ಯಕಾಲೀನ ಯುಗದ ಭಾರತದತ್ತ ವಾಲುತ್ತಿದ್ದೇವೆ. ಇದು ನಮ್ಮ ಆಳುವ ವರ್ಗಗಳ ಮತ್ತು ಈ ದೇಶದ ರಾಜಕಾರಣದ ಕೊಡುಗೆ ಎಂದರೂ ಅತಿಶಯೋಕ್ತಿಯಾಗಲಾರದು.
ಕಳೆದ ಒಂದು ದಶಕದಲ್ಲೇ ಈ ಮೂರೂ ಹಿಂಚಲನೆಯ ವಿಭಿನ್ನ ಆಯಾಮಗಳನ್ನು ಗಮನಿಸಬಹುದಾಗಿದೆ. ರಾಜಕೀಯ ಸಮಾನತೆ ಮತ್ತು ಪ್ರಜಾಪ್ರಭುತ್ವವೊಂದನ್ನೇ ಸಾಧಿಸಿ, ಸಮಾಜೋ ಆರ್ಥಿಕ ಸಮಾನತೆ-ಪ್ರಜಾಪ್ರಭುತ್ವವನ್ನು ಸಾಧಿಸದಿದ್ದರೆ ಭಾರತ ಮತ್ತಷ್ಟು ಪ್ರಾಚೀನತೆಗೆ ಸಾಗುತ್ತದೆ ಎನ್ನುವ ಡಾ ಅಂಬೇಡ್ಕರರ ಆತಂಕಗಳು ಮತ್ತೊಮ್ಮೆ ನಮ್ಮನ್ನೂ ಕಾಡುತ್ತಿರುವುದು ವಾಸ್ತವ. ಈ ಸಂದರ್ಭದಲ್ಲಿ 1970ರ ದಶಕದ ಹತಾಶೆ, ಆತಂಕ, ದುಗುಡ, ಆಕ್ರೋಶ ಮತ್ತು ಭವಿತವ್ಯದ ಚಿಂತೆಗಳೂ ನಮ್ಮನ್ನು ಕಾಡುತ್ತಿವೆ. ಶೋಷಣೆಯ ಆಯಾಮಗಳು ಯಥಾಸ್ಥಿತಿಯಲ್ಲಿದ್ದರೂ ಸ್ವರೂಪಗಳು ಬದಲಾಗಿರುವುದರಿಂದ ಮೇಲ್ನೋಟಕ್ಕೆ ನಾವು ಆಧುನಿಕ ಮತ್ತು ನಾಗರಿಕ ಎಂಬ ಚೌಕಟ್ಟಿನಲ್ಲಿ ಸ್ವ ವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ.
ಆದರೆ ವಾಸ್ತವ ಸನ್ನಿವೇಶ ಭಿನ್ನವಾಗಿದೆ. ಮಡುಗಟ್ಟಿದ ಆಕ್ರೋಶ ಹೊರಹೊಮ್ಮಲು ಒಂದು ಕಿಡಿ ಸಾಕು ಎನ್ನುವುದು ಚಾರಿತ್ರಿಕ ಸತ್ಯ. ಕೋವಿದ್ ಸಂದರ್ಭದ ಬೆಳವಣಿಗೆಗಳು ಈ ಕಿಡಿಯನ್ನು ಹೊತ್ತಿಸುವ ಸಾಧ್ಯತೆಗಳಿವೆ. ಪ್ರಭುತ್ವದ ದಮನಕಾರಿ ನೀತಿ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ, ಮಾಧ್ಯಮ ಸ್ವಾತಂತ್ರ್ಯದ ಹರಣ, ಸಾಮಾಜಿಕ ಶೋಷಣೆಗಳ ಸಮರ್ಥನೆ ಮತ್ತು ಸಾಂಸ್ಕೃತಿಕ ಅಧಿಪತ್ಯಕ್ಕಾಗಿ ನಡೆದಿರುವ ಪೈಪೋಟಿ ಇವೆಲ್ಲವೂ ಸಮಾಜದ ಕೆಳಸ್ತರದ ಸಮುದಾಯಗಳನ್ನು, ಅವಕಾಶವಂಚಿತ ಪ್ರಜೆಗಳನ್ನು ಹತಾಶೆಯ ಅಂಚಿಗೆ ದೂಡಿವೆ. ಇದು ಸಾಮಾಜಿಕ ತಾಣಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಲೇ ಇದೆ. ಯುವ ಪೀಳಿಗೆಯ ಒಂದು ಬೃಹತ್ ಸಮೂಹ ಪ್ರಭುತ್ವ ಸೃಷ್ಟಿಸಿರುವ ಭ್ರಮೆಗಳಿಗೆ ಒಳಗಾಗಿ ನಿಷ್ಕ್ರಿಯವಾಗಿರುವಂತೆಯೇ ಮತ್ತೊಂದು ಸಮೂಹ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿಯನ್ನೂ ತೋರುತ್ತಿದೆ. ಈ ಹತಾಶೆಯ ಕಿಡಿಗಳನ್ನು ಚಿವುಟಲೆಂದೇ ಜಾತಿ, ಮತಧರ್ಮ, ರಾಷ್ಟ್ರೀಯತೆಯ ಅಸ್ಮಿತೆಗಳನ್ನು ಅಸ್ತ್ರದಂತೆ ಬಳಸುತ್ತಿರುವ ಪ್ರಭುತ್ವ ಮತ್ತು ಪ್ರಭುತ್ವದ ಪ್ರತಿನಿಧಿಗಳು, ದೇಶಪ್ರೇಮ ಎನ್ನುವ ಅಮೂರ್ತ ಪರಿಕಲ್ಪನೆಗಳ ಚೌಕಟ್ಟಿನಲ್ಲಿ ಭೌಗೋಳಿಕ ರಾಷ್ಟ್ರದ ಭ್ರಮೆಯನ್ನು ಸೃಷ್ಟಿಸಿಸುತ್ತಿದ್ದಾರೆ.
ಈ ಬದಲಾದ ಸನ್ನಿವೇಶದಲ್ಲಿ ನಾವು ಗಮನಿಸಬೇಕಾದ್ದು ಬದಲಾಗುತ್ತಿರುವ ಅಧಿಕಾರಯುತ ರಾಜಕೀಯ ಭಾಷೆ ಮತ್ತು ಪರಿಭಾಷೆ. ಈ ನಿಟ್ಟಿನಲ್ಲಿ ನಾವು ನಿಷ್ಕ್ರಿಯ ಮೌನವನ್ನೂ ಭಾಷೆಯ ಚೌಕಟ್ಟಿನಲ್ಲೇ ಪರಿಗಣಿಸಬೇಕಾಗುತ್ತದೆ. ಕೋವಿದ್ ಸೃಷ್ಟಿಸಿರುವ ದುರಂತ ಸನ್ನಿವೇಶದಲ್ಲಿ ದೇಶಾದ್ಯಂತ ಸಾವಿರಾರು ಸಾವುಗಳು ನಿತ್ಯ ಸುದ್ದಿಯಾಗಿರುವ ಸಂದರ್ಭದಲ್ಲಿ “ ನಾವೇನು ನೇಣು ಹಾಕಿಕೊಳ್ಳಬೇಕಾ ” ಎನ್ನುವ ಸಂಸದರು, “ ಸುಪ್ರೀಂಕೋರ್ಟ್ ನ್ಯಾಯಾಧೀಶರು ಸರ್ವಜ್ಞರೇ ” ಎಂದು ಪ್ರಶ್ನಿಸುವ ನಾಯಕರು, “ ಸಾಯುವವರಿಗೆ ಏನು ಮಾಡೋಕಾಗುತ್ತದೆ ಸತ್ತರೆ ಸಾಯಲಿ, ಅಕ್ಕಿ ಇಲ್ಲದೆ ಸಾಯುವುದಾದರೆ ಸಾಯಿರಿ” ಎನ್ನುವ ನಾಯಕರು ಈ ಹೊಸ ಭಾಷೆಯ ಹರಿಕಾರರಾಗಿ ನಮಗೆ ಕಾಣುತ್ತಾರೆ. ಇವು ಕೆಲವೇ ಉದಾಹರಣೆಗಳು.
ನಮ್ಮ ನಡುವಿನ ಮಾನವ ನಿರ್ಮಿತ ದುರಂತಗಳಿಗೆ ಮೌನ ವಹಿಸುವುದಕ್ಕಿಂತಲೂ ಹೆಚ್ಚಿನ ಕ್ರೌರ್ಯ ಇರಲಿಕ್ಕಿಲ್ಲ. ಇಂದು ಈ ದೇಶದ ಪ್ರಭುತ್ವ , ಗಂಗೆಯಲ್ಲಿ ತೇಲುತ್ತಿರುವ ಸಾವಿರಾರು ಅನಾಥ ಶವಗಳನ್ನು, ಬೀದಿ ಬೀದಿಗಳಲ್ಲಿ ಸುಡಲ್ಪಡುತ್ತಿರುವ ಹೆಣಗಳನ್ನು, ನೋಡುತ್ತಲಿದ್ದರೂ ಮೌನಕ್ಕೆ ಶರಣಾಗಿರುವುದು ಈ ಕ್ರೌರ್ಯವನ್ನೇ ಬಿಂಬಿಸುತ್ತದೆ. ಹಿಂದೆ ರೈತ ಮುಷ್ಕರದ ಸಂದರ್ಭದಲ್ಲೂ ಈ ಮೌನವನ್ನು ಕಂಡಿದ್ದೆವು. ಮತ್ತೊಂದೆಡೆ ಆಳುವವರ ಹೊಣೆಗೇಡಿ ಮಾತುಗಳು ಈ ಕ್ರೌರ್ಯದ ಮೌಖಿಕ ಆಯಾಮವನ್ನು ಪ್ರದರ್ಶಿಸುತ್ತಿದೆ. ಇವೆರಡರ ನಡುವೆ ಪ್ರಭುತ್ವದ ವೈಫಲ್ಯವನ್ನು ಕಂಡೂ ಕಾಣದಂತಿರುವ, ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಬಲಿಯಾಗಿರುವ ಒಂದು ಬೃಹತ್ ಮಧ್ಯಮ ವರ್ಗದ ಅಂಧಾನುಕರಣೆ ಈ ಕ್ರೌರ್ಯದ ಸಾಮುದಾಯಿಕ ಆಯಾಮವನ್ನು ಬಿಂಬಿಸುತ್ತಿದೆ.
ಈ ಸಂದರ್ಭದಲ್ಲೇ ನಾವು ಈ ದೇಶದ ಪ್ರಸ್ತುತ ರಾಜಕೀಯ ಭಾಷೆ ಮತ್ತು ಪರಿಭಾಷೆಯನ್ನು ಎದುರಿಸಬೇಕಿದೆ. ಪ್ರಭುತ್ವದ ವೈಫಲ್ಯವನ್ನು, ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಪ್ರಜೆಗಳ ಕುತ್ತಿಗೆಗೆ ಕಟ್ಟುವ ಒಂದು ಪ್ರವೃತ್ತಿಯನ್ನು ಗಮನಿಸುತ್ತಲೇ ಇದ್ದೇವೆ. ದೆಹಲಿಯಲ್ಲಿ ಕೇಳಿಬಂದ “ ಗೋಲಿಮಾರೋ ಸಾಲೋಂಕೋ ” ಎನ್ನುವ ಮಾತುಗಳಿಗೂ, ಕರ್ನಾಟಕದಲ್ಲಿ ಕೇಳಿಬರುವ “ ಸತ್ತರೆ ಸಾಯ್ಲಿ ಬಿಡಿ ನಾವೇನು ನೇಣುಹಾಕ್ಕೋಬೇಕಾ ” ಎನ್ನುವ ಮಾತುಗಳಿಗೂ ಮೌಲಿಕ ವ್ಯತ್ಯಾಸವೇನೂ ಇರುವುದಿಲ್ಲ. ಇದು ಕ್ರೂರ ಆಡಳಿತ ವ್ಯವಸ್ಥೆಯೊಂದು ತನ್ನ ಹೊರೆಯನ್ನು ಪ್ರಜೆಗಳ ಹೆಗಲಿಗೆ ಹೊರಿಸುವ ಒಂದು ವಿಧಾನವಷ್ಟೇ.
ಈ ಕ್ರೌರ್ಯದ ನಡುವೆಯೇ ನಾವು ಒಂದು ಮಾನವೀಯ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕಬೇಕಿದೆ. ನಮ್ಮ ಮುಂದೆ ಮಾದರಿಗಳಿವೆ, ಆದರ್ಶಗಳಿವೆ, ರೂಪುರೇಷೆಗಳಿವೆ. ಇಲ್ಲದಿರುವುದು ಐಕ್ಯತೆ ಮತ್ತು ಸಮನ್ವಯ. ಈ ಸಮನ್ವಯ ಸಾಧಿಸಲು ನಾವೇ ತೊಟ್ಟುಕೊಂಡಿರುವ ಸಂಕೋಲೆಗಳೇ ಕಾರಣ ಎನ್ನುವುದು ನಿಸ್ಸಂದೇಹ. ಈ ಸಂಕೋಲೆಗಳನ್ನು ಕಿತ್ತೊಗೆಯುವ ಹೊಣೆಗಾರಿಕೆಯೂ ನಮ್ಮದೇ. ಆಳುವವರ ಅಥವಾ ಜನಪ್ರತಿನಿಧಿಗಳ ಭಾಷೆ ಮತ್ತು ಪರಿಭಾಷೆಯನ್ನೇ ನಾವೂ ಅಳವಡಿಸಿಕೊಂಡರೆ ಇನ್ನೂ ಪರಿಣಾಮಕಾರಿಯಾಗಿ ಮುನ್ನುಗ್ಗಬಹುದು ಎನ್ನುವ ಅತ್ಯುತ್ಸಾಹದ ಭಾವನೆ ನಮ್ಮನ್ನು ಮತ್ತೊಂದು ಪಂಜರದಲ್ಲಿ ಸಿಲುಕಿಸಿಬಿಡುತ್ತದೆ. ಅಷ್ಟೇ ಅಲ್ಲ ನಾವೇ ಕ್ರಮಿಸಿದ ಹಾದಿಯಲ್ಲಿ ಮತ್ತೊಂದು ಕವಲು ಸೃಷ್ಟಿಸಿದಂತಾಗುತ್ತದೆ. ಇದು ಅನಿವಾರ್ಯವೇನಲ್ಲ.
ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳ ಮನಸ್ಸು ಪ್ರಾಚೀನತೆಯತ್ತ ವಾಲುತ್ತಿರುವಂತೆಯೇ ನಾವು ಆಧುನಿಕ ನಾಗರಿಕತೆಯತ್ತ ಮುಖ ಮಾಡಿ ಮುನ್ನಡೆಯಬೇಕಿದೆ. ಭ್ರಮೆಗೊಳಗಾದವರು ಭ್ರಮನಿರಸನಕ್ಕೊಳಗಾಗಲು ಹೆಚ್ಚು ಸಮಯ ಬೇಕಿಲ್ಲ. ಈ ತಾಳ್ಮೆಯೂ ನಮ್ಮಲ್ಲಿರಬೇಕಾಗುತ್ತದೆ. ಇಂದಿನ ಯುವ ಪೀಳಿಗೆಗೆ ಈ ನಾಗರಿಕ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ ಎರಡೂ ಸಹ ಬಹಳ ಮುಖ್ಯವಾಗುತ್ತದೆ. ಪ್ರಾಚೀನತೆಯತ್ತ ವಾಲುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಆಧುನಿಕ ನಾಗರಿಕತೆಯತ್ತ ಕರೆತರಲು ನಾವೆಲ್ಲರೂ ನೊಗ ಹೊರಬೇಕಿದೆ. ನಮ್ಮದೇ ಹೋರಾಟದ ಪರಂಪರೆಯಲ್ಲೇ ಮುನ್ನಡೆಯಲು ಅವಕಾಶಗಳೂ ಇವೆ. ಬೇಕಿರುವುದು ಇಚ್ಚಾಶಕ್ತಿ ಮತ್ತು ಜಾಗೃತಿ. ಇದಕ್ಕಾಗಿ ಶ್ರಮಿಸೋಣವೇ ?