ಬಿಜೆಪಿ ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ತನ್ನ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವ ಸಂಘದ ನಾಯರಿಗಷ್ಟೇ ಮುಖ್ಯಮಂತ್ರಿ ಸ್ಥಾನ ನೀಡುತ್ತಿದ್ದರು ಎಂಬುದು ವಾಸ್ತವ. ಆದರೀಗ, ಇತ್ತೀಚೆಗ್ಯಾಕೋ ಮುಂದೆ ಎದುರಾಗಲಿರುವ ಚುನಾವಣೆ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ವಲಸಿಗರನ್ನು ಸಿಎಂ ಮಾಡುವ ಮೂಲಕ ತನ್ನ ಹಳೆ ಸಂಪ್ರದಾಯಕ್ಕೆ ಬ್ರೇಕ್ ಹಾಕಿದೆ. ಇದು ಆರ್ಎಸ್ಎಸ್ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಸತ್ಯವಾದರೂ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ನಡೆ ಅನುಸರಿಸಲಾಗುತ್ತಿದೆ.
ಹೌದು, ಆರ್ಎಸ್ಎಸ್ನಿಂದ ಬಂದವರಿಗಷ್ಟೇ ಸಿಎಂ ಹುದ್ದೆ ಎಂಬ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ಸದ್ಯ ದೇಶದ 12 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ. ಈ 12 ರಾಜ್ಯಗಳ ಪೈಕಿ ಎಂಟರಲ್ಲಿ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು, ನಾಲ್ವರು ವಲಸಿಗರಾಗಿದ್ದಾರೆ. ಇದರ ಜೊತೆಗೆ ಕೇಂದ್ರ ಸಂಪುಟ ಮತ್ತು ಬಿಜೆಪಿ ಪಕ್ಷದಲ್ಲೂ ಉನ್ನತ ಹುದ್ದೆಗಳನ್ನು ವಸಿಗರಿಗೆ ಅಂದರೆ ಬೇರೆ ಪಕ್ಷದಿಂದ ಬಂದವರಿಗೆ ನೀಡಲಾಗುತ್ತಿದೆ. ಇದಕ್ಕೆ ಕಾರಣ ಸದ್ಯ ದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿಯುತ್ತಿರುವುದು ಮತ್ತು ಮುಂದಿನ ಎಲ್ಲಾ ಚುನಾವಣೆಗಳನ್ನು ಗೆಲ್ಲಬೇಕು ಎಂಬ ಹೈಕಮಾಂಡ್ ಪ್ಲಾನ್.
ಬಿಜೆಪಿ ಕೇವಲ ಬ್ರಾಹ್ಮಣರ ಪಕ್ಷ ಎಂಬ ಆರೋಪವಿದೆ. ಇತ್ತೀಚೆಗತೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಗಳು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಸಿಎಎ ಮತ್ತು ಎನ್ಆರ್ಎಸ್ ವಿರುದ್ಧದ ಹೋರಾಟ, ಪೆಗಸಸ್ ಬೇಹುಗಾರಿಕೆ ವಿಚಾರದಿಂದ ಬಿಜೆಪಿ ತನ್ನ ಜನಪ್ರಿಯತೆ ಕಳೆದುಕೊಂಡಿದೆ. ಹೀಗಾಗಿ ಮುಂದಿನ ಚುನಾವಣೆಯನ್ನು ನಾವು ಆರ್ಎಸ್ಎಸ್ ಮತ್ತು ಮೂಲ ಬಿಜೆಪಿಗರಿಗೆ ಮಾತ್ರ ಮಣೆ ಹಾಕಿ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ವಲಸಿಗರಿಗೂ ಆದ್ಯತೆ ನೀಡುವ ಮೂಲಕ ಪ್ರಮುಖವಾಗಿ ಎಲ್ಲಾ ಸಮುದಾಯವನ್ನು ಒಳ್ಳಗೊಳುವುದರಿಂದ ಚುನಾವಣೆ ಗೆಲ್ಲಲು ಸಾಧ್ಯ ಎಂದು ಬಿಜೆಪಿ ಹೈಕಮಾಂಡ್ಗೆ ಮನವರಿಕೆಯಾಗಿದೆ.
ಇನ್ನು, ವಲಸಿಗರಿಗೆ ಪಕ್ಷ ಮತ್ತು ಸರ್ಕಾರ ನೀಡುವುದು ಬಿಜೆಪಿಯನ್ನು ಬಲವರ್ಧನೆಗೊಳಿಸಲು ಎಂಬುದು ಹೈಕಮಾಂಡ್ ಖಚಿತವಾದ ನಿಲುವು. ಹಾಗಾಗಿಯೇ 12 ರಾಜ್ಯಗಳಲ್ಲಿ ನಾಲ್ಕರಲ್ಲಿ ವಲಸಿಗರಿಗೆ ಸಿಎಂ ಪೋಸ್ಟ್ ನೀಡಲಾಗಿದೆ.
ಬಿಜೆಪಿ 12 ಸಿಎಂಗಳ ಪೈಕಿ ನಾಲ್ವರು ವಲಸಿಗರು ಯಾರು?
ದೇಶದ 12 ರಾಜ್ಯಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳು ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು. ಸಂಘ ಪರಿವಾರವಲ್ಲದೇ ಬೇರೆ ಪಕ್ಷದಿಂದ ಬಂದ ನಾಲ್ವರಿಗೆ ಸಿಎಂ ಪೋಸ್ಟ್ ನೀಡಿರುವುದರ ಹಿಂದೆ ಬಿಜೆಪಿ ರಾಜಕೀಯ ಭವಿಷ್ಯ ಇರುವುದು ಸ್ಪಷ್ಟ. ಮೊದಲಿಗೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಮಾತ್ರ ಬಿಜೆಪಿಗೆ ಕರೆ ತರಲಾಗುತ್ತಿತ್ತು. ಆದರೀಗ, ಹೀಗೆ ಬೇರೆ ಪಕ್ಷದಿಂದ ಬಂದ ವಲಸಿಗರಿಗೆ ಸಿಎಂ ಪೋಸ್ಟ್ ನೀಡುತ್ತಿರುವುದು ವಿಶೇಷ. ಹೀಗೆ ಬೇರೆ ಪಕ್ಷದಿಂದ ಬಂದು ಬಿಜೆಪಿ ಸರ್ಕಾರದಿಂದ ಸಿಎಂ ಆದವರ ಪೈಕಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು.
ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಬೊಮ್ಮಾಯಿಗೆ ಸಿಎಂ ಭಾಗ್ಯ
ರಾಜ್ಯದ ನೂತನ ಸಿಎಂ ಆಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಮೂಲತ ಜನತ ಪರಿವಾರದ ನಾಯಕರು. ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್ ಬೊಮ್ಮಾಯಿ ಜನತಾ ಪರಿವಾರದಿಂದ 1989ರಲ್ಲಿ ಕರ್ನಾಟಕದಲ್ಲಿ ಸಿಎಂ ಆಗಿದ್ದರು. ಹೀಗಾಗಿ ಬೊಮ್ಮಾಯಿ ರಾಜಕೀಯ ಶುರುವಾದದ್ದೇ ಜನತ ಪರಿವಾರದಿಂದ. ಇವರು ಎರಡು ಬಾರಿ ಜನತಾದಳದಿಂದಲೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ 2004 ರಲ್ಲಿ ಜೆಡಿಯು ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. 2008ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಬೇಕಿದ್ದ ಬೊಮ್ಮಾಯಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿ ಗೆದ್ದರು. ಅಂದಿನಿಂದ ಇಂದಿನವರೆಗೂ ಬಿಜೆಯಲ್ಲೇ ಇದ್ದ ಕಾರಣ ಯಡಿಯೂರಪ್ಪ ಕೃಪಾಕಟಾಕ್ಷೆಯಿಂದ ಸಿಎಂ ಆಗಿದ್ದಾರೆ ಬಸವರಾಜ್ ಬೊಮ್ಮಾಯಿ.
ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಮೂಲತಃ ಕಾಂಗ್ರೆಸ್ಸಿಗ
ಅರುಣಾಚಲ ಪ್ರದೇಶದಲ್ಲಿ ಈಗ ಬಿಜೆಪಿ ಸರ್ಕಾರ ಇದೆ. ಪೆಮಾ ಖಂಡು ಮೂಲತಃ ಕಾಂಗ್ರೆಸ್. ಇವರ ತಂದೆ ದೋರ್ಜಿ ಖಂಡು ಕಾಂಗ್ರೆಸ್ ಪಕ್ಷದಿಂದ 2 ಬಾರಿ ಸಿಎಂ ಆಗಿದ್ದರು. 2016ರ ಜುಲೈ ತಿಂಗಳಿನಲ್ಲಿ ಪೆಮಾ ಖಂಡು ಕಾಂಗ್ರೆಸ್ನಿಂದ ಸಿಎಂ ಆಗಿ ಆಯ್ಕೆ ಮಾಡಿಕೊಂಡರು. ಆದರೆ, 2 ತಿಂಗಳ ಬಳಿಕ 43 ಮಂದಿ ಶಾಸಕರೊಂದಿಗೆ ಪೆಮಾ ಖಂಡು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪಕ್ಷಕ್ಕೆ ಸಾಮೂಹಿಕವಾಗಿ ಪಕ್ಷಾಂತರ ಮಾಡಿದ್ದರು. ಇಲ್ಲಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಈಗ ಪೆಮಾ ಖಂಡು ಅರುಣಾಚಲ ಪ್ರದೇಶದ ಬಿಜೆಪಿ ಸಿಎಂ ಆಗಿದ್ದಾರೆ.
ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಮೂಲತಃ ಕಾಂಗ್ರೆಸ್ಸಿಗ
ಹೀಮಂತ್ ಬಿಸ್ವಾ ಶರ್ಮಾ 2015ರ ಆಗಸ್ಟ್ ತಿಂಗಳವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ತರುಣ್ ಗೋಗೋಯಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರು. 2016ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಸಿಎಂ ಅಭ್ಯರ್ಥಿ ಮಾಡಲಿಲ್ಲ ಎಂದು ಬಿಸ್ವಾ ಶರ್ಮಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. 2021ರ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಬಹುಮತ ಸಿಕ್ಕಿದೆ. ಹೀಗಾಗಿ ಅಸ್ಸಾಂ ಸಿಎಂ ಆಗಿ ಬಿಸ್ವಾ ಪ್ರಮಾಣವಚನ ತೆಗೆದುಕೊಂಡರು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲು ಶ್ರಮಿಸಿದ ಹೀಮಂತ್ ಬಿಸ್ವಾ ಶರ್ಮಾಗೆ ಬಿಜೆಪಿ ಹೈಕಮಾಂಡ್ ಸಿಎಂ ಹುದ್ದೆ ನೀಡಿತ್ತು.
ಮಣಿಪುರ ಸಿಎಂ ಬೀರೇನ್ ಸಿಂಗ್
ಮಣಿಪುರದ ಸಿಎಂ ಬೀರೇನ್ ಸಿಂಗ್ ಮೂಲತಃ ಕಾಂಗ್ರೆಸ್ಸಿಗರು. ಮಣಿಪುರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಬಳಸಿಕೊಂಡೇ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜ್ಯಪಾಲರು ಮಾತ್ರ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು. ಬಿಜೆಪಿ ಪಕ್ಷವು ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ ಫ್ರಂಟ್ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಬೀರೇನ್ ಸಿಂಗ್ ಮಣಿಪುರದ ಸಿಎಂ ಆದರು.