ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿ ಮತ್ತು ಆರ್ಥಿಕ ಉದಾರೀಕರಣದ ಪಿತಾಮಹ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮನಮೋಹನ್ ಸಿಂಗ್ ನವಭಾರತದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. ಭಾರತ ಇಂದು ಜಗತ್ತಿನ ಮುಂಚೂಣಿ ಆರ್ಥಿಕ ಶಕ್ತಿಗಳ ಪೈಕಿ ಒಂದಾಗಿರುವುದರ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇದರ ಜತೆಗೆ ಸಾರ್ವಜನಿಕ ಬದುಕಿನಲ್ಲಿ ಅವರು ಮೆಲುಮಾತಿನ ಸಜ್ಜನಿಕೆಗೆ ಹೆಸರಾಗಿದ್ದರು’ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಅರ್ಥಶಾಸ್ತ್ರದಲ್ಲಿ ಅಪಾರ ವಿದ್ವತ್ತನ್ನು ಹೊಂದಿದ್ದ ಮನಮೋಹನ್ ಸಿಂಗ್ ಅವರು ಅದರ ಬಲದಿಂದ ಭಾರತವನ್ನು ಬಲಾಢ್ಯ ಆರ್ಥಿಕತೆಯಾಗಿ ಬೆಳೆಸಲು ಬುನಾದಿ ಹಾಕಿದರು. ದೇಶದ ಅರ್ಥಿಕ ವ್ಯವಸ್ಥೆಗೆ ಜೀವಚೈತನ್ಯ ತುಂಬಿ, ಅದನ್ನು ಪುನರುತ್ಥಾನಗೊಳಿಸಿದ ಹಿರಿಮೆ ಅವರದಾಗಿತ್ತು. ಅವರ ನಿಧನದಿಂದ ದೇಶವು ಮೇಧಾವಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಪರಮಾಣು ಒಪ್ಪಂದದ ಮೂಲಕ ಅಮೆರಿಕದ ಜೊತೆ ದೇಶದ ಸಖ್ಯ ಸಾಧಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಇದಕ್ಕಾಗಿ ಅವರು ಸವಾಲನ್ನು ಕೂಡ ಮೇಮೇಲೆ ಎಳೆದುಕೊಂಡರು.ಬಡವರು, ಬುಡಕಟ್ಟು ಸಮುದಾಯ, ಅಲ್ಪಸಂಖ್ಯಾತರು ಮುಂತಾದವರ ಏಳಿಗೆಗಾಗಿ ಅವರು ಸದಾ ತುಡಿಯುತ್ತಿದ್ದರು ಎಂದು ಅವರು ಬಣ್ಣಿಸಿದ್ದಾರೆ.
ಮನಮೋಹನ್ ಸಿಂಗ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಎಲ್ಲರಿಗೂ ಕೊಡಲಿ ಮತ್ತು ಮೃತ ನಾಯಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.