ಶರಾವತಿ ಕಣಿವೆಯ ದಟ್ಟ ಕಾಡಿನ ನಡುವೆ ಕಡಿದಾದ ಬೆಟ್ಟದ ತುತ್ತತುದಿಯಲ್ಲಿರುವ ಆ ಊರಿನ ಹೆಸರು ಮೇಘಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಟ್ಕಳ ಗಡಿಯ ಆ ಹಳ್ಳಿಯ ಹೆಸರಿನಂತೆಯೇ ಅದು ಮೋಡಗಳ (ಮೇಘಗಳ) ತವರು.
ಹೆಚ್ಚು ಓದಿದ ಸ್ಟೋರಿಗಳು
ಕರ್ನಾಟಕದ ಊಟಿಯಂತಿರುವ ಈ ಊರಿನಲ್ಲಿ ಮಳೆಗಾಲದ ಆರೆಂಟು ತಿಂಗಳ ಕಾಲ ಸೂರ್ಯನ ದರ್ಶನವೇ ಅಪರೂಪ. ಹೊಗೆಯಂತೆ ಹಬ್ಬಿದ ಹಿಮ, ಮೋಡ ಮತ್ತು ಬಿರುಸು ಮಳೆಯನ್ನೇ ಹೊದ್ದಂತಿರುವ ಈ ಊರಿನಲ್ಲಿ ಬೇಸಿಗೆ ಮತ್ತು ಚಳಿಗಾಲಗಳೆರಡೂ ಅತ್ಯಲ್ಪ.
ಇಂತಹ ಸುಂದರ ವಾತಾವರಣದ ಊರಿನ ವಾಸ್ತವ ಬದುಕು ಮಾತ್ರ ಸಂಕಷ್ಟಗಳ ಸರಮಾಲೆ. ಸುಮಾರು 65 ಮನೆಗಳ, 350 ಜನಸಂಖ್ಯೆಯ ಈ ಊರಿನ ವಾಸಿಗಳೆಲ್ಲಾ ಕುಣಬಿ ಮರಾಠಿ ಜನಾಂಗಕ್ಕೆ ಸೇರಿದ ಬುಡಕಟ್ಟು ಜನರು. ತಮ್ಮದೇ ವಿಶಿಷ್ಟ ಜಾನಪದ ರಾಮಾಯಣ(ಬುಡಕಟ್ಟು ಮರಾಠಿ ಭಾಷೆ), ಕೋಲಾಟ ಮುಂತಾದ ಶ್ರೀಮಂತ ಬುಡಕಟ್ಟು ಜಾನಪದ ಸಂಸ್ಕೃತಿಯನ್ನೂ ಹೊಂದಿರುವ ಈ ಸಮುದಾಯ, ಅತ್ಯಂತ ಕಷ್ಟಜೀವಿಗಳ ಒಂದು ಸಮೂಹ. ಜಾನಪದ ತಜ್ಞ ಎಸ್ ಕೆ ಕರೀಂಖಾನ್, ಡಾ ಕಾಳೇಗೌಡ ನಾಗವಾರ ಅವರಂತಹ ವ್ಯಕ್ತಿಗಳ ಅಧ್ಯಯಕ್ಕೆ ಆಕರವಾದ ಊರು ಇದು.
ಕೃಷಿಯೇ ಇವರ ಜೀವನಾಧಾರ. ಮೇಘಾನೆ ಬೆಟ್ಟದ ತುದಿಯ ಬಟ್ಟಲಿನಾಕಾರದ ಕಣಿವೆಯಲ್ಲಿ ಮೊದಲು ಲಾವಂಚ, ಭತ್ತ, ಕಬ್ಬು ಬೆಳೆಯುತ್ತಿದ್ದ ಈ ಜನ, ಇದೀಗ ಹೆಚ್ಚಾಗಿ ಅಡಿಕೆ, ಗೇರು, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳತ್ತ ಹೊರಳಿದ್ದಾರೆ. ಈ ಹಿಂದೆ ಬೆತ್ತದ ಬುಟ್ಟಿ, ಕಲ್ಲಿ, ಪೀಠೋಪಕರಣ ಮಾಡುವುದರಲ್ಲಿ ಪರಿಣತರಾಗಿದ್ದ ಇವರು, ಇದೀಗ ಅರಣ್ಯ ಕಾಯ್ದೆಗಳ ಕಾರಣಕ್ಕೆ ಪಾರಂಪರಿಕ ನೈಪುಣ್ಯದಿಂದ ವಿಮುಖರಾಗಿದ್ದಾರೆ.

1960ರ ಸುಮಾರಿಗೆ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಗಿ ಜಮೀನು ಮನೆ ಕಳೆದುಕೊಂಡು ಎತ್ತಂಗಡಿಯಾಗಿ ಬಂದ ಮರಾಠಿ ಕುಣಬಿ ಕುಟುಂಬಗಳು ಈ ದುರ್ಗಮ ಕಾಡಿನ ನಡುವಿನ ಬೆಟ್ಟದ ನೆತ್ತಿಯ ಮೇಲಿನ ಪುಟ್ಟ ಬಯಲಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಂದು ಸರ್ಕಾರ ಮಂಜೂರು ಮಾಡಿಕೊಟ್ಟ ಒಂದು, ಎರಡು ಎಕರೆ ಜಮೀನು ಹೊರತುಪಡಿಸಿ ಈ ಜನಗಳಿಗೆ ಈಗ ಬದುಕಿಗೆ ಬೇರೆ ಆಸರೆ ಇಲ್ಲ.
ಕೋಗಾರ್-ಭಟ್ಕಳ ಹೆದ್ದಾರಿಯಿಂದ ಸುಮಾರು 7 ಕಿ.ಮೀ ದೂರದ ಕಡಿದಾದ ದಾರಿಯನ್ನು ನಡೆದೇ ಕ್ರಮಿಸಬೇಕು. ಇಲ್ಲಿನ ಕಾಲುದಾರಿಯನ್ನೇ ಒಂದಿಷ್ಟು ವಿಸ್ತರಿಸಿರುವ ಮಣ್ಣಿನ ರಸ್ತೆ ಎಷ್ಟು ಕಡಿದಾಗಿದೆ ಮತ್ತು ಪ್ರಾಯಾಸದಾಯಕವಾಗಿದೆ ಎಂದರೆ, ನೀವು ಕಾಲುನಡಿಗೆಯಲ್ಲಿ ಏದುಸಿರು ಬಿಡುತ್ತಾ ಹತ್ತಿದರೂ, ಗುಡ್ಡದ ನೆತ್ತಿಯ ಊರು ತಲುಪಲು ಕನಿಷ್ಠ ಮೂರು ತಾಸು ಬೇಕು. ಬೈಕ್ ಏರಿ ಸಾಹಸ ಮಾಡಿ ಪ್ರಯಾಣಿಸಬಹುದಾದರೂ, ಕಲ್ಲು-ಬೇರು-ಬೊಡ್ಡೆ-ಕೊರಕಲಿನ ಜಾರಿಕೆಯ ಕೆಸರಿನ ರಸ್ತೆಯಲ್ಲಿ ಅಲ್ಲಿನ ಸ್ಥಳೀಯರು ಹೊರತುಪಡಿಸಿ ಉಳಿದವರು ಚಾಲನೆ ಮಾಡುವುದು ಸಾಧ್ಯವೇ ಇಲ್ಲ! ಇನ್ನು ಫೋರ್ ವೀಲ್ ಡ್ರೈ ಜೀಪನ್ನು ಹೊರತುಪಡಿಸಿ ಬೇರಾವ ನಾಲ್ಕು ಚಕ್ರದ ವಾಹನಗಳೂ ಆ ದಾರಿಯಲ್ಲಿ ಹೋಗುವ ಸಾಧ್ಯತೆಯೇ ಇಲ್ಲ.
ಮೇಘಾನೆಯ 65 ಮನೆ ಮತ್ತು ಅದರ ಆಚೆಯ ಬಾಳಿಗೆ ಎಂಬ ಊರಿನ 12 ಕುಟುಂಬಗಳ ಜನರಿಗೆ ಹೊರಜಗತ್ತಿನ ಸಂಪರ್ಕಕ್ಕೆ ಇರುವುದು ಇದೊಂದೇ ದಾರಿ. ದಟ್ಟಕಾಡಿನ ಶರಾವತಿ ಅಭಯಾರಣ್ಯದಿಂದ ಸುತ್ತುವರಿದಿರುವ ಈ ಊರಿಗೆ ಹೊರದಾರಿಯೆಂದರೆ, ಈ ದುರ್ಗಮ ದಾರಿಯೊಂದೇ.
“ಈ ರಸ್ತೆಯ ಕಾರಣಕ್ಕೆ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಕೂಡ ಇಲ್ಲಿಗೆ ತಲುಪುವುದಿಲ್ಲ. ಎರಡು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡು ಗ್ರಾಮದ ಒಬ್ಬರ ಶವವನ್ನು, ಆಂಬ್ಯುಲೆನ್ಸ್ನವರು ಕೋಗಾರ-ಭಟ್ಕಳ ಹೆದ್ದಾರಿಯಲ್ಲೇ ಇಳಿಸಿ ಹೋಗಿದ್ದರಿಂದ ಊರಿನ ಜನರೇ ಆಹೋರಾತ್ರಿ ಶವ ಹೊತ್ತು ಬೆಟ್ಟ ಹತ್ತಿ ಊರು ಸೇರಿದ್ದರು. ಅದಕ್ಕೂ ಒಂದೆರಡು ತಿಂಗಳ ಹಿಂದೆಯೂ ಹೀಗೆಯೇ ರಸ್ತೆಯ ಅವ್ಯವಸ್ಥೆಯ ಕಾರಣಕ್ಕೆ ಸಕಾಲಕ್ಕೆ ಮೂವತ್ತು ಕಿ.ಮೀ ದೂರದ ಭಟ್ಕಳ ಆಸ್ಪತ್ರೆಗೆ ತಲುಪಲಾಗದೆ, ಗರ್ಭಿಣಿಯೊಬ್ಬರು ಹೆರಿಗೆ ವೇಳೆ ಜೀವ ಕಳೆದುಕೊಂಡರು. ಅವರ ಶವವನ್ನು ಕೂಡ ನಾವೇ ಜನಗಳೇ ಹೊತ್ತು ತಂದಿದ್ದೆವು. ಆ ಶವ ತರುವುದನ್ನು ವೀಡಿಯೋ ಮಾಡಿ ನಮ್ಮ ಊರಿನ ಪರಿಸ್ಥಿತಿಯನ್ನು ಅಧಿಕಾರಿಗಳು, ರಾಜಕೀಯ ನಾಯಕರಿಗೆ ತೋರಿಸುವ ಪ್ರಯತ್ನ ಮಾಡಿದ್ದೆವು. ಸ್ವತಃ ಪ್ರಧಾನಿ ಮೋದಿಯವರಿಗೂ ಆ ವೀಡಿಯೋ ಸಿಡಿ ಕಳಿಸಿ ಪತ್ರ ಬರೆದಿದ್ದೆವು. ಆದರೂ ಯಾವ ಪ್ರಯೋಜನವಾಗಿಲ್ಲ” ಎಂಬುದು ಗ್ರಾಮದ ಯುವ ಮುಖಂಡ ಓಮೇಂದ್ರ ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ತಾಲೂಕು ಕೇಂದ್ರ ಸಾಗರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಈ ಹಳ್ಳಿಯ ಜನರ ಮುಖ್ಯ ಬೇಡಿಕೆ ರಸ್ತೆಯದ್ದು. ಕಳೆದ 25 ವರ್ಷಗಳಿಂದ ಅದಕ್ಕಾಗಿ ಅವರು ಅಲೆಯದ ಶಾಸಕರ ಮನೆಯಗಳಿಲ್ಲ, ಸುತ್ತದ ಕಚೇರಿಗಳ ಕಂಬಗಳಿಲ್ಲ. ಆದರೆ, ಈವರೆಗೂ ಕೋಗಾರ್ ರಸ್ತೆಯ ತುದಿಯ ನೂರು ಅಡಿಗೆ ಸಿಮೆಂಟ್ ಕಂಡದ್ದು ಬಿಟ್ಟರೆ ಉಳಿದಂತೆ 7 ಕಿ.ಮೀ ಉದ್ದಕ್ಕೆ ಯಾವ ಬದಲಾವಣೆಯನ್ನೂ ರಸ್ತೆ ಕಂಡಿಲ್ಲ. ಸುಮಾರು 400 ಅಡಿ ಪ್ರಪಾತದ ಅಂಚಿನ ಕಾಲುದಾರಿಯಲ್ಲಿ ಸಾಗುವುದು ಎಂಥವರನ್ನು ಜೀವ ಝಲ್ಲನ್ನಿಸದೇ ಇರದು.
ಊರಿನಲ್ಲಿ ಸದ್ಯ ಐದನೇ ತರಗತಿಯವರೆಗೆ ಶಾಲೆ ಇದ್ದು, ಆರನೇ ತರಗತಿಯಿಂದಲೇ ಮಕ್ಕಳು ಕಲಿಯಲು ನಿತ್ಯ 15 ಕಿ.ಮೀ ಕಾಡಿನ ದಾರಿಯಲ್ಲಿ ಹರಸಾಹಸ ಮಾಡಬೇಕಿದೆ. ಅದರಲ್ಲೂ ಕಾಡುಪ್ರಾಣಿಗಳು ದಾಳಿ ಮತ್ತು ಅಪಾಯಕಾರಿ ದಾರಿಯಲ್ಲಿ ಹತ್ತು ಹನ್ನೆರಡು ವರ್ಷದ ಎಳೆಯ ಮಕ್ಕಳು ಅಷ್ಟು ದೂರ ಹೋಗಿ ಬರುವುದು ಅಸಾಧ್ಯದ ಮಾತೇ ಸರಿ. ಹಾಗಾಗಿ, ಊರಿನ ದುರ್ಗಮ ದಾರಿಯ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣ ಮುಂದುವರಿಸುವುದೇ ವಿರಳ.
ಹೊರಜಗತ್ತಿನೊಂದಿಗೆ ಸಂಪರ್ಕದ ದೊಡ್ಡ ಸವಾಲು ಎದುರಿಸುತ್ತಿರುವ ಈ ಗುಡ್ಡಗಾಡು ಬುಡಕಟ್ಟು ಜನರು ಸದ್ಯದ ಮತ್ತೊಂದು ಆತಂಕ, ಅಭಯಾರಣ್ಯದ ಭೂತ. ಬುಡಕಟ್ಟು ಸಮುದಾಯವಾದರೂ ಇಲ್ಲಿನ ಜನರ ಮನೆ-ಕೊಟ್ಟಿಗೆ, ತೋಟದ ಜಮೀನಿನ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅಡ್ಡಗಾಲಾಗಿದೆ. “ಅರಣ್ಯ ಕಾಯ್ದೆಯಡಿ ಅವಕಾಶವಿದ್ದರೂ, ಅಧಿಕಾರಿಗಳ ದಬ್ಬಾಳಿಕೆಯಿಂದ ನಾವು ಭೂಮಿಯ ಹಕ್ಕಿನಿಂದ ವಂಚಿತವಾಗಿದ್ದೇವೆ. 60 ವರ್ಷದ ಹಿಂದೆ ನಮ್ಮ ಅಜ್ಜ-ಅಪ್ಪ ಈ ಊರಿಗೆ ಬಂದಾಗ ಒಂದೆರಡು ಎಕರೆ ಜಮೀನು ಮಾಡಿಕೊಂಡಿದ್ದರು. ಆದರೆ, ಕಾಲಕ್ರಮೇಣ ಕುಟುಂಬ ಬೆಳೆದಂತೆ ನಮಗೆ ವ್ಯವಸಾಯವಲ್ಲದೆ ಇಲ್ಲಿ ಬದುಕಲು ಬೇರೆ ಆಸರೆ ಇಲ್ಲ. ಈಗ ಕಾಡಿನ ಕಾನೂನೇ ನಮಗೆ ಶತ್ರುವಾಗಿದೆ” ಎಂಬುದು ಗ್ರಾಮಸ್ಥರ ಅಳಲು.
ಅಧಿಕಾರದ ಚುಕ್ಕಾಣಿ ಹಿಡಿದವರು ಬುಲೆಟ್ ಟ್ರೈನು, ಸೂಪರ್ ಫಾಸ್ಟ್ ಹೈವೇಗಳೇ ತಮ್ಮ ಸಾಧನೆಯ ಹೆಗ್ಗಳಿಕೆಗಳೆಂದು ಬೀಗುತ್ತಿರುವ ಹೊತ್ತಿಗೆ, ಹೀಗೆ ಕಿ.ಮೀ ಗಟ್ಟಲೆ ಕಡಿದಾದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ನಿತ್ಯ ಏರಿಳಿಯಬೇಕಾದ ‘ಗ್ರಾಮ ಭಾರತ’ ಇನ್ನೂ ಅಭಿವೃದ್ಧಿಯ ಹೆದ್ದಾರಿಯಿಂದ ದೂರವೇ ಉಳಿದಿದೆ ಎಂಬುದಕ್ಕೆ ಮೇಘಾನೆಯೇ ಜೀವಂತ ಸಾಕ್ಷಿ!